ಅಮೆರಿಕ ದಾಳಿಗೆ Iran ಪ್ರತೀಕಾರ; Hormuzನಲ್ಲಿ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿಗಳ ಸುರಿಮಳೆ; ಭಾರತೀಯ ನಾವಿಕ ಸಾವು, 8 ಮಂದಿಗೆ ಗಾಯ

ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದು, ಆರು ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳು ಸೇರಿದಂತೆ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.
Hormuz
ಹಾರ್ಮುಜ್ ಜಲಸಂೆಧಿ
Updated on

ದುಬೈ: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾವು ಮತ್ತಷ್ಟು ಹೆಚ್ಚಾಗಿದ್ದು, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಈಗ ಹಾರ್ಮುಜ್ ಜಲಸಂಧಿಯಲ್ಲೂ ತೀವ್ರ ಸ್ವರೂಪ ಪಡೆದುಕೊಂಡಿದೆ.

ಅಮೆರಿಕವು ಮಂಗಳವಾರ ಮುಂಜಾನೆ ಇರಾನ್ ವಿರುದ್ಧ ಮತ್ತೊಂದು ಸುತ್ತಿನ ವಾಯುದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ, ಇರಾನ್ ಪ್ರತಿದಾಳಿಯಾಗಿ ಬಹ್ರೇನ್ ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಸಂಚರಿಸುತ್ತಿದ್ದ ಯುನೈಟೆಡ್ ಅರಬ್ ಎಮಿರೇಟ್ಸ್‌ (ಯುಎಇ)ಗೆ ಸಂಬಂಧಿಸಿದ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದು, ಆರು ಭಾರತೀಯರು ಹಾಗೂ ಇಬ್ಬರು ಉಕ್ರೇನ್ ಪ್ರಜೆಗಳು ಸೇರಿದಂತೆ ಒಟ್ಟು ಎಂಟು ಮಂದಿ ಗಾಯಗೊಂಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕ ಮತ್ತೆ ನಿಯಂತ್ರಣ ಸ್ಥಾಪಿಸುತ್ತಿದ್ದು, ಈ ಪ್ರದೇಶದಲ್ಲಿ "ನಿರ್ಬಂಧವನ್ನು ಮರುಜಾರಿಗೆ" ತರಲಾಗುತ್ತಿದೆ ಎಂದು ಘೋಷಿಸಿದ ಕೆಲವೇ ಸಮಯದ ಬಳಿಕ ಈ ಬೆಳವಣಿಗೆ ನಡೆದಿದೆ.

ಜೊತೆಗೆ, ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಸಂಚರಿಸುವ ವಾಣಿಜ್ಯ ಹಡಗುಗಳಿಂದ ಶುಲ್ಕ (ಟೋಲ್) ವಸೂಲಿ ಮಾಡುವ ಉದ್ದೇಶವನ್ನೂ ಟ್ರಂಪ್ ಬಹಿರಂಗಪಡಿಸಿದ್ದಾರೆ.

ಇದು ಹಲವು ದಶಕಗಳಿಂದ ಜಾರಿಯಲ್ಲಿದ್ದ "ಮುಕ್ತ ನೌಕಾಸಂಚಾರ" ಎಂಬ ಅಮೆರಿಕದ ನೀತಿಗೆ ವಿರುದ್ಧವಾದ ಮಹತ್ವದ ಬದಲಾವಣೆಯಾಗಿ ಪರಿಗಣಿಸಲಾಗುತ್ತಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ತನ್ನ ಅಧಿಕೃತ ಪ್ರಕಟಣೆಯಲ್ಲಿ, ಇರಾನ್ ವಿರುದ್ಧ ಮತ್ತೊಂದು ಸುತ್ತಿನ ನಿಖರ ವಾಯುದಾಳಿಗಳನ್ನು ಆರಂಭಿಸಿರುವುದಾಗಿ ತಿಳಿಸಿದೆ.

ಈ ಕಾರ್ಯಾಚರಣೆಗಳ ಉದ್ದೇಶ ಇರಾನ್‌ನ ದಾಳಿಯ ಸಾಮರ್ಥ್ಯವನ್ನು ಕುಗ್ಗಿಸುವುದು ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳು ಮತ್ತು ಅಮಾಯಕ ನಾಗರಿಕರ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ನಾಶಪಡಿಸುವುದಾಗಿದೆ" ಎಂದು CENTCOM ಹೇಳಿದೆ.

Hormuz
'Hormuz ಭದ್ರತೆಗೆ ಸರಕು ಸಾಗಣೆಯ ಮೇಲೆ ಶೇ.20 ಶುಲ್ಕ ಹೇರಿ': ಜಗತ್ತಿಗೆ ಮತ್ತೆ ಶಾಕ್ ಕೊಟ್ಟ Donald Trump, ಇರಾನ್ ಕೆಂಡಾಮಂಡಲ

ಈ ದಾಳಿಗಳ ಬಳಿಕ ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, "ನಾವು ಇರಾನ್ ಮೇಲೆ ಅತ್ಯಂತ ಕಠಿಣ ದಾಳಿ ನಡೆಸುತ್ತಿದ್ದೇವೆ. ಈ ಕಾರ್ಯಾಚರಣೆ ಮುಂದುವರಿಯಲಿದೆ. ಅವರ ದಾಳಿಯ ಸಾಮರ್ಥ್ಯವನ್ನು ಸಂಪೂರ್ಣವಾಗಿ ದುರ್ಬಲಗೊಳಿಸುತ್ತಿದ್ದೇವೆ. ಹೋರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ನಾವು ಹೊಂದಿದ್ದೇವೆ. ನಾವು ಅಲ್ಲಿನ ನಿರ್ಬಂಧವನ್ನು ಮತ್ತೆ ಜಾರಿಗೆ ತರುತ್ತಿದ್ದೇವೆ" ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ, "ಜಗತ್ತಿನ ಅತ್ಯಂತ ಶ್ರೀಮಂತ ಪ್ರದೇಶದ ಸಮುದ್ರ ಮಾರ್ಗಕ್ಕೆ ಅಮೆರಿಕ ಭದ್ರತೆ ಒದಗಿಸುತ್ತಿದೆ. ಅದಕ್ಕಾಗಿ ಅಪಾರ ಪ್ರಮಾಣದ ಹಣ ವೆಚ್ಚವಾಗುತ್ತಿದೆ. ಹೀಗಾಗಿ, ಈ ಭದ್ರತಾ ಸೇವೆಗೆ ಹಡಗುಗಳಿಂದ ಶುಲ್ಕವನ್ನು ವಸೂಲಿ ಮಾಡಲಾಗುವುದು" ಎಂದು ತಿಳಿಸಿದ್ದಾರೆ.

ಈ ಪ್ರಸ್ತಾವನೆ ಜಾಗತಿಕ ನೌಕಾಸಂಚಾರ ನಿಯಮಗಳಿಗೆ ವಿರುದ್ಧವಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಹೊಸ ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ ಇರಾನ್, ಯುಎಇಗೆ ಸಂಬಂಧಿಸಿದ 'ಮೊಂಬಾಸಾ' ಮತ್ತು 'ಅಲ್ ಬಹಿಯಾಹ್' ಹೆಸರಿನ ಎರಡು ತೈಲ ಟ್ಯಾಂಕರ್‌ಗಳ ಮೇಲೆ ಎರಡು ಕ್ರೂಸ್ ಕ್ಷಿಪಣಿಗಳನ್ನು ಉಡಾಯಿಸಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ.

ಕ್ಷಿಪಣಿಗಳು ಟ್ಯಾಂಕರ್‌ಗಳಿಗೆ ಅಪ್ಪಳಿಸಿದ ಪರಿಣಾಮ ಎರಡೂ ಹಡಗುಗಳಲ್ಲಿ ಬೆಂಕಿ ಕಾಣಿಸಿಕೊಂಡಿತು. ನಂತರ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.

ಈ ದಾಳಿಯಲ್ಲಿ ಓರ್ವ ಭಾರತೀಯ ನಾವಿಕ ಮೃತಪಟ್ಟಿದ್ದಾನೆ. ಅಲ್ಲದೆ, ಆರು ಭಾರತೀಯರು ಮತ್ತು ಇಬ್ಬರು ಉಕ್ರೇನ್ ಪ್ರಜೆಗಳು ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಭಾರತೀಯ ನಾವಿಕನ ಗುರುತು ಹಾಗೂ ಗಾಯಾಳುಗಳ ಹೆಚ್ಚಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ.

ಯುಎಇ ರಕ್ಷಣಾ ಸಚಿವಾಲಯ ಈ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, "ಈ ದಾಳಿಯ ಮೂಲಕ ಇರಾನ್ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ದೇಶದ ಭದ್ರತೆ, ನಾಗರಿಕರು ಹಾಗೂ ನಿವಾಸಿಗಳ ರಕ್ಷಣೆಗೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವ ಸಂಪೂರ್ಣ ಹಕ್ಕು ಯುಎಇಗೆ ಇದೆ. ಈ ದಾಳಿಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು" ಎಂದು ಎಚ್ಚರಿಕೆ ನೀಡಿದೆ. ಯುದ್ಧದ ಆರಂಭಿಕ ಹಂತದಲ್ಲಿಯೂ ಇದೇ ರೀತಿಯ ಹೇಳಿಕೆ ನೀಡಿದ್ದ ಯುಎಇ ನಂತರ ಇರಾನ್ ವಿರುದ್ಧ ಸೈನಿಕ ಕ್ರಮ ಕೈಗೊಂಡಿತ್ತು.

ಇದೇ ವೇಳೆ, ಅಮೆರಿಕದ ಇತ್ತೀಚಿನ ವಾಯುದಾಳಿಗಳಿಗೆ ಪ್ರತಿಯಾಗಿ ಇರಾನ್ ಬಹ್ರೇನ್ ಮೇಲೂ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯ ಎಚ್ಚರಿಕೆ ಸೈರನ್ ಮೊಳಗಿಸಲಾಗಿದ್ದು, ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಸದ್ಯದ ಮಾಹಿತಿಯಂತೆ ಯಾವುದೇ ಸಾವು-ನೋವು ಅಥವಾ ಆಸ್ತಿಪಾಸ್ತಿ ಹಾನಿಯ ಬಗ್ಗೆ ಅಧಿಕೃತ ವರದಿ ಪ್ರಕಟವಾಗಿಲ್ಲ.

ಈ ಬೆಳವಣಿಗೆಗಳ ನಡುವೆಯೇ ದುಬೈ ಸೇರಿದಂತೆ ಯುಎಇಯ ಹಲವು ಭಾಗಗಳಲ್ಲಿ ಯುದ್ಧ ವಿಮಾನಗಳ ಹಾರಾಟವೂ ಹೆಚ್ಚಾಗಿದೆ. ವಾಯು ಭದ್ರತಾ ವ್ಯವಸ್ಥೆಯನ್ನು ಬಲಪಡಿಸಲಾಗಿದ್ದು, ಸಮುದ್ರ ಮಾರ್ಗಗಳ ಮೇಲೂ ಕಟ್ಟೆಚ್ಚರ ವಹಿಸಲಾಗಿದೆ.

ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಜಾಗತಿಕ ತೈಲ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರಿದೆ. ಜಾಗತಿಕ ಮಾನದಂಡದ ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 7.8ರಷ್ಟು ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 81.92 ಡಾಲರ್‌ಗೆ ತಲುಪಿದೆ. ಯುದ್ಧದ ತೀವ್ರ ಹಂತದಲ್ಲಿ ಇದು ಸುಮಾರು 120 ಡಾಲರ್‌ವರೆಗೆ ಏರಿಕೆಯಾಗಿದ್ದರೂ, ಈಗಿನ ಬೆಳವಣಿಗೆ ಮತ್ತೆ ಇಂಧನ ಬೆಲೆ ಏರಿಕೆಯ ಆತಂಕವನ್ನು ಹೆಚ್ಚಿಸಿದೆ.

ಜಗತ್ತಿನ ಒಟ್ಟು ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲ (LNG) ಸಾಗಣೆಯ ಸುಮಾರು ಐದನೇ ಒಂದು ಭಾಗ ಹಾರ್ಮುಜ್ ಜಲಸಂಧಿಯ ಮೂಲಕವೇ ಸಾಗುತ್ತದೆ. ಹೀಗಾಗಿ ಈ ಜಲಸಂಧಿಯಲ್ಲಿ ಉಂಟಾಗುತ್ತಿರುವ ಯಾವುದೇ ಸಂಘರ್ಷವು ಜಾಗತಿಕ ಇಂಧನ ಪೂರೈಕೆ, ಸಾಗಾಣಿಕೆ ವೆಚ್ಚ, ಹಣದುಬ್ಬರ ಹಾಗೂ ವಿಶ್ವ ಆರ್ಥಿಕತೆಯ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಧ್ಯತೆ ಇದೆ. ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಮತ್ತಷ್ಟು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಮಧ್ಯಪ್ರಾಚ್ಯ ಪರಿಸ್ಥಿತಿಯ ಮೇಲೆ ವಿಶ್ವದ ಗಮನ ನೆಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com