

ವಾಷಿಂಗ್ಟನ್: ಮೊದಲ ಸುತ್ತಿನ ಶಾಂತಿ ಮಾತುಕತೆ ಯಾವುದೇ ಫಲಿತಾಂಶವಿಲ್ಲದೆ ಅಂತ್ಯಗೊಂಡಿದ್ದು, ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವಿನ ಎರಡನೇ ಸುತ್ತಿನ ಉದ್ದೇಶಿತ ಶಾಂತಿ ಮಾತುಕತೆಯಲ್ಲಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೈಯಕ್ತಿಕವಾಗಿ ಅಥವಾ ವರ್ಚುಯಲ್ ಆಗಿ ಭಾಗವಹಿಸಬಹುದು ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಅವರ ಭಾಗವಹಿಸುವಿಕೆಯು ಮಾತುಕತೆಗಳು ಹೇಗೆ ನಡೆಯುತ್ತವೆ ಎಂಬುದರ ಮೇಲೆ ಅವಲಂಬಿತವಾಗಿದ್ದು, ವಿಶೇಷವಾಗಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದ್ದರೆ ತಾವೇ ಭಾಗವಹಿಸುತ್ತಾರೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಮೂಲವನ್ನು ಉಲ್ಲೇಖಿಸಿ ವರದಿಯಾಗಿದ್ದು, 'ವಿಷಯಗಳು ಮುಂದುವರಿಯುತ್ತಿವೆ ಮತ್ತು ಮಾತುಕತೆಗಳು ನಾಳೆ, ಅಂದರೆ ಬುಧವಾರ ನಡೆಯುವ ಸಾಧ್ಯತೆಯಿದೆ' ಎಂದು ಹೇಳಿದೆ.
ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಎರಡು ವಾರಗಳ ಕದನ ವಿರಾಮವು ಬುಧವಾರದಂದು ಮುಕ್ತಾಯಗೊಳ್ಳಲಿದೆ. ಇರಾನ್‌ನ ಬಂದರುಗಳ ಮೇಲಿನ ಅಮೆರಿಕದ ನೌಕಾಪಡೆಯ ದಿಗ್ಬಂಧನ ಜಾರಿಯಲ್ಲಿರುತ್ತದೆ ಮತ್ತು ಕದನ ವಿರಾಮವನ್ನು ವಿಸ್ತರಿಸುವ ಸಾಧ್ಯತೆಯಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.
ಮಾತುಕತೆಗೆ ಹಾಜರಾಗುವುದನ್ನು ಇರಾನ್ ಪರಿಗಣನೆ
ವಾರಾಂತ್ಯದಲ್ಲಿ ಹಾರ್ಮುಜ್ ಜಲಸಂಧಿಯ ಬಳಿ ಇರಾನ್‌ನ ಹಡಗನ್ನು ಅಮೆರಿಕ ವಶಪಡಿಸಿಕೊಂಡ ನಂತರ ಇರಾನ್ ಈ ಕ್ರಮವನ್ನು ಖಂಡಿಸಿದೆ. ಇತ್ತೀಚಿನ ಘಟನೆಯಿಂದ ಕೋಪಗೊಂಡ ಕಾರಣ ಮಾತುಕತೆಗೆ ಹಾಜರಾಗದಿರುವ ಬೆದರಿಕೆಯೊಡ್ಡಿದ್ದರೂ, ಪಾಕಿಸ್ತಾನದಲ್ಲಿ ಇರಾನ್‌ನೊಂದಿಗೆ ಯೋಜಿತ ಶಾಂತಿ ಮಾತುಕತೆಗಳು ನಿಗದಿಯಂತೆ ನಡೆಯಲಿವೆ ಎಂಬ ವಿಶ್ವಾಸವಿದೆ ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ.
ಆದಾಗ್ಯೂ, ಟೆಹ್ರಾನ್ ಅಮೆರಿಕದೊಂದಿಗೆ ಶಾಂತಿ ಮಾತುಕತೆಗಳಲ್ಲಿ ಭಾಗವಹಿಸುವಿಕೆಯನ್ನು "ಸಕಾರಾತ್ಮಕವಾಗಿ ಪರಿಶೀಲಿಸುತ್ತಿದೆ" ಎಂದು ಇರಾನ್‌ನ ಹಿರಿಯ ಅಧಿಕಾರಿ ರಾಯಿಟರ್ಸ್‌ಗೆ ತಿಳಿಸಿದ್ದಾರೆ. ಆದರೆ, ಈ ಹಿಂದೆ ಇರಾನ್ ಶಾಂತಿ ಮಾತುಕತೆಗೆ ಹಾಜರಾಗುವುದಿಲ್ಲ ಎಂದು ಹೇಳಿತ್ತು. ಆದಾಗ್ಯೂ, ಇನ್ನೂ ಯಾವುದೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗಿಲ್ಲ ಎಂದಿದೆ.
ಉಭಯ ದೇಶಗಳ ಕಡೆಯಿಂದ ಆಶಾವಾದದ ಹೊರತಾಗಿಯೂ, ಕದನ ವಿರಾಮದ ಅಂತ್ಯವು ಸಮೀಪಿಸುತ್ತಿದ್ದಂತೆ, ಗಮನಾರ್ಹ ಅಡಚಣೆಗಳು ಮತ್ತು ಅನಿಶ್ಚಿತತೆ ಹಾಗೆಯೇ ಉಳಿದಿದೆ. ಮತ್ತಷ್ಟು ತೈಲ ಬೆಲೆ ಏರಿಕೆಯಾಗುವುದನ್ನು ಮತ್ತು ಷೇರು ಮಾರುಕಟ್ಟೆಯ ಆಘಾತಗಳನ್ನು ತಡೆಯುವ ಒಪ್ಪಂದವನ್ನು ಬಯಸುವ ಟ್ರಂಪ್, ಆದರೆ, ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಅಭಿವೃದ್ಧಿಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮಾತುಕತೆಗೆ ಪಾಕ್ ಸಿದ್ಧತೆ
ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಪ್ರಮುಖ ಸಂಧಾನಕಾರರಾಗಿ ಹೊರಹೊಮ್ಮಿರುವ ಪಾಕಿಸ್ತಾನವು ಮಾತುಕತೆಗಳನ್ನು ಮುಂದುವರೆಸುವ ಬಗ್ಗೆ ಅನಿಶ್ಚಿತತೆಯ ಹೊರತಾಗಿಯೂ, ಎರಡನೇ ಸುತ್ತಿನ ಮಾತುಕತೆ ನಡೆಸಲು ಸಿದ್ಧತೆ ನಡೆಸಿದೆ. ಇಸ್ಲಾಮಾಬಾದ್‌ನಾದ್ಯಂತ ಸುಮಾರು 20,000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಇರಾನ್ ಮಾತುಕತೆಗಾಗಿ ಮಂಗಳವಾರ ಪಾಕಿಸ್ತಾನಕ್ಕೆ ತೆರಳಲಿದ್ದಾರೆ ಎಂದು ಯುಎಸ್ ಮೂಲಗಳನ್ನು ಉಲ್ಲೇಖಿಸಿ ಆಕ್ಸಿಯೋಸ್ ಸೋಮವಾರ ವರದಿ ಮಾಡಿದೆ.
Advertisement