

ವಾಷಿಂಗ್ಟನ್: ಅಮೆರಿಕಾ ಉಪಾಧ್ಯಕ್ಷ ಜೆಡಿ.ವ್ಯಾನ್ಸ್ ಅವರು, ಏಕಾಏಕಿ ವಾಷಿಂಗ್ಟನ್ ಡಿಸಿಗೆ ಮರಳಿರುವ ಸುದ್ದಿ ಜಾಗತಿಕ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಸಮಯದಲ್ಲೇ ಈ ಬೆಳವಣಿಗೆ ನಡೆದಿರುವುದರಿಂದ, ಅಮೆರಿಕಾ ಇರಾನ್ ಕುರಿತಂತೆ ದೊಡ್ಡ ಮಟ್ಟದ ನಿರ್ಧಾರ ಕೈಗೊಳ್ಳಲಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.
ರಾಜಕೀಯ ವಿಶ್ಲೇಷಕ ನಿಕ್ ಸೋರ್ಟರ್ ನೀಡಿರುವ ಮಾಹಿತಿಯ ಪ್ರಕಾರ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶನಿವಾರ ತುರ್ತು ರಾಷ್ಟ್ರೀಯ ಭದ್ರತಾ ಸಭೆ ನಡೆಸಿದ್ದು, ಈ ಸಭೆಯಲ್ಲಿ ಇರಾನ್ ಪರಿಸ್ಥಿತಿ, ಮಧ್ಯಪ್ರಾಚ್ಯದ ಭದ್ರತಾ ಬೆಳವಣಿಗೆಗಳು ಹಾಗೂ ಅಮೆರಿಕದ ಮುಂದಿನ ತಂತ್ರಗಳ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ, ಫಾಕ್ಸ್ ನ್ಯೂಸ್ ವರದಿಯನ್ನು ಉಲ್ಲೇಖಿಸಿದ ಸೋರ್ಟರ್, ಟ್ರಂಪ್ ಮಧ್ಯಪ್ರಾಚ್ಯದ ಪ್ರಮುಖ ನಾಯಕರೊಂದಿಗೆ ಮಹತ್ವದ ದೂರವಾಣಿ ಮಾತುಕತೆ ನಡೆಸಿದ್ದು, ಅದನ್ನು “ಬ್ರೇಕ್‌ಥ್ರೂ ಕಾಲ್” ಎಂದು ವರ್ಣಿಸಿದ್ದಾರೆ.
ಈ ಬೆಳವಣಿಗೆಗಳ ನಡುವೆ ದಿ ವಾಷಿಂಗ್ಟನ್ ಟೈಮ್ಸ್ ಪ್ರಕಟಿಸಿರುವ ವರದಿ ಮತ್ತಷ್ಟು ಕುತೂಹಲ ಹುಟ್ಟಿಸಿದೆ. ವರದಿಯ ಪ್ರಕಾರ, ಅಮೆರಿಕಾ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಕರಡು ಬಹುತೇಕ ಅಂತಿಮ ಹಂತ ತಲುಪಿದ್ದು, ಭಾನುವಾರದೊಳಗೆ ಅದರ ಅಧಿಕೃತ ಘೋಷಣೆ ಸಾಧ್ಯತೆ ಇದೆ ಎಂದು ತಿಳಿಸಿದೆ.
ಈ ಕರಡು ಒಪ್ಪಂದಕ್ಕೆ ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಘರ್ ಖಲೀಬಾಫ್, ಅಮೆರಿಕಾದ ವಿಶೇಷ ದೂತ ಸ್ಟೀವ್ ವಿಟ್ಕಾಫ್, ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ಟ್ರಂಪ್ ಅಳಿಯ ಜೇರೆಡ್ ಕುಶ್ನರ್ ಅವರ ಒಪ್ಪಿಗೆ ದೊರೆತಿದೆ ಎಂದು ವರದಿ ಹೇಳಿದೆ.
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅಮೆರಿಕ ಸರ್ಕಾರದ ಇತ್ತೀಚಿನ ಚಟುವಟಿಕೆಗಳ ಬಗ್ಗೆ ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಕಂಟೆಂಟ್ ಕ್ರಿಯೇಟರ್ ವ್ಯಾನ್ ಸ್ವೋಲ್ ಮಾಡಿದ ಪೋಸ್ಟ್ ವೈರಲ್ ಆಗಿದೆ.
ಕಳೆದ 24 ಗಂಟೆಗಳಲ್ಲಿ ಟ್ರಂಪ್ ತಮ್ಮ ಮಗನ ಮದುವೆಗೆ ಗೈರಾಗಿದ್ದು. ಜೆಡಿ ವ್ಯಾನ್ಸ್ ಹಾಗೂ ಪೀಟ್ ಹೆಗ್ಸೆತ್ ತುರ್ತಾಗಿ ವೈಟ್ ಹೌಸ್‌ಗೆ ಮರಳಿದ್ದಾರೆ. ಚೀಫ್ ಆಫ್ ಸ್ಟಾಫ್ B-2 ಬಾಂಬರ್ ವಿಮಾನಗಳ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಏನೋ ದೊಡ್ಡ ಘಟನೆ ನಡೆಯಲಿದೆಯೇ?” ಎಂದು ಪ್ರಶ್ನಿಸಿದ್ದಾರೆ.
ಈ ನಡುವೆ ಟ್ರಂಪ್ ತಮ್ಮ ಪುತ್ರ ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಬೆಟ್ಟಿನಾ ಆಂಡರ್ಸನ್ ಮದುವೆ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಘೋಷಿಸಿದ್ದಾರೆ.
ಟ್ರೂತ್ ಸೋಷಿಯಲ್‌ನಲ್ಲಿ ಪೋಸ್ಟ್ ಮಾಡಿದ್ದ ಟ್ರಂಪ್, “ಈ ಮಹತ್ವದ ಸಮಯದಲ್ಲಿ ನಾನು ವೈಟ್ ಹೌಸ್‌ನಲ್ಲೇ ಉಳಿಯುವುದು ಅಗತ್ಯ” ಎಂದು ಹೇಳಿದ್ದರು. ಇದರಿಂದಲೇ ರಾಜಕೀಯ ವಲಯದಲ್ಲಿ ಇನ್ನಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ಆದರೆ ನಂತರ ಹೊರಬಂದ ಮಾಹಿತಿಯ ಪ್ರಕಾರ, ಡೊನಾಲ್ಡ್ ಟ್ರಂಪ್ ಜೂನಿಯರ್ ಮತ್ತು ಬೆಟ್ಟಿನಾ ಆಂಡರ್ಸನ್ ಈಗಾಗಲೇ ಕಾನೂನುಬದ್ಧವಾಗಿ ವಿವಾಹವಾಗಿದ್ದು, ಬಹಾಮಾಸ್‌ನಲ್ಲಿ ನಡೆಯಲಿರುವ ಸಮಾರಂಭವು ಕೇವಲ ಕುಟುಂಬ ಹಾಗೂ ಆಪ್ತ ಸ್ನೇಹಿತರಿಗಾಗಿ ಮಾತ್ರ ಆಯೋಜಿಸಲಾಗಿದೆ ಎಂದು ತಿಳಿದುಬಂದಿದೆ. ಬೆಟ್ಟಿನಾ ಆಂಡರ್ಸನ್ ವೈಟ್ ಹೌಸ್‌ನಲ್ಲಿ ಮದುವೆ ಸಮಾರಂಭ ನಡೆಯಬೇಕೆಂದು ಬಯಸಿದ್ದರು ಎಂಬ ಮಾಹಿತಿಯೂ ಹೊರಬಿದ್ದಿದೆ.
ಇದೇ ವೇಳೆ, ಟ್ರಂಪ್ ಜೂನಿಯರ್ ಅವರ ಮಾಜಿ ಪತ್ನಿ ವನೆಸ್ಸಾ ಟ್ರಂಪ್ ಇತ್ತೀಚೆಗೆ ತಾವು ಬ್ರೆಸ್ಟ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವುದಾಗಿ ಬಹಿರಂಗಪಡಿಸಿದ್ದಾರೆ.
ವಿಚ್ಛೇದನದ ಬಳಿಕವೂ ಟ್ರಂಪ್ ಜೂನಿಯರ್ ಮತ್ತು ವನೆಸ್ಸಾ ನಡುವೆ ಉತ್ತಮ ಸಂಬಂಧ ಮುಂದುವರಿದಿದ್ದು, ತಮ್ಮ ಪುತ್ರಿ ಶಾಲಾ ಕಾರ್ಯಕ್ರಮಗಳು ಹಾಗೂ ಕುಟುಂಬ ಸಮಾರಂಭಗಳಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು.
Advertisement