

ವಾಷಿಂಗ್ಟನ್: ವೆನೆಜುವೆಲಾ ಮೇಲೆ ಸೇನಾ ದಾಳಿ ಅದರ ಅಧ್ಯಕ್ಷ ಮಡುರೋರನ್ನು ಬಂಧಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಂದು ಸ್ಫೋಟಕ ಹೇಳಿಕೆ ನೀಡಿದ್ದು, ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಹೌದು.. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮ ವೇದಿಕೆಯಾದ TRUTH ನಲ್ಲಿ ಆಘಾತಕಾರಿ ಪೋಸ್ಟ್ ವೊಂದನ್ನು ಮಾಡಿದ್ದು, ಅದರಲ್ಲಿ ಅವರು ತಮ್ಮನ್ನು "ವೆನೆಜುವೆಲಾದ ಹಂಗಾಮಿ ಅಧ್ಯಕ್ಷ" ಎಂದು ಬಣ್ಣಿಸಿಕೊಂಡಿದ್ದಾರೆ.
ಈ ಪೋಸ್ಟ್‌ನಲ್ಲಿ ಜನವರಿ 2026 ರಿಂದ ವೆನೆಜುವೆಲಾದ ಪ್ರಸ್ತುತ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಪಟ್ಟಿ ಮಾಡಲಾದ ಸಂಪಾದಿತ ವಿಕಿಪೀಡಿಯಾ ಪುಟದ ಮಾದರಿ ಚಿತ್ರವನ್ನು ಒಳಗೊಂಡಿತ್ತು. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಈ ಪೋಸ್ಟ್ ಇದೀಗ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಯ ವಿಷಯವಾಗಿದೆ.
ವೆನೆಜುವೆಲಾದ ಸರ್ಕಾರ ಉರುಳಿಸಿದ್ದಅಮೆರಿಕ
ವೆನೆಜುವೆಲಾದ ಸರ್ಕಾರವನ್ನು ಉರುಳಿಸಲು ಅಮೆರಿಕ ಜನವರಿ ಆರಂಭದಲ್ಲಿ ಬೃಹತ್ ಮಿಲಿಟರಿ ಕಾರ್ಯಾಚರಣೆ ಪ್ರಾರಂಭಿಸಿತು. ಈ ಕಾರ್ಯಾಚರಣೆಯಲ್ಲಿ ಅಧ್ಯಕ್ಷ ನಿಕೋಲಸ್ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಮಾತನಾಡಿದ್ದ ಟ್ರಂಪ್, "ಸುರಕ್ಷಿತ ಮತ್ತು ನ್ಯಾಯಯುತ ಅಧಿಕಾರ ಪರಿವರ್ತನೆ" ಖಾತ್ರಿಪಡಿಸಿಕೊಳ್ಳುವವರೆಗೆ ಅಮೆರಿಕ ವೆನೆಜುವೆಲಾದ ಸರ್ಕಾರವನ್ನು ನಡೆಸುವುದನ್ನು ಮುಂದುವರಿಸುತ್ತದೆ ಎಂದು ಹೇಳಿದ್ದರು.
ಆದಾಗ್ಯೂ, ವೆನೆಜುವೆಲಾದ ಸುಪ್ರೀಂ ಕೋರ್ಟ್ ನಿಕೋಲಸ್ ಮಡುರೊ ಅವರ ಸಹವರ್ತಿ ಹಾಗೂ ವೆನೆಜುವೆಲಾ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರನ್ನು ಮಧ್ಯಂತರ ಅಧ್ಯಕ್ಷರನ್ನಾಗಿ ನೇಮಿಸಿತು. ಇದಕ್ಕೆ ವೆನೆಜುವೆಲಾ ಸೇನೆ ಕೂಡ ಅನುಮೋದನೆ ನೀಡಿತ್ತು. ಆ ಮೂಲಕ ಮಡುರೋ ಅಧಿಕಾರಕ್ಕೆ ಅಧಿಕೃತ ತೆರೆ ಬಿಳಿಸಲಾಗಿತ್ತು.
ತೈಲದ ಮೇಲೆ ಟ್ರಂಪ್ ಗಮನ
ತೈಲ ಸಮೃದ್ಧ ವೆನೆಜುವೆಲಾ ಮೇಲೆ ದಾಳಿ ಮಾಡುವ ಮೂಲಕ ಡೊನಾಲ್ಡ್ ಟ್ರಂಪ್ ನೇರ ಯುದ್ಧ ಘೋಷಣೆ ಮಾಡಿದ್ದರು. ಮಡುರೊ ಅವರ ಆಪ್ತರು ಅಮೆರಿಕದ ಷರತ್ತುಗಳನ್ನು ಪಾಲಿಸದಿದ್ದರೆ ಮತ್ತಷ್ಟು ಮಿಲಿಟರಿ ಕ್ರಮ ಕೈಗೊಳ್ಳಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ಈ ಷರತ್ತುಗಳಲ್ಲಿ ಪ್ರಮುಖವಾದದ್ದು ವೆನೆಜುವೆಲಾದ ತೈಲದ ಮೇಲಿನ ನಿಯಂತ್ರಣ. ಬುಧವಾರ ಅಮೆರಿಕದ ಪಡೆಗಳು ವೆನೆಜುವೆಲಾಗೆ ಸಂಬಂಧಿಸಿದ ಹಲವಾರು ತೈಲ ಟ್ಯಾಂಕರ್‌ಗಳನ್ನು ವಶಪಡಿಸಿಕೊಂಡವು. ಅಮೆರಿಕವು 50 ಮಿಲಿಯನ್ ಬ್ಯಾರೆಲ್ ವೆನೆಜುವೆಲಾದ ಕಚ್ಚಾ ತೈಲವನ್ನು ಸಂಸ್ಕರಿಸಿ ಮಾರಾಟ ಮಾಡಲು ಯೋಜಿಸಿದೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಯೋಜನೆಗೆ ಮೂರು ಹಂತಗಳು
ವೆನೆಜುವೆಲಾಗೆ ಮೂರು ಹಂತದ ಯೋಜನೆ ಜಾರಿಯಲ್ಲಿದೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ಮೊದಲು ಮಡುರೊ ಬಂಧನದ ನಂತರ ದೇಶವನ್ನು ಸ್ಥಿರಗೊಳಿಸುವುದು ಮತ್ತು ಚೇತರಿಕೆಯ ಹಂತದಲ್ಲಿ ಅಮೆರಿಕದ ತೈಲ ಕಂಪನಿಗಳಿಗೆ ಪ್ರವೇಶವನ್ನು ನೀಡುವುದು, ನಂತರ ಅಧಿಕಾರದ ಪರಿವರ್ತನೆಯನ್ನು ಮೇಲ್ವಿಚಾರಣೆ ಮಾಡುವುದು. "ನಾವು ಈಗ ಒಂದು ಪ್ರಕ್ರಿಯೆಯನ್ನು ಹೊಂದಿದ್ದೇವೆ, ಅದು ಮಧ್ಯಂತರ ಸರ್ಕಾರದ ಮೇಲೆ ಸಂಪೂರ್ಣ ನಿಯಂತ್ರಣ ಮತ್ತು ಒತ್ತಡವನ್ನು ಕಾಯ್ದುಕೊಳ್ಳಲು ನಮಗೆ ಅನುವು ಮಾಡಿಕೊಡುತ್ತದೆ" ಎಂದು ರೂಬಿಯೊ ಹೇಳಿದರು.
ಅಮೆರಿಕ ಕ್ರಮಕ್ಕೆ ಖಂಡನೆ
ಇನ್ನು ವೆನೆಜುವೆಲಾ ಮೇಲಿನ ಅಮೆರಿಕ ಸೇನಾ ದಾಳಿಯನ್ನು ಜಗತ್ತಿನ ಹಲವು ರಾಷ್ಟ್ರಗಳು ಟೀಕಿಸಿವೆ. ಪ್ರಮುಖವಾಗಿ ಚೀನಾ, ರಷ್ಯಾ, ಕೊಲಂಬಿಯಾ ಮತ್ತು ಸ್ಪೇನ್ ಸಹ ಅಮೆರಿಕದ ಕ್ರಮವನ್ನು ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಕರೆದಿವೆ. ತೈಲ-ಸಮೃದ್ಧ ರಾಷ್ಟ್ರವನ್ನು ಗುರಿಯಾಗಿಸಿಕೊಂಡು ತಿಂಗಳುಗಳ ಕಾಲ ಅಮೆರಿಕದ ಒತ್ತಡ, ನಿರ್ಬಂಧಗಳು ಮತ್ತು ಮಿಲಿಟರಿ ಚಟುವಟಿಕೆಯ ನಂತರ ಈ ಕಾರ್ಯಾಚರಣೆ ನಡೆದಿದೆ. ಮಡುರೊ ಅವರನ್ನು "ಅಪಹರಿಸಲಾಗಿದೆ" ಎಂದು ಕಿಡಿಕಾರಿವೆ.
Advertisement