
ನವದೆಹಲಿ: ಅಫ್ಘಾನಿಸ್ತಾನದ ಮೇಲೆ ಏರ್ ಸ್ಟ್ರೈಕ್ ಮೂಲಕ ಮುಗಿಬಿದ್ದಿದ್ದ ಪಾಕಿಸ್ತಾನ ಕೊನೆಗೂ 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿದೆ.
ಹೌದು.. ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯಲ್ಲಿ ಸೇನಾ ಸಂಘರ್ಷ ಉಲ್ಬಣವಾಗುತ್ತಿದ್ದು, ಈಗಾಗಲೇ ಗಡಿಯಲ್ಲಿ ನಡೆದ ಹಿಂಸಾಚಾರದಲ್ಲಿ ಡಜನ್ಗಟ್ಟಲೆ ಜನರು ಸಾವನ್ನಪ್ಪಿ, ಇನ್ನೂ ಅನೇಕರು ಗಾಯಗೊಂಡಿದ್ದಾರೆ. ಹೀಗಾಗಿ ಇದೀಗ ಉಭಯ ದೇಶಗಳು 48 ಗಂಟೆಗಳ ಕದನ ವಿರಾಮಕ್ಕೆ ಒಪ್ಪಿಗೆ ನೀಡಿವೆ.
ಪಾಕಿಸ್ತಾನ ಸಮಯ ಸಂಜೆ 6 ಗಂಟೆಗೆ ಅಥವಾ ಭಾರತೀಯ ಕಾಲಮಾನ ಸಂಜೆ 6.30ಕ್ಕೆ ಕದನ ವಿರಾಮ ಜಾರಿಗೆ ಬಂದಿದೆ. ಈ ಬಗ್ಗೆ ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದ್ದು, 'ಸಂಕೀರ್ಣವಾದರೂ ಪರಿಹರಿಸಬಹುದಾದ ಸಮಸ್ಯೆಗೆ ಸಕಾರಾತ್ಮಕ ಪರಿಹಾರವನ್ನು ಕಂಡುಕೊಳ್ಳಲು ಎರಡೂ ಕಡೆಯವರು ಸಂವಾದದ ಮೂಲಕ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಾರೆ' ಎಂದು ಇಸ್ಲಾಮಾಬಾದ್ ಹೇಳಿಕೆಯಲ್ಲಿ ತಿಳಿಸಿದೆ.
ಪಾಕ್ ಆರೋಪ
ಅಫ್ಘಾನಿಸ್ತಾನವು ತನ್ನ ಭೂಪ್ರದೇಶದ ಮೇಲೆ ಭಯೋತ್ಪಾದಕ ದಾಳಿ ನಡೆಸುವ ಬಂದೂಕುಧಾರಿಗಳನ್ನು ಬೆಂಬಲಿಸುತ್ತಿದೆ. 2021ರಲ್ಲಿ ತಾಲಿಬಾನ್ ಅಧಿಕಾರವನ್ನು ವಶಪಡಿಸಿಕೊಂಡ ನಂತರ ಈ ದಾಳಿಗಳು ಹೆಚ್ಚಾಗಿದೆ ಎಂದು ಎಂದು ಪಾಕಿಸ್ತಾನ ಆರೋಪಿಸಿದೆ.
ಭುಗಿಲೆದ್ದ ಹಿಂಸಾಚಾರ
ಅಫ್ಘಾನಿಸ್ತಾನ-ಪಾಕಿಸ್ತಾನ ಗಡಿಯ ಸಮೀಪವಿರುವ ಸ್ಪಿನ್ ಬೋಲ್ಡಕ್ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆದ ಘರ್ಷಣೆಯಲ್ಲಿ ಅಫ್ಘಾನಿಸ್ತಾನದ 15 ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ನಾಲ್ವರು ಅಫ್ಘಾನ್ ಸೈನಿಕರು ಕೂಡ ಮೃತಪಟ್ಟಿದ್ದಾರೆ.
ತಾಲಿಬಾನ್ ಸರ್ಕಾರದ ವಕ್ತಾರ ಜಬಿಹುಲ್ಲಾ ಮುಜಾಹಿದ್ ಪಾಕಿಸ್ತಾನ ಪಡೆಗಳು ಭಾರೀ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿವೆ ಎಂದು ಹೇಳಿದ್ದಾರೆ. ನಮ್ಮ 12 ನಾಗರಿಕರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 100 ಜನರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಗುಂಡಿನ ದಾಳಿಯಿಂದ ಸ್ಪಿನ್ ಬೋಲ್ಡಾಕ್‌ನಲ್ಲಿ ಅಂಗಡಿಗಳು ಮತ್ತು ವ್ಯವಹಾರಗಳು ಮುಚ್ಚಲ್ಪಟ್ಟಿವೆ. ಭಾರೀ ಶೆಲ್ ದಾಳಿಯಿಂದಾಗಿ ಅನೇಕ ನಿವಾಸಿಗಳು ಆ ಸ್ಥಳದಿಂದ ಬೇರೆಡೆಗೆ ಪಲಾಯನ ಮಾಡಿದ್ದಾರೆ.
Advertisement