

ಇರಾನ್ ಪ್ರತಿನಿಧಿ ಮಂಡಳಿ ಇಂದು ಶನಿವಾರ ಮುಂಜಾನೆ ಇಸ್ಲಾಮಾಬಾದ್‌ಗೆ ಆಗಮಿಸಿದ್ದು, ಅಮೆರಿಕದೊಂದಿಗೆ ಮಹತ್ವದ ಮಾತುಕತೆಗಳಿಗೆ ಸಜ್ಜಾಗಿದೆ. ಈ ಬೆಳವಣಿಗೆ ಎರಡೂ ದೇಶಗಳ ನಡುವಿನ ನಡೆಯುತ್ತಿರುವ ಸಂಘರ್ಷಕ್ಕೆ ಅಂತ್ಯ ಕಾಣುವ ನಿರೀಕ್ಷೆಯನ್ನು ಜಾಗತಿಕ ಮಟ್ಟದಲ್ಲಿ ಹೆಚ್ಚಿಸಿದೆ.
ಈ ಭೇಟಿ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಈ ವಾರದ ಆರಂಭದಲ್ಲಿ ಘೋಷಿಸಿದ್ದ ಎರಡು ವಾರಗಳ ಯುದ್ಧ ವಿರಾಮದ ನಂತರ ನಡೆಯುತ್ತಿದೆ. ಈ ಅವಧಿಯಲ್ಲಿ ಅಮೆರಿಕಾ ಮತ್ತು ಇರಾನ್ ನಡುವಿನ ಮಾತುಕತೆಗಳನ್ನು ಇಸ್ಲಾಮಾಬಾದ್‌ನಲ್ಲಿ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದರು.
ಇರಾನ್ ಸಂಸತ್ತು ಸ್ಪೀಕರ್ ಮೊಹಮ್ಮದ್ ಬಘೇರ್ ಘಾಲಿಬಾಫ್ ಅವರ ನೇತೃತ್ವದ ತಂಡ, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಅವರೊಂದಿಗೆ ಮಾತುಕತೆಯಲ್ಲಿ ಭಾಗವಹಿಸಲು ಸಿದ್ಧವಾಗಿದೆ. ಇದೇ ವೇಳೆ ಅಮೆರಿಕಾ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ನೇತೃತ್ವದ ಅಮೆರಿಕಾ ತಂಡವೂ ಪಾಕಿಸ್ತಾನದ ರಾಜಧಾನಿಯತ್ತ ಪ್ರಯಾಣ ಬೆಳೆಸಿದೆ.
ಪಾಕಿಸ್ತಾನದ ವಿದೇಶಾಂಗ ಕಚೇರಿ ತಿಳಿಸಿದಂತೆ, ಇರಾನ್ ಪ್ರತಿನಿಧಿಗಳನ್ನು ಉಪ ಪ್ರಧಾನಮಂತ್ರಿ ಹಾಗೂ ವಿದೇಶಾಂಗ ಸಚಿವ ಇಶಾಕ್ ದಾರ್, ರಾಷ್ಟ್ರೀಯ ಸಭೆಯ ಸ್ಪೀಕರ್ ಆಯಾಜ್ ಸಾದಿಕ್, ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಸಯ್ಯದ್ ಆಸಿಂ ಮುನೀರ್ ಮತ್ತು ಗೃಹ ಸಚಿವ ಸಯ್ಯದ್ ಮೊಹ್ಸಿನ್ ರಝಾ ನಕ್ವಿ ಸ್ವಾಗತಿಸಿದರು.
ಉನ್ನತ ಮಟ್ಟದ ಪ್ರತಿನಿಧಿ ಮಂಡಳಿ ಮಾತುಕತೆಗಾಗಿ ಆಗಮಿಸಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ. ಎರಡೂ ದೇಶಗಳು ರಚನಾತ್ಮಕವಾಗಿ ಮಾತುಕತೆಯಲ್ಲಿ ತೊಡಗಿಸಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿ, ಪಶ್ಚಿಮ ಏಷ್ಯಾದ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯಲು ಪಾಕಿಸ್ತಾನ ನೆರವಾಗಲಿದೆ ಎಂದು ಹೇಳಿದರು.
ಇದರ ಮಧ್ಯೆ, ಇರಾನ್ ತಂಡ ಭಾಗವಹಿಸುವುದೇ ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ವ್ಯಕ್ತವಾಗಿದ್ದವು, ವಿಶೇಷವಾಗಿ ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳ ಹಿನ್ನೆಲೆಯಲ್ಲಿ. ಕೆಲವು ವರದಿಗಳ ಪ್ರಕಾರ, ಯುದ್ಧ ವಿರಾಮದ ಷರತ್ತುಗಳು ಪೂರ್ಣಗೊಂಡ ನಂತರವೇ ಮಾತುಕತೆ ಆರಂಭವಾಗಲಿದೆ ಎಂದು ಇರಾನ್ ತಿಳಿಸಿದೆ.
ಇರಾನ್‌ನ ತಸ್ನೀಮ್ ಸುದ್ದಿ ಸಂಸ್ಥೆ, ಕೆಲವು “ಪೂರ್ವ ಷರತ್ತುಗಳು” ಪೂರ್ತಿಯಾದ ನಂತರ ಮಾತ್ರ ಮಾತುಕತೆ ಆರಂಭವಾಗುತ್ತದೆ. ಘಾಲಿಬಾಫ್ ಅವರು ಕೂಡ, ಲೆಬನಾನ್‌ನಲ್ಲಿ ಯುದ್ಧ ವಿರಾಮ ಜಾರಿಗೆ ತರುವುದು ಮತ್ತು ಇರಾನ್‌ನ ಸ್ಥಗಿತಗೊಳಿಸಲಾದ ಆಸ್ತಿಗಳನ್ನು ಬಿಡುಗಡೆ ಮಾಡುವುದು ಎಂಬ ಎರಡು ವಿಷಯಗಳು ಇನ್ನೂ ಬಾಕಿ ಇವೆ ಎಂದು ಹೇಳಿದ್ದಾರೆ.
ಈ ಎರಡು ವಿಷಯಗಳು ಪೂರ್ಣಗೊಂಡ ನಂತರವೇ ಮಾತುಕತೆ ಆರಂಭವಾಗಬೇಕು ಎಂದು ಅವರು ಇಸ್ಲಾಮಾಬಾದ್‌ಗೆ ಹೊರಡುವ ಮೊದಲು ಹೇಳಿದ್ದಾರೆ.
ಇದಕ್ಕೂ ಮೊದಲು, ಅಮೆರಿಕಾ ಉಪಾಧ್ಯಕ್ಷ ವ್ಯಾನ್ಸ್, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆಗಳಿಗೆ ಸ್ಪಷ್ಟ ಮಾರ್ಗಸೂಚಿಗಳನ್ನು ನೀಡಿದ್ದಾರೆಯೆಂದು ತಿಳಿಸಿದ್ದಾರೆ. “ಇರಾನ್ ನಿಷ್ಠೆಯಿಂದ ಮಾತುಕತೆಗೆ ಸಿದ್ಧವಾಗಿದ್ದರೆ, ನಾವು ಸಹ ಸಿದ್ಧ. ಆದರೆ ಅವರು ಮೋಸ ಮಾಡಲು ಯತ್ನಿಸಿದರೆ, ನಾವು ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
ಫೆಬ್ರವರಿ 28ರಂದು ಆರಂಭವಾದ ಅಮೆರಿಕಾ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲಿ ತಾತ್ಕಾಲಿಕ ವಿರಾಮದ ನಡುವೆ ಈ ಮಾತುಕತೆಗಳು ನಡೆಯುತ್ತಿವೆ. ಈ ವಿರಾಮಕ್ಕೆ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಿದೆ.
ಇದಕ್ಕೂ ಮುನ್ನ, ಅರಾಘ್ಚಿ ಅವರು ಲೆಬನಾನ್‌ನ ಇರಾನ್ ರಾಯಭಾರಿ ಮೊಹಮ್ಮದ್ ರಝಾ ಶಿಬಾನಿ ಅವರೊಂದಿಗೆ ದೂರವಾಣಿ ಸಂಭಾಷಣೆಯಲ್ಲಿ, ಅಮೆರಿಕಾ ತನ್ನ ಯುದ್ಧ ವಿರಾಮದ ಬದ್ಧತೆಯನ್ನು ಪಾಲಿಸಬೇಕು ಮತ್ತು ಅದನ್ನು ಲೆಬನಾನ್‌ಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದರು.
ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್ ಕೂಡ, ಲೆಬನಾನ್‌ನಲ್ಲಿ ಇಸ್ರೇಲ್ ದಾಳಿಗಳು ಯುದ್ಧ ವಿರಾಮದ ಉಲ್ಲಂಘನೆಯಾಗಿದ್ದು, ಮಾತುಕತೆಗಳನ್ನು ಹಾಳುಮಾಡಬಹುದು ಎಂದು ಎಚ್ಚರಿಸಿದ್ದಾರೆ.
ಇಸ್ಲಾಮಾಬಾದ್ ನಲ್ಲಿ ಭದ್ರತೆ ಹೆಚ್ಚಳ
ಮಾತುಕತೆಗಳ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ನಗರವನ್ನು ‘ರೆಡ್ ಅಲರ್ಟ್’ಗೆ ಒಳಪಡಿಸಲಾಗಿದ್ದು, 10,000 ಕ್ಕೂ ಹೆಚ್ಚು ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ರಮುಖ ಸರ್ಕಾರಿ ಕಟ್ಟಡಗಳು ಇರುವ ‘ರೆಡ್ ಝೋನ್’ ಪ್ರದೇಶವನ್ನು ಸೇನೆ ಮತ್ತು ರೇಂಜರ್ಸ್ ಕಾವಲು ನೋಡುತ್ತಿದ್ದು, ಅನುಮತಿ ಪಡೆದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ.
ಈ ಮಹತ್ವದ ಮಾತುಕತೆಗಳನ್ನು ವಿಶ್ವದಾದ್ಯಂತ ಕುತೂಹಲದಿಂದ ವೀಕ್ಷಿಸಲಾಗುತ್ತಿದೆ. ಇದರ ಫಲಿತಾಂಶವು ಪಶ್ಚಿಮ ಏಷ್ಯಾದ ಭದ್ರತೆ, ಜಾಗತಿಕ ಇಂಧನ ಮಾರುಕಟ್ಟೆ ಮತ್ತು ಅಂತಾರಾಷ್ಟ್ರೀಯ ರಾಜತಾಂತ್ರಿಕತೆಗೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
Advertisement