Khamenei ಹತ್ಯೆಗೆ ಪ್ರತೀಕಾರ: Trump ವಿರುದ್ಧ Iran ಕಾನೂನು ಸಮರ, ಜೈಲಿಗಟ್ಟಲು ಮಾಸ್ಟರ್ ಪ್ಲ್ಯಾನ್..!

ಅಮೆರಿಕ–ಇರಾನ್ ಯುದ್ಧಕ್ಕೆ ಸಂಬಂಧಿಸಿದ ಒಟ್ಟು 140 ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿಗಳನ್ನು ಸಿದ್ಧಪಡಿಸಲಾಗಿದೆ. ಅವುಗಳಲ್ಲಿ 74 ಪ್ರಕರಣಗಳು ಅಮೆರಿಕ ಸರ್ಕಾರ ಮತ್ತು ಟ್ರಂಪ್ ವಿರುದ್ಧ ದಾಖಲಾಗಿದ್ದರೆ, 23 ಪ್ರಕರಣಗಳು ಇಸ್ರೇಲ್ ಹಾಗೂ ನೆತನ್ಯಾಹು ವಿರುದ್ಧ ದಾಖಲಾಗಿವೆ.
File photo
ಸಂಗ್ರಹ ಚಿತ್ರ
Updated on

ಟೆಹ್ರಾನ್: ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಇರಾನ್ ಅಧಿಕೃತವಾಗಿ ದೋಷಾರೋಪ ಪಟ್ಟಿ (ಇಂಡೈಟ್‌ಮೆಂಟ್) ಸಲ್ಲಿಸಿದೆ ಎಂದು ಅಲ್ಲಿನ ಮಾಧ್ಯಮಗಳು ಮಂಗಳವಾರ ವರದಿ ಮಾಡಿವೆ.

ಖಮೇನಿ ಸಾವಿಗೆ ಸಂಬಂಧಿಸಿದಂತೆ ಟ್ರಂಪ್ ವಿರುದ್ಧ "ಭೂಮಿಯ ಮೇಲಿನ ಭ್ರಷ್ಟಾಚಾರ" (Corruption on Earth), ಕೊಲೆ, ಉದ್ದೇಶಪೂರ್ವಕ ಹಲ್ಲೆ, ಆಸ್ತಿ ಧ್ವಂಸ ಹಾಗೂ ಭಯೋತ್ಪಾದನಾ ಕೃತ್ಯಗಳಂತಹ ಗಂಭೀರ ಆರೋಪಗಳನ್ನು ದಾಖಲಿಸಲಾಗಿದ್ದು, ಇರಾನ್ ಕಾನೂನಿನ ಪ್ರಕಾರ ಈ ಆರೋಪಗಳಲ್ಲಿ ಕೆಲವು ಸಾಬೀತಾದರೆ ಮರಣದಂಡನೆಯವರೆಗೂ ಶಿಕ್ಷೆ ವಿಧಿಸುವ ಅವಕಾಶವಿದೆ.

ಟೆಹ್ರಾನ್ ಪ್ರಾಸಿಕ್ಯೂಟರ್ ಅಲಿ ಸಲೇಹಿ ಅವರ ಹೇಳಿಕೆಯಂತೆ, ಅಮೆರಿಕ–ಇರಾನ್ ಯುದ್ಧಕ್ಕೆ ಸಂಬಂಧಿಸಿದ ಒಟ್ಟು 140 ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಂಡಿದ್ದು, ದೋಷಾರೋಪ ಪಟ್ಟಿಗಳನ್ನು ಸಿದ್ಧಪಡಿಸಲಾಗಿದೆ. ಅವುಗಳಲ್ಲಿ 74 ಪ್ರಕರಣಗಳು ಅಮೆರಿಕ ಸರ್ಕಾರ ಮತ್ತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದಾಖಲಾಗಿದ್ದರೆ, 23 ಪ್ರಕರಣಗಳು ಇಸ್ರೇಲ್ ಹಾಗೂ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ದಾಖಲಾಗಿವೆ ಎಂದು ಐಆರ್‌ಜಿಸಿ (IRGC)ಗೆ ಸಂಬಂಧಿಸಿದ ಫಾರ್ಸ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಟ್ರಂಪ್ ವಿರುದ್ಧದ ಆರೋಪಗಳಲ್ಲಿ "ಭೂಮಿಯ ಮೇಲಿನ ಭ್ರಷ್ಟಾಚಾರ" ಎಂಬುದು ಅತ್ಯಂತ ಗಂಭೀರ ಆರೋಪವಾಗಿದೆ. ಇರಾನ್ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಆರೋಪವನ್ನು ರಾಷ್ಟ್ರದ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ಸರ್ಕಾರದ ವಿರುದ್ಧ ಅತ್ಯಂತ ಗಂಭೀರ ಅಪರಾಧ ಎಸಗಿದ ಪ್ರಕರಣಗಳಲ್ಲಿ ಬಳಸಲಾಗುತ್ತದೆ.

ಇದಲ್ಲದೆ ಕೊಲೆ, ಉದ್ದೇಶಪೂರ್ವಕ ಹಲ್ಲೆ, ಸಾರ್ವಜನಿಕ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿ ಉಂಟುಮಾಡುವುದು ಮತ್ತು ಭಯೋತ್ಪಾದನಾ ಕೃತ್ಯಗಳಿಗೆ ಸಂಚು ರೂಪಿಸಿರುವ ಆರೋಪಗಳನ್ನೂ ಸೇರಿಸಲಾಗಿದೆ.

ಇರಾನ್ ಕಾನೂನಿನ ಪ್ರಕಾರ, ಕೊಲೆ ಹಾಗೂ "ಭೂಮಿಯ ಮೇಲಿನ ಭ್ರಷ್ಟಾಚಾರ" ಆರೋಪಗಳು ನ್ಯಾಯಾಲಯದಲ್ಲಿ ಸಾಬೀತಾದರೆ ಮರಣದಂಡನೆ ಸೇರಿದಂತೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಬಹುದಾಗಿದೆ. ಆದರೆ, ಅಮೆರಿಕದ ಹಾಲಿ ಅಧ್ಯಕ್ಷರ ವಿರುದ್ಧ ಇರಾನ್ ನ್ಯಾಯಾಂಗದ ಅಧಿಕಾರ ವ್ಯಾಪ್ತಿಗೆ ಹೊರತಾಗಿರುವುದರಿಂದ ಈ ಕ್ರಮವನ್ನು ಹೆಚ್ಚಾಗಿ ರಾಜಕೀಯ ಮತ್ತು ಸಂಕೇತಾತ್ಮಕ ಕಾನೂನು ಕ್ರಮವೆಂದು ವಿಶ್ಲೇಷಕರು ಪರಿಗಣಿಸುತ್ತಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದ ಅಮೆರಿಕ–ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ವೇಳೆ ಅಯತೊಲ್ಲಾ ಅಲಿ ಖಮೇನಿ ಮೃತಪಟ್ಟಿದ್ದರು. ಖಮೇನಿ ಸಾವಿಗೆ ಅಮೆರಿಕ ಮತ್ತು ಇಸ್ರೇಲ್ ನೇರ ಹೊಣೆಗಾರರು ಎಂದು ಇರಾನ್ ಆರಂಭದಿಂದಲೇ ಆರೋಪಿಸುತ್ತಿದ್ದು, ಇದಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹಲವು ಬಾರಿ ಎಚ್ಚರಿಕೆ ನೀಡಿತ್ತು. ಈಗ ಟ್ರಂಪ್ ಹಾಗೂ ಇತರ ಅಮೆರಿಕದ ಅಧಿಕಾರಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿರುವುದು ಆ ನಿಟ್ಟಿನಲ್ಲಿನ ಅತ್ಯಂತ ಕಠಿಣ ಕಾನೂನು ಕ್ರಮವೆಂದು ಪರಿಗಣಿಸಲಾಗಿದೆ.

File photo
ಇರಾಕ್‌ನಲ್ಲಿ ಅಮೆರಿಕ-ಸೌದಿ ಜಂಟಿ ವಾಯುದಾಳಿ: ಇರಾನ್ ಬೆಂಬಲಿತ ಉಗ್ರ ನೆಲೆಗಳು ಧ್ವಂಸ, ಮಧ್ಯಪ್ರಾಚ್ಯ ಮತ್ತೆ ಉದ್ವಿಗ್ನ..!

ಈ ಬೆಳವಣಿಗೆಯ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಇರಾನ್ ಜೊತೆಗಿನ ಮಾತುಕತೆಗಳ ಬಗ್ಗೆ ಆಶಾವಾದ ವ್ಯಕ್ತಪಡಿಸಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಉತ್ತಮ ಮಾತುಕತೆ ನಡೆಯುತ್ತಿದೆ. ಮಾತುಕತೆಯಲ್ಲಿ ಪ್ರಗತಿ ಕಂಡುಬರುತ್ತಿದೆ. ಆದರೆ, ಒಪ್ಪಂದ ಸಾಧ್ಯವಾಗದಿದ್ದರೆ ಇರಾನ್ ವಿರುದ್ಧ ಮತ್ತೆ ಸೇನಾ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ" ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದಕ್ಕೂ ಮೊದಲು ರಾಜತಾಂತ್ರಿಕ ಪ್ರಯತ್ನಗಳಿಗೆ ಹೆಚ್ಚಿನ ಅವಕಾಶ ನೀಡುವ ಉದ್ದೇಶದಿಂದ ಎರಡು ವಾರಗಳ ಕಾಲ ನಡೆದಿದ್ದ ಬಾಂಬ್ ದಾಳಿ ಕಾರ್ಯಾಚರಣೆಯನ್ನು ಟ್ರಂಪ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಆದರೆ, ಅಗತ್ಯವಿದ್ದರೆ ಮತ್ತೆ ಕಠಿಣ ಸೇನಾ ಕ್ರಮ ಕೈಗೊಳ್ಳಲು ಸಿದ್ಧವಿದ್ದೇವೆ ಎಂಬ ಸಂದೇಶವನ್ನೂ ಅವರು ನೀಡಿದ್ದರು.

ಇನ್ನೊಂದೆಡೆ, ಅಮೆರಿಕದೊಂದಿಗೆ ನೇರ ಮಾತುಕತೆ ಆರಂಭಿಸಲಾಗಿದೆ ಎಂಬ ವರದಿಗಳನ್ನು ಇರಾನ್ ಸ್ಪಷ್ಟವಾಗಿ ತಳ್ಳಿಹಾಕಿದೆ.

ಯಾವುದೇ ರಾಜತಾಂತ್ರಿಕ ಸಂಪರ್ಕಗಳು ನೇರವಾಗಿ ನಡೆಯುತ್ತಿಲ್ಲ. ಮಧ್ಯವರ್ತಿಗಳ ಮೂಲಕ ಮಾತ್ರ ಸಂಪರ್ಕ ಮುಂದುವರಿದಿದೆ ಎಂದು ಟೆಹ್ರಾನ್ ಸ್ಪಷ್ಟಪಡಿಸಿದೆ.

ಕಾನೂನು ತಜ್ಞರ ಪ್ರಕಾರ, ಇರಾನ್ ತನ್ನ ದೇಶದ ಗಡಿಗಳ ಹೊರಗೆ ಅಥವಾ ಅಮೆರಿಕದ ಹಾಲಿ ಅಧ್ಯಕ್ಷರ ವಿರುದ್ಧ ಈ ಆರೋಪಗಳನ್ನು ಜಾರಿಗೊಳಿಸುವ ಅಧಿಕಾರ ಹೊಂದಿಲ್ಲ. ಆದ್ದರಿಂದ ಟ್ರಂಪ್ ವಿರುದ್ಧದ ಈ ದೋಷಾರೋಪ ಪಟ್ಟಿ ಪ್ರಾಯೋಗಿಕವಾಗಿ ಯಾವುದೇ ತಕ್ಷಣದ ಕಾನೂನು ಪರಿಣಾಮ ಉಂಟುಮಾಡದಿದ್ದರೂ, ಖಮೇನಿ ಹತ್ಯೆಗೆ ಅಮೆರಿಕ ಮತ್ತು ಅದರ ನಾಯಕತ್ವವನ್ನು ಅಧಿಕೃತವಾಗಿ ಹೊಣೆಗಾರರನ್ನಾಗಿ ಗುರುತಿಸುವ ಇರಾನ್‌ನ ರಾಜಕೀಯ ಮತ್ತು ರಾಜತಾಂತ್ರಿಕ ಸಂದೇಶವಾಗಿ ಇದು ಮಹತ್ವ ಪಡೆದುಕೊಂಡಿದೆ.

ಅಮೆರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮುಂದುವರಿದಿರುವ ಸಂದರ್ಭದಲ್ಲಿ, ಒಂದೆಡೆ ರಾಜತಾಂತ್ರಿಕ ಮಾತುಕತೆಗಳು ಸಾಗುತ್ತಿದ್ದರೆ ಮತ್ತೊಂದೆಡೆ ಕಾನೂನು ಹಾಗೂ ರಾಜಕೀಯ ಮಟ್ಟದಲ್ಲಿ ಪರಸ್ಪರ ಒತ್ತಡ ಹೇರುವ ಪ್ರಯತ್ನಗಳು ತೀವ್ರಗೊಳ್ಳುತ್ತಿರುವುದು ಮಧ್ಯಪ್ರಾಚ್ಯದ ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com