
ವಾಷಿಂಗ್ಟನ್: ಕದನ ವಿರಾಮ ಯೋಜನೆಯ ಮೊದಲ ಹಂತಕ್ಕೆ ಒಪ್ಪಿಗೆ ಸೂಚಿಸಿರುವ ಹಮಾಸ್, ಎಲ್ಲಾ ಒತ್ತೆಯಾಗಳುಗಳನ್ನು ಸೋಮವಾರ ಬಿಡುಗಡೆ ಮಾಡಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಗುರುವಾರ ಹೇಳಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ನೀಡಿದ ಫೋನ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಒತ್ತೆಯಾಳುಗಳ ಬಿಡುಗಡೆ ಕುರಿತು ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಎಲ್ಲರೂ ಸೋಮವಾರ ವಾಪಸ್ಸಾಗುತ್ತಿದ್ದಾರೆಂಬ ಭರವಸೆ ಇದೆ. ಒತ್ತೆಯಾಳುಗಳ ಜೊತೆಗೆ ಮೃತರ ಶವಗಳು ಕೂಡ ಬರಲಿವೆ ಎಂದು ಹೇಳಿದ್ದಾರೆ.
ಆದರೆ, ಈ ಬೆಳವಣಿಗೆಗಳ ಹೊರತಾಗಿಯೂ ಇಸ್ರೇಲ್ ತನ್ನ ದಾಳಿಯನ್ನು ಮುಂದುವರೆಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇಸ್ರೇಲ್–ಹಮಾಸ್ ಕದನ ವಿರಾಮ ಒಪ್ಪಂದವನ್ನು ಅಧಿಕೃತವಾಗಿ ಘೋಷಿಸಿದ ಕೆಲವೇ ನಿಮಿಷಗಳ ನಂತರ, ಗಾಝಾದ ಬೀದಿಗಳಲ್ಲಿ ಜನರು ಸಂಭ್ರಮಿಸುತ್ತಿದ್ದ ವೇಳೆ ಇಸ್ರೇಲ್ ನ ಯುದ್ಧವಿಮಾನಗಳು ನಗರ ಭಾಗಗಳ ಮೇಲೆ ಬಾಂಬ್ ದಾಳಿ ನಡೆಸಿದೆ ಎಂದು ತಿಳಿದುಬಂದಿದೆ.
ದಾಳಿಯಿಂದ ಉಂಟಾದ ಹಾನಿ ಅಥವಾ ಸಾವಿನ ಪ್ರಮಾಣದ ಕುರಿತು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ ಸ್ಥಳೀಯ ಮೂಲಗಳ ಪ್ರಕಾರ, ಬಾಂಬ್ ಸ್ಫೋಟದ ಪರಿಣಾಮವಾಗಿ ಗಾಝಾ ನಗರದ ಕೆಲವು ಭಾಗಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ನಿವಾಸಿಗಳು ಆತಂಕದಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
2023ರ ಅಕ್ಟೋಬರ್ ನಿಂದ ಇಸ್ರೇಲ್ ನಡೆಸಿದ ಗಾಝಾ ಯುದ್ಧದಲ್ಲಿ ಕನಿಷ್ಠ 67,183 ಮಂದಿ ಮೃತಪಟ್ಟಿದ್ದು, 169,841 ಮಂದಿ ಗಾಯಗೊಂಡಿದ್ದಾರೆ ಎಂದು ಫೆಲೆಸ್ತೀನ್ ನ ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳಿವೆ.
ಇನ್ನೂ ಹೆಚ್ಚಿನ ಜನರು ನಾಶವಾದ ಕಟ್ಟಡಗಳ ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಸಾಧ್ಯತೆಯಿದೆ. 2023ರ ಅಕ್ಟೋಬರ್ 7ರಂದು ಹಮಾಸ್ ನಡೆಸಿದ ದಾಳಿಯಲ್ಲಿ ಇಸ್ರೇಲ್‌ನಲ್ಲಿ 1,139 ಮಂದಿ ಸಾವನ್ನಪ್ಪಿದರು. ಸುಮಾರು 200 ಮಂದಿಯನ್ನು ಹಮಾಸ್ ಒತ್ತೆಯಾಳುಗಳಾಗಿರಿಸಿಕೊಂಡಿತು.
Advertisement