

ಜೆರುಸಲೆಮ್: ಇಸ್ರೇಲ್ ಮತ್ತು ಲೆಬನಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳು ಮಧ್ಯಪ್ರಾಚ್ಯದ ಸಂಘರ್ಷದಲ್ಲಿ ಮತ್ತೊಂದು ಪ್ರಮುಖ ರಾಜತಾಂತ್ರಿಕ ತಿರುವನ್ನು ಸೂಚಿಸುತ್ತಿವೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಲೆಬನಾನ್ ಜೊತೆ ನೇರ ಮಾತುಕತೆ ಆರಂಭಿಸಲು ತನ್ನ ಸಚಿವ ಸಂಪುಟಕ್ಕೆ ಸೂಚನೆ ನೀಡಿದ್ದು, ಈ ಸಂವಾದದ ಮುಖ್ಯ ಅಜೆಂಡಾ ಹಿಜ್ಬುಲ್ಲಾ ಸಂಘಟನೆಯನ್ನು ನಿಷಸ್ತ್ರೀಕರಣಗೊಳಿಸುವುದು ಹಾಗೂ ಎರಡು ದೇಶಗಳ ನಡುವೆ ಶಾಂತಿ ಸಂಬಂಧಗಳನ್ನು ಸ್ಥಾಪಿಸುವುದು ಎಂದು ಇಸ್ರೇಲ್ ಸರ್ಕಾರ ಹೇಳಿದೆ.
ನೆತನ್ಯಾಹು ಕಚೇರಿ ನೀಡಿದ ಹೇಳಿಕೆಯ ಪ್ರಕಾರ, ಲೆಬನಾನ್ ಹಲವು ಬಾರಿ ನೇರ ಮಾತುಕತೆಗೆ ಮನವಿ ಮಾಡಿರುವುದರಿಂದ ಇಸ್ರೇಲ್ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದೆ.
ಇದರಂತೆ, ಮುಂದಿನ ವಾರ ಅಮೆರಿಕದ ವಾಷಿಂಗ್ಟನ್‌ನಲ್ಲಿ ಮಾತುಕತೆ ಆರಂಭವಾಗುವ ಸಾಧ್ಯತೆ ಇದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಈ ಪ್ರಕ್ರಿಯೆಯಲ್ಲಿ ಅಮೆರಿಕಾ ಮಧ್ಯಸ್ಥಿಕೆ ವಹಿಸುವ ನಿರೀಕ್ಷೆ ಇದ್ದು, ಇಸ್ರೇಲ್ ತನ್ನ ಪ್ರತಿನಿಧಿಯಾಗಿ ಅಮೆರಿಕದಲ್ಲಿರುವ ರಾಯಭಾರಿ ಯೆಚಿಯೆಲ್ ಲೈಟರ್ ಅವರನ್ನು ನಿಯೋಜಿಸಬಹುದು ಎಂಬ ಮಾಹಿತಿ ಕೂಡ ಲಭ್ಯವಾಗಿದೆ.
ಆದರೆ, ಈ ಮಾತುಕತೆ ನಡುವಲ್ಲೇ ಇಸ್ರೇಲ್ ಲೆಬನಾನ್ ಮೇಲೆ ಭಾರೀ ವಾಯುದಾಳಿಗಳನ್ನು ಮುಂದುವರಿಸಿದ್ದು. “under fire” ಎಂಬ ರೀತಿಯಲ್ಲಿ—ಅಂದರೆ ದಾಳಿಗಳು ನಿಲ್ಲಿಸದೇ—ಮಾತುಕತೆ ನಡೆಯಬಹುದು ಎಂಬ ಸೂಚನೆಗಳನ್ನು ನೀಡಿದೆ.
ಈ ಹಿನ್ನೆಲೆಯಲ್ಲಿ ಶಾಂತಿ ಪ್ರಕ್ರಿಯೆ ಆರಂಭವಾದರೂ ಅದು ತೀವ್ರ ಒತ್ತಡ ಮತ್ತು ಯುದ್ಧಮಯ ವಾತಾವರಣದಲ್ಲೇ ನಡೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಇದರ ನಡುವೆ ಶಾಂತಿ ಪ್ರಸ್ತಾವಕ್ಕೆ ಹಿಜ್ಬುಲ್ಲಾ ತೀವ್ರ ವಿರೋಧ ವ್ಯಕ್ತಪಡಿಸಿದೆ. ಯಾವುದೇ ರೀತಿಯ ನೇರ ಮಾತುಕತೆಗೆ ನಾವು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಂಘಟನೆಯ ಪ್ರತಿನಿಧಿ ಅಲಿ ಫಯ್ಯಾದ್ ಅವರು ಪ್ರತಿಕ್ರಿಯೆ ನೀಡಿದ್ದು, ಇಸ್ರೇಲ್ ಸೇನೆಯನ್ನು ಲೆಬನಾನ್ ಪ್ರದೇಶದಿಂದ ಹಿಂಪಡೆಯಬೇಕು, ಕದನ ವಿರಾಮ ಜಾರಿಗೆ ಬರಬೇಕು. ನಮ್ಮ ಜನರು ಮನೆಗಳಿಗೆ ಸುರಕ್ಷಿತವಾಗಿ ಮರಳುವಂತಾಗಬೇಕು ಎಂಬುದು ಮೊದಲ ಶರತ್ತು ಎಂದು ಹೇಳಿದ್ದಾರೆ.
ಇದರ ಜೊತೆಗೆ, ಲೆಬನಾನ್ ಸರ್ಕಾರ ಕದನ ವಿರಾಮ ಘೋಷಿಸಿದ ನಂತರವೇ ಯಾವುದೇ ಮುಂದಿನ ರಾಜತಾಂತ್ರಿಕ ಹಂತ ಸಾಧ್ಯ ಎಂದು ತಿಳಿಸಿದ್ದಾರೆ.
ಲೆಬನಾನ್ ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಮಾತನಾಡಿ, ಮೊದಲು ಅಧಿಕೃತ ಕದನ ವಿರಾಮ ಘೋಷಣೆ ಆಗಬೇಕು, ನಂತರ ಮಾತ್ರ ಮಾತುಕತೆ ಸಾಧ್ಯ ಎಂದು ಬಹೇಳಿದ್ದಾರೆ.
ಈ ನಡುವೆ, ಲೆಬನಾನ್ ಸರ್ಕಾರವು ದೇಶದ ಒಳಗೆ ಶಸ್ತ್ರಾಸ್ತ್ರಗಳ ನಿಯಂತ್ರಣವನ್ನು ಸಂಪೂರ್ಣವಾಗಿ ಸರ್ಕಾರದ ಕೈಯಲ್ಲಿ ಇರಿಸಲು ಸೇನೆ ಮತ್ತು ಭದ್ರತಾ ಪಡೆಗಳಿಗೆ ಸೂಚನೆ ನೀಡಿದೆ. ಇದು ಹಿಜ್ಬುಲ್ಲಾ ಮೇಲೆ ಒತ್ತಡವನ್ನು ಹೆಚ್ಚಿಸುವ ಹೆಜ್ಜೆಯಾಗಿದೆ ಎನ್ನಲಾಗಿದೆ.
ಈ ನಡುವೆ ಯುದ್ಧದ ತೀವ್ರತೆ ಹೆಚ್ಚಾಗಿದ್ದು, ಇತ್ತೀಚಿನ ಇಸ್ರೇಲ್ ವಾಯುದಾಳಿಗಳಲ್ಲಿ ಒಂದೇ ದಿನದಲ್ಲಿ 300ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು 1,150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆಂದು ಲೆಬನಾನ್ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಯುದ್ಧ ಆರಂಭದಿಂದ ಒಟ್ಟು ಸಾವಿನ ಸಂಖ್ಯೆ ಸಾವಿರಾರು ದಾಟಿದ್ದು, ಪರಿಸ್ಥಿತಿ ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
Advertisement