ಅಮೆರಿಕದಲ್ಲಿ ಭೀಕರ ವಿಮಾನ ದುರಂತ: ಬೆಂಕಿ ಉಂಡೆಯಂತೆ ಜನನಿಬಿಡ ರಸ್ತೆಗೆ ಅಪ್ಪಳಿಸಿದ ಖಾಸಗಿ ಜೆಟ್; 9 ಮಂದಿ ದುರ್ಮರಣ..!

ವಿಮಾನ ಪತನಗೊಂಡ ಸ್ಥಳದಲ್ಲಿ ಬೃಹತ್ ಕುಳಿ ನಿರ್ಮಾಣವಾಗಿದ್ದು, ಸುತ್ತಮುತ್ತಲಿನ ರಸ್ತೆಯ ಕಾಂಕ್ರೀಟ್ ತುಣುಕುಗಳ ನಡುವೆ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು.
Law enforcement respond to a plane crash in Palm Beach County, Fla., Sunday.
ವಿಮಾನ ಪತನಗೊಂಡಿರುವ ಸ್ಥಳ.
Updated on: 

ಫ್ಲೋರಿಡಾ: ಅಮೆರಿಕದ ದಕ್ಷಿಣ ಫ್ಲೋರಿಡಾದ ಜನನಿಬಿಡ ವಸತಿ ಪ್ರದೇಶದ ಬಳಿ ಭೀಕರ ವಿಮಾನ ಅಪಘಾತವೊಂದು ಭಾನುವಾರ ಸಂಭವಿಸಿದೆ.

ಹಾರಾಟ ನಡೆಸುತ್ತಿದ್ದ ಖಾಸಗಿ ಬಿಸಿನೆಸ್ ಜೆಟ್ ವಿಮಾನವೊಂದು ಹಠಾತ್ತನೆ ನಿಯಂತ್ರಣ ತಪ್ಪಿ ನೇರವಾಗಿ ನೆಲಕ್ಕೆ ಅಪ್ಪಳಿಸಿ, ಬೆಂಕಿಯ ಉಂಡೆಯಾಗಿ ಸ್ಫೋಟಗೊಂಡಿದೆ. ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ ಎಲ್ಲಾ ಒಂಬತ್ತು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅಮೆರಿಕಾದ ಅಧಿಕಾರಿಗಳು ತಿಳಿಸಿದ್ದಾರೆ.

ಜನನಿಬಿಡ ರಸ್ತೆಯ ಸಮೀಪ ಈ ದುರಂತ ಸಂಭವಿಸಿದ್ದು, ವಿಮಾನವು ಮನೆಗಳ ಮೇಲೆ ಬೀಳುವ ಸ್ವಲ್ಪದರಲ್ಲೇ ರಸ್ತೆಯ ಪಕ್ಕದಲ್ಲಿ ಅಪ್ಪಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾರುಗಳಲ್ಲಿ ಪ್ರಯಾಣಿಸುತ್ತಿದ್ದವರು ರೆಕಾರ್ಡ್ ಮಾಡಿರುವ ದೃಶ್ಯಗಳಲ್ಲಿ, ಆಕಾಶದಿಂದ ವೇಗವಾಗಿ ಕೆಳಕ್ಕೆ ಧಾವಿಸಿದ ವಿಮಾನ ರಸ್ತೆಯ ಸಮೀಪ ಅಪ್ಪಳಿಸಿ ಭಾರೀ ಸ್ಫೋಟದೊಂದಿಗೆ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದೆ.

ವಿಮಾನ ಪತನಗೊಂಡ ಸ್ಥಳದಲ್ಲಿ ಬೃಹತ್ ಕುಳಿ ನಿರ್ಮಾಣವಾಗಿದ್ದು, ಸುತ್ತಮುತ್ತಲಿನ ರಸ್ತೆಯ ಕಾಂಕ್ರೀಟ್ ತುಣುಕುಗಳ ನಡುವೆ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳದಲ್ಲಿ ದಟ್ಟವಾದ ಕಪ್ಪು ಹೊಗೆ ಆವರಿಸಿತ್ತು. ಮನೆಗಳು ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳಿಗೆ ಕೆಲವೇ ಅಡಿಗಳ ಅಂತರದಲ್ಲಿ ವಿಮಾನ ಪತನಗೊಂಡಿರುವುದನ್ನು ಕಂಡು ಸ್ಥಳೀಯರು ಆಘಾತ ವ್ಯಕ್ತಪಡಿಸಿದ್ದಾರೆ.

ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮಧ್ಯಾಹ್ನ 12.50ಕ್ಕೆ ಪಾಮ್ ಬೀಚ್ ಕೌಂಟಿಯಲ್ಲಿ ಲಿಯರ್‌ಜೆಟ್ 60 ವಿಮಾನ ಪತನಗೊಂಡಿದೆ. ಇದೊಂದು ಭೀಕರ ದುರಂತ ಎಂದು ಹೇಳಿದ್ದಾರೆ.

ಅಪಘಾತದ ತನಿಖೆಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಗೆ (ಎನ್‌ಟಿಎಸ್‌ಬಿ) ನೆರವು ನೀಡಲು ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತಂಡವನ್ನು ಕಳುಹಿಸುತ್ತಿದೆ ಎಂದು ತಿಳಿಸಿದ್ದಾರೆ.

ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಮಾತನಾಡಿ, ವಿಮಾನದಲ್ಲಿದ್ದ ಎಲ್ಲರೂ ಮೃತಪಟ್ಟಿದ್ದು, ರಸ್ತೆಯಲ್ಲಿದ್ದ ಯಾರಿಗೂ ಗಾಯವಾಗಿರುವ ಅಥವಾ ಮೃತಪಟ್ಟಿರುವ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ ಎಂದು ಹೇಳಿದ್ದಾರೆ.

ಇದೊಂದು ಭೀಕರ ವಿಮಾನ ದುರಂತ. ಕ್ಷಿಪಣಿಯೊಂದು ಕೆಳಕ್ಕೆ ಧಾವಿಸಿದಂತೆ ವಿಮಾನ ಕಾಣುತ್ತಿತ್ತು. ರಸ್ತೆಯ ಬದಿಯಲ್ಲಿ ಬೃಹತ್ ಕುಳಿಯೊಂದು ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

Law enforcement respond to a plane crash in Palm Beach County, Fla., Sunday.
B-52 Bomber Bursts: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೀಕರ ವಿಮಾನ ಅಪಘಾತ; ಬಿ-52 ಬಾಂಬರ್ ಪತನ, 8 ಮಂದಿ ಸಾವು! Video

ಭಾನುವಾರ ಫ್ಲೋರಿಡಾದಾದ್ಯಂತ ಭಾರೀ ಮಳೆಯಾಗುತ್ತಿತ್ತು. ಅತಿಯಾದ ಮಳೆಯ ಹಿನ್ನೆಲೆಯಲ್ಲಿ ಸೋಮವಾರ ಮಧ್ಯಾಹ್ನದವರೆಗೆ ಪ್ರವಾಹದ ಮುನ್ನೆಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿತ್ತು.

ಫೆಡರಲ್ ಏವಿಯೇಷನ್ ​​ಅಡ್ಮಿನಿಸ್ಟ್ರೇಷನ್ ಪ್ರಕಾರ, ಟೆಕ್ಸಾಸ್‌ನ ಆಸ್ಟಿನ್-ಬರ್ಗ್‌ಸ್ಟ್ರಾಮ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಈ ವಿಮಾನ ಬಹಾಮಾಸ್‌ಗೆ ತೆರಳುತ್ತಿತ್ತು. ವಿಮಾನದಲ್ಲಿ ಯಾರೆಲ್ಲ ಪ್ರಯಾಣಿಸುತ್ತಿದ್ದರು ಮತ್ತು ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಅಧಿಕಾರಿಗಳು ತಕ್ಷಣಕ್ಕೆ ಬಹಿರಂಗಪಡಿಸಿಲ್ಲ.

ವಿಮಾನವು ಸಮುದ್ರ ಮಟ್ಟದಿಂದ ಸುಮಾರು 35,000 ಅಡಿ ಎತ್ತರದಲ್ಲಿ ಪೂರ್ವ ದಿಕ್ಕಿಗೆ ಹಾರಾಟ ನಡೆಸುತ್ತಿದ್ದಾಗ ಪೈಲಟ್‌ಗಳು ಪ್ರಕ್ಷುಬ್ಧ ಹವಾಮಾನ, ವಿಮಾನದ ಮೇಲೆ ಮಂಜುಗಡ್ಡೆ ರೂಪುಗೊಳ್ಳುತ್ತಿರುವುದು ಹಾಗೂ ಮಳೆಯ ಬಗ್ಗೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದರು. ಅಲ್ಲದೆ, ಇನ್ನೂ 2,000 ಅಡಿ ಎತ್ತರಕ್ಕೆ ಹಾರಲು ಅನುಮತಿ ಕೋರಿದ್ದರು.

ಆದರೆ, ಕೆಲವೇ ಕ್ಷಣಗಳಲ್ಲಿ ವಿಮಾನವು ತೀವ್ರವಾಗಿ ಕೆಳಮುಖವಾಗಿ ಧಾವಿಸಲು ಆರಂಭಿಸಿತು. ಪ್ರತಿ ನಿಮಿಷಕ್ಕೆ 10,000 ಅಡಿ ವೇಗದಲ್ಲಿ ಕೆಳಗಿಳಿಯುತ್ತಿದ್ದ ವಿಮಾನದ ವೇಗ ಬಳಿಕ 20,000 ಅಡಿ ಹಾಗೂ ಗರಿಷ್ಠ 30,000 ಅಡಿಗೆ ಏರಿತ್ತು. ಇದರಿಂದ ವಿಮಾನವು ಅದರ ವಿನ್ಯಾಸದ ಮಿತಿಯನ್ನೂ ಮೀರಿತ್ತು ಎಂದು ವಾಯು ಸಂಚಾರ ನಿಯಂತ್ರಣದ ಧ್ವನಿಮುದ್ರಿಕೆಗಳು ಹಾಗೂ ವಿಮಾನ ಹಾರಾಟದ ದತ್ತಾಂಶ ತಿಳಿಸಿವೆ.

ವಿಮಾನ ಅಪಾಯದಲ್ಲಿರುವುದನ್ನು ಅರಿತ ಪೈಲಟ್ ತುರ್ತು ಪರಿಸ್ಥಿತಿ ಘೋಷಿಸಿ ಸಹಾಯಕ್ಕಾಗಿ ಸಂದೇಶ ರವಾನಿಸಿದ್ದರು. ಬಳಿಕ ವಿಮಾನ ಬಲಭಾಗಕ್ಕೆ ತೀವ್ರವಾಗಿ ವಾಲಿ ನೆಲಕ್ಕೆ ಅಪ್ಪಳಿಸಿತು ಎಂದು ತಿಳಿದುಬಂದಿದೆ.

ಅಪಘಾತ ಸಂಭವಿಸುವ ಕೆಲವೇ ನಿಮಿಷಗಳ ಮೊದಲು ವಿಮಾನದ ಮೇಲೆ ಮಂಜುಗಡ್ಡೆ ಸಂಗ್ರಹವಾಗುತ್ತಿರುವುದಾಗಿ ಪೈಲಟ್ ಮಾಹಿತಿ ನೀಡಿದ್ದರು. ಅಲ್ಲದೆ, ಪ್ರಕ್ಷುಬ್ಧ ಹವಾಮಾನದಿಂದ ವಿಮಾನವು ಸುಮಾರು 700 ಅಡಿಗಳಷ್ಟು ಮೇಲಕ್ಕೆ ಮತ್ತು ಕೆಳಕ್ಕೆ ಅಲುಗಾಡುತ್ತಿತ್ತು ಎಂದು ಲೈವ್‌ಎಟಿಸಿ.ನೆಟ್ ದಾಖಲಿಸಿರುವ ವಾಯು ಸಂಚಾರ ನಿಯಂತ್ರಣದ ಸಂಭಾಷಣೆಯಿಂದ ತಿಳಿದುಬಂದಿದೆ.

ವಿಮಾನದಲ್ಲಿ ನಿರ್ವಹಿಸಬಹುದಾದಷ್ಟು ಪ್ರಮಾಣದ ಹಗುರವಾದ ಮಂಜುಗಡ್ಡೆ ಸಂಗ್ರಹವಾಗುತ್ತಿದೆ. ಮಧ್ಯಮ ಪ್ರಮಾಣದ ಪ್ರಕ್ಷುಬ್ಧ ಹವಾಮಾನವಿದೆ" ಎಂದು ಪೈಲಟ್ ನಿಯಂತ್ರಣ ಕೊಠಡಿಗೆ ತಿಳಿಸಿದ್ದರು.

ಆದರೆ, ಪರಿಸ್ಥಿತಿ ಕ್ಷಿಪ್ರವಾಗಿ ಹದಗೆಟ್ಟಿತ್ತು. ಮಳೆ ಮತ್ತು ಪ್ರತಿಕೂಲ ಹವಾಮಾನ ಎದುರಾದ ಬಳಿಕ ಪೈಲಟ್ ವಿಮಾನವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಅನುಮತಿ ಕೋರಿದ್ದರು. ಇದೇ ವೇಳೆ ವಿಮಾನವು ವೇಗವಾಗಿ ಎತ್ತರ ಕಳೆದುಕೊಳ್ಳಲು ಆರಂಭಿಸಿದ್ದರಿಂದ ತುರ್ತು ಪರಿಸ್ಥಿತಿ ಘೋಷಿಸಿದ್ದರು.

ನಾವು ಪ್ರತಿ ನಿಮಿಷಕ್ಕೆ 8,000 ಅಡಿ ವೇಗದಲ್ಲಿ ಕೆಳಗಿಳಿಯುತ್ತಿದ್ದೇವೆ... ಮೇಡೇ, ಮೇಡೇ... ಪ್ರತಿ ನಿಮಿಷಕ್ಕೆ 10,000 ಅಡಿ ವೇಗದಲ್ಲಿ ಕೆಳಗಿಳಿಯುತ್ತಿದ್ದೇವೆ" ಎಂದು ಪೈಲಟ್ ಆತಂಕದಿಂದ ಸಂದೇಶ ರವಾನಿಸಿದ್ದರು.

ಬಳಿಕ ವಿಮಾನವು ನಿಯಂತ್ರಣ ಮೀರಿದ ವೇಗದಲ್ಲಿ ಪ್ರತಿ ನಿಮಿಷಕ್ಕೆ 20,000 ಅಡಿ ವೇಗದಲ್ಲಿ ಕೆಳಗಿಳಿಯುತ್ತಿರುವುದಾಗಿ ತಿಳಿಸಿದ್ದರು. ಕೊನೆಗೆ, "ನಾವು ನೆಲಕ್ಕೆ ಅಪ್ಪಳಿಸಲಿದ್ದೇವೆ" ಎಂದು ದುರಂತದ ಮುನ್ಸೂಚನೆ ನೀಡಿದ್ದರು.

ಆಸ್ಟಿನ್-ಬರ್ಗ್‌ಸ್ಟ್ರಾಮ್ ವಿಮಾನ ನಿಲ್ದಾಣದ ವಕ್ತಾರ ಜಿಮ್ ರೆನಾಲ್ಡ್ಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಪತನಗೊಂಡಿರುವುದು ಖಾಸಗಿ ವಿಮಾನವಾಗಿದೆ. ಅದರಲ್ಲಿದ್ದ ಪ್ರಯಾಣಿಕರ ಬಗ್ಗೆ ತಕ್ಷಣಕ್ಕೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇತ್ತ ಅಪಘಾತದ ಹಿನ್ನೆಲೆಯಲ್ಲಿ ಸಮೀಪದ ಮೊಬೈಲ್ ಮನೆಗಳ ವಸತಿ ಪ್ರದೇಶದಿಂದ ಸುಮಾರು 600 ಜನರನ್ನು ಸ್ಥಳಾಂತರಿಸಲು ಪಾಮ್ ಬೀಚ್ ಕೌಂಟಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಫೆಡರಲ್ ಅಧಿಕಾರಿಗಳು ತನಿಖೆ ಮುಂದುವರಿಸಿರುವುದರಿಂದ ಅಪಘಾತ ಸಂಭವಿಸಿದ ರಸ್ತೆಯನ್ನು ಮುಂದಿನ ಆದೇಶದವರೆಗೆ ಬಂದ್ ಮಾಡಲಾಗಿದೆ.

ಪಾಮ್ ಬೀಚ್ ಕೌಂಟಿ ಶೆರಿಫ್ ಕಚೇರಿಯ ಪ್ರಕಾರ, ಗ್ರೀನ್‌ಏಕರ್ಸ್ ನಗರದಲ್ಲಿ ಈ ದುರಂತ ಸಂಭವಿಸಿದ್ದು, ಸುಮಾರು 45,000 ಜನಸಂಖ್ಯೆ ಹೊಂದಿರುವ ಈ ನಗರವು ವೆಸ್ಟ್ ಪಾಮ್ ಬೀಚ್‌ನಿಂದ ಏಳು ಮೈಲಿ (ಸುಮಾರು 11 ಕಿ.ಮೀ.) ನೈಋತ್ಯ ದಿಕ್ಕಿನಲ್ಲಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X