

ಕುವೈತ್: ಕುವೈತ್‌ನ ವಿದ್ಯುತ್ ಉತ್ಪಾದನೆ ಮತ್ತು ನೀರು ನಿರ್ಲವಣೀಕರಣ ಘಟಕದ ಸೇವಾ ಕಟ್ಟಡದ ಮೇಲೆ ಇರಾನ್ ನಡೆಸಿದ ದಾಳಿಯ ಪರಿಣಾಮ ಭಾರತೀಯ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ ಎಂದು ಕುವೈತ್‌ನ ವಿದ್ಯುತ್, ನೀರು ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ತಿಳಿಸಿದೆ.
ಈ ದಾಳಿಯು ಕುವೈತ್ ರಾಜ್ಯದ ವಿರುದ್ಧದ ‘ಇರಾನಿನ ಆಕ್ರಮಣ’ದ ಭಾಗವಾಗಿದೆ ಎಂದು ಹೇಳಿದೆ. ಈ ದಾಳಿಯಿಂದ ಗಮನಾರ್ಹ ಹಾನಿಯನ್ನುಂಟಾಗಿದ್ದು ಓರ್ವ ಕಾರ್ಮಿಕನ ಸಾವಿಗೆ ಕಾರಣವಾಯಿತು, ಅವರ ಗುರುತು ಇನ್ನೂ ಬಹಿರಂಗಗೊಂಡಿಲ್ಲ ಎಂದು ಸೋಮವಾರ (ಮಾರ್ಚ್ 30, 2026) ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಕುವೈತ್ ವಿರುದ್ಧ ಇರಾನ್ ನಡೆಸಿದ ಆಕ್ರಮಣದ ಭಾಗವಾಗಿ ವಿದ್ಯುತ್ ಮತ್ತು ನೀರು ನಿರ್ಲವಣೀಕರಣ ಘಟಕದ ಸೇವಾ ಕಟ್ಟಡದ ಮೇಲೆ ದಾಳಿ ನಡೆಸಲಾಗಿದ್ದು, ಇದರ ಪರಿಣಾಮವಾಗಿ ಒಬ್ಬ ಭಾರತೀಯ ಕಾರ್ಮಿಕ ಸಾವನ್ನಪ್ಪಿದ್ದಾನೆ ಮತ್ತು ಕಟ್ಟಡಕ್ಕೆ ಗಮನಾರ್ಹ ವಸ್ತು ಹಾನಿಯಾಗಿದೆ" ಎಂದು ಸಚಿವಾಲಯದ ವಕ್ತಾರ ಎಂಜಿನಿಯರ್ ಫಾತಿಮಾ ಅಬ್ಬಾಸ್ ಜವಾಹರ್ ಹಯಾತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಘಟನೆಯ ಬಗ್ಗೆ ಕುವೈತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಥವಾ ವಿದೇಶಾಂಗ ಸಚಿವಾಲಯ ಈ ಕುರಿತು ಹೇಳಿಕೆ ನೀಡಿಲ್ಲ.
ಇತ್ತೀಚಿನ ಸಾವಿನೊಂದಿಗೆ ಪಶ್ಚಿಮ ಏಷ್ಯಾ ಸಂಘರ್ಷ ಪ್ರಾರಂಭವಾದಾಗಿನಿಂದ ಸಾವನ್ನಪ್ಪಿದ ಭಾರತೀಯರ ಸಂಖ್ಯೆ ಏಳಕ್ಕೆ ಏರಿದೆ.ವರದಿಯಾದ ಸಾವುನೋವುಗಳಲ್ಲಿ ಸೌದಿ ಅರೇಬಿಯಾದಲ್ಲಿ ಒಬ್ಬ ಭಾರತೀಯ, ಒಮಾನ್‌ನಲ್ಲಿ ಇಬ್ಬರು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಇಬ್ಬರು ಸೇರಿದ್ದಾರೆ, ಆದರೆ ಕನಿಷ್ಠ ಒಬ್ಬ ಭಾರತೀಯ ಪ್ರಜೆ ಕಾಣೆಯಾಗಿದ್ದಾನೆ ಎಂದು ವರದಿಯಾಗಿದೆ. ರಿಯಾದ್, ಮಸ್ಕತ್, ಅಬುಧಾಬಿ ಮತ್ತು ಬಾಗ್ದಾದ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗಳು ಮೃತದೇಹಗಳನ್ನು ಸ್ವದೇಶಕ್ಕೆ ತರುವ ಕೆಲಸವನ್ನು ಮಾಡುತ್ತಿದೆ.
ಘಟನೆಯ ನಂತರ ತುರ್ತು ತಂಡಗಳು ಮತ್ತು ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ತಕ್ಷಣವೇ ಧಾವಿಸಿ, ಪರಿಸ್ಥಿತಿಯನ್ನು ನಿರ್ವಹಿಸಲು ಮತ್ತು ವಿದ್ಯುತ್ ಮತ್ತು ನೀರು ಸೇವೆಗಳು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಅನುಮೋದಿತ ತುರ್ತು ಯೋಜನೆಗಳಿಗೆ ಅನುಗುಣವಾಗಿ ಕೆಲಸ ಪ್ರಾರಂಭಿಸಿದರು ಎಂದು ಅವರು ಹೇಳಿದರು.
ಪೀಡಿತ ಸ್ಥಳಗಳನ್ನು ಸುರಕ್ಷಿತಗೊಳಿಸಲು ಅಧಿಕಾರಿಗಳು ಭದ್ರತಾ ಸಂಸ್ಥೆಗಳು ಮತ್ತು ಇತರ ಸಂಬಂಧಿತ ಇಲಾಖೆಗಳೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಕ್ತಾರರು ತಿಳಿಸಿದ್ದಾರೆ.
Advertisement