ಅಮೆರಿಕದೊಂದಿಗೆ ಒಪ್ಪಂದ ಹಿಂದೆಂದಿಗಿಂತಲೂ ಸಮೀಪದಲ್ಲಿದೆ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ; ಪೋಸ್ಟ್ ಹಂಚಿಕೊಂಡ ಡೊನಾಲ್ಡ್ ಟ್ರಂಪ್

ಆದರೆ ಸಾರ್ವಜನಿಕವಾಗಿ ಉಭಯ ದೇಶಗಳ ಮಾತುಕತೆ ನಿಲುವುಗಳಲ್ಲಿ ಇನ್ನೂ ಸಾಕಷ್ಟು ಭಿನ್ನಾಭಿಪ್ರಾಯಗಳು ಕಾಣಿಸುತ್ತಿವೆ. ಇರಾನ್‌ನ ಸರ್ಕಾರಿ ಮಾಧ್ಯಮಗಳು ಪ್ರಕಟಿಸಿರುವ ಒಪ್ಪಂದದ ಕರಡು ವಿವರಗಳು, ಅಮೆರಿಕ ಹಲವು ವರ್ಷಗಳಿಂದ ಪ್ರತಿಪಾದಿಸುತ್ತಿರುವ ಪ್ರಮುಖ ಷರತ್ತುಗಳಿಗೆ ಸಂಪೂರ್ಣ ವಿರುದ್ಧವಾಗಿವೆ.
Iranian Foreign Minister Abbas Araghchi
ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ
Updated on

ಟೆಹ್ರಾನ್: ಮಧ್ಯಪ್ರಾಚ್ಯ ಯುದ್ಧಕ್ಕೆ ತೆರೆ ಎಳೆಯುವ ಉದ್ದೇಶದೊಂದಿಗೆ ಅಮೆರಿಕದೊಂದಿಗೆ ನಡೆಯುತ್ತಿರುವ ಒಪ್ಪಂದವು ಅಂತಿಮ ಹಂತಕ್ಕೆ ತಲುಪಿದ್ದು, ಹಿಂದೆಂದಿಗಿಂತಲೂ ಮಾತುಕತೆ ಅತಿ ಸಮೀಪದಲ್ಲಿದೆ ಎಂದು ಇರಾನ್‌ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ನಿನ್ನೆ ಶುಕ್ರವಾರ ಹೇಳಿದ್ದಾರೆ. ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹಾಗೂ ಪ್ರಮುಖ ಮಧ್ಯವರ್ತಿಯಾಗಿರುವ ಪಾಕಿಸ್ತಾನವೂ ಒಪ್ಪಂದದ ಕುರಿತು ಆಶಾವಾದ ಹೆಚ್ಚುತ್ತಿದೆ ಎಂದು ಹೇಳಿದೆ.

ಆದರೆ ಸಾರ್ವಜನಿಕವಾಗಿ ಉಭಯ ದೇಶಗಳ ಮಾತುಕತೆ ನಿಲುವುಗಳಲ್ಲಿ ಇನ್ನೂ ಸಾಕಷ್ಟು ಭಿನ್ನಾಭಿಪ್ರಾಯಗಳು ಕಾಣಿಸುತ್ತಿವೆ. ಇರಾನ್‌ನ ಸರ್ಕಾರಿ ಮಾಧ್ಯಮಗಳು ಪ್ರಕಟಿಸಿರುವ ಒಪ್ಪಂದದ ಕರಡು ವಿವರಗಳು, ಅಮೆರಿಕ ಹಲವು ವರ್ಷಗಳಿಂದ ಪ್ರತಿಪಾದಿಸುತ್ತಿರುವ ಪ್ರಮುಖ ಷರತ್ತುಗಳಿಗೆ ಸಂಪೂರ್ಣ ವಿರುದ್ಧವಾಗಿವೆ.

ಇರಾನ್ ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಕಿಡಿಕಾರಿದ್ದು, ಮಾತುಕತೆಯಲ್ಲಿ ಪ್ರಾಮಾಣಿಕತೆ ತೋರಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಡೊನಾಲ್ಡ್ ಟ್ರಂಪ್, ಇರಾನ್ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವಿವರಗಳು ಲಿಖಿತ ರೂಪದಲ್ಲಿ ಒಪ್ಪಿಗೆಯಾದ ಷರತ್ತುಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಇವರೊಂದಿಗೆ ವ್ಯವಹರಿಸುವುದು ಅತ್ಯಂತ ಅವಮಾನಕರವಾಗಿದೆ. ಅವರು ತಕ್ಷಣ ತಮ್ಮ ನಿಲುವನ್ನು ಸರಿಪಡಿಸಿಕೊಳ್ಳಬೇಕು ಎಂದು ಟ್ರಂಪ್ ಎಚ್ಚರಿಸಿದ್ದಾರೆ. ಆದರೆ ಈ ವಿವಾದವನ್ನು ಅರಾಘ್ಚಿ ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.

ಪಾಕಿಸ್ತಾನ ತಿಳುವಳಿಕೆ ಒಪ್ಪಂದ (ಮೆಮೊರಾಂಡಂ ಆಫ್ ಅಂಡರ್‌ಸ್ಟ್ಯಾಂಡಿಂಗ್) ಅಂತಿಮಗೊಳ್ಳಲು ಎಂದಿಗೂ ಇಷ್ಟು ಸಮೀಪದಲ್ಲಿರಲಿಲ್ಲ ಎಂದು ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಮೆರಿಕ-ಇರಾನ್ ನಡುವಿನ ಹಿಂದಿನ ಮಾತುಕತೆಗಳಿಗೆ ಆತಿಥ್ಯ ವಹಿಸಿದ್ದ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ ನ್ನು ಅವರು ಉಲ್ಲೇಖಿಸಿದ್ದಾರೆ.

ಒಪ್ಪಂದ ಅಂತಿಮಗೊಳ್ಳುವವರೆಗೂ ಅದರ ವಿಷಯದ ಬಗ್ಗೆ ಮಾಧ್ಯಮಗಳು ಊಹಾಪೋಹಗಳಿಗೆ ಅವಕಾಶ ನೀಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ಇದಾದ ಬಳಿಕ ಡೊನಾಲ್ಡ್ ಟ್ರಂಪ್, ಅಬ್ಬಾಸ್ ಅರಾಘ್ಚಿ ಅವರ ಸಂದೇಶದ ಸ್ಕ್ರೀನ್‌ಶಾಟ್ ನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅವರ ಪ್ರಾಮಾಣಿಕತೆಯ ಕೊರತೆ ಆರೋಪವನ್ನು ತಳ್ಳಿಹಾಕಿರುವ ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಘಾಈ, ಅಮೆರಿಕದೊಂದಿಗೆ ಹೆಚ್ಚಿನ ವಿಷಯಗಳಲ್ಲಿ ಈಗಾಗಲೇ ಒಪ್ಪಂದವಾಗಿದೆ ಎಂದು ಹೇಳಿದ್ದಾರೆ.

ಒಗ್ಗಟ್ಟಿನ ನಿರ್ಧಾರ ಕೈಗೊಳ್ಳಲು ಇರಾನ್‌ನಲ್ಲಿ ಪ್ರಸ್ತುತ ಮಹತ್ವದ ಸಭೆ ನಡೆಯುತ್ತಿದೆ. ನಾವು ಅಂತಿಮ ನಿರ್ಣಯದ ಹಂತದಲ್ಲಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಕಳೆದ ಹಲವು ವಾರಗಳಿಂದ ನಡೆಯುತ್ತಿರುವ ಮಾತುಕತೆಗಳು ಪದೇ ಪದೇ ಸ್ಥಗಿತಗೊಂಡಿದ್ದವು. ಏಪ್ರಿಲ್‌ನಲ್ಲಿ ಕದನ ವಿರಾಮ ಘೋಷಣೆಯಾದರೂ ಬೆದರಿಕೆಗಳು ಮತ್ತು ದಾಳಿಗಳು ಮುಂದುವರಿದಿದ್ದವು. ಈ ನಡುವೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಲವು ಬಾರಿ ಒಪ್ಪಂದ ಬಹುತೇಕ ಅಂತಿಮಗೊಂಡಿದೆ ಎಂದು ಹೇಳಿದ್ದರೂ, ಮಾತುಕತೆಗಳು ಮತ್ತೆ ಮತ್ತೆ ಮುಂದೂಡಲ್ಪಟ್ಟಿದ್ದವು.

'ನೂರು ಪ್ರತಿಶತ ಒಪ್ಪಂದ ಖಚಿತವಲ್ಲ'

ಆರಂಭಿಕ ಮಾತುಕತೆಗಳಿಂದಲೂ ಪ್ರಮುಖ ಮಧ್ಯವರ್ತಿಯಾಗಿರುವ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಶರೀಫ್, ಶಾಂತಿ ಒಪ್ಪಂದದ ಅಂತಿಮ ಕರಡು ಈಗಾಗಲೇ ಸಿದ್ಧವಾಗಿದೆ ಎಂದು ದೃಢಪಡಿಸಿದ್ದಾರೆ.

ಶಾಂತಿ ಈಗಿರುವಷ್ಟು ಸಮೀಪದಲ್ಲಿದ್ದ ಸಂದರ್ಭ ಹಿಂದೆಂದೂ ಇರಲಿಲ್ಲ. ಆದರೆ ಒಪ್ಪಂದದ ಬಗ್ಗೆ ಸಾಕಷ್ಟು ತಪ್ಪು ಮಾಹಿತಿಗಳು ಹರಿದಾಡುತ್ತಿವೆ ಎಂದು ಅವರು ಹೇಳಿದ್ದಾರೆ.

ಅಮೆರಿಕದ ಹಿರಿಯ ಅಧಿಕಾರಿಯೊಬ್ಬರೂ ಮುಂದಿನ ಕೆಲವೇ ದಿನಗಳಲ್ಲಿ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗ್ಗೆ ನಾನು ಈ ಒಪ್ಪಂದಕ್ಕೆ ಶೇಕಡಾ 75ರಷ್ಟು ವಿಶ್ವಾಸ ಹೊಂದಿದ್ದೆ. ಈಗ ಅದು 80ರಿಂದ 85 ಶೇಕಡಾದಷ್ಟಿದೆ. ಆದರೆ ಇನ್ನೂ ನೂರು ಪ್ರತಿಶತ ಖಚಿತವಲ್ಲ ಎಂದು ಅವರು ಪತ್ರಕರ್ತರಿಗೆ ತಿಳಿಸಿದ್ದಾರೆ.

ಇದಕ್ಕೂ ನಡುವೆ, ಸ್ವಿಟ್ಜರ್‌ಲ್ಯಾಂಡ್ ವಿದೇಶಾಂಗ ಸಚಿವಾಲಯ ಅಮೆರಿಕ ಮತ್ತು ಇರಾನ್ ಎರಡರೊಂದಿಗೂ ಸಂಪರ್ಕದಲ್ಲಿದ್ದು, ಉಭಯ ದೇಶಗಳು ಒಪ್ಪಿದರೆ ಒಪ್ಪಂದಕ್ಕೆ ಸಹಿ ಹಾಕಲು ಸ್ವಿಟ್ಜರ್‌ಲ್ಯಾಂಡ್ ಆತಿಥ್ಯ ವಹಿಸಲು ಸಿದ್ಧವಿದೆ ಎಂದು ತಿಳಿಸಿದೆ.

ಅಮೆರಿಕದ ಮಿತ್ರ ರಾಷ್ಟ್ರವಾದ ಇಸ್ರೇಲ್, ಯಾವುದೇ ಒಪ್ಪಂದವಾದರೂ ಇರಾನ್ ತನ್ನ ಸಮೃದ್ಧೀಕರಿಸಿದ ಯುರೇನಿಯಂ ಸಂಗ್ರಹವನ್ನು ಸಂಪೂರ್ಣವಾಗಿ ತ್ಯಜಿಸಬೇಕು ಎಂದು ಡೊನಾಲ್ಡ್ ಟ್ರಂಪ್ ಭರವಸೆ ನೀಡಿದ್ದರು ಎಂದು ಹೇಳಿದೆ. ಆದರೆ ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ಐಆರ್‌ಎನ್‌ಎ, ಈ ವಿಷಯ ಮಾತುಕತೆಯ ಅಜೆಂಡಾದಲ್ಲಿಲ್ಲ ಎಂದು ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com