
ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದಿಲ್ಲ ಎಂಬ ಭರವಸೆ ನನಗಿದೆ ಎಂದು ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಅದನ್ನೇ ಪುನರುಚ್ಛರಿಸಿದ್ದಾರೆ. ಭಾರತ ರಷ್ಯಾದಿಂದ ಈಗಾಗಲೇ ತೈಲ ಖರೀದಿಯನ್ನು ಕಡಿಮೆ ಮಾಡಿದ್ದು, ಹೆಚ್ಚು ಕಡಿಮೆ ಸಂಪೂರ್ಣವಾಗಿ ನಿಲ್ಲಿಸುತ್ತದೆ ಎಂದು ಹೇಳಿದ್ದಾರೆ.
ನಿನ್ನೆ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ದ್ವಿಪಕ್ಷೀಯ ಭೋಜನ ಕೂಟದ ಮಾತುಕತೆ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದರು.
ಭಾರತ ಇನ್ನು ಮುಂದೆ ರಷ್ಯಾದಿಂದ ತೈಲವನ್ನು ಖರೀದಿಸುವುದಿಲ್ಲ. ಈಗಾಗಲೇ ಕಡಿಮೆ ಮಾಡಿದ್ದು, ಹೆಚ್ಚು ಕಡಿಮೆ ನಿಲ್ಲಿಸಿದ್ದಾರೆ. ಭಾರತ ತೈಲ ಖರೀದಿಯಿಂದ ಹಿಂದೆ ಸರಿಯುತ್ತಿದ್ದಾರೆ. ಇದುವರೆಗೆ ಸುಮಾರು ಶೇಕಡಾ 38ರಷ್ಟು ತೈಲವನ್ನು ಖರೀದಿಸಿದ್ದಾರೆ. ಇನ್ನು ಮುಂದೆ ಅದನ್ನು ಮಾಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಭಾರತವು ಮಾರುಕಟ್ಟೆ ಪರಿಸ್ಥಿತಿಗಳನ್ನು ಪೂರೈಸಲು ತನ್ನ ಇಂಧನ ಮೂಲವನ್ನು ವಿಶಾಲ-ಆಧಾರಿತ ಮತ್ತು ವೈವಿಧ್ಯಗೊಳಿಸುತ್ತಿದೆ ಎಂದು ಹೇಳಿದೆ. ರಷ್ಯಾ ಕಚ್ಚಾ ತೈಲ ಖರೀದಿಯ ಮೂಲಕ ಉಕ್ರೇನ್ ವಿರುದ್ಧ ಯುದ್ಧಕ್ಕೆ ಹಣಕಾಸು ಒದಗಿಸಲು ಭಾರತ ಪುಟಿನ್ ಸರ್ಕಾರಕ್ಕೆ ಸಹಾಯ ಮಾಡುತ್ತಿದೆ ಎಂದು ಡೊನಾಲ್ಡ್ ಟ್ರಂಪ್ ಈ ಹಿಂದೆ ಹೇಳಿದ್ದರು. ಆದರೆ ಈ ಆಪಾದನೆಯನ್ನು ಭಾರತ ತಿರಸ್ಕರಿಸಿದ್ದು, ತನ್ನ ಇಂಧನ ಸ್ವಾತಂತ್ರ್ಯವನ್ನು ಪ್ರತಿಪಾದಿಸಿದೆ.
ಟ್ರಂಪ್ ಭಾರತೀಯ ಸರಕುಗಳ ಮೇಲಿನ ಅಮೆರಿಕದ ಸುಂಕವನ್ನು ಶೇ. 50 ಕ್ಕೆ ದ್ವಿಗುಣಗೊಳಿಸಿದ ನಂತರ ಎರಡೂ ರಾಷ್ಟ್ರಗಳ ನಡುವಿನ ಸಂಬಂಧಗಳು ಬಿಗಡಾಯಿಸಿವೆ, ಇದರಲ್ಲಿ ಭಾರತವು ರಷ್ಯಾ ಕಚ್ಚಾ ತೈಲ ಖರೀದಿಗೆ ಶೇ. 25 ರಷ್ಟು ಹೆಚ್ಚುವರಿ ಸುಂಕವೂ ಸೇರಿದೆ.
ಭಾರತವು ಅಮೆರಿಕದ ಕ್ರಮವನ್ನು ಅನ್ಯಾಯ, ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ ಎಂದು ಕರೆದಿದೆ.
'ಲಕ್ಷಾಂತರ ಜೀವಗಳನ್ನು ಉಳಿಸಿದೆ'
ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ಪರಿಹರಿಸುವ ಬಗ್ಗೆ ಟ್ರಂಪ್ ಮತ್ತೊಮ್ಮೆ ತಮ್ಮ ಹೇಳಿಕೆಗಳನ್ನು ಪುನರುಚ್ಚರಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರೇ ನಾನು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ ಎಂದು ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನದ ಪ್ರಧಾನಿ ನಾನು ಮಧ್ಯಸ್ಥಿಕೆ ವಹಿಸುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಿದ್ದೇನೆ ಎಂದು ಹೇಳಿದರು. ನಾನು ಮಧ್ಯಸ್ಥಿಕೆ ವಹಿಸಿರದಿದ್ದರೆ ಪಾಕಿಸ್ತಾನ ಮತ್ತು ಭಾರತವನ್ನು ಎರಡು ಪರಮಾಣು ರಾಷ್ಟ್ರಗಳಿಗೆ ಕೆಟ್ಟ ಉದಾಹರಣೆಯಾಗಿ ನೋಡುತ್ತಿದ್ದಿರಿ ಎಂದು ಹೇಳಿದರು.
ಮೇ 10 ರಂದು ಸಾಮಾಜಿಕ ಮಾಧ್ಯಮದಲ್ಲಿ ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ದೀರ್ಘ ರಾತ್ರಿ ಮಾತುಕತೆಯ ನಂತರ ಭಾರತ ಮತ್ತು ಪಾಕಿಸ್ತಾನ ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಘೋಷಿಸಿದಾಗಿನಿಂದ, ಅವರು ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ಇತ್ಯರ್ಥಗೊಳಿಸಲು ಸಹಾಯ ಮಾಡಿದ್ದೇನೆ ಎಂದು ಹತ್ತಾರು ಬಾರಿ ಹೇಳಿಕೊಂಡು ಬಂದಿದ್ದಾರೆ.
ಭಾರತ ಹೇಳುವುದೇನು?
ಪಾಕಿಸ್ತಾನದೊಂದಿಗಿನ ಯುದ್ಧವನ್ನು ನಿಲ್ಲಿಸುವ ಬಗ್ಗೆ ಎರಡು ಮಿಲಿಟರಿಗಳ ಮಹಾನಿರ್ದೇಶಕರ (DGMOs) ನಡುವಿನ ನೇರ ಮಾತುಕತೆಗಳ ನಂತರ ಒಪ್ಪಂದವನ್ನು ತಲುಪಲಾಗಿದೆ ಎಂದು ಭಾರತ ನಿರಂತರವಾಗಿ ಸಮರ್ಥಿಸಿಕೊಂಡಿದೆ.
ಏಪ್ರಿಲ್ 22 ರಂದು ನಡೆದ ಪಹಲ್ಗಾಮ್ ದಾಳಿಯಲ್ಲಿ 26 ನಾಗರಿಕರ ಹತ್ಯೆಯಾಗಿದ್ದಕ್ಕೆ ಪ್ರತೀಕಾರವಾಗಿ ಭಾರತವು ಮೇ 7 ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂದೂರ್ ನಡೆಸಿತು.
ಗಡಿಯಾಚೆಗಿನ ನಾಲ್ಕು ದಿನಗಳ ತೀವ್ರ ಡ್ರೋನ್ ಮತ್ತು ಕ್ಷಿಪಣಿ ದಾಳಿಯ ನಂತರ ಸಂಘರ್ಷವನ್ನು ಕೊನೆಗೊಳಿಸಲು ಭಾರತ ಮತ್ತು ಪಾಕಿಸ್ತಾನ ಮೇ 10 ರಂದು ಒಪ್ಪಂದಕ್ಕೆ ಬಂದವು.
Advertisement