ಹಾರ್ಮುಜ್‌ನಲ್ಲಿ ಮತ್ತೆ ಉದ್ವಿಗ್ನತೆ: ತೈಲ ಟ್ಯಾಂಕರ್ ಮೇಲೆ ಕ್ಷಿಪಣಿ ದಾಳಿ; ಹಡಗಿನಲ್ಲಿ ಭಾರೀ ಬೆಂಕಿ, ತನಿಖೆ ಆರಂಭ

ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಆ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಎಚ್ಚರಿಕೆಯಿಂದ ಸಂಚರಿಸಬೇಕು ಹಾಗೂ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಯುಕೆಎಂಟಿಒ ಸೂಚಿಸಿದೆ.
Hormuz
ಹಾರ್ಮುಜ್ ಜಲಸಂಧಿ
Updated on

ಲಂಡನ್: ಹಾರ್ಮುಜ್ ಜಲಸಂಧಿ ಸಮೀಪದ ಒಮಾನ್ ಕರಾವಳಿಯಲ್ಲಿ ಸಂಚರಿಸುತ್ತಿದ್ದ ತೈಲ ಟ್ಯಾಂಕರ್‌ಗೆ ಸೋಮವಾರ ಗುರುತು ಪತ್ತೆಯಾಗದ ಪ್ರೊಜೆಕ್ಟೈಲ್ ಅಪ್ಪಳಿಸಿದ ಪರಿಣಾಮ ಭಾರೀ ಬೆಂಕಿ ಕಾಣಿಸಿಕೊಂಡಿದೆ ಎಂದು ಬ್ರಿಟನ್‌ನ ಸಮುದ್ರ ಭದ್ರತಾ ಸಂಸ್ಥೆ ಯುನೈಟೆಡ್ ಕಿಂಗ್‌ಡಮ್ ಮ್ಯಾರಿಟೈಮ್ ಟ್ರೇಡ್ ಆಪರೇಷನ್ಸ್ (ಯುಕೆಎಂಟಿಒ) ತಿಳಿಸಿದೆ.

ಘಟನೆ ಒಮಾನ್‌ನ ಲಿಮಾಹ್ ಪ್ರದೇಶದಿಂದ ಸುಮಾರು ಎಂಟು ನಾಟಿಕಲ್ ಮೈಲುಗಳ ಪೂರ್ವಕ್ಕೆ ನಡೆದಿದೆ. ದಕ್ಷಿಣ ದಿಕ್ಕಿನತ್ತ ಸಾಗುತ್ತಿದ್ದ ಟ್ಯಾಂಕರ್‌ನ ಎಡಭಾಗಕ್ಕೆ (ಪೋರ್ಟ್ ಸೈಡ್) ನಿಗೂಢ ಪ್ರೊಜೆಕ್ಟೈಲ್ ಅಪ್ಪಳಿಸಿದ್ದರಿಂದ ಭಾರೀ ಬೆಂಕಿ ಹೊತ್ತಿಕೊಂಡಿದೆ ಎಂದು ಯುಕೆಎಂಟಿಒ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಘಟನೆಯಲ್ಲಿ ಯಾವುದೇ ಸಿಬ್ಬಂದಿಗೆ ಗಾಯಗಳಾಗಿಲ್ಲ. ಪರಿಸರಕ್ಕೂ ಯಾವುದೇ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಘಟನೆಯ ಕುರಿತು ತನಿಖೆ ನಡೆಯುತ್ತಿದ್ದು, ಆ ಪ್ರದೇಶದಲ್ಲಿ ಸಂಚರಿಸುವ ಹಡಗುಗಳು ಎಚ್ಚರಿಕೆಯಿಂದ ಸಂಚರಿಸಬೇಕು ಹಾಗೂ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಯುಕೆಎಂಟಿಒ ಸೂಚಿಸಿದೆ.

ಈ ಘಟನೆ ವಿಶ್ವದ ಅತ್ಯಂತ ಪ್ರಮುಖ ಇಂಧನ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಸಂಭವಿಸಿದೆ. ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಜಾರಿಯಲ್ಲಿರುವ ಹಾಗೂ ಶಾಶ್ವತ ಶಾಂತಿ ಒಪ್ಪಂದದ ಪ್ರಯತ್ನಗಳು ನಡೆಯುತ್ತಿರುವ ನಡುವೆಯೇ ಈ ಬೆಳವಣಿಗೆ ಆತಂಕ ಮೂಡಿಸಿದೆ.

Hormuz
ಹಾರ್ಮುಜ್ ಮೂಲಕ ಸಾಗುವ ಹಡಗುಗಳಿಗೆ ಇರಾನ್ ಹೊಸ ಶುಲ್ಕ: ಮಿತ್ರ ರಾಷ್ಟ್ರಗಳಿಗೆ ಮಾತ್ರ ವಿಶೇಷ ಸೌಲಭ್ಯ..!

ಮಧ್ಯಪ್ರಾಚ್ಯ ಸಂಘರ್ಷದ ವೇಳೆ ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ನಿರ್ಬಂಧ ಹೇರಿದ್ದರಿಂದ ಹಲವು ವಾಣಿಜ್ಯ ಹಡಗುಗಳು ದಾಳಿಗೆ ಗುರಿಯಾಗಿದ್ದವು. ಇದರಿಂದ ಜಾಗತಿಕ ಕಚ್ಚಾ ತೈಲದ ಬೆಲೆ ಏರಿಕೆಯಾಗಿತ್ತು. ಬಳಿಕ ಅಮೆರಿಕ ತನ್ನ ನೌಕಾಪಡೆಯ ಕ್ರಮಗಳನ್ನು ಕೈಗೊಂಡು, ಇರಾನ್ ವಿರುದ್ಧ ಪ್ರತಿದಾಳಿ ನಡೆಸಿತ್ತು.

ಕಳೆದ ತಿಂಗಳು ಅಮೆರಿಕ ಮತ್ತು ಇರಾನ್ ನಡುವಿನ ತಿಳುವಳಿಕೆ ಒಪ್ಪಂದದ ಬಳಿಕ ಹಾರ್ಮುಜ್ ಮಾರ್ಗದಲ್ಲಿ ಹಡಗುಗಳ ಸಂಚಾರ ಪುನರಾಂಭವಾಗಿತ್ತು. ಆದರೆ, ಯುದ್ಧಕ್ಕೂ ಮುಂಚಿನಂತೆ ಸಂಪೂರ್ಣ ಮುಕ್ತ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಇರಾನ್ ಈಗಾಗಲೇ ಎಚ್ಚರಿಕೆ ನೀಡಿದೆ.

ಹಾರ್ಮುಜ್ ಜಲಸಂಧಿ ಗಲ್ಫ್ ರಾಷ್ಟ್ರಗಳಿಂದ ಏಷ್ಯಾ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಿಗೆ ಕಚ್ಚಾ ತೈಲ ರಫ್ತು ಮಾಡುವ ಪ್ರಮುಖ ಸಮುದ್ರ ಮಾರ್ಗವಾಗಿದೆ.

ಅಮೆರಿಕದ ಯುಎಸ್ ಇಂಧನ ಮಾಹಿತಿ ಆಡಳಿತ ನೀಡಿರುವ ಮಾಹಿತಿಯಂತೆ, 2024ರಲ್ಲಿ ಪ್ರತಿದಿನ ಸುಮಾರು 2 ಕೋಟಿ ಬ್ಯಾರೆಲ್ ಕಚ್ಚಾ ತೈಲ ಈ ಜಲಸಂಧಿ ಮೂಲಕ ಸಾಗಿದ್ದು, ಇದು ಜಾಗತಿಕ ಕಚ್ಚಾ ತೈಲ ಸಾಗಣೆಯ ಸುಮಾರು ಐದನೇ ಒಂದು ಭಾಗವಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com