

ನವದೆಹಲಿ: ಭಾರತದಲ್ಲಿ ಸ್ವತಂತ್ರವಾಗಿ ಧೈರ್ಯದಿಂದ ಬದುಕುತ್ತಿದ್ದೇನೆ, ಬಾಂಗ್ಲಾದೇಶಕ್ಕೆ ಬರುವುದಿಲ್ಲ ಎಂದು ಉಚ್ಛಾಟಿತ ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.
ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶೇಖ್ ಹಸೀನಾ, 'ತಾವು ದೆಹಲಿಯಲ್ಲಿ ಮುಕ್ತವಾಗಿ ಆದರೆ ಎಚ್ಚರಿಕೆಯಿಂದ ವಾಸಿಸುತ್ತಿದ್ದು, ಭಾರತವನ್ನು ತೊರೆಯುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಮುಂದಿನ ವರ್ಷ ನಡೆಯಲಿರುವ ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆ, ಅವಾಮಿ ಲೀಗ್ ಪಕ್ಷ, ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪಗಳು ಮತ್ತು ತಮ್ಮ ದೇಶಕ್ಕೆ ಮರಳುವ ಅವರ ಯೋಜನೆಗಳ ಬಗ್ಗೆ ಮಾತನಾಡಿದ ಶೇಖ್ ಹಸೀನಾ, 'ಅಲ್ಲಿನ ಸರ್ಕಾರ ಕಾನೂನುಬದ್ಧವಾಗಿದ್ದರೆ, ಸಂವಿಧಾನವನ್ನು ಎತ್ತಿಹಿಡಿಯುತ್ತಿದ್ದರೆ ಮತ್ತು ಕಾನೂನು ಮತ್ತು ಸುವ್ಯವಸ್ಥೆ ನಿಜವಾಗಿಯೂ ಮೇಲುಗೈ ಸಾಧಿಸಿದ್ದರೆ, ನಾನು ಬಾಂಗ್ಲಾದೇಶಕ್ಕೆ ಹೋಗಲು ಇಷ್ಟಪಡುತ್ತೇನೆ ಎಂದರು.
ಅಂತೆಯೇ, 'ಅವಾಮಿ ಲೀಗ್ ಮೇಲಿನ ನಿಷೇಧ ಅನ್ಯಾಯ ಮಾತ್ರವಲ್ಲ, ಅದು ಸ್ವಯಂ ಸೋಲಿಗೆ ಕಾರಣವೂ ಆಗಿದೆ ಎಂದು ಹೇಳಿದ ಶೇಖ್ ಹಸೀನಾ, 'ಒಂದು ವೇಳೆ ತಮ್ಮ ಅವಾಮಿ ಲೀಗ್ ಪಕ್ಷವು 2026ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿದ್ದರೆ, ಅದರ ಲಕ್ಷಾಂತರ ಬೆಂಬಲಿಗರು ಬಾಂಗ್ಲಾದೇಶದಲ್ಲಿ ಚುನಾವಣೆಗಳನ್ನು ಬಹಿಷ್ಕರಿಸುತ್ತಾರೆ. ಲಕ್ಷಾಂತರ ಜನರು ಅವಾಮಿ ಲೀಗ್ ಅನ್ನು ಬೆಂಬಲಿಸುತ್ತಾರೆ, ಆದ್ದರಿಂದ ಪರಿಸ್ಥಿತಿ ಹಾಗೆ ಇದ್ದರೆ, ಅವರು ಮತ ಚಲಾಯಿಸುವುದಿಲ್ಲ. ಕೆಲಸ ಮಾಡುವ ರಾಜಕೀಯ ವ್ಯವಸ್ಥೆ ಬೇಕಾದರೆ ನೀವು ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಶೇಖ್ ಹಸೀನಾ ಎಚ್ಚರಿಸಿದ್ದಾರೆ.
ಅಂದಹಾಗೆ ಬಾಂಗ್ಲಾದೇಶದಲ್ಲಿ ನಾಗರಿಕ ಸೇವಾ ಕೋಟಾ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ನಂತರ 78 ವರ್ಷದ ನಾಯಕಿ ಶೇಖ್ ಹಸೀನಾ ಕಳೆದ ವರ್ಷ ಆಗಸ್ಟ್‌ನಲ್ಲಿ ಢಾಕಾದಿಂದ ದೆಹಲಿಗೆ ಪಲಾಯನ ಮಾಡಿದ್ದರು. ಪಲಾಯನ ಬಳಿಕ ಭಾರತಕ್ಕೆ ಓಡಿ ಬಂದಿದ್ದ ಅವರು ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ. ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಬಾಂಗ್ಲಾದೇಶವನ್ನು ಆಳುತ್ತಿದೆ. ಫೆಬ್ರವರಿ 2027ರಲ್ಲಿ ರಾಷ್ಟ್ರೀಯ ಚುನಾವಣೆಗಳನ್ನು ನಡೆಸುವುದಾಗಿ ಘೋಷಣೆ ಮಾಡಿದೆ.
ಕೊಲೆ ಪ್ರಕರಣ ದಾಖಲು
ಶೇಖ್ ಹಸೀನಾ, ಅವರ ಸರ್ಕಾರ ಮತ್ತು ಅವರ ಪಕ್ಷದ ಹಲವಾರು ನಾಯಕರು ಕೊಲೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಢಾಕಾದಲ್ಲಿರುವ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ -1 ರಲ್ಲಿ ವಿಚಾರಣೆ ಮುಕ್ತಾಯಗೊಂಡಿದೆ. ಅಲ್ಲಿ ಸರ್ಕಾರಿ ಪ್ರಾಸಿಕ್ಯೂಟರ್ ಶೇಖ್ ಹಸೀನಾ ಅವರಿಗೆ ಮರಣದಂಡನೆ ವಿಧಿಸಬೇಕೆಂದು ಕೋರಿದ್ದಾರೆ.
ಕಳೆದ ವರ್ಷ ಜುಲೈ ಮತ್ತು ಆಗಸ್ಟ್‌ನಲ್ಲಿ ಬಾಂಗ್ಲಾದೇಶದಲ್ಲಿ ಉದ್ಯೋಗಗಳಲ್ಲಿ ಮೀಸಲಾತಿ ವಿರುದ್ಧದ ವಿದ್ಯಾರ್ಥಿಗಳ ಪ್ರತಿಭಟನೆ ಶೇಖ್ ಹಸೀನಾ ಆಡಳಿತದ ವಿರುದ್ಧದ ಚಳುವಳಿಯಾಗಿ ಮಾರ್ಪಟ್ಟಾಗ ಸುಮಾರು 1,400 ಜನರು ಸಾವನ್ನಪ್ಪಿದ್ದರು.
ಶೇಖ್ ಹಸೀನಾ ಸಾಮಾಜಿಕ ಮಾಧ್ಯಮದ ಮೂಲಕ ಸಂದೇಶಗಳನ್ನು ಕಳುಹಿಸಿದ್ದರೂ ಬಾಂಗ್ಲಾದೇಶದಿಂದ ಹೊರಹಾಕಲ್ಪಟ್ಟ ನಂತರ ಅವರು ಮಾಧ್ಯಮಗಳೊಂದಿಗೆ ಸಂವಹನ ನಡೆಸುತ್ತಿರುವುದು ಇದೇ ಮೊದಲು.
Advertisement