ಹಿಜ್ಬುಲ್ಲಾಗೆ ಕಟ್ಟುನಿಟ್ಟಿನ ಕಡಿವಾಣ: ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗೆ ಇಸ್ರೇಲ್-ಲೆಬನಾನ್ ಮಹತ್ವದ ಒಪ್ಪಂದ, ಅಮೆರಿಕಾ ಮಧ್ಯಸ್ಥಿಕೆ..!

ಕದನ ವಿರಾಮ ಪರಿಣಾಮಕಾರಿಯಾಗಿರಲು ಹಿಜ್ಬುಲ್ಲಾ ಸಂಘಟನೆಯಿಂದ ಯಾವುದೇ ರೀತಿಯ ದಾಳಿ ನಡೆಯಬಾರದು ಹಾಗೂ ಲಿಟಾನಿ ನದಿಯ ದಕ್ಷಿಣ ಭಾಗದಿಂದ ಅದರ ಎಲ್ಲಾ ಶಸ್ತ್ರಸಜ್ಜಿತ ಘಟಕಗಳನ್ನು ತೆರವುಗೊಳಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
Rescue workers use an excavator, as they search for victims under the rubble of a building.
ಲೆಬನಾನ್‌ನ ದಕ್ಷಿಣ ಬಂದರು ನಗರವಾದ ಟೈರ್‌ನಲ್ಲಿ ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಸೋಮವಾರ ಹಾನಿಗೊಳಗಾದ ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಲುಕಿರುವವರಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವುದು.
Updated on

ಬೈರೂತ್: ಹಲವು ತಿಂಗಳುಗಳಿಂದ ಮುಂದುವರಿದಿರುವ ಗಡಿ ಸಂಘರ್ಷ ಮತ್ತು ವೈಮಾನಿಕ ದಾಳಿಗಳ ನಡುವೆ ಇಸ್ರೇಲ್ ಹಾಗೂ ಲೆಬನಾನ್ ಹೊಸ ಕದನ ವಿರಾಮ ಒಪ್ಪಂದವನ್ನು ನವೀಕರಿಸಲು ಒಪ್ಪಿಕೊಂಡಿವೆ.

ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ವಾಷಿಂಗ್ಟನ್‌ನಲ್ಲಿ ನಡೆದ ನಾಲ್ಕನೇ ಸುತ್ತಿನ ಮಾತುಕತೆಯ ಬಳಿಕ ಉಭಯ ದೇಶಗಳು ಲೆಬನಾನ್‌ನ ದಕ್ಷಿಣ ಭಾಗದಲ್ಲಿ ಹಿಜ್ಬುಲ್ಲಾ ಮುಕ್ತ ವಿಶೇಷ ಭದ್ರತಾ ವಲಯಗಳನ್ನು ರಚಿಸಲು ನಿರ್ಧರಿಸಿವೆ.

ಅಮೆರಿಕ ವಿದೇಶಾಂಗ ಇಲಾಖೆಯಲ್ಲಿ ನಡೆದ ಚರ್ಚೆಗಳ ಬಳಿಕ ಬಿಡುಗಡೆಗೊಂಡ ಜಂಟಿ ಹೇಳಿಕೆಯಲ್ಲಿ, ಕದನ ವಿರಾಮ ಪರಿಣಾಮಕಾರಿಯಾಗಿರಲು ಹಿಜ್ಬುಲ್ಲಾ ಸಂಘಟನೆಯಿಂದ ಯಾವುದೇ ರೀತಿಯ ದಾಳಿ ನಡೆಯಬಾರದು ಹಾಗೂ ಲಿಟಾನಿ ನದಿಯ ದಕ್ಷಿಣ ಭಾಗದಿಂದ ಅದರ ಎಲ್ಲಾ ಶಸ್ತ್ರಸಜ್ಜಿತ ಘಟಕಗಳನ್ನು ತೆರವುಗೊಳಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ಲಿಟಾನಿ ನದಿ ಇಸ್ರೇಲ್-ಲೆಬನಾನ್ ಗಡಿಯಿಂದ ಸುಮಾರು 30 ಕಿಲೋಮೀಟರ್ ಉತ್ತರದಲ್ಲಿದ್ದು, ಈ ಪ್ರದೇಶವನ್ನು ಸಂಘರ್ಷ ಮುಕ್ತ ವಲಯವನ್ನಾಗಿ ಪರಿವರ್ತಿಸುವುದು ಒಪ್ಪಂದದ ಪ್ರಮುಖ ಅಂಶವಾಗಿದೆ.

ಒಪ್ಪಂದದ ಪ್ರಕಾರ, ಭದ್ರತಾ ವಲಯಗಳ ಸಂಪೂರ್ಣ ನಿಯಂತ್ರಣವನ್ನು ಲೆಬನಾನ್ ಸೇನೆ ವಹಿಸಿಕೊಳ್ಳಲಿದೆ. ಈ ಮೂಲಕ ಗಡಿಭಾಗದಲ್ಲಿ ಶಾಂತಿ ಸ್ಥಾಪನೆಗೆ ಅವಕಾಶ ಸಿಗಲಿದ್ದು, ಭವಿಷ್ಯದಲ್ಲಿ ಸಮಗ್ರ ಭದ್ರತಾ ಮತ್ತು ಶಾಂತಿ ಒಪ್ಪಂದಕ್ಕೆ ದಾರಿ ಮಾಡಿಕೊಡಬಹುದು ಎಂದು ಎರಡೂ ದೇಶಗಳು ವಿಶ್ವಾಸ ವ್ಯಕ್ತಪಡಿಸಿವೆ.

ಜಂಟಿ ಹೇಳಿಕೆಯಲ್ಲಿ, ಲೆಬನಾನ್‌ನ ಭವಿಷ್ಯದ ಕುರಿತು ನಿರ್ಧಾರ ಕೈಗೊಳ್ಳುವ ಹಕ್ಕು ಕೇವಲ ಲೆಬನಾನ್ ಮತ್ತು ಇಸ್ರೇಲ್ ಸರ್ಕಾರಗಳಿಗಷ್ಟೇ ಸೇರಿದೆ ಎಂದು ತಿಳಿಸಲಾಗಿದೆ.

ಯಾವುದೇ ರಾಷ್ಟ್ರ ಅಥವಾ ಶಸ್ತ್ರಸಜ್ಜಿತ ಸಂಘಟನೆ ಲೆಬನಾನ್‌ನ ಭವಿಷ್ಯವನ್ನು ಒತ್ತೆಯಾಳಾಗಿ ಬಳಸಲು ಅವಕಾಶ ನೀಡಬಾರದು ಎಂದು ಎರಡೂ ದೇಶಗಳು ಅಭಿಪ್ರಾಯಪಟ್ಟಿವೆ.

ಮಾತುಕತೆಗಳಲ್ಲಿ ಹಿಜ್ಬುಲ್ಲಾ ನೇರವಾಗಿ ಭಾಗಿಯಾಗಿಲ್ಲ. ಕಳೆದ ತಿಂಗಳಿನಿಂದಲೂ ರಾಯಭಾರಿ ಮಟ್ಟದಲ್ಲಿ ವಾಷಿಂಗ್ಟನ್‌ನಲ್ಲಿ ಈ ಮಾತುಕತೆಗಳು ನಡೆಯುತ್ತಿವೆ. ಅಲ್ಲದೆ, ಮಧ್ಯಪ್ರಾಚ್ಯದಲ್ಲಿ ಅಸ್ಥಿರತೆಯನ್ನು ಉಂಟು ಮಾಡುತ್ತಿರುವ ಚಟುವಟಿಕೆಗಳು ಮತ್ತು ಪ್ರಾಕ್ಸಿ ಸಂಘಟನೆಗಳಿಗೆ ನೀಡಲಾಗುತ್ತಿರುವ ಬೆಂಬಲವನ್ನು ಉಭಯ ದೇಶಗಳು ಖಂಡಿಸಿವೆ. ಜಂಟಿ ಹೇಳಿಕೆಯಲ್ಲಿ ಇರಾನ್‌ನ ಪ್ರಾದೇಶಿಕ ಚಟುವಟಿಕೆಗಳ ಬಗ್ಗೆಯೂ ಪರೋಕ್ಷ ಟೀಕೆ ಮಾಡಲಾಗಿದೆ.

ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಲೆಬನಾನ್ ಸಂಘರ್ಷದ ಕುರಿತ ಮಾತುಕತೆಗಳನ್ನು ಇರಾನ್ ವಿರುದ್ಧದ ಯುದ್ಧ ಮತ್ತು ಅಣು ಕಾರ್ಯಕ್ರಮ ಸಂಬಂಧಿತ ಚರ್ಚೆಗಳಿಂದ ಪ್ರತ್ಯೇಕವಾಗಿ ಪರಿಗಣಿಸಬೇಕೆಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ, ಲೆಬನಾನ್ ಮೇಲೆ ಯಾವುದೇ ದೊಡ್ಡ ಪ್ರಮಾಣದ ದಾಳಿ ನಡೆದರೆ ಯುದ್ಧ ಮತ್ತೆ ತೀವ್ರ ಸ್ವರೂಪ ಪಡೆಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

Rescue workers use an excavator, as they search for victims under the rubble of a building.
ನೆತನ್ಯಾಹು 'ಹುಚ್ಚ'; ಇರಾನ್ ಜೊತೆಗಿನ ಶಾಂತಿ ಮಾತುಕತೆ ಹಳ್ಳಹಿಡಿಸುತ್ತಿದ್ದಾರೆ: ಡೊನಾಲ್ಡ್ ಟ್ರಂಪ್

ಕದನ ವಿರಾಮ ಘೋಷಣೆಯ ನಡುವೆಯೂ ಮುಂದುವರಿದ ದಾಳಿಗಳು

ಈ ನಡುವೆ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೂ ನೆಲಮಟ್ಟದಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿಯೇ ಉಳಿದಿದೆ. ಬುಧವಾರ ಲೆಬನಾನ್‌ನಿಂದ ಇಸ್ರೇಲ್ ಕಡೆಗೆ ಹಾರಿಬಂದ ಎರಡು ಕ್ಷಿಪಣಿಗಳು ಮತ್ತು ಒಂದು ಡ್ರೋನ್ ಮಾದರಿಯ ವಿಮಾನವನ್ನು ತಡೆದಿರುವುದಾಗಿ ಇಸ್ರೇಲ್ ಸೇನೆ ತಿಳಿಸಿದೆ.

ಇನ್ನೊಂದೆಡೆ, ಇಸ್ರೇಲ್ ಸೇನೆ ಕದನ ವಿರಾಮ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿರುವ ಹಿಜ್ಬುಲ್ಲಾ, ಉತ್ತರ ಇಸ್ರೇಲ್‌ನಲ್ಲಿದ್ದ ಸೈನಿಕರ ಮೇಲೆ ರಾಕೆಟ್ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಈ ಬೆಳವಣಿಗೆಗಳು ಹೊಸ ಒಪ್ಪಂದದ ಪರಿಣಾಮಕಾರಿತ್ವದ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿವೆ.

ಕದನ ವಿರಾಮ ಜಾರಿಯಾಗಬೇಕಿದ್ದ ದಿನಾಂಕ ಏಪ್ರಿಲ್ 17 ಆಗಿದ್ದರೂ, ಅದರ ಬಳಿಕವೂ ಉಭಯ ರಾಷ್ಟ್ರಗಳ ಕಡೆಯಿಂದ ದಾಳಿಗಳು ನಿರಂತರವಾಗಿ ನಡೆದಿವೆ. ಪ್ರತಿಯೊಂದು ದಾಳಿಗೂ ಎದುರಾಳಿ ಮೊದಲು ನಿಯಮ ಉಲ್ಲಂಘಿಸಿದೆ ಎಂಬ ಸಮರ್ಥನೆಯನ್ನು ಎರಡೂ ಪಕ್ಷಗಳು ನೀಡುತ್ತಿವೆ.

ಲೆಬನಾನ್‌ನಲ್ಲಿ ಭಾರೀ ಹಾನಿ

ಬುಧವಾರ ಇಸ್ರೇಲ್ ನಡೆಸಿದ ದಾಳಿಗಳಲ್ಲಿ ಬೈರೂತ್‌ನಿಂದ ಹೊರಹೋಗುವ ಪ್ರಮುಖ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನ ಗುರಿಯಾಗಿರುವುದಾಗಿ ಲೆಬನಾನ್‌ನ ಸರ್ಕಾರಿ ಸುದ್ದಿ ಸಂಸ್ಥೆ ತಿಳಿಸಿದೆ. ದಕ್ಷಿಣ ಲೆಬನಾನ್‌ನ 20ಕ್ಕೂ ಹೆಚ್ಚು ಪ್ರದೇಶಗಳ ಮೇಲೂ ವೈಮಾನಿಕ ದಾಳಿ ನಡೆದಿರುವ ವರದಿಗಳು ಬಂದಿವೆ.

ದಕ್ಷಿಣದ ಟೈರ್ ನಗರದ ಸಮೀಪದ ಅಲ್-ಹಾವ್ಶ್ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಸಿರಿಯನ್ನರು ಮತ್ತು ಇಬ್ಬರು ಪ್ಯಾಲೆಸ್ತೀನಿಯರು ಮೃತಪಟ್ಟಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ. ಆದರೆ, ಇಂತಹ ದಾಳಿ ನಡೆದಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಇಸ್ರೇಲ್ ಸೇನೆ ಪ್ರತಿಕ್ರಿಯಿಸಿದೆ.

ಮತ್ತೊಂದು ದಾಳಿಯಲ್ಲಿ ಆ್ಯಂಬುಲೆನ್ಸ್'ನ್ನು ಗುರಿಯಾಗಿಸಲಾಗಿದ್ದು, ಹಿಜ್ಬುಲ್ಲಾದ ಮಿತ್ರ ಸಂಘಟನೆಯಾದ ಅಮಲ್ ಚಳವಳಿಗೆ ಸಂಬಂಧಿಸಿದ ಇಬ್ಬರು ವೈದ್ಯಕೀಯ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಯುದ್ಧ ಆರಂಭವಾದ ಬಳಿಕ ಇದೂವರೆಗೆ 130ಕ್ಕೂ ಹೆಚ್ಚು ಆರೋಗ್ಯ ಮತ್ತು ತುರ್ತು ಸೇವಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲೆಬನಾನ್ ಸೇನೆಯ ಯೋಧ ಕೂಡ ಇಸ್ರೇಲಿ ದಾಳಿಯಲ್ಲಿ ಮೃತಪಟ್ಟಿದ್ದು, ಇನ್ನಿಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಸೇನಾ ವಾಹನಗಳು ಮತ್ತು ಶಿಬಿರಗಳನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸಲಾಗುತ್ತಿದೆ ಎಂದು ಲೆಬನಾನ್ ಸೇನೆ ಆರೋಪಿಸಿದೆ.

ಇತ್ತೀಚೆಗೆ ಇಸ್ರೇಲ್ ಸೇನೆ, ಹಿಜ್ಬುಲ್ಲಾ ಸದಸ್ಯರು ಟೈರ್ ನಗರದ ಕ್ರೈಸ್ತರ ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆರೋಪಿಸಿ, ಅಲ್ಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಿತ್ತು.

ಈ ಬೆಳವಣಿಗೆಯ ಬಳಿಕ ಟೈರ್ ನಗರವನ್ನು ಯಾವುದೇ ಶಸ್ತ್ರಸಜ್ಜಿತ ಸಂಘಟನೆಯ ಹಾಜರಾತಿ ಇಲ್ಲದ "ಮುಕ್ತ ನಗರ"ವನ್ನಾಗಿ ಘೋಷಿಸಬೇಕು ಎಂದು ಸ್ಥಳೀಯರು, ಬುದ್ಧಿಜೀವಿಗಳು ಮತ್ತು ನಾಗರಿಕರು ಮನವಿ ಸಲ್ಲಿಸಿದ್ದಾರೆ.

180ಕ್ಕೂ ಹೆಚ್ಚು ಮಂದಿ ಈ ಮನವಿಗೆ ಸಹಿ ಹಾಕಿದ್ದು, ನಗರದಲ್ಲಿ ಲೆಬನಾನ್ ಸೇನೆಯನ್ನೇ ನಿಯೋಜಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇದೇ ರೀತಿಯ ಮತ್ತೊಂದು ಮನವಿ ನಬತಿಯೇಹ್ ನಗರಕ್ಕೂ ಸಂಬಂಧಿಸಿ 200ಕ್ಕೂ ಹೆಚ್ಚು ಬೆಂಬಲಿಗರ ಸಹಿಯನ್ನು ಪಡೆದುಕೊಂಡಿದೆ.

ಶಾಂತಿ ಒಪ್ಪಂದದತ್ತ ಹೆಜ್ಜೆ ಇಡಲು ಇಸ್ರೇಲ್ ಮತ್ತು ಲೆಬನಾನ್ ಪ್ರಯತ್ನಿಸುತ್ತಿದ್ದರೂ, ನೆಲಮಟ್ಟದಲ್ಲಿ ನಡೆಯುತ್ತಿರುವ ಕ್ಷಿಪಣಿ, ರಾಕೆಟ್ ಹಾಗೂ ವೈಮಾನಿಕ ದಾಳಿಗಳು ಪರಿಸ್ಥಿತಿಯನ್ನು ಇನ್ನೂ ಸಂಕೀರ್ಣಗೊಳಿಸಿವೆ.

ಜೂನ್ 22ರ ವಾರದಲ್ಲಿ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದ್ದು, ಶಾಶ್ವತ ಶಾಂತಿಯತ್ತ ಪ್ರಗತಿ ಸಾಧಿಸುವ ನಿರೀಕ್ಷೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com