ಇರಾನ್ ಹತ್ಯೆ ಭೀತಿ; ಕೊನೆಯ ಕ್ಷಣದಲ್ಲಿ ವಿಮಾನ ಬದಲಿಸಿದ ಡೊನಾಲ್ಡ್ ಟ್ರಂಪ್, ಏರ್‌ ಫೋರ್ಸ್‌ ಒನ್‌ ಬದಲು ಸಿ-32ಎ ವಿಮಾನದಲ್ಲಿ ರಹಸ್ಯ ಪ್ರಯಾಣ..!

ಆದರೆ, ವಿಮಾನದ ಒಳಗೆ ಹೋದ ತಕ್ಷಣ ಅಸಲಿ ಆಟ ಶುರುವಾಗಿತ್ತು. ಇರಾನ್‌ನಿಂದ ಕ್ಷಿಪಣಿ ದಾಳಿ ಅಥವಾ ವಿಮಾನದ ಮೇಲೆ ದಾಳಿ ನಡೆಯುವ ಹೈ-ಅಲರ್ಟ್ ಇಂಟೆಲಿಜೆನ್ಸ್ ಮಾಹಿತಿ ಭದ್ರತಾ ಪಡೆಗಳಿಗೆ ಸಿಕ್ಕಿತ್ತು.
Trump
ಟ್ರಂಪ್
Updated on

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಇರಾನ್‌ನಿಂದ ತೀವ್ರ ಜೀವ ಬೆದರಿಕೆ ಇದ್ದ ಹಿನ್ನೆಲೆಯಲ್ಲಿ, ಟರ್ಕಿಯ ವಿಮಾನ ನಿಲ್ದಾಣದಲ್ಲಿ ಅತ್ಯಂತ ರಹಸ್ಯ ಹಾಗೂ ಸಿನಿಮೀಯ ಮಾದರಿಯ ಕಾರ್ಯಾಚರಣೆಯೊಂದು ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕೇವಲ ಕೆಲವೇ ಕೆಲವು ಉನ್ನತ ಭದ್ರತಾ ಅಧಿಕಾರಿಗಳಿಗೆ ಮಾತ್ರ ಗೊತ್ತಿದ್ದ ಈ ಕಾರ್ಯಾಚರಣೆಯ ಸಂಪೂರ್ಣ ವಿವರಗಳನ್ನು ಅಮೆರಿಕದ ಪ್ರಸಿದ್ಧ ಪತ್ರಿಕೆ ‘ದಿ ವಾಷಿಂಗ್ಟನ್ ಪೋಸ್ಟ್’ ಬಹಿರಂಗಪಡಿಸಿದೆ.

ಟರ್ಕಿಯ ಅಂಕಾರಾದಲ್ಲಿ ನ್ಯಾಟೋ (NATO) ಶೃಂಗಸಭೆ ಮುಗಿಸಿ ಬ್ರಿಟನ್‌ಗೆ ತೆರಳಲು ಡೊನಾಲ್ಡ್ ಟ್ರಂಪ್ ಸಜ್ಜಾಗಿದ್ದರು. ಈ ವೇಳೆ ಅವರು ಎಂದಿನಂತೆ ತಮಗೆ ನಿಗದಿಯಾಗಿದ್ದ ಅತ್ಯಾಧುನಿಕ 'ಏರ್ ಫೋರ್ಸ್ ಒನ್' ಜಂಬೋ ಜೆಟ್ ವಿಮಾನವನ್ನು ಹತ್ತಿದ್ದಾರೆ. ಜಗತ್ತಿನ ಮಾಧ್ಯಮಗಳು ಹಾಗೂ ಕ್ಯಾಮೆರಾಗಳು ಟ್ರಂಪ್ ವಿಮಾನ ಹತ್ತುವುದನ್ನು ನೇರ ಪ್ರಸಾರ ಮಾಡುತ್ತಿದ್ದವು.

ಆದರೆ, ವಿಮಾನದ ಒಳಗೆ ಹೋದ ತಕ್ಷಣ ಅಸಲಿ ಆಟ ಶುರುವಾಗಿತ್ತು. ಇರಾನ್‌ನಿಂದ ಕ್ಷಿಪಣಿ ದಾಳಿ ಅಥವಾ ವಿಮಾನದ ಮೇಲೆ ದಾಳಿ ನಡೆಯುವ ಹೈ-ಅಲರ್ಟ್ ಇಂಟೆಲಿಜೆನ್ಸ್ ಮಾಹಿತಿ ಭದ್ರತಾ ಪಡೆಗಳಿಗೆ ಸಿಕ್ಕಿತ್ತು. ಹೀಗಾಗಿ, ವಿಮಾನದ ಒಳಗೆ ಹೋದ ತಕ್ಷಣ ಟ್ರಂಪ್ ಹಾಗೂ ಅವರ ಕೆಲವೇ ಕೆಲವು ಆಪ್ತ ಅಧಿಕಾರಿಗಳನ್ನು ವಿಮಾನ ನಿಲ್ದಾಣದ ಹೈಡ್ರಾಲಿಕ್ ಕ್ಯಾಟರಿಂಗ್ ಟ್ರಕ್ (ಊಟದ ಡಬ್ಬಿ ಸರಬರಾಜು ಮಾಡುವ ವಾಹನ) ಒಳಗೆ ರಹಸ್ಯವಾಗಿ ಇಳಿಸಲಾಯಿತು.

ಯಾರಿಗೂ ಸಂಶಯ ಬಾರದಂತೆ ಟ್ರಂಪ್ ಹತ್ತಿದ್ದ ಅದೇ ದೊಡ್ಡ 'ಏರ್ ಫೋರ್ಸ್ ಒನ್' ವಿಮಾನವು ರನ್‌ವೇಯಿಂದ ಟೇಕ್-ಆಫ್ ಆಯಿತು. ವಿಶೇಷವೆಂದರೆ, ಆ ವಿಮಾನದಲ್ಲಿ ಉನ್ನತ ಅಧಿಕಾರಿಗಳು ಹಾಗೂ ಪತ್ರಕರ್ತರ ತಂಡವಿತ್ತು. ಅವರೆಲ್ಲರೂ ಅಧ್ಯಕ್ಷ ಟ್ರಂಪ್ ಅದೇ ವಿಮಾನದಲ್ಲಿದ್ದಾರೆ ಎಂದೇ ನಂಬಿದ್ದರು. ಭದ್ರತೆಯ ದೃಷ್ಟಿಯಿಂದ ವಿಮಾನದ ಕಿಟಕಿಗಳ ಪರದೆಗಳನ್ನು ಸಂಪೂರ್ಣವಾಗಿ ಮುಚ್ಚಲು ಅವರಿಗೆ ಸೂಚಿಸಲಾಗಿತ್ತು. ಇದು ಶತ್ರುಗಳ ಕಣ್ಣು ತಪ್ಪಿಸಲು ಹೂಡಿದ 'ನಕಲಿ' (Decoy) ತಂತ್ರವಾಗಿತ್ತು.

ಇತ್ತ ಕ್ಯಾಟರಿಂಗ್ ಟ್ರಕ್ ಮೂಲಕ ರನ್‌ವೇಯ ಮತ್ತೊಂದು ಮೂಲೆಗೆ ತಲುಪಿದ ಟ್ರಂಪ್ ಅವರನ್ನು, ಅಲ್ಲಿ ಸಿದ್ಧವಾಗಿ ನಿಲ್ಲಿಸಲಾಗಿದ್ದ ಸಣ್ಣ ಗಾತ್ರದ 'ಸಿ-32ಎ' (C-32A) ಮಿಲಿಟರಿ ವಿಮಾನಕ್ಕೆ ಹತ್ತಿಸಲಾಯಿತು.

ಈ ವಿಮಾನವು ತನ್ನ ಸಾರ್ವಜನಿಕ ಟ್ರ್ಯಾಕಿಂಗ್ ವ್ಯವಸ್ಥೆಯನ್ನು (Transponder) ಸಂಪೂರ್ಣವಾಗಿ ಆಫ್ ಮಾಡಿ, "ರೀಚ್ 18" (Reach 18) ಎಂಬ ರಹಸ್ಯ ಮಿಲಿಟರಿ ಸಂಕೇತವನ್ನು ಬಳಸಿ ಬ್ರಿಟನ್‌ ಕಡೆಗೆ ಹಾರಿತು.

Trump
‘ನಿಮಗೆ ಆದ ಹಾನಿಗೆ ಪರಿಹಾರ ಬೇಕಾ? ಹಾಗಾದರೆ ನಮ್ಮ ಸಾವುಗಳಿಗೂ ಹಣ ಕೊಡಿ’: ಇರಾನ್‌ ಪರಿಹಾರ ಬೇಡಿಕೆಗೆ ಟ್ರಂಪ್‌ ತಿರುಗೇಟು

ಬ್ರಿಟನ್‌ನ ಮಿಲ್ಡೆನ್‌ಹಾಲ್ ಸೇನಾ ವಿಮಾನ ನಿಲ್ದಾಣಕ್ಕೆ ಟ್ರಂಪ್ ಇದ್ದ ಸಣ್ಣ ವಿಮಾನವು, ನಕಲಿ 'ಏರ್ ಫೋರ್ಸ್ ಒನ್' ವಿಮಾನಕ್ಕಿಂತ ಕೆಲವು ನಿಮಿಷ ಮುಂಚಿತವಾಗಿಯೇ ಬಂದು ತಲುಪಿತು. ಅಲ್ಲಿ ತಕ್ಷಣವೇ ಟ್ರಂಪ್ ಅವರನ್ನು ಮರಳಿ ದೊಡ್ಡ ವಿಮಾನದೊಳಗೆ ಕಳುಹಿಸಲಾಯಿತು. ಆ ಬಳಿಕ ವಿಮಾನದ ಮುಖ್ಯ ಬಾಗಿಲು ತೆರೆದಾಗ, ಟ್ರಂಪ್ ಎಂದಿನಂತೆ ವಿಮಾನದಿಂದ ಇಳಿದು ಕ್ಯಾಮೆರಾಗಳಿಗೆ ಪೋಸ್ ನೀಡಿದರು. ತಾನು ಇಷ್ಟೊಂದು ದೊಡ್ಡ ಅಪಾಯದಿಂದ ಪಾರಾಗಿ ಬಂದಿದ್ದೇನೆ ಎಂಬ ಸಣ್ಣ ಸುಳಿವನ್ನು ಕೂಡ ಅವರು ಬಿಟ್ಟುಕೊಡಲಿಲ್ಲ.

ಇರಾನ್ ಮೇಲಿನ ಅಮೆರಿಕದ ಇತ್ತೀಚಿನ ಮಿಲಿಟರಿ ದಾಳಿಗಳ ಬಳಿಕ ಈ ಬೆದರಿಕೆ ಹೆಚ್ಚಾಗಿದೆ ಎನ್ನಲಾಗಿದೆ. ಇದರ ಜೊತೆಗೆ, ಇತ್ತೀಚೆಗಷ್ಟೇ ಕತಾರ್ ದೇಶವು ಉಡುಗೊರೆಯಾಗಿ ನೀಡಿದ್ದ ಹೊಸ ಬೋಯಿಂಗ್ 747-8 ವಿಮಾನವನ್ನು ಟ್ರಂಪ್ ಈ ಪ್ರವಾಸಕ್ಕೆ ಬಳಸುತ್ತಿದ್ದರು. ಆದರೆ, ಈ ಹೊಸ ವಿಮಾನದಲ್ಲಿ ಹಳೆಯ ವಿಮಾನದ ತರಹ ಇನ್ನು ಸಂಪೂರ್ಣ ಕ್ಷಿಪಣಿ ನಿರೋಧಕ ರಕ್ಷಣಾ ಕವಚಗಳು ಅಳವಡಿಕೆಯಾಗಿಲ್ಲ. ಇದೇ ಭದ್ರತಾ ಲೋಪಕ್ಕೆ ಮುಖ್ಯ ಕಾರಣ ಎಂದು ವರದಿಗಳು ಹೇಳಿವೆ.

ಶ್ವೇತಭವನದಿಂದ ಸ್ಪಷ್ಟನೆ

ರಹಸ್ಯವಾಗಿ ಮೂರನೇ ವಿಮಾನದಲ್ಲಿ ಟ್ರಂಪ್‌ ಪ್ರಯಾಣಿಸಿದ್ದ ವರದಿ ಕುರಿತು ಶ್ವೇತಭವನವನ್ನು ಪ್ರಶ್ನಿಸಿದಾಗ, ಸಂವಹನ ನಿರ್ದೇಶಕ ಸ್ಟೀವ್‌ ಚ್ಯೂಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ. .

ಕತಾರ್‌ ನೀಡಿರುವ ನೂತನ ವಿಮಾನದಲ್ಲಿ ಅಧ್ಯಕ್ಷರು ಹಾಗೂ ಅವರ ಸಿಬ್ಬಂದಿಯ ಸುರಕ್ಷತೆ ಖಚಿತಪಡಿಸುವ ಉನ್ನತ ಮಟ್ಟದ ಭದ್ರತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

“ಅಧ್ಯಕ್ಷರು ಇತ್ತೀಚೆಗೆ ಹೇಳಿರುವಂತೆ, ಅಮೆರಿಕದ ವಿರುದ್ಧದ ಹಲವು ಶತ್ರುಗಳು ಅವರ ಮೇಲೆ ಕಣ್ಣಿಟ್ಟಿದ್ದಾರೆ. ಆ ಬೆದರಿಕೆಗಳನ್ನು ಎದುರಿಸಲು ನಮ್ಮ ಬಳಿ ಇರುವ ಪ್ರತಿಯೊಂದು ಸಾಧನವನ್ನೂ ಬಳಸುತ್ತೇವೆ,” ಎಂದು ಚ್ಯೂಂಗ್‌ ಹೇಳಿದ್ದಾರೆ. ಈ ಕುರಿತು ಪೆಂಟಗನ್‌ ತಕ್ಷಣ ಪ್ರತಿಕ್ರಿಯಿಸಿಲ್ಲ.

ಟ್ರಂಪ್‌ ಆಯ್ಕೆ ಮಾಡಿದ್ದ ಕೆಂಪು, ಬಿಳಿ, ಗಾಢ ನೀಲಿ ಮತ್ತು ಚಿನ್ನದ ಬಣ್ಣಗಳ ವಿನ್ಯಾಸ ಹೊಂದಿರುವ ಹೊಸ ವಿಮಾನವನ್ನು ಕತಾರ್‌ ಕಳೆದ ವರ್ಷ ಅಮೆರಿಕಕ್ಕೆ ಉಡುಗೊರೆಯಾಗಿ ನೀಡಿತ್ತು.

ಇದು ಬೋಯಿಂಗ್‌ 747 ವಿಮಾನವಾಗಿದ್ದು, ರಕ್ಷಣಾ ಗುತ್ತಿಗೆ ಸಂಸ್ಥೆ ಎಲ್‌3ಹ್ಯಾರಿಸ್‌ ಟೆಕ್ನಾಲಜೀಸ್‌ ಅದನ್ನು ಮರುಸಜ್ಜುಗೊಳಿಸಿದೆ.

ಮುಂದಿನ ತಲೆಮಾರಿನ ಏರ್‌ ಫೋರ್ಸ್‌ ಒನ್‌ ವಿಮಾನಗಳ ನಿರ್ಮಾಣದಲ್ಲಿ ಬೋಯಿಂಗ್‌ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ, ಈ ವಿಮಾನವನ್ನು ತಾತ್ಕಾಲಿಕವಾಗಿ ಬಳಸಲು ಉದ್ದೇಶಿಸಲಾಗಿತ್ತು.

ಟರ್ಕಿ ಮತ್ತು ಇರಾನ್‌ ನಡುವೆ ಭೌಗೋಳಿಕ ಸಮೀಪತೆ ಹಾಗೂ ಆ ಸಮಯದಲ್ಲಿ ಇರಾನ್‌ ಜತೆಗಿನ ಸಂಘರ್ಷ ತೀವ್ರಗೊಂಡಿದ್ದ ಹಿನ್ನೆಲೆಯಲ್ಲಿ ಟ್ರಂಪ್‌ ಅವರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಈ ರಹಸ್ಯ ಪ್ರಯಾಣದ ಕಾರ್ಯಾಚರಣೆ ನಡೆಸಲಾಗಿದೆ ಎಂದು ವರದಿ ತಿಳಿಸಿದೆ.

ಒಟ್ಟಿನಲ್ಲಿ, ಜಗತ್ತಿನ ಅತ್ಯಂತ ಶಕ್ತಿಶಾಲಿ ದೇಶದ ಅಧ್ಯಕ್ಷನನ್ನು ರಕ್ಷಿಸಲು ಅಮೆರಿಕದ ರಹಸ್ಯ ಭದ್ರತಾ ಪಡೆಗಳು ಹೂಡಿದ ಈ ಸಿನಿಮೀಯ ತಂತ್ರ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com