

ಆಗಸ್ಟ್ 11ರಂದು ಬಲೂಚಿಸ್ತಾನ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿದ್ದು ಇದರ ಬೆನ್ನಲ್ಲೇ ಪಾಕಿಸ್ತಾನ ನಡೆಸಿದ ವಾಯುದಾಳಿಯಲ್ಲಿ ಮಕ್ಕಳು, ಮಹಿಳೆಯರು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಪಾಕಿಸ್ತಾನಿ ಸೇನೆ ಮತ್ತು ವಾಯುಪಡೆ ನಡೆಸಿದ ಬಾಂಬ್ ದಾಳಿ ಮತ್ತು ಗುಂಡಿನ ದಾಳಿಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ್ದು ಆಸ್ತಿಪಾಸ್ತಿ ನಾಶವಾಗಿದೆ ಎಂದು ಬಲೂಚಿಸ್ತಾನ ಗಣರಾಜ್ಯ ಗುಂಪು ಹೇಳಿಕೊಂಡಿದೆ.
ಪಾಕಿಸ್ತಾನ ಭದ್ರತಾ ಪಡೆಗಳು ಗಾಯಗೊಂಡ ನಾಗರಿಕರನ್ನು ತಮ್ಮ ವಶಕ್ಕೆ ಪಡೆದು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ತಡೆಯುತ್ತಿವೆ . ಸೈನಿಕರು ಆಸ್ಪತ್ರೆಗಳಿಗೆ ಮುತ್ತಿಗೆ ಹಾಕುತ್ತಿದ್ದು ಮತ್ತು ವೈದ್ಯರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಗುಂಪು ಆರೋಪಿಸಿದೆ. ಕೆಲವು ಗಾಯಾಳುಗಳು ಚಿಕಿತ್ಸೆಯ ಕೊರತೆಯಿಂದ ಸಾವನ್ನಪ್ಪಿದ್ದಾರೆ. ಡ್ರೋನ್‌ಗಳು ಮತ್ತು ಕೋಬ್ರಾ ಗನ್‌ಶಿಪ್ ಹೆಲಿಕಾಪ್ಟರ್‌ಗಳು ಆ ಪ್ರದೇಶದಲ್ಲಿ ಗಸ್ತು ತಿರುಗುತ್ತಿರುವುದು ಕಂಡುಬಂದಿದೆ. ಈ ಪ್ರದೇಶದಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಪರಿಸ್ಥಿತಿಯನ್ನು ಅರಿತುಕೊಂಡು ಬಲೂಚಿಸ್ತಾನ ನಾಗರಿಕರ ಜೀವ ಮತ್ತು ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಮಧ್ಯಪ್ರವೇಶಿಸುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಬಲೂಚಿಸ್ತಾನ ಗಣರಾಜ್ಯ ಕರೆ ನೀಡಿದೆ.
ಕಳೆದ ದಶಕದಲ್ಲಿ ಬುಡಕಟ್ಟು ಪ್ರದೇಶಗಳಲ್ಲಿ ಪಾಕಿಸ್ತಾನಿ ವಾಯುದಾಳಿ ಮತ್ತು ಬಾಂಬ್ ದಾಳಿಯಲ್ಲಿ ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ. ಮಾನವ ಹಕ್ಕುಗಳ ಗುಂಪುಗಳು ಈ ದಾಳಿಗಳನ್ನು ಬಲವಾಗಿ ಟೀಕಿಸಿವೆ. ಇತ್ತೀಚಿನ ದಿನಗಳಲ್ಲಿ, ಪಾಕಿಸ್ತಾನವು ಅಫ್ಘಾನಿಸ್ತಾನದೊಳಗಿನ ಪ್ರದೇಶಗಳ ಮೇಲೆ ವೈಮಾನಿಕ ದಾಳಿಗಳನ್ನು ನಡೆಸಿತ್ತು. ಈ ದಾಳಿಗಳು ಅನೇಕ ಅಮಾಯಕ ಆಫ್ಘನ್ನರನ್ನು ಕೊಂದು ನೂರಾರು ಕುಟುಂಬಗಳನ್ನು ಸ್ಥಳಾಂತರಿಸಿವೆ.