

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕದನ ವಿರಾಮ ವಿಸ್ತರಿಣೆ ಮಾಡಿರುವ ನಡುವಲ್ಲೇ ಮಾತು ತಪ್ಪಿದರೆ ಇನ್ನಷ್ಟು ಸೋಲು ಎದುರಿಸಬೇಕಾಗುತ್ತದೆ ಎಂದು ಇರಾನ್ ಕಠಿಣ ಎಚ್ಚರಿಕೆ ನೀಡಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯುದ್ಧ ವಿರಾಮವನ್ನು ವಿಸ್ತರಿಸುವುದಾಗಿ ಘೋಷಿಸಿ, ಇರಾನ್ ಸರ್ಕಾರದಿಂದ “ಏಕೀಕೃತ ಪ್ರಸ್ತಾವನೆ” ಬರುವವರೆಗೆ ಕಾಯಲಾಗುತ್ತದೆ ಎಂದು ತಿಳಿಸಿದ್ದಾರೆ.
ಪಾಕಿಸ್ತಾನದ ಪ್ರಧಾನಮಂತ್ರಿ ಶೆಹಬಾಜ್ ಶರೀಫ್ ಹಾಗೂ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮನವಿಯ ಮೇರೆಗೆ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಇದೇ ವೇಳೆ ನೌಕಾ ದಿಗ್ಭಂಧನ ಮುಂದುವರೆಸುವುದಾಗಿ ತಿಳಿಸಿದ್ದಾರೆ.
ಇದರ ನಡುವೆ ಅಮೆರಿಕಾ ಉಪಾಧ್ಯಕ್ಷ ಜೆಡಿ ವೆನ್ಸ್ ಹಾಗೂ ವಿಶೇಷ ದೂತ ಸ್ಟೀವ್ ವಿಟ್‌ಕಾಫ್ ನೇತೃತ್ವದಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಶಾಂತಿ ಮಾತುಕತೆಗಳು ತಾತ್ಕಾಲಿಕವಾಗಿ ರದ್ದಾಗಿವೆ. ಎರಡೂ ರಾಷ್ಟ್ರಗಳ ಪ್ರತಿನಿಧಿಗಳು ಭಾಗವಹಿಸದ ಕಾರಣ ಈ ಮಾತುಕತೆಗಳು ಮುಂದೂಡಲ್ಪಟ್ಟಿವೆ ಎಂದು ತಿಳಿದುಬಂದಿದೆ.
ಇವೆಲ್ಲದರ ನಡುವೆ ಇರಾನ್‌ನ ನಾಯಕ ಮೊಜ್ತಾಬಾ ಖಮೇನಿ ತಮ್ಮ ಅಧಿಕೃತ ಟೆಲಿಗ್ರಾಂ ಖಾತೆಯಲ್ಲಿ ಸಂದೇಶ ಪ್ರಕಟಿಸಿ, ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧ ಡ್ರೋಣ್ ಹಾಗೂ ಕ್ಷಿಪಣಿ ದಾಳಿಗಳ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
“ಇರಾನ್‌ನ ಡ್ರೋನ್‌ಗಳು ಮಿಂಚಿನಂತೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು, ನಮ್ಮ ನೌಕಾಪಡೆಯೂ ಶತ್ರುಗಳಿಗೆ ಹೊಸ, ಕಹಿ ಸೋಲುಗಳನ್ನು ನೀಡಲು ಸಿದ್ಧವಾಗಿದೆ” ಎಂದು ಹೇಳಿದ್ದಾರೆ.
ಜೊತೆಗೆ ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಕೂಡ ಗಲ್ಪ್ ರಾಷ್ಟ್ರಗಳಿಗೂ ಕಠಿಣ ಎಚ್ಚರಿಕೆ ನೀಡಿದ್ದು, ತಮ್ಮ ಭೂಭಾಗವನ್ನು ಅಮೆರಿಕಾ ಅಥವಾ ಇಸ್ರೇಲ್ ದಾಳಿಗಳಿಗೆ ಬಳಸಲು ಅವಕಾಶ ನೀಡಿದರೆ ಮಧ್ಯಪ್ರಾಚ್ಯದ ತೈಲ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಳ್ಳಬಹುದು ಎಂದು ಎಚ್ಚರಿಸಿದೆ.
Advertisement