

ನ್ಯೂಯಾರ್ಕ್: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುನರುಚ್ಛರಿಸಿದ್ದು, ನೊಬೆಲ್ ಶಾಂತಿ ಪ್ರಶಸ್ತಿ ಪಡೆಯಲು ತಮ್ಮಷ್ಟು ಅರ್ಹರು ಇತಿಹಾದಲ್ಲಿ ಯಾರೂ ಇಲ್ಲ ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ತೈಲ ಮತ್ತು ಅನಿಲ ಕಾರ್ಯನಿರ್ವಾಹಕರೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಭಾರತ ಮತ್ತು ಪಾಕಿಸ್ತಾನದ ಸಂಘರ್ಷದಲ್ಲಿ 8 ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ಪುರುಚ್ಚರಿಸಿದ್ದಾರೆ. ಆದರೆ, ಹೊಡೆದುರುಳಿಸಿದ ಜೆಟ್'ಗಳು ಯಾವ ದೇಶಕ್ಕೆ ಸೇರಿದವು ಎಂಬುದನ್ನು ಸ್ಪಷ್ಟಪಡಿಸಿಲ್ಲ.
ಜನರು ಟ್ರಂಪ್ ಅವರನ್ನು ಇಷ್ಟಪಡುತ್ತಾರೋ ಇಲ್ಲವೋ, ಆದರೆ, ದೊಡ್ಡದಾದ 8 ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ. ಕೆಲವರು 36 ವರ್ಷಗಳಿಂದ, ಕೆಲವು 32 ವರ್ಷದಿಂದ ಮತ್ತೆ ಕೆಲವು 28 ಹಾಗೂ 25 ವರ್ಷಗಳಿಂದ ನಡೆಯುತ್ತಿದ್ದ ಯುದ್ಧಗಳಾಗಿದೆ. ಮತ್ತೆ ಕೆಲವು ಭಾರತ ಮತ್ತು ಪಾಕಿಸ್ತಾನದಂತೆ ಸಂಘರ್ಷ ಪ್ರಾರಂಭಿಸಲು ಸಿದ್ದವಾಗಿದ್ದವು. ಕಳೆದ ವರ್ಷ ಶ್ವೇತಭವನಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್, ಎರಡು ಪರಮಾಣು ಶಸ್ತ್ರಸಜ್ಜಿತ ನೆರೆಹೊರೆಯವರ ನಡುವಿನ ಸಂಘರ್ಷವನ್ನು ನಿಲ್ಲಿಸುವ ಮೂಲಕ ಲಕ್ಷಾಂತರ ಜೀವಗಳನ್ನು ಉಳಿಸಿದ್ದು ಟ್ರಂಪ್ ಎಂದು ಹೇಳಿದ್ದಾರೆ.
ಶ್ವೇತಭವನದಲ್ಲಿ ಎರಡನೇ ಅವಧಿಯ 8 ತಿಂಗಳೊಳಗೆ ಎಂಟು ಯುದ್ಧಗಳನ್ನು ನಿಲ್ಲಿಸಿರುವುದರಿಂದ ಇತಿಹಾಸದಲ್ಲಿ ನನಗಿಂತ ನೊಬೆಲ್ ಶಾಂತಿ ಪ್ರಶಸ್ತಿಗೆ ಅರ್ಹರು ಯಾರೂ ಇಲ್ಲ. ಆದರೆ, ಈ ಬಗ್ಗೆ ನಾನು ಹೆಮ್ಮೆಪಡಲು ಬಯಸುವುದಿಲ್ಲ. ಬೇರೆ ಯಾರು ಯುದ್ಧಗಳನ್ನು ಇತ್ಯರ್ಥ ಪಡಿಸಲಿಲ್ಲ.
ಒಬಾಮಾಗೆ ನೊಬೆಲ್ ಪ್ರಶಸ್ತಿ ಯಾವ ಕಾರಣಕ್ಕೆ ಸಿಕ್ಕಿತು ಎಂದು ಏಕೆ ಇಂದಿಗೂ ಅವರಿಗೂ ತಿಳಿದಿಲ್ಲ. ನನಗೆ ನೊಬೆಲ್ ಪ್ರಶಸ್ತಿ ಸಿಕ್ಕಿತು ಎಂದು ಹೇಳಿಕೊಳ್ಳುತ್ತಾರೆ. ಅಧ್ಯಕ್ಷನಾಗಿ ಅಧಿಕಾರ ವಹಿಸಿ ಕೊಂಡಾಕ್ಷಣ ಅವರಿಗೆ ಪ್ರಶಸ್ತಿ ಸಿಕ್ಕಿತು. ಆತ ಏನನ್ನೂ ಮಾಡಲಿಲ್ಲ. ಆತ ಕೆಟ್ಟ ಅಧ್ಯಕ್ಷ ಎಂದು ಕಿಡಿಕಾರಿದರು.
ಪ್ರತಿಯುದ್ದ ನಿಲ್ಲಿಸಿದಾಗಲೂ ಒಬ್ಬರಿಗೆ ನೊಬೆಲ್ ಪ್ರಶಸ್ತಿ ಸಿಗಬೇಕು. ಅವು ಪ್ರಮುಖ ಯುದ್ಧಗಳಾಗಿದೆ. ಈ ಯುದ್ಧಗಳು ಮುಗಿಯುತ್ತದೆ ಎಂದು ಯಾರು ಭಾವಿಸಿರಲಿಲ್ಲ. ರಷ್ಯಾ ಅಧ್ಯಕ್ಷರು ಕಳೆದ 10 ವರ್ಷದಿಂದ ಎರಡು ಯುದ್ಧ ನಿಲ್ಲಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ ಎಂದು ತಿಳಿಸಿದರು.
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು 'ಆಪರೇಷನ್ ಸಿಂಧೂರ್' ಪ್ರಾರಂಭಿಸಿತ್ತು. ಈ ಕಾರ್ಯಾಚರಣೆಯು ಪಾಕಿಸ್ತಾನದ ಉಗ್ರರ ನೆಲೆಗಳನ್ನು ಗುರಿಯಾಗಿಸಿತ್ತು.
Advertisement