'Hormuz ಭದ್ರತೆಗೆ ಸರಕು ಸಾಗಣೆಯ ಮೇಲೆ ಶೇ.20 ಶುಲ್ಕ ಹೇರಿ': ಜಗತ್ತಿಗೆ ಮತ್ತೆ ಶಾಕ್ ಕೊಟ್ಟ Donald Trump, ಇರಾನ್ ಕೆಂಡಾಮಂಡಲ

ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ಇನ್ನು ಮುಂದೆ ಅಮೆರಿಕವನ್ನು 'ಹೋರ್ಮುಜ್ ಜಲಸಂಧಿಯ ರಕ್ಷಕ' ಎಂದು ಕರೆಯಲಾಗುವುದು ಎಂದಿದ್ದಾರೆ.
Donald Trump-Hormuz (AI Image)
ಡೊನಾಲ್ಡ್ ಟ್ರಂಪ್ ಮತ್ತು ಹಾರ್ಮುಜ್ ಜಲಸಂಧಿ (AI ಚಿತ್ರ)
Updated on

ವಾಷಿಂಗ್ಟನ್: ಇರಾನ್ ಮೇಲೆ ಮತ್ತೆ ಮುಗಿಬಿದ್ದಿರುವ ಅಮೆರಿಕ ಇದೀಗ ಮತ್ತೆ ಜಗತ್ತಿಗೇ ಶಾಕ್ ಕೊಟ್ಟಿದ್ದು, ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುವ ನೌಕೆಗಳಿಗೆ ಭದ್ರತೆಗೆ ಸರಕು ಸಾಗಣೆಯ ಮೇಲೆ ಶೇ.20 ಶುಲ್ಕ ಹೇರುವಂತೆ ಆದೇಶ ಹೊರಡಿಸಿದೆ.

ಹಾರ್ಮುಜ್ ಜಲಸಂಧಿಯ ಭದ್ರತೆಯನ್ನು ಅಮೆರಿಕವೇ ನೋಡಿಕೊಳ್ಳಲಿದ್ದು, ಈ ಮಾರ್ಗದ ಮೂಲಕ ಸಾಗುವ ಎಲ್ಲಾ ಸರಕುಗಳ ಮೇಲೆ ಶೇ.20ರಷ್ಟು ಶುಲ್ಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಅಲ್ಲದೆ, ಇರಾನ್ ವಿರುದ್ಧದ "ಇರಾನಿಯನ್ ಬ್ಲಾಕೇಡ್" ಅನ್ನು ಪುನಃ ಜಾರಿಗೊಳಿಸುತ್ತಿರುವುದಾಗಿ ಹೇಳಿರುವ ಟ್ರಂಪ್ ಅವರ ಘೋಷಣೆ ಮಾಡಿದ್ದು, ಇದು ಇರಾನ್ ಕೆಂಗಣ್ಣಿಗೆ ಗುರಿಯಾಗಿದೆ.

ತಮ್ಮ ಸಾಮಾಜಿಕ ಜಾಲತಾಣ ಟ್ರೂತ್ ಸೋಶಿಯಲ್ ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, "ಇನ್ನು ಮುಂದೆ ಅಮೆರಿಕವನ್ನು 'ಹೋರ್ಮುಜ್ ಜಲಸಂಧಿಯ ರಕ್ಷಕ' (Guardian of the Hormuz Strait) ಎಂದು ಕರೆಯಲಾಗುವುದು. ಈ ಅತ್ಯಂತ ಸೂಕ್ಷ್ಮ ಸಮುದ್ರ ಮಾರ್ಗದಲ್ಲಿ ಭದ್ರತೆ ಒದಗಿಸಲು ಅಮೆರಿಕ ಮಾಡುತ್ತಿರುವ ವೆಚ್ಚವನ್ನು ಭರಿಸಲು, ಈ ಮಾರ್ಗದ ಮೂಲಕ ಸಾಗುವ ಎಲ್ಲ ಸರಕುಗಳ ಮೇಲೆ ಶೇ.20ರಷ್ಟು ಶುಲ್ಕ ವಿಧಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಲಾಗುವುದು" ಎಂದು ತಿಳಿಸಿದ್ದಾರೆ.

Donald Trump-Hormuz (AI Image)
ಇಂತಹ ಹಠಾತ್ ಸಾವುಗಳಿಗೆ ಸಿದ್ಧರಾಗಿ: ಟ್ರಂಪ್ ಆಪ್ತ ಲಿಂಡ್ಸೆ ಗ್ರಹಾಂ ಸಾವಿನ ಬೆನ್ನಲ್ಲೇ ಇರಾನ್ ಸಂದೇಶ

ಇರಾನ್ ಇದ್ದರೂ ಹಾರ್ಮುಜ್ ಓಪನ್

ಹೋರ್ಮುಜ್ ಜಲಸಂಧಿ ತೆರೆದಿದ್ದು, ಇರಾನ್ ಇದ್ದರೂ ಇಲ್ಲದಿದ್ದರೂ ಅದು ತೆರೆದೆಯೇ ಇರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. "ನಾವು 'ಇರಾನಿಯನ್ ಬ್ಲಾಕೇಡ್' ಅನ್ನು ಪುನಃ ಜಾರಿಗೊಳಿಸುತ್ತಿದ್ದೇವೆ. ಇದರ ಉದ್ದೇಶ ಇರಾನ್‌ನ ಹಡಗುಗಳು ಅಥವಾ ಅದರ ಗ್ರಾಹಕರ ಹಡಗುಗಳು ದೇಶದೊಳಗೆ ಪ್ರವೇಶಿಸದಂತೆ ಅಥವಾ ಹೊರಹೋಗದಂತೆ ತಡೆಯುವುದಾಗಿದೆ. ಉಳಿದ ಎಲ್ಲಾ ದೇಶಗಳು ಜಲಸಂಧಿಯನ್ನು ನ್ಯಾಯಯುತವಾಗಿ ಮತ್ತು ಮುಕ್ತವಾಗಿ ಬಳಸಬಹುದು" ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಸಂದರ್ಶನದಲ್ಲಿ ಘೋಷಣೆ

ಇದಕ್ಕೂ ಕೆಲವೇ ಗಂಟೆಗಳ ಮೊದಲು ಫಾಕ್ಸ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಹೋರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣವನ್ನು ಅಮೆರಿಕ ವಹಿಸಿಕೊಳ್ಳಲಿದೆ ಎಂದು ಹೇಳಿದ್ದರು. "ನಾವು ಜಲಸಂಧಿಯನ್ನು ನಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದ್ದೇವೆ. ಬಹುಶಃ ಅದನ್ನು ನಾವೇ ನಿರ್ವಹಿಸುತ್ತೇವೆ. ನಾವು ಹೋರ್ಮುಜ್ ಜಲಸಂಧಿಯ ರಕ್ಷಕರಾಗುತ್ತೇವೆ. ಇದುವರೆಗೆ ಯಾವುದೇ ಪ್ರತಿಫಲವಿಲ್ಲದೆ ಈ ಜಲಸಂಧಿಗೆ ಭದ್ರತೆ ಒದಗಿಸಿದ್ದೇವೆ. ಇನ್ನು ಮುಂದೆ ಅದಕ್ಕಾಗಿ ನಮಗೆ ಹಣ ಪಾವತಿಸಬೇಕು. ನಮ್ಮ ಸೈನಿಕರನ್ನು ಅಪಾಯಕ್ಕೆ ಒಡ್ಡಿ ಭದ್ರತೆ ಒದಗಿಸುತ್ತಿದ್ದೇವೆ. ಅದರ ವೆಚ್ಚವನ್ನು ಶ್ರೀಮಂತ ರಾಷ್ಟ್ರಗಳು ಭರಿಸಬೇಕು" ಎಂದು ಟ್ರಂಪ್ ಹೇಳಿದ್ದಾರೆ.

ಟ್ರಂಪ್ ತಮ್ಮ ಸಂದರ್ಶನದಲ್ಲಿ, ವಾರಾಂತ್ಯದಲ್ಲಿ ನಡೆದ ಸುದೀರ್ಘ ಮಾತುಕತೆಯಲ್ಲಿ ಹಲವು ವಿಷಯಗಳಿಗೆ ಒಪ್ಪಿಗೆ ಸೂಚಿಸಿದ ಬಳಿಕವೂ ಇರಾನ್ ತನ್ನ ನಿಲುವು ಬದಲಾಯಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. "ನಿನ್ನೆ 11 ಗಂಟೆಗಳ ಕಾಲ ಸಭೆ ನಡೆಯಿತು. ಎಲ್ಲ ವಿಷಯಗಳಿಗೂ ಒಪ್ಪಿಗೆ ನೀಡಲಾಯಿತು. ಆದರೆ ಸಭೆಯಿಂದ ಹೊರಬಂದ ಬಳಿಕ ಮತ್ತೆ ಕರೆ ಮಾಡಿ ಕೆಲವು ಬದಲಾವಣೆಗಳನ್ನು ಮಾಡಬೇಕೆಂದು ಕೇಳಿದರು" ಎಂದು ಟ್ರಂಪ್ ಹೇಳಿದ್ದಾರೆ.

ಇರಾನ್ ಕೆಂಡಾಮಂಡಲ

ಡೊನಾಲ್ಡ್ ಟ್ರಂಪ್ ಅವರ ಈ ಹೇಳಿಕೆಗೆ ಇರಾನ್ ಸೇನೆ ತೀವ್ರ ಪ್ರತಿಕ್ರಿಯೆ ನೀಡಿದೆ. ಖಾತಮ್ ಅಲ್-ಅನ್ಬಿಯಾ ಮಿಲಿಟರಿ ಕಮಾಂಡ್ ವಕ್ತಾರರು ವಿಡಿಯೊ ಸಂದೇಶದ ಮೂಲಕ, "ಯಾವುದೇ ಕಾರಣಕ್ಕೂ ಹೋರ್ಮುಜ್ ಜಲಸಂಧಿಯ ನಿರ್ವಹಣೆಯಲ್ಲಿ ಅಮೆರಿಕ ಹಸ್ತಕ್ಷೇಪ ಮಾಡಲು ಇರಾನ್ ಅವಕಾಶ ನೀಡುವುದಿಲ್ಲ" ಎಂದಿದ್ದಾರೆ.

ಅಲ್ಲದೆ, ಹೋರ್ಮುಜ್ ಜಲಸಂಧಿಯ ವಿಚಾರದಲ್ಲಿ ಅಮೆರಿಕದೊಂದಿಗೆ ಯಾವುದೇ ರೀತಿಯ ಸಹಕಾರ ನೀಡುವ ಗಲ್ಫ್ ರಾಷ್ಟ್ರಗಳನ್ನು ಉದ್ದೇಶಿಸಿ, "ಅಂತಹ ಸಹಕಾರವನ್ನು ಯುದ್ಧದ ಕ್ರಮವೆಂದೇ ಪರಿಗಣಿಸಲಾಗುವುದು. ಯುದ್ಧ ಮತ್ತಷ್ಟು ಉಲ್ಬಣವಾಗದಂತೆ ತಡೆಯಲು ಕತಾರ್, ಪಾಕಿಸ್ತಾನ ಮತ್ತು ಒಮಾನ್ ಮಧ್ಯವರ್ತಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ." ಎಂದು ಕಠಿಣ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರಬಿಂದು ಹಾರ್ಮುಜ್

ಇತ್ತೀಚಿನ ದಿನಗಳಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದಿರುವ ವೈಮಾನಿಕ ದಾಳಿ ಹಾಗೂ ಪ್ರತಿದಾಳಿಗಳ ಬಳಿಕ ಹೋರ್ಮುಜ್ ಜಲಸಂಧಿಯ ನಿಯಂತ್ರಣದ ವಿಚಾರ ಎರಡೂ ದೇಶಗಳ ನಡುವಿನ ಪ್ರಮುಖ ವಿವಾದವಾಗಿ ಪರಿಣಮಿಸಿದೆ. ಮಧ್ಯಪ್ರಾಚ್ಯ ಸಂಘರ್ಷದ ಮಧ್ಯಂತರ ಕದನ ವಿರಾಮದ ಬಳಿಕವೂ ಪರಿಸ್ಥಿತಿ ಉದ್ವಿಗ್ನವಾಗಿದ್ದು, ಜಾಗತಿಕ ಇಂಧನ ಸಾಗಣೆ ಮೇಲೆ ಇದರ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಇದರ ನಡುವೆ, ಇರಾನ್‌ನ ಪ್ರಬಲ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೋರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದೆ ಎಂದು ಹೇಳಿಕೊಂಡಿದ್ದರೆ, ಅಮೆರಿಕ ಮಾತ್ರ ಜಲಸಂಧಿ ತೆರೆದಿದ್ದು, ಅದು ಇರಾನ್ ನಿಯಂತ್ರಣದಲ್ಲಿಲ್ಲ ಎಂದು ಪುನರುಚ್ಚರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com