

ವಾಷಿಂಗ್ಟನ್: ಇಸಿಸ್ (ISIS) ಉಗ್ರರಿಗೆ ದೊಡ್ಡ ಆಘಾತ ಎದುರಾಗಿದ್ದು, ಅಮೆರಿಕ ಮತ್ತು ನೈಜೀರಿಯಾ ನಡೆಸಿದ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಇಸಿಸ್ ಉಗ್ರ ಸಂಘಟನೆಯ ಜಾಗತಿಕ ನಂ. 2 ಕಮಾಂಡರ್ ಅಬು-ಬಿಲಾಲ್ ಅಲ್-ಮಿನುಕಿ ಹತ್ಯೆಯಾಗಿದ್ದಾನೆ.
‘ಟ್ರೂತ್ ಸೋಷಿಯಲ್’ನಲ್ಲಿ ಪೋಸ್ಟ್ ಮಾಡಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಈ ಕುರಿತು ಘೋಷಣೆ ಮಾಡಿದ್ದಾರೆ.
ನನ್ನ ನಿರ್ದೇಶನದ ಮೇರೆಗೆ ಧೈರ್ಯಶಾಲಿ ಅಮೆರಿಕಾದ ಸೇನಾ ಪಡೆಗಳು ಮತ್ತು ನೈಜೀರಿಯಾ ಸಶಸ್ತ್ರ ಪಡೆಗಳು ಅತ್ಯಂತ ಸಂಕೀರ್ಣ ಹಾಗೂ ಸೂಕ್ಷ್ಮವಾಗಿ ರೂಪಿಸಲಾದ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿವೆ ಎಂದು ಹೇಳಿದ್ದಾರೆ.
ಹತ್ಯೆಯಾಗಿರುವ ಅಬು-ಬಿಲಾಲ್ ಅಲ್-ಮಿನುಕಿ ಇಸಿಸ್ ಉಗ್ರ ಸಂಘಟನೆಯ ಜಾಗತಿಕ ಎರಡನೇ ಕಮಾಂಡರ್ ಆಗಿದ್ದ. ಆಫ್ರಿಕಾದಲ್ಲಿ ಅಡಗಿ ಕುಳಿತಿದ್ದರೂ ನಾವು ಅವನ ಚಲನವಲನಗಳ ಮೇಲೆ ಕಣ್ಣಿದ್ದೆವು.
ಇನ್ನು ಮುಂದೆ ಆತ ಆಫ್ರಿಕಾ ಜನರನ್ನು ಭೀತಿಗೊಳಿಸುವುದಿಲ್ಲ ಅಥವಾ ಅಮೆರಿಕನ್ನರ ವಿರುದ್ಧದ ದಾಳಿಗಳಿಗೆ ಸಹಾಯ ಮಾಡುವುದಿಲ್ಲ. ಅವನ ಹತ್ಯೆಯಿಂದ ಇಸಿಸ್‌ನ ಜಾಗತಿಕ ಕಾರ್ಯಾಚರಣೆಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಈ ಕಾರ್ಯಾಚರಣೆಗೆ ಸಹಕಾರ ನೀಡಿದ ನೈಜೀರಿಯಾ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಆದರೆ, ಅಲ್-ಮಿನುಕಿ ವಿರುದ್ಧ ನಡೆದ ಇತ್ತೀಚಿನ ಕಾರ್ಯಾಚರಣೆ ಯಾವ ಪ್ರದೇಶದಲ್ಲಿ ನಡೆದಿದೆ ಅಥವಾ ವಾಯುದಾಳಿಯ ಮೂಲಕವೇ ಹತ್ಯೆ ನಡೆಸಲಾಯಿತೇ ಎಂಬ ವಿವರಗಳನ್ನು ಟ್ರಂಪ್ ಬಹಿರಂಗಪಡಿಸಿಲ್ಲ.
ಅಲ್-ಮಿನುಕಿಯನ್ನು 2023ರಲ್ಲಿ ಅಮೆರಿಕ “ಜಾಗತಿಕ ಉಗ್ರ” ಪಟ್ಟಿಗೆ ಸೇರಿಸಿತ್ತು. ಆತ ಸಾಹೆಲ್ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಸಿಸ್ ಸಂಘಟನೆಯ ಪ್ರಮುಖ ನಾಯಕನಾಗಿದ್ದು, ಸಂಘಟನೆಯ ಜಾಗತಿಕ ಕಾರ್ಯಾಚರಣೆಗಳಿಗೆ ಮಾರ್ಗದರ್ಶನ ಮತ್ತು ಹಣಕಾಸು ನೆರವು ಒದಗಿಸುತ್ತಿದ್ದನೆಂದು ಅಮೆರಿಕ ವಿದೇಶಾಂಗ ಇಲಾಖೆ ಆರೋಪಿಸಿತ್ತು.
ನೈಜೀರಿಯಾದಲ್ಲಿ ಹಲವು ವರ್ಷಗಳಿಂದ ಇಸಿಸ್ ಸಂಘಟನೆಯ ಪ್ರಾದೇಶಿಕ ಘಟಕಗಳು ಹಾಗೂ ಉಗ್ರ ಸಂಘಟನೆ Boko Haram ವಿರುದ್ಧ ಭದ್ರತಾ ಪಡೆಗಳು ಹೋರಾಟ ನಡೆಸುತ್ತಿವೆ. ಜೊತೆಗೆ “ಬ್ಯಾಂಡಿಟ್ಸ್” ಎಂದು ಕರೆಯಲಾಗುವ ಶಸ್ತ್ರಸಜ್ಜಿತ ಗುಂಪುಗಳ ವಿರುದ್ಧವೂ ಕಾರ್ಯಾಚರಣೆಗಳು ಮುಂದುವರಿದಿವೆ.
2025ರಿಂದಲೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರದಲ್ಲಿ ನೈಜೀರಿಯಾ ಸರ್ಕಾರದ ಮೇಲೆ ಅಮೆರಿಕ ಒತ್ತಡ ಹೇರುತ್ತಿತ್ತು. ಉಗ್ರ ಚಟುವಟಿಕೆ ನಿಯಂತ್ರಣಕ್ಕೆ ನೈಜೀರಿಯಾ ಸಾಕಷ್ಟು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಮೆರಿಕ ಆರೋಪಿಸಿತ್ತು.
ಕಳೆದ ಕ್ರಿಸ್‌ಮಸ್ ದಿನ ಅಮೆರಿಕ ಮತ್ತು ನೈಜೀರಿಯಾ ಜಂಟಿಯಾಗಿ ಉತ್ತರ ಪಶ್ಚಿಮ ಸೋಕೊಟೊ ರಾಜ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಇನ್ ದಿ ಸಾಹೇಲ್ ಸಂಘಟನೆಯ (ISSP) ವಿರುದ್ಧ ವಾಯುದಾಳಿ ನಡೆಸಿದ್ದವು. ಅಂದಿನಿಂದ ನೈಜೀರಿಯಾ ಸೇನೆಗೆ ತರಬೇತಿ ಹಾಗೂ ಬೆಂಬಲ ನೀಡಲು ಅಮೆರಿಕಾ ನೂರಾರು ಸೈನಿಕರನ್ನು ನಿಯೋಜಿಸಿದೆ.
Advertisement