
ದುಬೈ: ಖ್ಯಾತ ಇಸ್ಲಾಮಿಕ್ ಮತ ಪ್ರಚಾರಕ ಜಾಕಿರ್ ನಾಯ್ಕ್ (Zakir Naik)ಗೆ ಅಕ್ವೈರ್ಡ್ ಇಮ್ಯುನೊ ಡಿಫಿಷಿಯನ್ಸಿ ಸಿಂಡ್ರೋಮ್ (ಏಡ್ಸ್) ರೋಗ ಬಂದಿದ್ದು, ಅವರ ಪತ್ನಿ- ಪುತ್ರಿಗೂ ಸೋಂಕು ತಗುಲಿದೆ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.
ಹೌದು.. ತಮ್ಮ ವಿವಾದಾತ್ಮಕ ಭಾಷಣಗಳಿಂದಲೇ ಕು'ಖ್ಯಾತಿ' ಗಳಿಸಿರುವ ಖ್ಯಾತ ಇಸ್ಲಾಮಿಕ್ ಮತ ಪ್ರಚಾರಕ ಜಾಕಿರ್ ನಾಯ್ಕ್ ಗೆ ಏಡ್ಸ್ ರೋಗ ಬಂದಿದ್ದು ಅವರು ಮಲೇಷ್ಯಾದ ಸಾನ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಲ್ಲದೆ ಅವರ ಪತ್ನಿ ಫರ್ಹತ್ ನಾಯ್ಕ್ ಮತ್ತು ಮಗಳು ಜಿಕ್ರಾ ನಾಯ್ಕ್ ಕೂಡ ಎಚ್‌ಐವಿ ಪಾಸಿಟಿವ್ ಬಂದಿದೆ ಎಂಬ ಪೋಸ್ಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.
ವದಂತಿ ಅಲ್ಲಗಳೆದ ಜಾಕಿರ್ ನಾಯ್ಕ್!
ಈ ವಿಚಾರ ಜಗತ್ತಿನಾದ್ಯಂತ ವ್ಯಾಪಕ ವೈರಲ್ ಆಗುತ್ತಲೇ ಈ ಕುರಿತು ಜಾಕಿರ್ ನಾಯ್ಕ್ ಹೇಳಿಕೆ ಪ್ರಕಟಿಸಿದ್ದು, ಈ ಏಡ್ಸ್ ರೋಗದ ವದಂತಿ ಸುಳ್ಳು ಎಂದು ಹೇಳಿದ್ದಾರೆ.
'ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳನ್ನು ಜಾಕಿರ್ ನಾಯ್ಕ್ ತಳ್ಳಿಹಾಕಿದ್ದಾರೆ ಎಂದು ಅವರ ಪರ ವಕೀಲರು ಹೇಳಿದ್ದು, ಇಂತಹ ವದಂತಿಗಳು ಸಂಪೂರ್ಣ ಆಧಾರರಹಿತ ಎಂದು ಹೇಳಿದ್ದಾರೆ.
ಈ ಕುರಿತು ಜಾಕಿರ್ ನಾಯ್ಕ್ ಪರ ವಕೀಲ ಅಕ್ಬರ್ಡಿನ್ ಅಬ್ದುಲ್ ಖಾದಿರ್ ಹೇಳಿಕೆ ಬಿಡುಗಡೆ ಮಾಡಿದ್ದು, ಈ ಆರೋಪಗಳನ್ನು "ಕಸ" ಮತ್ತು "ನಕಲಿ ಸುದ್ದಿ" ಎಂದು ಕರೆದಿದ್ದಾರೆ. ಇಂತಹ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಲೇಷ್ಯಾದ ಸ್ಥಳೀಯ ಪೋರ್ಟಲ್ ಮಲೇಷ್ಯಾಕಿನಿಗೆ ಹೇಳಿಕೆ ನೀಡಿರುವ ಅಕ್ಬರ್ಡಿನ್, 'ಈ ಹೇಳಿಕೆಗಳು ಕಟ್ಟುಕಥೆ ಮತ್ತು ದುರುದ್ದೇಶಪೂರಿತ' ಎಂದು ಹೇಳಿದ್ದಾರೆ.
ಅಲ್ಲದೆ 'ಝಾಕಿರ್ ಅವರ ಜನಪ್ರಿಯತೆ ಮತ್ತು ಪ್ರಭಾವದಿಂದಾಗಿ ಅವರ ಖ್ಯಾತಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿರುವ ಬೇಜವಾಬ್ದಾರಿಯುತ ವ್ಯಕ್ತಿಗಳು ಈ ಆರೋಪಗಳನ್ನು ಹರಡಿದ್ದಾರೆ. ಕೊನೆಯ ಬಾರಿಗೆ ಭೇಟಿಯಾದಾಗ ಅವರು ಉತ್ತಮ ಆರೋಗ್ಯವಾಗಿದ್ದರು' ಎಂದು ಹೇಳಿದರು.
ವದಂತಿ ಹಬ್ಬಿಸಿದವರ ವಿರುದ್ಧ ಕ್ರಮ
ಇದೇ ವೇಳೆ ಇಂತಹ ಕ್ಷುಲ್ಲಕ ವದಂತಿ ಹಬ್ಬಿಸಿದರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ಅಕ್ಬರ್ಡಿನ್ ಎಚ್ಚರಿಸಿದ್ದು, 'ಮುಂದಿನ ಕ್ರಮವನ್ನು ನಿರ್ಧರಿಸುವ ಮೊದಲು ಸುಳ್ಳು ಆರೋಪಗಳ ಹಿಂದಿನವರನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಝಾಕಿರ್ ನಾಯ್ಕ್ ಇದ್ದಾರೆ' ಎಂದು ವಕೀಲರು ಬಹಿರಂಗಪಡಿಸಿದರು.
ಅಂದಹಾಗೆ ಮಲೇಷ್ಯಾದಲ್ಲಿ ಶಾಶ್ವತ ನಿವಾಸ ಹೊಂದಿರುವ ಭಾರತೀಯ ಪ್ರಜೆ ಝಾಕಿರ್ ನಾಯ್ಕ್, ಇಸ್ಲಾಮಿಕ್ ಸಂಶೋಧನಾ ಪ್ರತಿಷ್ಠಾನದ (IRF) ಸ್ಥಾಪಕರಾಗಿದ್ದಾರೆ. ಅಂತೆಯೇ ಭಾರತದಲ್ಲಿ ಜಾಕಿರ್ ನಾಯ್ಕ್ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಮತ್ತು ಹಣ ವರ್ಗಾವಣೆ ಸೇರಿದಂತೆ ಕಾನೂನಿನ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಕರಣಗಳೂ ದಾಖಲಾಗಿವೆ.
Advertisement