ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗಿನ ಮೇಲೆ ಡ್ರೋನ್ ದಾಳಿ ಎಂಬ ಡೊನಾಲ್ಡ್ ಟ್ರಂಪ್ ಆರೋಪ ಸಂಪೂರ್ಣ ಆಧಾರರಹಿತ: ಇರಾನ್

ಈ ವಾರ ಒಮಾನ್ ಕೊಲ್ಲಿಯಲ್ಲಿ ಅಮೆರಿಕ ಸೇನೆ ವ್ಯಾಪಾರ ಹಡಗುಗಳ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವೇ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಎಂದು ರಾಯಭಾರ ಕಚೇರಿ ಟೀಕಿಸಿದೆ.
Representational image
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ ನಡೆಸಿದೆ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆರೋಪವು ಸಂಪೂರ್ಣವಾಗಿ ಆಧಾರರಹಿತ ಎಂದು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿ ಹೇಳಿದೆ.

ಇದೇ ವೇಳೆ, ಈ ವಾರ ಒಮಾನ್ ಕೊಲ್ಲಿಯಲ್ಲಿ ಅಮೆರಿಕ ಸೇನೆ ವ್ಯಾಪಾರ ಹಡಗುಗಳ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು ಮೃತಪಟ್ಟಿರುವ ವಿಚಾರದಿಂದ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನವೇ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಎಂದು ರಾಯಭಾರ ಕಚೇರಿ ಟೀಕಿಸಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಹಡಗಿನ ಮೇಲೆ ಇರಾನ್ ದಾಳಿ ನಡೆಸಿದೆ ಎಂಬ ಅಮೆರಿಕ ಅಧ್ಯಕ್ಷರ ಆರೋಪ ಸಂಪೂರ್ಣ ಆಧಾರರಹಿತವಾಗಿದೆ ಎಂದು ಇರಾನ್ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ತಿಳಿಸಿದೆ.

Representational image
ಅಮೆರಿಕದೊಂದಿಗೆ ಒಪ್ಪಂದ ಹಿಂದೆಂದಿಗಿಂತಲೂ ಸಮೀಪದಲ್ಲಿದೆ: ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ; ಪೋಸ್ಟ್ ಹಂಚಿಕೊಂಡ ಡೊನಾಲ್ಡ್ ಟ್ರಂಪ್

ಒಂದು ವಾರದೊಳಗೆ ಅಮೆರಿಕ ಮೂರು ಭಾರತೀಯ ಹಡಗುಗಳ ಮೇಲೆ ದಾಳಿ ನಡೆಸಿ ಮೂವರು ನಿರಪರಾಧಿ ಭಾರತೀಯ ನಾವಿಕರನ್ನು ಕೊಂದಿರುವ ಕಠೋರ ಸತ್ಯದಿಂದ ಸಾರ್ವಜನಿಕರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನ ಇದಾಗಿದೆ. ಇದು ಅತ್ಯಂತ ದುರದೃಷ್ಟಕರ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ನಿನ್ನೆ ಡೊನಾಲ್ಡ್ ಟ್ರಂಪ್ ಈ ಆರೋಪ ಮಾಡಿದ್ದು, ಅದಕ್ಕೂ ಕೆಲವೇ ಗಂಟೆಗಳ ಮೊದಲು ಭಾರತ ಅಮೆರಿಕದ ಕಾರ್ಯನಿರ್ವಾಹಕ ರಾಯಭಾರಿ ಜೇಸನ್ ಮಿಕ್ಸ್ ಅವರನ್ನು ವಿದೇಶಾಂಗ ಸಚಿವಾಲಯಕ್ಕೆ ಕರೆಸಿ, ಒಮಾನ್ ಕರಾವಳಿಯ ಸಮೀಪ ಭಾರತೀಯ ಸಿಬ್ಬಂದಿ ಇದ್ದ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ಸೇನೆ ನಡೆಸಿದ ಮಾರಕ ಮತ್ತು ಪ್ರಾಣಾಂತಿಕ ದಾಳಿಗಳು ಸ್ವೀಕಾರಾರ್ಹವಲ್ಲ ಎಂದು ತಿಳಿಸಿತ್ತು.

ಈ ವಾರ ಮೂರು ಭಾರತೀಯರ ಸಾವಿಗೆ ಕಾರಣವಾದ ಮೂರು ಪ್ರತ್ಯೇಕ ಹಡಗುಗಳ ಮೇಲಿನ ದಾಳಿಗಳ ಕುರಿತು ಭಾರತ ಜೇಸನ್ ಮಿಕ್ಸ್ ಅವರನ್ನು ಕರೆಸಿಕೊಂಡಿರುವುದು ಇದು ಎರಡನೇ ಬಾರಿ.

ಜೂನ್ 8ರಂದು ಪಲಾವ್ ಧ್ವಜ ಹೊಂದಿದ್ದ ಮಾರಿವೆಕ್ಸ್ ತೈಲ ಟ್ಯಾಂಕರ್ ಮೇಲೆ ಅಮೆರಿಕ ಪಡೆ ದಾಳಿ ನಡೆಸಿತ್ತು. ಈ ಹಡಗಿನಲ್ಲಿ 24 ಭಾರತೀಯ ನಾವಿಕರಿದ್ದರು. ದಾಳಿಯಿಂದ ಹಡಗು ಕಾರ್ಯನಿರ್ವಹಣೆಗೆ ಅಸಮರ್ಥಗೊಂಡಿದ್ದರೂ, ಎಲ್ಲ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು.

ಜೂನ್ 10ರಂದು ಅಮೆರಿಕ ಮತ್ತೊಂದು ಪಲಾವ್ ಧ್ವಜ ಹೊಂದಿದ್ದ ಸೆಟ್ಟೆಬೆಲ್ಲೋ ಟ್ಯಾಂಕರ್ ಮೇಲೆ ದಾಳಿ ನಡೆಸಿದ್ದು, ಹಡಗಿನಲ್ಲಿ ಇದ್ದ 24 ಭಾರತೀಯ ನಾವಿಕರಲ್ಲಿ ಮೂವರು ಮೃತಪಟ್ಟಿದ್ದರು.

ಇದೇ ವೇಳೆ, ಗಿನಿ-ಬಿಸ್ಸಾವ್ ಧ್ವಜ ಹೊಂದಿದ್ದ ಜಲ್ವೀರ್ ಟ್ಯಾಂಕರ್ ಮೇಲೂ ಗುರುವಾರ ದಾಳಿ ನಡೆದಿತ್ತು. ಈ ಹಡಗಿನಲ್ಲಿ 20 ಭಾರತೀಯರು ಇದ್ದರು.

ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ , ಸೆಟ್ಟೆಬೆಲ್ಲೋ, ಮಾರಿವೆಕ್ಸ್ ಮತ್ತು ಜಲ್ವೀರ್ ಹಡಗುಗಳ ಮೇಲಿನ ಮೂರು ಪ್ರತ್ಯೇಕ ದಾಳಿಗಳೂ ಅಮೆರಿಕ ನೌಕಾಪಡೆಯಿಂದಲೇ ನಡೆದಿವೆ ಎಂದು ತಿಳಿಸಿದ್ದರು.

ಜೈಸ್ವಾಲ್ ಅವರ ಪ್ರಕಾರ, ಈ ಮೂರು ಹಡಗುಗಳಲ್ಲಿ ಎರಡು ಹಡಗುಗಳು ಅಮೆರಿಕ ಖಜಾನೆ ಇಲಾಖೆಯ ಆಫೀಸ್ ಆಫ್ ಫಾರಿನ್ ಅಸೆಟ್ಸ್ ಕಂಟ್ರೋಲ್ (OFAC) ವಿಧಿಸಿರುವ ನಿರ್ಬಂಧಗಳ ವ್ಯಾಪ್ತಿಗೆ ಒಳಪಟ್ಟಿದ್ದರೆ, ಮತ್ತೊಂದು ಹಡಗನ್ನು ನಿಯಮ ಉಲ್ಲಂಘಿಸಿದ ಹಡಗು ಎಂದು ಗುರುತಿಸಲಾಗಿತ್ತು.

ಒಎಫ್‌ಎಸಿ ಅಮೆರಿಕ ಖಜಾನೆ ಇಲಾಖೆಯ ಹಣಕಾಸು ಗುಪ್ತಚರ ಹಾಗೂ ಜಾರಿ ಸಂಸ್ಥೆಯಾಗಿದ್ದು, ಇರಾನ್ ಮತ್ತು ರಷ್ಯಾದ ತೈಲ ಮಾರಾಟದ ಮೇಲಿನ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸುವ ಹಡಗುಗಳ ವಿರುದ್ಧ ಕ್ರಮ ಕೈಗೊಳ್ಳುತ್ತದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿಕೆ ಪ್ರಕಾರ, ಇರಾನ್ ಬಂದರುಗಳ ಮೇಲಿನ ಅಮೆರಿಕದ ನಿರ್ಬಂಧವನ್ನು ಉಲ್ಲಂಘಿಸಲು ಈ ಹಡಗುಗಳು ಪ್ರಯತ್ನಿಸುತ್ತಿದ್ದವು ಎಂಬ ಆರೋಪದ ಮೇರೆಗೆ ಜೂನ್ 8ರಂದು ಮಾರಿವೆಕ್ಸ್, ಜೂನ್ 9ರಂದು ಸೆಟ್ಟೆಬೆಲ್ಲೋ ಹಾಗೂ ಜೂನ್ 11ರಂದು ಎಂಟಿ ಜಲ್ವೀರ್ ಹಡಗುಗಳನ್ನು ಕಾರ್ಯನಿರ್ವಹಣೆಗೆ ಅಸಮರ್ಥಗೊಳಿಸುವ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com