

ಟೆಹ್ರಾನ್: 48 ಗಂಟೆಗಳೊಳಗೆ ಶಾಂತಿ ಒಪ್ಪಂದವನ್ನು ಸ್ವೀಕರಿಸದಿದ್ದರೆ ನಿಮ್ಮ ಪ್ರಮುಖ ಮೂಲಸೌಕರ್ಯವನ್ನು ನಾಶಪಡಿಸುತ್ತೇವೆಂದು ಅಮೆರಿಕಾ ಕಠಿಣ ಎಚ್ಚರಿಕೆ ನೀಡಿದ್ದು, ಇದರ ನಡುವಲ್ಲೂ ಇರಾನ್ ಭಾನುವಾರ ತಡರಾತ್ರಿ ಇಸ್ರೇಲ್ ಮತ್ತು ಕುವೈತ್ ಮೇಲೆ ಕ್ಷಿಪಣಿ-ಡ್ರೋನ್ ದಾಳಿಗಳನ್ನು ನಡೆಸಿದೆ. ಈ ಮೂಲಕ ಅಮೆರಿಕಾದ ಬೆದರಿಕೆಯನ್ನು ಇರಾನ್ ತಿರಸ್ಕರಿಸಿದೆ.
ಖತಮ್ ಅಲ್-ಅನ್ಬಿಯಾ ಕೇಂದ್ರ ಪ್ರಧಾನ ಕಚೇರಿಯಿಂದ ಹೇಳಿಕೆ ನೀಡಿದ ಜನರಲ್ ಅಲಿ ಅಬ್ದುಲ್ಲಾಹಿ ಅಲಿಯಾಬಾದಿ, ಟ್ರಂಪ್ ಅವರ ಬೆದರಿಕೆ "ಅಸಹಾಯಕ, ಆತಂಕ, ಅಸಮತೋಲಿತ ಮತ್ತು ಮೂರ್ಖತನದ ಕ್ರಮ" ಎಂದು ಹೇಳಿದ್ದಾರೆ. ನಿಮ್ಮ ಸಂದೇಶದ ಸರಳ ಅರ್ಥವೇ ನರಕದ ದ್ವಾರಗಳು ನಿಮಗಾಗಿ ತೆರೆಯುತ್ತಿವೆ ಎಂಬುದಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಅಮೆರಿಕಾ ಎಚ್ಚರಿಕೆಗೆ ಬಗ್ಗದ ಇರಾನ್ ಇಸ್ರೇಲ್ ಮತ್ತು ಕುವೈತ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ಮೂಲಕ ದಾಳಿ ನಡೆಸಿದ್ದು, ದಾಳಿಗೆ ಇಸ್ರೇಲ್ ಮತ್ತು ಕುವೈತ್ ತಮ್ಮ ವಾಯು ರಕ್ಷಣಾ ವ್ಯವಸ್ಥೆಗಳ ಮೂಲಕ ಪ್ರತಿಕ್ರಿಯಿಸುತ್ತಿವೆ.
ಅಮೆರಿಕ-ಇಸ್ರೇಲ್ ದಾಳಿ ಪ್ರಾರಂಭವಾದ ನಂತರ, ಇರಾನ್ ಕ್ಷಿಪಣಿ ಮತ್ತು ಡ್ರೋನ್ ತಂತ್ರ ಬಳಸಿ ತೀವ್ರ ಪ್ರತಿಕ್ರಿಯೆ ನೀಡುತ್ತಿದೆ.
ಒಂದು ತಿಂಗಳೊಳಗಿನ ಈ ಸಂಘರ್ಷವು ಪೂರ್ವ ಪಶ್ಚಿಮ ಏಷ್ಯಾದ ಇತರ ಭಾಗಗಳಲ್ಲಿಯೂ ವ್ಯಾಪಿಸಿದ್ದು, ಇದರಿಂದ ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರುತ್ತಿವೆ. ಇರಾನ್ ಸೇನೆ ಹಾರ್ಮುಜ್ ಜಲಸಂಧಿ ಮಾರ್ಗವನ್ನು ನಿಯಂತ್ರಿಸುತ್ತಿದೆ.
ಏತನ್ಮಧ್ಯೆ, ಇಸ್ರೇಲ್ ಅಥವಾ ಅಮೆರಿಕ ನಡೆಸಿರುವ ದಾಳಿಯಿಂದಾಗಿ ಪೆಟ್ರೋಕೆಮಿಕಲ್ ಘಟಕದಲ್ಲಿ ಐವರು ಮೃತಪಟ್ಟಿದ್ದಾರೆಂದು ಖುಜೆಸ್ತಾನ್ ಪ್ರಾಂತ್ಯದ ಉಪ ಗವರ್ನರ್ ಹೇಳಿದ್ದಾರೆ.
ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್, ಇರಾನ್'ಗೆ ಕಠಿಣ ಎಚ್ಚರಿಕೆ ನೀಡಿದ್ದರು. 48 ಗಂಟೆಗಳೊಳಗೆ ಇರಾನ್ ಶಾಂತಿ ಪ್ರಸ್ತಾವಕ್ಕೆ ಒಪ್ಪಿ, ಹಾರ್ಮುಜ್ ಜಲಸಂಧಿಯನ್ನು ತೆರಯಬೇಕು.ಇಲ್ಲದಿದ್ದರೆ, ನರಕ ಎದುರಾಗಲಿದೆ ಎಂದು ಹೇಳಿದ್ದರು. ಇದಲ್ಲದೆ, ಸ್ಫೋಟಗಳ ದೃಶ್ಯವನ್ನು ತೋರಿಸುವ ವೀಡಿಯೋವನ್ನೂ ಪೋಸ್ಟ್ ಮಾಡಿದ್ದರು.
ಈ ಇರಾನ್ ಇರಾನ್ ಹಾರ್ಮುಜ್ ಪ್ರದೇಶದಲ್ಲಿ F-15 ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ. ಈ ವೇಳೆ ವಿಮಾನದಲ್ಲಿದ್ದ ಇಬ್ಬರ ಸಿಬ್ಬಂದಿಗಳ ಪೈಕಿ ಒಬ್ಬರನ್ನು ಅಮೆರಿಕಾ ವಿಶೇಷ ಪಡೆ ರಕ್ಷಣೆ ಮಾಡಿದೆ. ಮತ್ತೋರ್ವ ಯೋಧನಿಗಾಗಿ ಸೇನೆ ಹುಡುಕಾಟ ಮುಂದುವರೆಸಿದೆ ಎಂದು ತಿಳಿದುಬಂದಿದೆ.
ಇದಲ್ಲದೆ, ಇರಾನ್‌ನ ಸೇನೆಯು ಅಮೆರಿಕದ ಎ -10 ಭೂ ದಾಳಿ ವಿಮಾನವನ್ನು ಹೊಡೆದುರುಳಿಸಿರುವುದಾಗಿ ಹೇಳಿದೆ, ಆ ವಿಮಾನದ ಪೈಲಟ್ ಅನ್ನು ರಕ್ಷಿಸಲಾಗಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಏತನ್ಮಧ್ಯೆ ಬುಶೆಹರ್ ಪರಮಾಣು ಸ್ಥಾವರ ಮೇಲೆ ದಾಳಿ ನಡೆದಿದ್ದು, ಈ ದಾಳಿ ಗಂಭೀರ ಚರ್ಚೆಗೆ ಕಾರಣವಾಗಿದೆ. ಇರಾನ್‌ನ ದಕ್ಷಿಣ ಭಾಗದಲ್ಲಿರುವ ಈ ಪರಮಾಣು ವಿದ್ಯುತ್ ಸ್ಥಾವರವು ದೇಶದ ಪ್ರಮುಖ ಅಣುಶಕ್ತಿ ಕೇಂದ್ರವಾಗಿದ್ದು, ವಿದ್ಯುತ್ ಉತ್ಪಾದನೆಗೆ ಅತ್ಯಂತ ಮಹತ್ವದ್ದಾಗಿದೆ.
ಇತ್ತೀಚಿನ ವರದಿಗಳ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿರುವ ಸಂಘರ್ಷದ ಹಿನ್ನೆಲೆ ಈ ಸ್ಥಾವರವನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಅಥವಾ ಡ್ರೋನ್ ದಾಳಿ ನಡೆದಿದೆ ಎಂಬ ಮಾಹಿತಿ ಹೊರಬಂದಿದೆ.
ಈ ದಾಳಿಯಿಂದ ಸ್ಥಾವರದ ಭದ್ರತಾ ವ್ಯವಸ್ಥೆಗಳು ಹಾನಿಗೊಳಗಾಗಿದೆಯೇ ಅಥವಾ ಅಣು ಸೋರಿಕೆಯಂತಹ ಅಪಾಯ ಉಂಟಾಗಿದೆಯೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಆದರೆ, ಅಂತಾರಾಷ್ಟ್ರೀಯ ಸಮುದಾಯವು ಈ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಪರಮಾಣು ಸ್ಥಾವರಗಳ ಮೇಲೆ ದಾಳಿ ನಡೆಯುವುದು ಜಾಗತಿಕ ಭದ್ರತೆಗೆ ದೊಡ್ಡ ಬೆದರಿಕೆಯಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಇರಾನ್ ಸರ್ಕಾರ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ಇದಕ್ಕೆ ಹೊಣೆಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ. ಈ ನಡುವೆ, ಪ್ರದೇಶದಲ್ಲಿ ಸೈನಿಕ ಚಟುವಟಿಕೆಗಳು ಹೆಚ್ಚಾಗಿದ್ದು, ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡಿದೆ ಎಂದು ತಿಳಿದುಬಂದಿದೆ.
ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಅವರು ಮಾತನಾಡಿ, ಈ ದಾಳಿ ಮುಂದುವರಿದರೆ, ಗಲ್ಫ್ ರಾಷ್ಟ್ರಗಳಲ್ಲೇ ಹೆಚ್ಚು ಜೀವ ನಾಶವಾಗುತ್ತದೆಯೇ ವಿನಃ ಇರಾನ್ ರಾಷ್ಟ್ರದಲ್ಲಿ ಅಲ್ಲ ಎಂದು ಎಚ್ಚರಿಸಿದ್ದಾರೆ.
ಇನ್ನು ಯುದ್ಧದಲ್ಲಿ ತೊಡಗಿರುವ ರಾಷ್ಟ್ರಗಳು ಪ್ರಮುಖ ಆರ್ಥಿಕ ಹಾಗೂ ಕೈಗಾರಿಕಾ ಕೇಂದ್ರಗಳನ್ನು ಗುರಿಯಾಗಿಸುತ್ತಿದ್ದು, ಇದು ಜಾಗತಿಕ ಇಂಧನ ಪೂರೈಕೆ ಮೇಲೆ ಪರಿಣಾಮ ಬೀರುತ್ತಿದೆ.
ಇಸ್ರೇಲ್-ಅಮೆರಿಕ ಪೆಟ್ರೋಕೆಮಿಕಲ್ ಘಟಕ, ಸಿಮೆಂಟ್ ಕಾರ್ಖಾನೆ ಮತ್ತು ಇರಾಕ್-ಇರಾನ್ ಗಡಿ ವ್ಯಾಪಾರ ಕೇಂದ್ರವನ್ನು ಗುರಿಯಾಗಿಸುತ್ತಿದ್ದರೆ, ಇದಕ್ಕೆ ಪ್ರತ್ಯುತ್ತರವಾಗಿ ಇರಾನ್, ಇಸ್ರೇಲ್ ಮತ್ತು ಗಲ್ಫ್ ದೇಶಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸುತ್ತಿದೆ.
ದಿನ ಕಳೆದಂತೆ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಇದು ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ. ಎರಡು ರಾಷ್ಟ್ರಗಳು ಪ್ರಮುಖ ಆರ್ಥಿಕ ಹಾಗೂ ಸೈನ್ಯ ಸೌಲಭ್ಯಗಳನ್ನು ಗುರಿಯಾಗಿಸಿಕೊಂಡಿರುವುದರಿಂದ, ಮುಂದಿನ ದಿನಗಳಲ್ಲಿ ಗಲ್ಫ್ ಪ್ರದೇಶದಲ್ಲಿ ಪರಿಸ್ಥಿತಿ ಮತ್ತಷ್ಟು ಉದ್ನಿಗ್ನಗೊಳ್ಳುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.
Advertisement