

ಲಂಡನ್: ಇಡೀ ಜಗತ್ತಿಗೆ ಭೀತಿ ಹುಟ್ಟಿಸಿರುವ ಮಾರಕ ಹಂಟಾ ವೈರಸ್ (Hantavirus) ವೈರಸ್ ಕುರಿತು ಬ್ರಿಟನ್ ಸರ್ಕಾರ ಹೊಸ ಸುದ್ದಿ ನೀಡಿದ್ದು, ಕ್ರೂಸ್ ಹಡಗಿನಲ್ಲಿ ಸೋಂಕಿಗೆ ಗುರಿಯಾಗಿದ್ದ ಇಬ್ಬರು ಬ್ರಿಟನ್ ಪ್ರಜೆಗಳು ಮನೆಗೆ ಮರಳಿದ್ದಾರೆ ಎಂದು ಹೇಳಿದೆ.
ಪಶ್ಚಿಮ ಆಫ್ರಿಕಾ ಕರಾವಳಿಯ ಬಳಿ ನಿಲುಗಡೆಗೊಂಡಿದ್ದ ಕ್ರೂಸ್ ಹಡಗಿನಲ್ಲಿ ಅಪಾಯಕಾರಿ ಹಾಂಟಾವೈರಸ್‌ಗೆ ಒಳಗಾದ ಬಳಿಕ ಬ್ರಿಟನ್‌ಗೆ ಮರಳಿದ ಇಬ್ಬರು ಬ್ರಿಟಿಷ್ ಪ್ರಜೆಗಳು ಮುನ್ನೆಚ್ಚರಿಕಾ ಕ್ರಮವಾಗಿ ಸ್ವಯಂ ಪ್ರತ್ಯೇಕತೆ (ಕ್ವಾರಂಟೈನ್)ಯಲ್ಲಿ ಇದ್ದಾರೆ ಎಂದು ಯುಕೆ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಯುಕೆ ಹೆಲ್ತ್ ಸಿಕ್ಯುರಿಟಿ ಏಜೆನ್ಸಿ (UKHSA) ಬುಧವಾರ ಈ ಕುರಿತು ಹೇಳಿಕೆ ಬಿಡುಗಡೆ ಮಾಡಿದ್ದು, ವೈರಸ್ ಹರಡುವಿಕೆ ವರದಿಯಾದ ವೇಳೆ ಪಶ್ಚಿಮ ಆಫ್ರಿಕಾ ಕರಾವಳಿಯ ಬಳಿ ನಿಲುಗಡೆಗೊಂಡಿದ್ದ MV Hondius ಕ್ರೂಸ್ ಶಿಪ್ ಬ್ರಿಟನ್ ಗೆ ಮರಳುತ್ತಿರುವ ಬ್ರಿಟಿಷ್ ನಾಗರಿಕರ ವ್ಯವಸ್ಥೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಜೊತೆಗೆ ಸಂಯೋಜಿಸಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದೆ.
ಇಲಿಗಳ ಮೂಲಕ ವೈರಸ್
UKHSAಯ ಎಪಿಡೆಮಿಕ್ ಮತ್ತು ಎಮರ್ಜಿಂಗ್ ಇನ್‌ಫೆಕ್ಷನ್ಸ್ ವಿಭಾಗದ ಉಪನಿರ್ದೇಶಕಿ ಡಾ. ಮೀರಾ ಚಂದ್ ಸಾರ್ವಜನಿಕರಿಗೆ ಭರವಸೆ ನೀಡುತ್ತಾ, ಇಲಿ ಮಲದ ಮೂಲಕ ಹರಡುವ ಈ ವೈರಸ್‌ನಿಂದ ಸಾಮಾನ್ಯ ಜನರಿಗೆ ಇರುವ ಅಪಾಯ 'ತುಂಬಾ ಕಡಿಮೆ' ಎಂದಿದ್ದಾರೆ.
MV Hondius ಹಡಗಿನಲ್ಲಿ ಸಂಭವಿಸಿದ ಹಾಂಟಾವೈರಸ್ ಸ್ಫೋಟದಿಂದ ಬಾಧಿತರಾದ ಎಲ್ಲರೊಂದಿಗೆ ನಮ್ಮ ಮನಸ್ಸಿದೆ. ಸಕಲ ನೆರವು ನೀಡಲು ನಾವು ಸಿದ್ಧ ಎಂದು ಭಾರತೀಯ ಮೂಲದ ವೈದ್ಯೆ ಕೂಡ ಆಗಿರುವ ಡಾ. ಮೀರಾ ಚಂದ್ ಹೇಳಿದ್ದಾರೆ.
'ಸಾಮಾನ್ಯ ಜನತೆಗೆ ಅಪಾಯದ ಮಟ್ಟ ತುಂಬಾ ಕಡಿಮೆ ಎಂಬುದನ್ನು ಜನರಿಗೆ ಭರವಸೆ ನೀಡುವುದು ಮುಖ್ಯ. ಹಡಗಿನಿಂದ ಬ್ರಿಟನ್ ಗೆ ಮರಳುತ್ತಿರುವ ಬ್ರಿಟಿಷ್ ನಾಗರಿಕರಿಗೆ ಸಹಾಯ, ಪ್ರತ್ಯೇಕತೆ ಮತ್ತು ಮೇಲ್ವಿಚಾರಣೆಯ ವ್ಯವಸ್ಥೆಗಳನ್ನು ನಾವು ಮಾಡುತ್ತಿದ್ದೇವೆ.
ಜೊತೆಗೆ ಹಡಗು ಅಥವಾ ಹಾಂಟಾವೈರಸ್ ಸೋಂಕಿತರ ಸಂಪರ್ಕಕ್ಕೆ ಬಂದಿರುವವರನ್ನು ಪತ್ತೆಹಚ್ಚುವ ಕಾರ್ಯವೂ ನಡೆಯುತ್ತಿದೆ, ಇದರಿಂದ ಸೋಂಕು ಮತ್ತಷ್ಟು ಹರಡುವ ಅಪಾಯವನ್ನು ಕಡಿಮೆ ಮಾಡಬಹುದು. ಅಗತ್ಯವಿರುವ ಎಲ್ಲಾ ನೆರವು ನೀಡಲು UKHSA ಸರ್ಕಾರದ ಪಾಲುದಾರ ಸಂಸ್ಥೆಗಳೊಂದಿಗೆ ನಿಕಟವಾಗಿ ಕೆಲಸ ಮುಂದುವರಿಸಲಿದೆ' ಎಂದು ಅವರು ಹೇಳಿದರು.
ಕ್ರೂಸ್ ಶಿಪ್ ನಲ್ಲಿ ವೈರಸ್ ಸ್ಫೋಟ
ಅರ್ಜೆಂಟೀನಾದ ಉಶುವಾಯಾದಿಂದ ಏಪ್ರಿಲ್ 1 ರಂದು ಹೊರಟಿದ್ದ MV ಹೊಂಡಿಯಸ್ (MV Hondius) ಎಂಬ ಕ್ರೂಸ್ ಹಡಗಿನಲ್ಲಿ ಮಾರಣಾಂತಿಕ ಹಂಟಾವೈರಸ್ (Hantavirus) ಹರಡಿತು. ಹಡಗಿನಲ್ಲಿ ಸಿಬ್ಬಂದಿ ಸಹಿತ 147 ಮಂದಿ 23 ವಿವಿಧ ದೇಶಗಳಿಗೆ ಪ್ರಯಾಣಿಸುತ್ತಿದ್ದರು.
ಈ ಪೈಕಿ 70 ವರ್ಷ ವಯಸ್ಸಿನ ಡಚ್ ಪ್ರಜೆ ಮತ್ತು ಅವರ 69 ವರ್ಷದ ಪತ್ನಿ ಸೋಂಕಿಗೆ ತುತ್ತಾಗಿ ಶಿಪ್ ನಲ್ಲೇ ಸಾವನ್ನಪ್ಪಿದ್ದರು. ಇದಲ್ಲದೆ ಮತ್ತೋರ್ನ ಜರ್ಮನ್ ಪ್ರಯಾಣಿಕರು ಕೂಡ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಈ ಪ್ರಕರಣಗಳ ಬಳಿಕ ವೈರಸ್ ಪ್ರಸರಣದ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕ್ರೂಸ್ ಶಿಪ್ ನಲ್ಲಿ ಈ ವರೆಗೂ 8 ಸೋಂಕು ಪ್ರಕರಣ ಗಳು ವರದಿಯಾಗಿದ್ದು, ಈ ಪೈಕಿ ಮೂರು ದೃಢಪಟ್ಟಿದ್ದರೆ, ಐದು ಶಂಕಿತ ಪ್ರಕರಣಗಳಾಗಿವೆ. ಅಂತೆಯೇ ಮೂವರು ಸೋಂಕಿತರು ಸಾವನ್ನಪ್ಪಿದ್ದಾರೆ.
ಎಂಟು ಪ್ರಕರಣಗಳನ್ನು (ಮೂರು ದೃಢಪಟ್ಟ ಮತ್ತು ಐದು ಶಂಕಿತ) ಗುರುತಿಸಿದ್ದು, ಇದರಲ್ಲಿ ಮೂರು ಸಾವುಗಳು ಸಂಭವಿಸಿವೆ. ಕನಿಷ್ಠ ಮೂವರು ವ್ಯಕ್ತಿಗಳಲ್ಲಿ ಆಂಡಿಸ್ ಸ್ಟ್ರೈನ್ (Andes strain) ಹಂಟಾವೈರಸ್ ಇರುವುದು ಪ್ರಯೋಗಾಲಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇವರಲ್ಲಿ ಒಬ್ಬ ಬ್ರಿಟಿಷ್ ಪ್ರಜೆ ದಕ್ಷಿಣ ಆಫ್ರಿಕಾದಲ್ಲಿ ಮತ್ತು ಒಬ್ಬ ಸ್ವಿಸ್ ವ್ಯಕ್ತಿ ಜ್ಯೂರಿಚ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕ್ರೂಸ್ ಶಿಪ್ ಗೆ ವೈರಸ್ ಹರಡಿದ್ದು ಹೇಗೆ?
ಇನ್ನು ಕ್ರೂಸ್ ಶಿಪ್ ಗೆ ವೈರಸ್ ಹರಡಿದ್ದು ಹೇಗೆ ಎಂಬ ಪ್ರಶ್ನಿಗೂ ಅಧಿಕಾರಿಗಳು ಮಾಹಿತಿ ನೀಡಿದ್ದು, MV ಹೊಂಡಿಯಸ್ ನೌಕೆ ತನ್ನ ಪ್ರಯಾಣದ ವೇಳೆ ಅರ್ಜೆಂಟೀನಾದ ಉಶುವಾಯಾದಲ್ಲಿ ಭೂ-ಆಧಾರಿತ ಚಟುವಟಿಕೆಗಳಲ್ಲಿ ತೊಡಗಿತ್ತು. ಇದೇ ಸಮಯದಲ್ಲಿ (ಬಹುಶಃ ಕಸದ ರಾಶಿಯ ಸಮೀಪ ಪಕ್ಷಿ ವೀಕ್ಷಣೆಯ ವೇಳೆ) ವೈರಸ್ ಪ್ರಸರಣ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ. ಹಡಗಿನ ಕಿರಿದಾದ ಜಾಗದಲ್ಲಿ ಪ್ರಯಾಣಿಕರ ನಡುವೆ ಇದು ಸ್ವಲ್ಪ ಮಟ್ಟಿಗೆ ಹರಡಿರಬಹುದು ಎಂದು ಆರೋಗ್ಯ ಅಧಿಕಾರಿಗಳು ಭಾವಿಸಿದ್ದಾರೆ.
ಸೋಂಕಿನ ಲಕ್ಷಣಗಳೇನು?
ಡಚ್ ಕ್ರೂಸ್ ಹಡಗಿನಲ್ಲಿ ಹಲವರಿಗೆ ಆಂಡಿಸ್ ತಳಿಯ ಹಾಂಟಾವೈರಸ್ ಸೋಂಕು ದೃಢಪಟ್ಟಿದೆ. ಈ ವೈರಸ್ ಜ್ವರ, ತೀವ್ರ ದೌರ್ಬಲ್ಯ, ಸ್ನಾಯು ನೋವು, ಹೊಟ್ಟೆನೋವು, ವಾಂತಿ ಭಾವನೆ, ವಾಂತಿ, ಅತಿಸಾರ ಮತ್ತು ಉಸಿರಾಟದ ತೊಂದರೆಗಳನ್ನು ಉಂಟುಮಾಡುತ್ತದೆ.
ತೀವ್ರ ಪ್ರಕರಣಗಳಲ್ಲಿ ರೋಗಿಗಳಿಗೆ ಗಂಭೀರ ಉಸಿರಾಟದ ತೊಂದರೆ, ಕಡಿಮೆ ರಕ್ತದ ಒತ್ತಡ ಮತ್ತು ಮೂತ್ರಪಿಂಡ ವೈಫಲ್ಯ ಉಂಟಾಗಬಹುದು. ಇಂತಹ ಸಂದರ್ಭಗಳಲ್ಲಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಬೇಕಾಗುತ್ತದೆ. ತಜ್ಞರ ಪ್ರಕಾರ, ಮನುಷ್ಯರಿಂದ ಮನುಷ್ಯರಿಗೆ ಸೋಂಕು ಹರಡುವುದು ಅಪರೂಪವಾಗಿದ್ದು, ಅದು ತುಂಬಾ ನಿಕಟ ಸಂಪರ್ಕದ ಮೂಲಕ ಮಾತ್ರ ಸಂಭವಿಸುತ್ತದೆ.
Advertisement