ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆವರೆಗೆ ಇಸ್ರೇಲ್‌ಗೆ ಮಾನ್ಯತೆ ಇಲ್ಲ: ಅಬ್ರಹಾಂ ಒಪ್ಪಂದಕ್ಕೆ 'NO' ಎಂದ ಪಾಕಿಸ್ತಾನ, ಟ್ರಂಪ್ ರಾಜತಾಂತ್ರಿಕ ಯತ್ನಕ್ಕೆ ಹಿನ್ನೆಡೆ..!

ಅಬ್ರಹಾಂ ಒಪ್ಪಂದಕ್ಕೆ ಸೇರ್ಪಡೆಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನಮ್ಮ ಮೂಲ ಸಿದ್ಧಾಂತಗಳು, ವಿದೇಶಾಂಗ ನೀತಿ ಮತ್ತು ಪ್ಯಾಲೆಸ್ಟೀನ್ ಕುರಿತು ಇರುವ ನಿಲುವಿಗೆ ವಿರುದ್ಧವಾಗಿರುವ ಯಾವುದೇ ಒಪ್ಪಂದಕ್ಕೆ ನಾವು ಒಪ್ಪಲ್ಲ.
File photo
ಸಂಗ್ರಹ ಚಿತ್ರ
Updated on

ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಜೊತೆ ಸಂಬಂಧ ಸಾಮಾನ್ಯೀಕರಣಕ್ಕೆ ಅಮೆರಿಕ ಹೊಸ ರಾಜತಾಂತ್ರಿಕ ಪ್ರಯತ್ನಗಳನ್ನು ವೇಗಗೊಳಿಸುತ್ತಿರುವ ಸಂದರ್ಭದಲ್ಲೇ, ಪಾಕಿಸ್ತಾನ ಮತ್ತೊಮ್ಮೆ ತನ್ನ ಪ್ಯಾಲೆಸ್ಟೀನ್ ಪರ ನಿಲುವನ್ನು ಪುನರುಚ್ಚರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನವೂ ಅಬ್ರಹಾಂ ಒಪ್ಪಂದಕ್ಕೆ ಸೇರ್ಪಡೆಯಾಗಬೇಕು ಎಂದು ಕರೆ ನೀಡಿದ್ದರೂ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.

ಇಸ್ರೇಲ್ ಜೊತೆ ಯಾವುದೇ ರೀತಿಯ ಸಂಬಂಧ ಸಾಮಾನ್ಯೀಕರಣಕ್ಕೆ ಪಾಕಿಸ್ತಾನ ಸಮ್ಮತಿಸುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ. ಈ ಮೂಲಕ ಪಾಕಿಸ್ತಾನ ತನ್ನ ಹಳೆಯ ಪ್ಯಾಲೆಸ್ಟೀನ್ ಪರ ನಿಲುವನ್ನು ಮತ್ತೊಮ್ಮೆ ಪುನರುಚ್ಚರಿಸಿದೆ.

ಸ್ಥಳೀಯ ವಾಹಿನಿ ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಖವಾಜಾ ಆಸಿಫ್, ಅಬ್ರಹಾಂ ಒಪ್ಪಂದಕ್ಕೆ ಸೇರ್ಪಡೆಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. “ನಮ್ಮ ಮೂಲ ಸಿದ್ಧಾಂತಗಳು, ವಿದೇಶಾಂಗ ನೀತಿ ಮತ್ತು ಪ್ಯಾಲೆಸ್ಟೀನ್ ಕುರಿತು ಇರುವ ನಿಲುವಿಗೆ ವಿರುದ್ಧವಾಗಿರುವ ಯಾವುದೇ ಒಪ್ಪಂದಕ್ಕೆ ನಾವು ಸೇರಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದ್ದಾರೆ.

ಇಸ್ರೇಲ್ ಜೊತೆ ರಾಜತಾಂತ್ರಿಕ ಅಥವಾ ಆರ್ಥಿಕ ಸಂಬಂಧಗಳನ್ನು ಬೆಳೆಸುವ ವಿಚಾರ ಪಾಕಿಸ್ತಾನದ ಸಿದ್ಧಾಂತಗಳಿಗೆ ಹೊಂದಿಕೆಯಾಗುವುದಿಲ್ಲ ಎಂಬ ತಿಳಿಸಿದ್ದಾರೆ.

File photo
‘ಸ್ವಯಂ ರಕ್ಷಣೆ’ ಹೆಸರಿನಲ್ಲಿ ಇರಾನ್ ಕ್ಷಿಪಣಿ ಉಡಾವಣೆ ತಾಣಗಳ ಮೇಲೆ ಅಮೆರಿಕಾ ವಾಯುದಾಳಿ: ಟ್ರಂಪ್ ದ್ವಿಮುಖ ನಡೆ ವಿರುದ್ಧ ಟೀಕೆ, ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನ..!

ಅಬ್ರಹಾಂ ಒಪ್ಪಂದವು ಇಸ್ರೇಲ್ ಮತ್ತು ಕೆಲವು ಅರಬ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ, ಭದ್ರತಾ ಮತ್ತು ಆರ್ಥಿಕ ಸಂಬಂಧಗಳನ್ನು ಸ್ಥಾಪಿಸಲು ರೂಪಿಸಲಾದ ಮಹತ್ವದ ಒಪ್ಪಂದವಾಗಿದೆ.

ಈಗಾಗಲೇ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಬಹ್ರೇನ್ ಈ ಒಪ್ಪಂದಕ್ಕೆ ಸಹಿ ಹಾಕಿವೆ. ನಂತರ ಹಲವು ದೇಶಗಳನ್ನು ಈ ಒಪ್ಪಂದಕ್ಕೆ ಸೇರಿಸಲು ಅಮೆರಿಕ ನಿರಂತರ ಪ್ರಯತ್ನ ನಡೆಸುತ್ತಿದೆ.

ವಿಶೇಷವಾಗಿ ಇತ್ತೀಚೆಗೆ ಡೊನಾಲ್ಡ್ ಟ್ರಂಪ್ ಅವರು ಸೌದಿ ಅರೇಬಿಯಾ, ಕತಾರ್, ಪಾಕಿಸ್ತಾನ, ತುರ್ಕಿಯೆ, ಈಜಿಪ್ಟ್ ಮತ್ತು ಜೋರ್ಡಾನ್ ಸೇರಿದಂತೆ ಹಲವು ರಾಷ್ಟ್ರಗಳು ಮುಂದಿನ ದಿನಗಳಲ್ಲಿ ಒಪ್ಪಂದಕ್ಕೆ ಸೇರ್ಪಡೆಯಾಗಬಹುದು ಎಂಬ ನಿರೀಕ್ಷೆ ವ್ಯಕ್ತಪಡಿಸಿದ್ದರು.

ಆದರೆ ಖವಾಜಾ ಆಸಿಫ್ ಅವರ ಹೇಳಿಕೆ ಪಾಕಿಸ್ತಾನ ಆ ದಿಕ್ಕಿನಲ್ಲಿ ಯಾವುದೇ ಹೆಜ್ಜೆ ಇಡುವ ಸಾಧ್ಯತೆ ಕಡಿಮೆ ಎಂಬುದನ್ನು ಸ್ಪಷ್ಟಪಡಿಸಿದೆ.

1967ರ ಗಡಿಗಳ ಆಧಾರದ ಮೇಲೆ ಪೂರ್ವ ಜೆರೂಸಲೇಂ ರಾಜಧಾನಿಯಾಗಿರುವ ಸ್ವತಂತ್ರ ಪ್ಯಾಲೆಸ್ಟೀನ್ ರಾಷ್ಟ್ರ ಸ್ಥಾಪನೆಯಾಗುವವರೆಗೆ ಇಸ್ರೇಲ್ ಅನ್ನು ನಾವು ಮಾನ್ಯತೆ ನೀಡುವುದಿಲ್ಲ ಎಂದು ಖವಾಜಾ ಆಸಿಫ್ ಪುನರುಚ್ಚರಿಸಿದ್ದಾರೆ.

File photo
ಕದನ ವಿರಾಮ, ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದಕ್ಕೆ ಇರಾನ್-ಯುಎಸ್ ಹತ್ತಿರ: 'ಆತುರ ಬೇಡ'- ಟ್ರಂಪ್ ಹೊಸ ವರಸೆ!

ಪ್ಯಾಲೆಸ್ಟೀನ್ ಜನರ ಹಕ್ಕುಗಳು ಹಾಗೂ ಭೂಸ್ವಾಮ್ಯ ಪ್ರಶ್ನೆ ಪರಿಹಾರವಾಗದೇ ಇಸ್ರೇಲ್ ಜೊತೆ ಸಂಬಂಧ ಬೆಳೆಸುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಇಸ್ರೇಲ್ ವಿರುದ್ಧ ತೀವ್ರ ಟೀಕೆ ಮಾಡಿರುವ ಖವಾಜಾ ಆಸಿಫ್, ಒಂದು ದಿನವೂ ನಂಬಿಕೆ ಇಡಲಾಗದವರೊಂದಿಗೆ ಹೇಗೆ ಮಾತುಕತೆ ನಡೆಸಲು ಸಾಧ್ಯ?” ಎಂದು ಪ್ರಶ್ನಿಸಿದ್ದಾರೆ. ಪಾಕಿಸ್ತಾನದ ಪಾಸ್‌ಪೋರ್ಟ್ ನೀತಿಯಲ್ಲಿ ಕೂಡ ಇಸ್ರೇಲ್ ಪ್ರವಾಸಕ್ಕೆ ಮಾನ್ಯತೆ ಇಲ್ಲ ಎಂದೂ ಹೇಳಿದ್ದಾರೆ.

ಇದಕ್ಕೂ ಮೊದಲು ಕೂಡ ಖವಾಜಾ ಆಸಿಫ್ ಹಲವು ಬಾರಿ ಇಸ್ರೇಲ್ ವಿರುದ್ಧ ಕಿಡಿಕಾರಿದ್ದರು. ಕಳೆದ ತಿಂಗಳು ಅವರು ಇಸ್ರೇಲ್ ಅನ್ನು “ಮಾನವಕುಲಕ್ಕೆ ಶಾಪ” ಎಂದು ಕರೆಯುವ ಮೂಲಕ ಭಾರೀ ವಿವಾದ ಸೃಷ್ಟಿಸಿದ್ದರು.

ಗಾಜಾ ಪ್ರದೇಶದಲ್ಲಿ ನಡೆಯುತ್ತಿರುವ ದಾಳಿಗಳನ್ನು ಉಲ್ಲೇಖಿಸಿ, ಅಲ್ಲಿನ ಪರಿಸ್ಥಿತಿ ಜನಾಂಗಹತ್ಯೆಯಂತಿದೆ ಎಂದು ಆರೋಪಿಸಿದ್ದರು.

ಪ್ಯಾಲೆಸ್ಟೀನ್ ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಜಗತ್ತು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದರು.

ಪಾಕಿಸ್ತಾನದ ಈ ಹೇಳಿಕೆ ಮಧ್ಯಪ್ರಾಚ್ಯದ ರಾಜಕೀಯ ಸಮೀಕರಣಗಳ ನಡುವೆ ಮಹತ್ವ ಪಡೆದುಕೊಂಡಿದೆ. ಒಂದು ಕಡೆ ಅಮೆರಿಕ ಮತ್ತು ಕೆಲವು ಅರಬ್ ರಾಷ್ಟ್ರಗಳು ಇಸ್ರೇಲ್ ಜೊತೆ ಸಂಬಂಧ ಸಾಮಾನ್ಯೀಕರಣದತ್ತ ಸಾಗುತ್ತಿರುವಾಗ, ಮತ್ತೊಂದು ಕಡೆ ಪಾಕಿಸ್ತಾನ ತನ್ನ ಪ್ಯಾಲೆಸ್ಟೀನ್ ಪರ ನಿಲುವನ್ನು ಮತ್ತಷ್ಟು ಗಟ್ಟಿಯಾಗಿ ಪುನರುಚ್ಚರಿಸಿರುವುದು ಜಾಗತಿಕ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com