

ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು "ಕಡಿಮೆ ವೇತನದ ವಿದೇಶಿ ಕಾರ್ಮಿಕರು ಅಮೆರಿಕಕ್ಕೆ ಬಂದು ಸ್ಥಳೀಯರ ಉದ್ಯೋಗ ಮತ್ತು ವೇತನದ ಮೇಲೆ ಪರಿಣಾಮ ಬೀರುತ್ತಿದ್ದಾರೆ" ಎಂದು ನೀಡಿದ ಹೇಳಿಕೆ ಹೊಸ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ತಮ್ಮ ಕ್ಯಾಥೋಲಿಕ್ ಧರ್ಮದ ನಂಬಿಕೆಯನ್ನು ಉಲ್ಲೇಖಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ ವ್ಯಾನ್ಸ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಭಾರತೀಯ ಮೂಲದ ಹಿಂದೂ ಧರ್ಮೀಯರಾದ ಅವರ ಪತ್ನಿ ಉಷಾ ವ್ಯಾನ್ಸ್ ಅವರ ಹಿನ್ನೆಲೆಯನ್ನು ಪ್ರಸ್ತಾಪಿಸಿ ನೆಟ್ಟಿಗರು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ.
Fox News ವಾಹಿನಿಯ The Ingraham Angle ಕಾರ್ಯಕ್ರಮದಲ್ಲಿ ಮಾತನಾಡಿದ್ದ ಜೆಡಿ ವ್ಯಾನ್ಸ್ ಅವರು, ತಮ್ಮ ಹೊಸ ಆತ್ಮಕಥನ 'Communion: Finding My Way Back to Faith' ಕುರಿತು ಮಾತನಾಡುತ್ತಿದ್ದರು.
2019ರಲ್ಲಿ ಕ್ಯಾಥೋಲಿಕ್ ಧರ್ಮಕ್ಕೆ ಮತಾಂತರಗೊಂಡ ಬಳಿಕ ತಮ್ಮ ಧಾರ್ಮಿಕ ನಂಬಿಕೆಗಳು ವೈಯಕ್ತಿಕ ಜೀವನದ ಜೊತೆಗೆ ರಾಜಕೀಯ ನಿರ್ಧಾರಗಳ ಮೇಲೂ ಹೇಗೆ ಪರಿಣಾಮ ಬೀರಿವೆ ಎಂಬುದನ್ನು ಅವರು ವಿವರಿಸಿದರು.
ಕಾರ್ಯಕ್ರಮದ ನಿರೂಪಕಿ ಲಾರಾ ಇಂಗ್ರಹಾಂ, ಧಾರ್ಮಿಕ ನಂಬಿಕೆಗಳು ಸಾರ್ವಜನಿಕ ಹುದ್ದೆಯಲ್ಲಿ ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂದು ಪ್ರಶ್ನಿಸಿದಾಗ, ವ್ಯಾನ್ಸ್ ತಮ್ಮ ಧರ್ಮವು ಯಾವಾಗಲೂ ವಿನಮ್ರತೆಯಿಂದ ಯೋಚಿಸಲು ಮತ್ತು ಪ್ರತಿಯೊಂದು ಅನುಭವದಿಂದ ಪಾಠ ಕಲಿಯಲು ಪ್ರೇರೇಪಿಸುತ್ತದೆ ಎಂದು ಹೇಳಿದರು.
ರಾಜಕೀಯ ನಾಯಕರು ತಮ್ಮ ನಿರ್ಧಾರಗಳನ್ನು ಮರುಪರಿಶೀಲಿಸುತ್ತಾ ಜನರಿಂದ ಕಲಿಯಬೇಕು ಎಂಬ ಮನೋಭಾವವನ್ನು ಕ್ರೈಸ್ತ ಧರ್ಮ ಬೆಳೆಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಟ್ರಂಪ್ ಆಡಳಿತದ ಆರ್ಥಿಕ ನೀತಿಗಳನ್ನು ಸಮರ್ಥಿಸಿಕೊಂಡ ವ್ಯಾನ್ಸ್, ದೇಶದ ಆರ್ಥಿಕ ನೀತಿಗಳು ದೊಡ್ಡ ಕಂಪನಿಗಳು ಅಥವಾ ವಾಲ್ ಸ್ಟ್ರೀಟ್‌ನ ಲಾಭಕ್ಕಾಗಿ ಅಲ್ಲ, ಸಾಮಾನ್ಯ ಅಮೆರಿಕನ್ನರ ಘನತೆಯ ಬದುಕಿಗಾಗಿ ಇರಬೇಕು ಎಂದು ಹೇಳಿದರು.
ಪ್ರತಿಯೊಬ್ಬ ಅಮೆರಿಕನ್ನೂ ಕುಟುಂಬವನ್ನು ಗೌರವಯುತವಾಗಿ ನಡೆಸುವಷ್ಟು ಆದಾಯ ಗಳಿಸುವ ಅವಕಾಶ ಹೊಂದಿರಬೇಕು. ಅದಕ್ಕಾಗಿ ಉತ್ಪಾದನಾ ಘಟಕಗಳು ಮತ್ತು ಹೂಡಿಕೆಗಳನ್ನು ಮತ್ತೆ ಅಮೆರಿಕಕ್ಕೆ ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.
ಬಳಿಕ "ಕಡಿಮೆ ವೇತನಕ್ಕೆ ಕೆಲಸ ಮಾಡುವ ವಿದೇಶಿಗರು ಅಮೆರಿಕಕ್ಕೆ ಬಂದು ಇಲ್ಲಿನ ಕಾರ್ಮಿಕರ ವೇತನವನ್ನು ಕಡಿಮೆ ಮಾಡುವುದು ನಮಗೆ ಇಷ್ಟವಿಲ್ಲ. ಸಾಮಾನ್ಯ ಅಮೆರಿಕನ್ನರು ಘನತೆಯಿಂದ ಬದುಕಬೇಕು. ಇದು ಕ್ರೈಸ್ತ ಧರ್ಮದ ಪ್ರಮುಖ ತತ್ವಗಳಲ್ಲಿ ಒಂದಾಗಿದೆ" ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.
ಈ ಹೇಳಿಕೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸಾವಿರಾರು ಮಂದಿ ವ್ಯಾನ್ಸ್ ಅವರನ್ನು ಟೀಕಿಸಲು ಆರಂಭಿಸಿದ್ದಾರೆ. ಹಲವರು ಅವರು ಕ್ರೈಸ್ತ ಧರ್ಮದ ಮೂಲ ಬೋಧನೆಗಳನ್ನು ತಪ್ಪಾಗಿ ಅರ್ಥೈಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಒಬ್ಬ ಬಳಕೆದಾರ, "ಯೇಸು ಕ್ರಿಸ್ತ ಬಡವರನ್ನು ಆಶೀರ್ವದಿಸಿದ್ದಾರೆ. ಹಾಗಿದ್ದರೆ ಇದು ಯಾವ ಧರ್ಮದ ಬೋಧನೆ?" ಎಂದು ಪ್ರಶ್ನಿಸಿದರೆ, ಮತ್ತೊಬ್ಬ "ಜೆಡಿ ವ್ಯಾನ್ಸ್ ಹೇಳುತ್ತಿರುವುದು ಯೇಸು ಕ್ರಿಸ್ತನ ಉಪದೇಶವೇ ಅಲ್ಲ" ಎಂದು, ಇನ್ನೊಬ್ಬರು "ಯೇಸು ಕ್ರಿಸ್ತನೇ ಕಡಿಮೆ ಆದಾಯದ ವಿದೇಶಿಯಾಗಿದ್ದರು" ಎಂದು ವ್ಯಂಗ್ಯವಾಡಿದ್ದಾರೆ.
ಇವುಗಳ ಮಧ್ಯೆ ಅತಿ ಹೆಚ್ಚು ವೈರಲ್ ಆದ ಪ್ರತಿಕ್ರಿಯೆಯೆಂದರೆ, "Like your Hindu wife?" ಅಂದರೆ, "ನಿಮ್ಮ ಹಿಂದೂ ಪತ್ನಿಯೂ ವಿದೇಶಿ ಅಲ್ಲವೇ?" ಎಂಬ ಪ್ರಶ್ನೆ.
ಭಾರತೀಯ ಮೂಲದ ಮಹಿಳೆಯನ್ನು ವಿವಾಹವಾಗಿರುವ ಜೆಡಿ ವ್ಯಾನ್ಸ್, ವಿದೇಶಿ ಕಾರ್ಮಿಕರ ವಿರುದ್ಧ ಮಾತನಾಡುತ್ತಿರುವುದು ವಿರೋಧಾಭಾಸ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಉಷಾ ವ್ಯಾನ್ಸ್ ಭಾರತೀಯ ಮೂಲದ ಅಮೆರಿಕನ್ ಆಗಿದ್ದು, ಅವರ ಪೋಷಕರು ಭಾರತದಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು. ಅವರು ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ಹಿಂದೂ ಕುಟುಂಬದಲ್ಲಿ ಬೆಳೆದಿದ್ದು, ನಂತರ ಯೇಲ್ ಲಾ ಸ್ಕೂಲ್ನಲ್ಲಿ ಕಾನೂನು ಶಿಕ್ಷಣ ಪಡೆದಿದ್ದಾರೆ. ಅಮೆರಿಕದ ಇತಿಹಾಸದಲ್ಲಿ ಮೊದಲ ಹಿಂದೂ Second Lady ಎಂಬ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.
ಈ ವರ್ಷದ ಆರಂಭದಲ್ಲಿ CBS Newsಗೆ ನೀಡಿದ ಸಂದರ್ಶನದಲ್ಲಿ ಉಷಾ ವ್ಯಾನ್ಸ್, ತಾವು ಕ್ಯಾಥೋಲಿಕ್ ಧರ್ಮಕ್ಕೆ ಮತಾಂತರಗೊಳ್ಳುವ ಯಾವುದೇ ಉದ್ದೇಶ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಬಳಿಕ ಜೆಡಿ ವ್ಯಾನ್ಸ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ಒಂದು ದಿನ ತಮ್ಮ ಪತ್ನಿ ಕ್ರೈಸ್ತ ಧರ್ಮವನ್ನು ಸ್ವೀಕರಿಸಿದರೆ ಸಂತೋಷವಾಗುತ್ತದೆ ಎಂಬುದು ತಮ್ಮ ವೈಯಕ್ತಿಕ ಆಶಯ ಮಾತ್ರ ಎಂದು ಹೇಳಿದ್ದರು. ಆದರೆ, "ಅವರಿಗೆ ಮತಾಂತರಗೊಳ್ಳುವ ಯಾವುದೇ ಯೋಜನೆ ಇಲ್ಲ. ಅವರ ನಿರ್ಧಾರವನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ" ಎಂದು ಸ್ಪಷ್ಟಪಡಿಸಿದ್ದರು.
ಉಷಾ ವ್ಯಾನ್ಸ್ ಅವರ ಧಾರ್ಮಿಕ ಹಿನ್ನೆಲೆ ಈ ಹಿಂದೆಯೂ ಅಮೆರಿಕದ ಸಂಪ್ರದಾಯವಾದಿ MAGA ಬೆಂಬಲಿಗರ ಕೆಲ ವಲಯಗಳಲ್ಲಿ ಚರ್ಚೆಗೆ ಕಾರಣವಾಗಿತ್ತು. ಅಮೆರಿಕವನ್ನು ಕ್ರೈಸ್ತ ರಾಷ್ಟ್ರವೆಂದು ಜೆಡಿ ವ್ಯಾನ್ಸ್ ಈ ಹಿಂದೆ ನೀಡಿದ್ದ ಹೇಳಿಕೆಗಳ ಹಿನ್ನೆಲೆಯಲ್ಲಿ, ಹಿಂದೂ ಧರ್ಮೀಯ ಹಾಗೂ ಭಾರತೀಯ ಮೂಲದ ಮಹಿಳೆ ಅಮೆರಿಕದ Second Lady ಆಗಿರುವುದರ ಬಗ್ಗೆ ಕೆಲವರು ಪ್ರಶ್ನೆಗಳನ್ನು ಎತ್ತಿದ್ದರು.
ಇದೀಗ ಕಡಿಮೆ ವೇತನದ ವಿದೇಶಿ ಕಾರ್ಮಿಕರ ವಿರುದ್ಧ ಜೆಡಿ ವ್ಯಾನ್ಸ್ ನೀಡಿರುವ ಹೊಸ ಹೇಳಿಕೆಯೂ ಅವರ ಕುಟುಂಬದ ಹಿನ್ನೆಲೆಯೊಂದಿಗೆ ಹೋಲಿಕೆ ಮಾಡಿ ಮತ್ತೆ ರಾಜಕೀಯ ಹಾಗೂ ಸಾಮಾಜಿಕ ಚರ್ಚೆಗೆ ಕಾರಣವಾಗಿದೆ.