'Navigation systems ಸ್ಥಗಿತಗೊಳಿಸಿ ನಿಷೇಧಿತ ಮಾರ್ಗದಲ್ಲಿ ಸಂಚರಿಸಿದ್ದರು, ಎಚ್ಚರಿಕೆ ನೀಡಿದರೂ ನಿರ್ಲಕ್ಷಿಸಿದ್ದರು': UAE ಹಡಗುಗಳ ಮೇಲಿನ ದಾಳಿಗೆ Iran ಸಮರ್ಥನೆ..!

ಹಡಗುಗಳು ತಮ್ಮ ನ್ಯಾವಿಗೇಶನ್ ವ್ಯವಸ್ಥೆಯನ್ನು (Navigation System) ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿದ್ದವು. ಅಲ್ಲದೆ, ಗಣಿಗಳು (ಮೈನ್‌ಗಳು) ಅಳವಡಿಸಲಾಗಿದ್ದ ಮಾರ್ಗದ ಮೂಲಕ ಸಂಚರಿಸಲು ಪ್ರಯತ್ನಿಸಿದ್ದವು.
Strait of Hormuz
ಹಾರ್ಮುಜ್ ಜಲಸಂಧಿ
Updated on

ಟೆಹ್ರಾನ್/ದುಬೈ: ಹಾರ್ಮುಜ್ ಜಲಸಂಧಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಧ್ವಜ ಹೊಂದಿದ್ದ ಎರಡು ವಾಣಿಜ್ಯ ಹಡಗುಗಳ ಮೇಲೆ ನಡೆದ ಕ್ಷಿಪಣಿ ದಾಳಿಯ ಹೊಣೆಯನ್ನು ಇರಾನ್ ಅಧಿಕೃತವಾಗಿ ಹೊತ್ತುಕೊಂಡಿದ್ದು, ಈ ದಾಳಿಯನ್ನು "ರಕ್ಷಣಾತ್ಮಕ ಕ್ರಮ" ಎಂದು ಸಮರ್ಥಿಸಿಕೊಂಡಿದೆ.

ಹಲವು ಬಾರಿ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿ ನಿಷೇಧಿತ ಮಾರ್ಗದಲ್ಲಿ ಹಡಗುಗಳು ಸಂಚರಿಸಲು ಯತ್ನಿಸಿದ್ದರಿಂದ ದಾಳಿ ನಡೆಸಲಾಗಿದೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿದೆ.

ಹಡಗುಗಳು ತಮ್ಮ ನ್ಯಾವಿಗೇಶನ್ ವ್ಯವಸ್ಥೆಯನ್ನು (Navigation System) ಉದ್ದೇಶಪೂರ್ವಕವಾಗಿ ಸ್ಥಗಿತಗೊಳಿಸಿದ್ದವು. ಅಲ್ಲದೆ, ಗಣಿಗಳು (ಮೈನ್‌ಗಳು) ಅಳವಡಿಸಲಾಗಿದ್ದ ಮಾರ್ಗದ ಮೂಲಕ ಸಂಚರಿಸಲು ಪ್ರಯತ್ನಿಸಿದ್ದವು. ಈ ಹಿನ್ನೆಲೆಯಲ್ಲಿ, ಸಮುದ್ರ ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ರಕ್ಷಣಾತ್ಮಕ ಕ್ರಮವಾಗಿ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಸಮರ್ಥಿಸಿಕೊಂಡಿದೆ.

ಈ ಕಾರ್ಯಾಚರಣೆಯ ಮೂಲಕ ಎರಡೂ ಹಡಗುಗಳನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ" ಎಂದು ಐಆರ್‌ಜಿಸಿ ಹೇಳಿಕೊಂಡಿದೆ.

ಜೊತೆಗೆ, ಗಲ್ಫ್ ಪ್ರದೇಶದಲ್ಲಿ ಅಮೆರಿಕದೊಂದಿಗೆ ಭದ್ರತಾ ಸಹಕಾರ ಮುಂದುವರಿಸುತ್ತಿರುವ ರಾಷ್ಟ್ರಗಳಿಗೂ ಎಚ್ಚರಿಕೆ ಸಂದೇಶ ರವಾನಿಸಿದ್ದು, ಇಂತಹ ಚಟುವಟಿಕೆಗಳು ಮುಂದುವರಿದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.

Strait of Hormuz
ಆಳ ಸಮುದ್ರ, ಭಾರೀ ಅಪಾಯ: ಇರಾನನ್ನು ತಪ್ಪಿಸಿ, ವಾಹನಗಳಿಗೆ ಪೆಟ್ರೋಲ್ ತುಂಬುವ ಟ್ಯಾಂಕರ್‌ಗಳು (ಜಾಗತಿಕ ಜಗಲಿ)

ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದು, ಆರು ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳು ಸೇರಿ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.

ಲಭ್ಯವಿರುವ ಮಾಹಿತಿಯ ಪ್ರಕಾರ ಗಾಯಾಳುಗಳಲ್ಲಿ ನಾಲ್ವರು ಗಂಭೀರ ಸ್ಥಿತಿಯಲ್ಲಿದ್ದು, ಅವರಿಗೆ ಚಿಕಿತ್ಸೆ ಮುಂದುವರಿದಿದೆ ಎಂದು ತಿಳಿದುಬಂದಿದೆ.

ಈ ಘಟನೆ ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಜಗತ್ತಿನ ಅತ್ಯಂತ ಮಹತ್ವದ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ.

ಒಮಾನ್‌ನ ಪ್ರಾದೇಶಿಕ ಸಮುದ್ರ ವ್ಯಾಪ್ತಿಯಲ್ಲಿ ಸಂಚರಿಸುತ್ತಿದ್ದ 'ಮೊಂಬಾಸಾ' ತೈಲ ಟ್ಯಾಂಕರ್ ಹಾಗೂ 'ಅಲ್ ಬಹಿಯಾಹ್' ಎಲ್‌ಎನ್‌ಜಿ (ದ್ರವೀಕೃತ ನೈಸರ್ಗಿಕ ಅನಿಲ) ಸಾಗಣೆ ಹಡಗುಗಳು ಇರಾನ್‌ನ ಕ್ರೂಸ್ ಕ್ಷಿಪಣಿಗಳಿಗೆ ಗುರಿಯಾಗಿವೆ.

ಕ್ಷಿಪಣಿಗಳು ಅಪ್ಪಳಿಸಿದ ಪರಿಣಾಮ ಎರಡೂ ಹಡಗುಗಳಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿತು. ಬಳಿಕ ತುರ್ತು ರಕ್ಷಣಾ ತಂಡಗಳು ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದು, ಎರಡೂ ಹಡಗುಗಳನ್ನು ಮತ್ತಷ್ಟು ಹಾನಿಯಿಂದ ರಕ್ಷಿಸಲಾಗಿದೆ.

ದಾಳಿಯ ಬಳಿಕ ಯುನೈಟೆಡ್ ಅರಬ್ ಎಮಿರೇಟ್ಸ್ ರಕ್ಷಣಾ ಸಚಿವಾಲಯ ಕಟುವಾಗಿ ಪ್ರತಿಕ್ರಿಯಿಸಿದ್ದು, "ಇದು ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆ ಹಾಗೂ ಪ್ರಾದೇಶಿಕ ಭದ್ರತೆ ಮತ್ತು ಸ್ಥಿರತೆಗೆ ನೇರ ಬೆದರಿಕೆಯಾಗಿದೆ. ಜಾಗತಿಕ ಸಮುದ್ರ ಸಂಚಾರದ ಸುರಕ್ಷತೆಯನ್ನು ಅಪಾಯಕ್ಕೆ ದೂಡುವ ಈ ಕೃತ್ಯವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ" ಎಂದು ತಿಳಿಸಿದೆ.

Strait of Hormuz
ಅಮೆರಿಕ ದಾಳಿಗೆ Iran ಪ್ರತೀಕಾರ; Hormuzನಲ್ಲಿ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿಗಳ ಸುರಿಮಳೆ: ಭಾರತೀಯ ನಾವಿಕ ಸಾವು, 8 ಮಂದಿಗೆ ಗಾಯ

ಹಡಗುಗಳಿಗೆ ಉಂಟಾದ ಹಾನಿ, ಭಾರತೀಯ ನಾವಿಕನ ಸಾವು ಮತ್ತು ಇತರ ಸಿಬ್ಬಂದಿಗೆ ಆದ ಗಾಯಗಳನ್ನು ದೃಢಪಡಿಸಿರುವ ಯುಎಇ, "ಈ ಬೆಳವಣಿಗೆಗೆ ಸೂಕ್ತ ಪ್ರತಿಕ್ರಿಯೆ ನೀಡುವ ಹಾಗೂ ನಮ್ಮ ಭೂಪ್ರದೇಶ, ನಾಗರಿಕರು ಮತ್ತು ನಿವಾಸಿಗಳ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಸಂಪೂರ್ಣ ಹಕ್ಕು ಯುಎಇಗೆ ಇದೆ" ಎಂದು ಎಚ್ಚರಿಕೆ ನೀಡಿದೆ.

ಈ ದಾಳಿ ಜಾಗತಿಕ ಇಂಧನ ಭದ್ರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾರ್ಮುಜ್ ಜಲಸಂಧಿಯ ಮೂಲಕ ವಿಶ್ವದ ಒಟ್ಟು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗ ಸಾಗಣೆಯಾಗುತ್ತದೆ. ಈ ಮಾರ್ಗದಲ್ಲಿ ಉದ್ವಿಗ್ನತೆ ಹೆಚ್ಚಾದರೆ ಜಾಗತಿಕ ಇಂಧನ ಪೂರೈಕೆ, ಸಾಗಾಣಿಕೆ ವೆಚ್ಚ ಹಾಗೂ ತೈಲ ಬೆಲೆಗಳ ಮೇಲೆ ನೇರ ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಸಂದರ್ಭದಲ್ಲಿ ನಡೆದ ಈ ದಾಳಿ ಮಧ್ಯಪ್ರಾಚ್ಯ ಭದ್ರತಾ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದ್ದು, ಮುಂದಿನ ಬೆಳವಣಿಗೆಗಳತ್ತ ಇಡೀ ಜಗತ್ತಿನ ಗಮನ ನೆಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com