ಹಾರ್ಮುಜ್ ಮೂಲಕ ಸಾಗುವ ಹಡಗುಗಳಿಗೆ ಇರಾನ್ ಹೊಸ ಶುಲ್ಕ: ಮಿತ್ರ ರಾಷ್ಟ್ರಗಳಿಗೆ ಮಾತ್ರ ವಿಶೇಷ ಸೌಲಭ್ಯ..!

ಹಾರ್ಮುಜ್ ನಮ್ಮ ಪ್ರಾದೇಶಿಕ ಜಲವಲಯದ ಭಾಗವಾಗಿರುವುದರಿಂದ, ಅಲ್ಲಿಂದ ಸಾಗುವ ಹಡಗುಗಳಿಂದ ಸೇವಾ ಶುಲ್ಕವನ್ನು ಖಂಡಿತವಾಗಿಯೂ ವಸೂಲಿ ಮಾಡುತ್ತೇವೆ. ಆದರೆ, ಅದನ್ನು ಟೋಲ್ ಎಂದು ಕರೆಯಲು ಸಾಧ್ಯವಿಲ್ಲ.
Hormuz
ಹಾರ್ಮುಜ್ ಜಲಸಂಧಿ
Updated on

ಮಧ್ಯಪ್ರಾಚ್ಯದ ಉದ್ವಿಗ್ನತೆಯ ನಡುವೆಯೇ ಜಾಗತಿಕ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಹಾರ್ಮುಜ್ ಜಲಸಂಧಿ ಕುರಿತು ಇರಾನ್ ಮಹತ್ವದ ಘೋಷಣೆ ಮಾಡಿದೆ.

ಹಾರ್ಮುಜ್ ಜಲಸಂಧಿ ಮೂಲಕ ಸಂಚರಿಸುವ ವಾಣಿಜ್ಯ ಹಡಗುಗಳಿಂದ ಸೇವಾ ಶುಲ್ಕ ವಸೂಲಿ ಮಾಡಲಾಗುವುದು ಎಂದು ಇರಾನ್ ಸ್ಪಷ್ಟಪಡಿಸಿದೆ, ಆದರೆ, ತಮ್ಮೊಂದಿಗೆ ಸ್ನೇಹಪರ ಸಂಬಂಧ ಹೊಂದಿರುವ ರಾಷ್ಟ್ರಗಳಿಗೆ ವಿಶೇಷ ಸೌಲಭ್ಯ ಮತ್ತು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದೆ.

ಚೀನಾದ ಬೀಜಿಂಗ್‌ನಲ್ಲಿ ನಡೆದ ವಿಶ್ವ ಶಾಂತಿ ವೇದಿಕೆ (World Peace Forum)ಯಲ್ಲಿ ಮಾತನಾಡಿದ ಚೀನಾದಲ್ಲಿರುವ ಇರಾನ್‌ನ ರಾಯಭಾರಿ ಅಬ್ದೋಲ್‌ರೆಜಾ ರಹ್ಮಾನಿ ಫಝ್ಲಿ, ಹೋರ್ಮುಜ್ ಜಲಸಂಧಿಯ ಭದ್ರತೆ ಹಾಗೂ ನಿರ್ವಹಣೆಗೆ ಹೊಸ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಹೇಳಿದರು.

"ಹಾರ್ಮುಜ್ ನಮ್ಮ ಪ್ರಾದೇಶಿಕ ಜಲವಲಯದ ಭಾಗವಾಗಿರುವುದರಿಂದ, ಅಲ್ಲಿಂದ ಸಾಗುವ ಹಡಗುಗಳಿಂದ ಸೇವಾ ಶುಲ್ಕವನ್ನು ಖಂಡಿತವಾಗಿಯೂ ವಸೂಲಿ ಮಾಡುತ್ತೇವೆ. ಆದರೆ, ಅದನ್ನು ಟೋಲ್ ಎಂದು ಕರೆಯಲು ಸಾಧ್ಯವಿಲ್ಲ" ಎಂದು ಹೇಳಿದರು.

ಈ ಹೊಸ ವ್ಯವಸ್ಥೆಯನ್ನು ಒಮಾನ್‌ನ ಸಹಕಾರದೊಂದಿಗೆ ರೂಪಿಸಲಾಗುತ್ತಿದೆ ಎಂದು ತಿಳಿಸಿದ ಅವರು, ಹಡಗುಗಳ ಸುರಕ್ಷಿತ ಸಂಚಾರ, ಜಲಸಂಧಿಯ ಮೇಲ್ವಿಚಾರಣೆ ಹಾಗೂ ಭಾರೀ ಪ್ರಮಾಣದ ಹಡಗು ಸಂಚಾರದಿಂದ ಉಂಟಾಗುವ ಪರಿಸರ ಸಮಸ್ಯೆಗಳನ್ನು ನಿರ್ವಹಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದರು.

Hormuz
ಅಮೆರಿಕ-ಇರಾನ್ ಶಾಂತಿ ಒಪ್ಪಂದ: ಜೂನ್ 17 ರಿಂದ ಹಾರ್ಮುಜ್ ಜಲಸಂಧಿ ದಾಟಿದ ಭಾರತದ 11 ಹಡಗುಗಳು! ಇನ್ನೂ ಎಷ್ಟಿವೆ ಗೊತ್ತಾ? Video

ಇದೇ ವೇಳೆ, "ಕಷ್ಟದ ಸಮಯದಲ್ಲಿ ನಮ್ಮ ಬೆಂಬಲಕ್ಕೆ ನಿಂತ ಸ್ನೇಹ ರಾಷ್ಟ್ರಗಳಿಗೆ ವಿಶೇಷ ಸೌಲಭ್ಯ ನೀಡಲಾಗುವುದು" ಎಂದು ಫಝ್ಲಿ ಹೇಳಿದರು. ಆದರೆ, ಯಾವ ರಾಷ್ಟ್ರಗಳಿಗೆ ಈ ವಿಶೇಷ ರಿಯಾಯಿತಿ ದೊರೆಯಲಿದೆ ಎಂಬುದನ್ನು ಅವರು ಬಹಿರಂಗಪಡಿಸಲಿಲ್ಲ.

ವಿಶ್ವದ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆಯ ಸುಮಾರು ಐದನೇ ಒಂದು ಭಾಗ ಹಾರ್ಮುಜ್ ಜಲಸಂಧಿ ಮೂಲಕ ಸಾಗುತ್ತದೆ. ಇತ್ತೀಚಿನ ಮಧ್ಯಪ್ರಾಚ್ಯ ಸಂಘರ್ಷದ ವೇಳೆ ಇರಾನ್ ಈ ಜಲಸಂಧಿಯನ್ನು ಬಹುತೇಕ ಬಂದ್ ಮಾಡಿದ್ದರಿಂದ ಜಾಗತಿಕ ತೈಲ ಬೆಲೆಗಳು ಏರಿಕೆಯಾಗಿದ್ದವು.

ಬಳಿಕ ಅಮೆರಿಕದೊಂದಿಗೆ ಯುದ್ಧ ವಿರಾಮದ ಪ್ರಾಥಮಿಕ ಒಪ್ಪಂದಕ್ಕೆ ಬಂದ ನಂತರ ಇರಾನ್ ಹಾರ್ಮುಜ್ ಜಲಸಂಧಿಯ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿತ್ತು. ಉಭಯ ದೇಶಗಳ ನಡುವೆ ಶಾಶ್ವತ ಶಾಂತಿ ಒಪ್ಪಂದಕ್ಕಾಗಿ ಮಾತುಕತೆಗಳು ಇನ್ನೂ ಮುಂದುವರಿದಿವೆ.

ಇದೀಗ ಇರಾನ್ ಸೇವಾ ಶುಲ್ಕ ವಿಧಿಸುವ ಘೋಷಣೆ ಮಾಡಿರುವುದು ಜಾಗತಿಕ ಹಡಗು ಸಂಚಾರ, ತೈಲ ವ್ಯಾಪಾರ ಹಾಗೂ ಇಂಧನ ಮಾರುಕಟ್ಟೆಯ ಮೇಲೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com