'Why English?': ಇರಲಾರದೇ ಇರುವೆ ಬಿಟ್ಟು ಕೊಂಡ ಪಾಕಿಸ್ತಾನ ಜನರಲ್, ಹಬ್ಬ ಮಾಡಿದ ಟ್ರೋಲರ್ಸ್! Video

ಪಾಕಿಸ್ತಾನ ಸೇನೆಯ ವಕ್ತಾರರು ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ್’ ಕುರಿತ ಭಾರತೀಯ ಸೇನಾ ಮಾಧ್ಯಮ ಗೋಷ್ಠಿಯಲ್ಲಿ ಅಧಿಕಾರಿಗಳು ಇಂಗ್ಲಿಷ್ ಬಳಸಿದ್ದೇಕೆ ಎಂದು ಪ್ರಶ್ನಿಸಿದ ಬಳಿಕ..
Pakistan General's 'Why English' Jab
ಪಾಕಿಸ್ತಾನ ಸೇನಾ ವಕ್ತಾರ ಅಹ್ಮದ್ ಶರೀಫ್ ಚೌಧರಿ
Updated on

ನವದೆಹಲಿ: ಭಾರತದ ಸದಾಕಾಲ ಕಾಲು ಕೆರೆಯುವ ಪಾಕಿಸ್ತಾನ ಇದೀಗ ತಾನೇ ಮಾಡಿದ ಎಡವಟ್ಟಿನಿಂದಾಗಿ ಇದೀಗ ಭೀಕರ ಟ್ರೋಲ್ ಗೆ ತುತ್ತಾಗಿದೆ.

ಹೌದು.. ಪಾಕಿಸ್ತಾನ ಸೇನೆಯ ವಕ್ತಾರರು ಇತ್ತೀಚೆಗೆ ನಡೆದ ‘ಆಪರೇಷನ್ ಸಿಂಧೂರ್’ ಕುರಿತ ಭಾರತೀಯ ಸೇನಾ ಮಾಧ್ಯಮ ಗೋಷ್ಠಿಯಲ್ಲಿ ಅಧಿಕಾರಿಗಳು ಇಂಗ್ಲಿಷ್ ಬಳಸಿದ್ದೇಕೆ ಎಂದು ಪ್ರಶ್ನಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಜೋಕರ್ ಗಳಾಗಿ ಮಾರ್ಪಟ್ಟಿದ್ದಾರೆ.

ಭಾರತವನ್ನು ಟೀಕಿಸುವ ಭರದಲ್ಲಿ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ನೀಡಿದ್ದ ಹೇಳಿಕೆ ಭಾರತೀಯ ಬಳಕೆದಾರರಷ್ಟೇ ಅಲ್ಲ, ಪಾಕಿಸ್ತಾನದ ಜನರಿಂದಲೂ ತೀವ್ರ ಟೀಕೆಗೊಳಗಾಗುತ್ತಿದೆ. ಆಪರೇಷನ್ ಸಿಂಧೂರ್‌ನ ಮೊದಲ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ಚೌಧರಿ, ಭಾರತೀಯ ಅಧಿಕಾರಿಗಳು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವಾಗ ಇಂಗ್ಲಿಷ್ ಬಳಸಿದ್ದೇಕೆ ಎಂದು ಪ್ರಶ್ನಿಸಿದ್ದರು.

ಇಷ್ಟಕ್ಕೂ ಆಗಿದ್ದೇನು?

ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಭಾರತೀಯ ಸೇನೆ ಈ ಮಾಧ್ಯಮ ಗೋಷ್ಠಿ ನಡೆಸಿತ್ತು.

26 ಮಂದಿ ಸಾವಿಗೀಡಾದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಳಿಕ ಆರಂಭಿಸಲಾದ ಆಪರೇಷನ್ ಸಿಂಧೂರ್‌ನ ಸೈನಿಕ ಮತ್ತು ತಂತ್ರಜ್ಞಾನಾತ್ಮಕ ಪರಿಣಾಮಗಳ ಕುರಿತು ಈ ಸುದ್ದಿಗೋಷ್ಠಿ ಕೇಂದ್ರೀಕೃತವಾಗಿತ್ತು. ಅಲ್ಲದೆ ಅಂದು ಪಾಕಿಸ್ತಾನದ ಬೂಟಾಟಿಕೆಯನ್ನು ಭಾರತೀಯ ಸೇನೆ ಬಟಾ ಬಯಲು ಮಾಡಿತ್ತು.

Pakistan General's 'Why English' Jab
ಅದು 'ಎರಡು ಸಿದ್ಧಾಂತಗಳ ಕದನ'; ಪಾಕಿಸ್ತಾನದ ತಂತ್ರವು ಭಾರತಕ್ಕಿಂತ 'ಶ್ರೇಷ್ಠ'ವಾಗಿತ್ತು: ಸೇನಾ ಮುಖ್ಯಸ್ಥ ಆಸಿಮ್ ಮುನೀರ್

ಇಂಗ್ಲೀಷ್ ಏಕೆ ಎಂದಿದ್ದ ಚೌದರಿ

ಇನ್ನು ಭಾರತೀಯ ಸೇನಾಧಿಕಾರಿಗಳ ಈ ಸುದ್ದಿಗೋಷ್ಠಿ ತಿರುಗೇಟು ನೀಡಲು ಪಾಕಿಸ್ತಾನ ಕೂಡ ಸುದ್ದಿಗೋಷ್ಠಿ ನಡೆಸಿತ್ತು. ಈ ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನ ಸೇನೆಯ ವಕ್ತಾರರು ಉಪಸ್ಥಿತರಿದ್ದರು. ಪ್ರಮುಖವಾಗಿ ಪಾಕಿಸ್ತಾನದ ಲೆಫ್ಟಿನೆಂಟ್ ಜನರಲ್ ಅಹ್ಮದ್ ಶರೀಫ್ ಚೌಧರಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, 'ನಿಮಗೆ ಇಂಗ್ಲಿಷ್‌ನಲ್ಲಿ ಮಾತನಾಡಲು ಯಾರು ಹೇಳಿದರು? ವಿಶ್ವಕ್ಕೆ ನಿಮ್ಮ ಕಥನವನ್ನು ತಲುಪಿಸಲು ಇದನ್ನು ಮಾಡುತ್ತಿದ್ದೀರಾ?” ಎಂದು ಅವರು ಪ್ರಶ್ನಿಸಿದ್ದರು.

ಅವರ ಈ ಪ್ರಶ್ನೆ ಇದೀಗ ಅವರಿಗೇ ಮುಳುವಾಗಿದ್ದು, ಭಾರತ ಮಾತ್ರವಲ್ಲದೇ ಪಾಕಿಸ್ತಾನಿಯರು ಕೂಡ ಚೌದರಿಯನ್ನು ವ್ಯಾಪಕ ಟ್ರೋಲ್ ಮಾಡುತ್ತಿದ್ದಾರೆ. ಎಕ್ಸ್‌ನಲ್ಲಿ ಅನೇಕರು ಪಾಕಿಸ್ತಾನ ಸೇನೆಯೊಳಗೇ ಇಂಗ್ಲಿಷ್ ವ್ಯಾಪಕವಾಗಿ ಬಳಕೆಯಲ್ಲಿದೆ ಎಂದು ನೆನಪಿಸಿದರು.

“ಅವರು ನಾವು ಅಕ್ಷರಾಸ್ಯರಲ್ಲದ ಮೂರ್ಖರು, ಏನು ಹೇಳಿದರೂ ನಂಬಿಬಿಡುತ್ತೇವೆ ಎಂದುಕೊಂಡಿದ್ದಾರೆ,” ಎಂದು ಒಬ್ಬ ರೆಡಿಟ್ ಬಳಕೆದಾರ ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ ಎಕ್ಸ್‌ನಲ್ಲಿ ಐಎಸ್‌ಪಿಆರ್ ಮುಖ್ಯಸ್ಥರನ್ನು ಹಾಸ್ಯವಾಡುತ್ತಾ, “ಡಿಜಿ ಐಎಸ್‌ಪಿಆರ್ ಹೇಳಿದ ದೊಡ್ಡ ದೊಡ್ಡ ಸುಳ್ಳುಗಳ ಬಳಿಕ ಜನರು ಅವರನ್ನು ಸಂಪೂರ್ಣವಾಗಿ ಬಯಲಿಗೆಳೆದಿದ್ದಾರೆ. ಈಗ ಉಳಿದಿರುವುದು ಅವರನ್ನು ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ನಡೆಸುವುದು ಮಾತ್ರ,” ಎಂದು ಬರೆದಿದ್ದಾರೆ. “ಅವರು ನಾವು ದುರ್ಬಲರು, ಅವರ ತಪ್ಪುಗಳ ವಿರುದ್ಧ ಏನೂ ಮಾಡಲಾಗದು ಎಂದುಕೊಳ್ಳುತ್ತಾರೆ,” ಎಂದು ಮತ್ತೊಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದಾರೆ.

ಮಾಜಿ ಸೇನಾಧಿಕಾರಿಗಳಿಂದಲೇ ಟ್ರೋಲ್

ತೀವ್ರ ಪ್ರತಿಕ್ರಿಯೆ ನೀಡಿದವರಲ್ಲಿ ನಿವೃತ್ತ ಮೇಜರ್ ಆದಿಲ್ ಫಾರೂಕ್ ರಾಜಾ ಕೂಡ ಪ್ರಮುಖರಾಗಿದ್ದಾರೆ. ಪಾಕಿಸ್ತಾನ ಸೇನೆಯ ಮಾಜಿ ಅಧಿಕಾರಿ ಆಗಿರುವ ಅವರು ಈಗ ಪತ್ರಕರ್ತರಾಗಿದ್ದು, ಪಾಕಿಸ್ತಾನದ ಸೇನಾ ವ್ಯವಸ್ಥೆಯ ಕಟು ವಿಮರ್ಶಕರಾಗಿದ್ದಾರೆ. “ಗಾಜಿನ ಮನೆಯಲ್ಲಿ ವಾಸಿಸುವವರು ಇತರರ ಮೇಲೆ ಕಲ್ಲು ಎಸೆಯಬಾರದು,” ಎಂದು ಐಎಸ್‌ಪಿಆರ್ ಮುಖ್ಯಸ್ಥರ ಹೇಳಿಕೆಗೆ ಪ್ರತಿಕ್ರಿಯಿಸಿ ರಾಜಾ ಖಡಕ್ ತಿರುಗೇಟು ನೀಡಿದ್ದಾರೆ.

ಅಂತೆಯೇ ಪಾಕಿಸ್ತಾನ ಸೇನಾ ನಾಯಕತ್ವದ ದ್ವಂದ್ವ ನಿಲುವನ್ನು ಅವರು ಟೀಕಿಸಿದ್ದು, ಸೇನೆ ಒಳಗಿನ ಪ್ರಮುಖ ಸಂವಹನ ಭಾಷೆಯಾಗಿ ಇಂಗ್ಲಿಷ್ ಇನ್ನೂ ಬಳಕೆಯಲ್ಲಿದೆ ಎಂದು ಅವರು ಆರೋಪಿಸಿದರು. “ಪಾಕಿಸ್ತಾನ ಸೇನೆಯಲ್ಲಿ ಮೇಲ್ದರ್ಜೆಯಿಂದ ಕೆಳದರ್ಜೆಯವರೆಗೆ ಎಲ್ಲಾ ಸೂಚನೆಗಳೂ ಇಂಗ್ಲಿಷ್‌ನಲ್ಲೇ ನೀಡಲಾಗುತ್ತವೆ,” ಎಂದು ರಾಜಾ ಹೇಳಿದರು.

ದೇಶೀಯ ಪ್ರಚಾರ ಮತ್ತು ಸಾರ್ವಜನಿಕ ಸಂದೇಶಗಳಿಗೆ ಉರ್ದು ಬಳಸಲಾಗುತ್ತಿದ್ದರೂ, ಪಾಕಿಸ್ತಾನದ ಅಂತಾರಾಷ್ಟ್ರೀಯ ಸಂವಹನ ಮತ್ತು ಕಥನ ನಿರ್ಮಾಣದ ಬಹುಭಾಗ ಇಂಗ್ಲಿಷ್‌ನಲ್ಲೇ ನಡೆಯುತ್ತದೆ ಎಂದು ಅವರು ಆರೋಪಿಸಿದರು. ಅಲ್ಲದೆ ಭಾರತದ ದಾಳಿಗಳಿಂದ ಉಂಟಾದ ಹಾನಿಯ ಪ್ರಮಾಣದ ಬಗ್ಗೆ ಪಾಕಿಸ್ತಾನ ಸೇನೆ ಚರ್ಚೆಯನ್ನು ತಪ್ಪಿಸುತ್ತಿದೆ ಎಂದೂ ಅವರು ಹೇಳಿದರು.

'ನಿಮ್ಮ ನಷ್ಟಗಳನ್ನು ಒಪ್ಪಿಕೊಳ್ಳುವುದಿಲ್ಲವೇ? ಏಕೆ ಒಂದೇ ಭಾಗದ ಕಥೆಯನ್ನು ಮಾತ್ರ ಹೇಳುತ್ತಿದ್ದೀರಿ? ನಿಜ ಏನು ಎಂಬುದನ್ನು ತಿಳಿಯಲು ಎರಡೂ ಬದಿಯ ಕಥೆಗಳನ್ನು ಹೇಳುವುದಿಲ್ಲವೇ?” ಎಂದು ಅವರು ಪ್ರಶ್ನಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com