

ಮಾಸ್ಕೋ: ಯುಕ್ರೇನ್ ವಿರುದ್ಧ ಸಂಘರ್ಷದಲ್ಲಿ ತೊಡಗಿರುವ ರಷ್ಯಾ, ಯುದ್ಧದ ನಡುವೆಯೇ ಬ್ಯೂರೆವೆಸ್ಟ್ನಿಕ್ ಎಂಬ ಪರಮಾಣು ಚಾಲಿತ ಮತ್ತು ಪರಮಾಣು ಸಾಮರ್ಥ್ಯದ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿರುವುದನ್ನು ದೃಢಪಡಿಸಿದೆ.
ಈ ಕ್ಷಿಪಣಿ ಪ್ರಚಲಿತ ಅಥವಾ ಮುಂಬರುವ ದಿನಗಳಲ್ಲಿ ಅಸ್ತಿತ್ವದಲ್ಲಿರುವ ಯಾವುದೇ ದೇಶದ ರಕ್ಷಣಾ ವ್ಯವಸ್ಥೆಯನ್ನು ಮೀರಿಸಬಹುದು ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಬ್ಯೂರೆವೆಸ್ಟ್ನಿಕ್ ಕ್ಷಿಪಣಿಯ ಮೂಲಕ ಪ್ರಪಂಚದ ಇನ್ನು ಯಾವುದೇ ದೇಶದ ಬಳಿಯೂ ಇಲ್ಲದ ಅಸ್ತ್ರವನ್ನು ರಷ್ಯಾ ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.
"ಇದು ಜಗತ್ತಿನಲ್ಲಿ ಬೇರೆ ಯಾರೂ ಹೊಂದಿರದ ವಿಶಿಷ್ಟ ಕ್ಷಿಪಣಿಯಾಗಿದೆ" ಎಂದು ರಷ್ಯಾ ಅಧ್ಯಕ್ಷರು ಹೇಳಿದ್ದು, ಈ ಕ್ಷಿಪಣಿ ಸಂಪೂರ್ಣವಾಗಿ ಹೊಸ ರೀತಿಯ ಕಾರ್ಯತಂತ್ರದ ಶಸ್ತ್ರಾಸ್ತ್ರಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.
ಈ ಕ್ಷಿಪಣಿ ಇಡಿ ಜಗತ್ತಿನಲ್ಲಿ ಯಾವುದೇ ಮೂಲೆಗೂ ತಲುಪಬಹುದಾಗಿದ್ದು, ದಿನಗಟ್ಟಲೆ ಎಲ್ಲೂ ನಿಲ್ಲದೇ ಸಂಚರಿಸುವ ಸಾಮರ್ಥ್ಯ ಹೊಂದಿದೆ.
15 ಗಂಟೆಗಳಲ್ಲಿ 14,000 ಕಿ.ಮೀ ದೂರವನ್ನು ಕ್ಷಿಪಣಿ ತಲುಪಿದೆಯಾದರೂ ಇದು ಕ್ಷಿಪಣಿಯ ನಿಜವಾದ ಮಿತಿಯಲ್ಲ ಎಂದು ಹೇಳಲಾಗುತ್ತಿದೆ. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಮೇಲಿನ ಒತ್ತಡದಿಂದ ರಷ್ಯಾ ಹಿಂಜರಿಯದೆ ಉಳಿದಿದೆ ಎಂಬುದನ್ನು ರಷ್ಯಾ ಈ ಯಶಸ್ವಿ ಪರೀಕ್ಷೆಯ ಮೂಲಕ ಪಶ್ಚಿಮಕ್ಕೆ ಸಂದೇಶ ರವಾನೆ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಈ ಪರೀಕ್ಷೆಯೊಂದಿಗೆ ರಷ್ಯಾದಲ್ಲಿ ವ್ಯಾಪಕವಾದ ಪರಮಾಣು ಪಡೆಗಳ ಕವಾಯತು ನಡೆದಿದೆ. ಇದು ಮಾಸ್ಕೋದ ಮಿಲಿಟರಿ ಸನ್ನದ್ಧತೆಯ ಪ್ರದರ್ಶನದಲ್ಲಿ ಒಂದು ಉನ್ನತ ಹಂತವನ್ನು ಗುರುತಿಸುತ್ತದೆ.
ಇತ್ತ ರಷ್ಯಾ ಪರಮಾಣು ಸಾಮರ್ಥ್ಯದ ಕ್ರೂಸ್ ಕ್ಷಿಪಣಿಯ ಪರೀಕ್ಷೆಯನ್ನು ಯಶಸ್ವಿಯಾಗಿಸಿದ ಬೆನ್ನಲ್ಲೇ, ನಿರ್ಬಂಧಗಳನ್ನು ಮುಂದಿಟ್ಟುಕೊಂಡು ರಷ್ಯಾಗೆ ಬೆದರಿಕೆ ಹಾಕುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಣ್ಣಗಾಗಿದ್ದು, ಈಗ ತಮ್ಮ ಧ್ವನಿಯನ್ನು ಬದಲಾಯಿಸಿದ್ದಾರೆ. ಹೊಸ ಕ್ಷಿಪಣಿಗಳನ್ನು ಪರೀಕ್ಷಿಸುವ ಬದಲು ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವತ್ತ ಗಮನಹರಿಸುವಂತೆ ಅವರು ಪುಟಿನ್ ಅವರಿಗೆ ಮನವಿ ಮಾಡಿದ್ದಾರೆ.
Advertisement