

ವಾಷಿಂಗ್ಟನ್: ಇರಾನ್ ರಾಷ್ಟ್ರದ ಅತ್ಯಂತ ಎತ್ತರದ ಹಾಗೂ ಪ್ರಮುಖವಾದ ಬಿ1 ಸೇತುವೆಯನ್ನು ಅಮೆರಿಕಾ ಸೇನೆ ಧ್ವಂಸಗೊಳಿಸಿದ್ದು, ಈ ಮೂಲಕ ಮತ್ತಷ್ಟು ದಾಳಿಯ ಮುನ್ಸೂಚನೆಯನ್ನು ನೀಡಿದೆ. ಅಲ್ಲದೆ, ತಡವಾಗುವ ಮುನ್ನ ಶಾಂತಿ ಒಪ್ಪಂದಕ್ಕೆ ಬರುವಂತೆಯೂ ಎಚ್ಚರಿಕೆ ನೀಡಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮೂಲಕ ಟೆಹ್ರಾನ್‌ಗೆ ಎಚ್ಚರಿಕೆ ನೀಡಿ, “ತಡವಾಗುವ ಮುನ್ನ ಇರಾನ್ ಶಾಂತಿಯ ಒಪ್ಪಂದಕ್ಕೆ ಬರಬೇಕು, ಇಲ್ಲದಿದ್ದರೆ ದೇಶದ ಭವಿಷ್ಯ ನಾಶವಾಗಲಿದೆ” ಎಂದು ತಿಳಿಸಿದ್ದಾರೆ.
ಇದೇ ವೇಳೆ ಸೇತುವೆ ಮೇಲೆ ನಡೆಸಲಾಗಿರುವ ದಾಳಿಯ ವೀಡಿಯೋವನ್ನೂ ಟ್ರಂಪ್ ಅವರು ಹಂಚಿಕೊಂಡಿದ್ದು, ವೀಡಿಯೋದಲ್ಲಿ ಸೇತುವೆ ಬೆಂಕಿಗಾಹುತಿಯಾಗಿ ದಟ್ಟ ಹೊಗೆಯಿಂದ ಆವರಿಸಿಕೊಂಡಿರುವುದು ಕಂಡು ಬಂದಿದೆ. ವೀಡಿಯೋದಲ್ಲಿ ಸೇತುವೆಗೆ ಸಂಭವಿಸಿದ ಹಾನಿ ಸ್ಪಷ್ಟವಾಗಿ ಕಾಣಿಸುತ್ತಿದೆ.
ಈ ಮೂಲಕ ಇರಾನ್ ತನ್ನ ನಿಲುವು ಬದಲಾಯಿಸದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ದಾಳಿಗೆ ಯಾರು ಕಾರಣ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಟ್ರಂಪ್ ಹೇಳಿಕೆಗಳಿಂದ ಅಮೆರಿಕ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದರೂ, ಯಾವುದೇ ದೇಶವೂ ಅಧಿಕೃತವಾಗಿ ಹೊಣೆ ಹೊತ್ತುಕೊಂಡಿಲ್ಲ.
ಇರಾನ್ ಟಿವಿ ವರದಿ ಪ್ರಕಾರ, ಅಮೆರಿಕಾ-ಇಸ್ರೇಲ್ ಸೇತುವೆ ಮೇಲೆ ಎರಡು ಬಾರಿ ದಾಳಿ ಮಾಡಿದೆ ಎಂದು ತಿಳಿಸಿವೆ. ಮೊದಲ ದಾಳಿಯಲ್ಲಿ ಇಬ್ಬರು ನಾಗೀರಕರು ಸಾವನ್ನಪ್ಪಿದ್ದಾರೆ. ಮೊದಲ ದಾಳಿ ಬಳಿಕ ತುರ್ತು ನೆರವಿಗೆ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿದಾಗ ಎರಡನೇ ಬಾರಿ ದಾಳಿ ನಡೆಯಿತು ಎಂದು ತಿಳಿಸಿವೆ.
ನಿರ್ಮಾಣದಲ್ಲಿದ್ದ ಬಿ1 ಸೇತುವೆ ಅತಿ ಎತ್ತರದ ಸೇತುವೆಯಾಗಿತ್ತು ಎನ್ನಲಾಗುತ್ತಿದ್ದು. ಇದರ ಎತ್ತರ 447 ಅಡಿ (136 ಮೀಟರ್) ಇದೆ ಎನ್ನಲಾಗಿದೆ. ಇದೀಗ ಈ ಸೇತುವೆ ಸಂಪೂರ್ಣ ನಾಶವಾಗಿದೆ.
ಇದೇ ಸಂದರ್ಭದಲ್ಲಿ ಅಮೆರಿಕಾ-ಇಸ್ರೇಲ್ ಸೇನೆ ಶತಮಾನದಷ್ಟು ಹಳೆಯ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಉಕ್ಕಿನ ಕಾರ್ಖಾನೆಗಳ ಮೇಲೆಯೂ ದಾಳಿ ನಡೆಸಿದ್ದು, ಇದರಿಂದ ಟೆಹ್ರಾನ್‌ನಲ್ಲಿ ಭಯ ವಾತಾವರಣ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಏತನ್ಮಧ್ಯೆ ಇರಾನ್ ಪ್ರತಿಯಾಗಿ, ಜೋರ್ಡಾನ್‌ನ ಅಲ್ ಅಜ್ರಾಕ್ ಏರ್‌ಬೇಸ್ ನಲ್ಲಿ ಅಮೆರಿಕನ್ ಫೈಟರ್ ಜೆಟ್‌ಗಳ ಮೇಲೆ ಡ್ರೋನ್ ದಾಳಿ ನಡೆಸಿದೆ.
ಈ ಬಗ್ಗೆ ಅಮೆರಿಕಾ ರಾಯಭಾರ ಕಚೇರಿ ಮುಂಚಿತವಾಗಿಯೇ ಎಚ್ಚರಿಕೆ ನೀಡಿತ್ತು, ಬಗ್ದಾದ್‌ನಲ್ಲಿ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳಿಂದ ದಾಳಿ ಸಂಭವಿಸಬಹುದು ಎಂದು ಹೇಳಿತ್ತು.
ಇರಾಕ್‌ನಲ್ಲಿರುವ ಇರಾನ್ ಪರ ಸಶಸ್ತ್ರ ಗುಂಪುಗಳು ಮುಂಬರುವ ಒಂದು ಅಥವಾ ಎರಡು ದಿನಗಳಲ್ಲಿ ನಗರದ ಮೇಲೆ ದಾಳಿ ಮಾಡಬಹುದು ಎಂದು ಅಮೆರಿಕದ ರಾಯಭಾರ ಕಚೇರಿ ಎಚ್ಚರಿಕೆ ನೀಡುತ್ತಿದ್ದಂತೆಯೇ, ಪಶ್ಚಿಮ ಬಾಗ್ದಾದ್‌ನಲ್ಲಿರುವ ವಿಮಾನ ನಿಲ್ದಾಣ ಸಂಕೀರ್ಣದಲ್ಲಿರುವ ಅಮೆರಿಕದ ರಾಜತಾಂತ್ರಿಕ ಮತ್ತು ಲಾಜಿಸ್ಟಿಕ್ಸ್ ಕೇಂದ್ರದ ಮೇಲೆ ಡ್ರೋನ್ ದಾಳಿ ನಡೆದಿದೆ.
ಗುರುವಾರ ಇರಾನ್‌ನಿಂದ ಜೆರುಸಲೆಮ್ ಮೇಲೆ ಹಲವಾರು ದಾಳಿಗಳನ್ನು ವರದಿಯಾಗಿದ್ದು, ಯೆಮೆನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳು ಹಾರಿವೆ ಎಂದು ವರದಿಗಳಿಂದ ತಿಳಿದುಬಂದಿದೆ.
ಏತನ್ಮಧ್ಯೆ ಯುನೈಟೆಡ್ ನೇಷನ್ಸ್ ಮುಖ್ಯಸ್ಥ ಅಂಟೋನಿಯೋ ಗುಟೆರ್ರೆಸ್ ಮಧ್ಯಪ್ರಾಚ್ಯದ ಸಂಘರ್ಷವು ವ್ಯಾಪಕ ಯುದ್ಧಕ್ಕೆ ತಿರುಗುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ.
“ಮಧ್ಯಪ್ರಾಚ್ಯವು ವಿಸ್ತಾರವಾದ ಯುದ್ಧಕ್ಕೆ ತುತ್ತಾಗಬಹುದು. ಇದರಿಂದ ಜಾಗತಿಕ ಮಟ್ಟದಲ್ಲಿ ಭೀಕರ ಪರಿಣಾಮಗಳು ಉಂಟಾಗಬಹುದು ಎಂದು ಅವರು ನ್ಯೂಯಾರ್ಕ್‌ನಲ್ಲಿ ಪತ್ರಕರ್ತರಿಗೆ ತಿಳಿಸಿದ್ದಾರೆ. ಇದೇ ವೇಳೆ ಇರಾನ್ ಮೇಲಿನ ಅಮೆರಿಕಾ-ಇಸ್ರೇಲಿ ದಾಳಿಗಳು ಮತ್ತು ಅದರ ನೆರೆಹೊರೆಯವರ ಮೇಲಿನ ಇರಾನ್ ದಾಳಿಗಳನ್ನು ತಕ್ಷಣವೇ ನಿಲ್ಲಿಸಬೇಕೆಂದು ಕರೆ ನೀಡಿದ್ದಾರೆ.
ಈ ನಡುವೆ ಬುಧವಾರ ಬುಧವಾರ ತಮ್ಮ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವ ಟ್ರಂಪ್ ಅವರು, ಯುದ್ಧ ಬಹುತೇಕ ಅಂತಿಮ ಹಂತದಲ್ಲಿದೆ ಎಂದರೂ, ಇರಾನ್ ಅವರ ಬೇಡಿಕೆಗಳಿಗೆ ಬದಲಾಗದಿದ್ದರೆ “ತೀವ್ರವಾಗಿ ದಾಳಿ ಮಾಡುವುದಾಗಿ” ಎಚ್ಚರಿಕೆ ನೀಡಿದ್ದರು.
ಮುಂದಿನ ಎರಡು-ಮೂರು ವಾರಗಳಲ್ಲಿ ಅಮೆರಿಕಾ ಇರಾನ್ ಮೇಲೆ ಹೆಚ್ಚಿನ ದಾಳಿ ನಡೆಸಿ ದೇಶದ ಮೂಲಭೂತ ಮೂಲಸೌಕರ್ಯವನ್ನು ಸಂಪೂರ್ಣ ನಾಶಮಾಡುವುದಾಗಿ ಘೋಷಿಸಿದ್ದಾರೆ.
Advertisement