

ನವದೆಹಲಿ: ಜಗತ್ತಿನ ಅತ್ಯಂತ ಪ್ರಮುಖ ಮತ್ತು ಮುಂಚೂಣಿ ಕೃತಕ ಬುದ್ಧಿಮತ್ತೆ (AI) ಮತ್ತು ಗ್ರಾಫಿಕ್ಸ್ ಚಿಪ್ ಉತ್ಪಾದನಾ ಕಂಪನಿಯಾಗಿರುವ ಅಮೆರಿಕದ ಎನ್‌ವಿಡಿಯಾ ಕಂಪನಿಯ ಸಿಇಒ ಮತ್ತು ಸಹ-ಸ್ಥಾಪಕರಾದ ಜೇನ್ಸನ್ ಹುವಾಂಗ್ ಚೀನಾ ಮೂಲದ ಮಹಿಳೆ ಜೊತೆ ಹೊಂದಿದ್ದ ವಿವಾಹೇತರ ಸಂಬಂಧ ಈಗ ಅಮೆರಿಕ-ಚೀನಾ ಸಂಬಂಧಗಳ ಮೇಲೆ ತೀವ್ರ ಪರಿಣಾಮ ಬೀರಿದೆ.
ಅಮೆರಿಕದ ರಫ್ತು ನಿಯಂತ್ರಣಗಳನ್ನು ಮೀರಿ ಎನ್‌ವಿಡಿಯಾದ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ಚಿಪ್‌ಗಳ ರಹಸ್ಯ ಮಾಹಿತಿಗಳನ್ನು ಈ ಮಹಿಳೆಯ ಮೂಲಕ ಚೀನಾ ಸರ್ಕಾರ ಪಡೆದುಕೊಳ್ಳುತ್ತಿತ್ತು ಎಂಬ ಆರೋಪಕ್ಕೆ ಚೀನಾ ಪ್ರತಿಕ್ರಿಯೆ ನೀಡಿದೆ.
ತನ್ನ ವಿರುದ್ಧದ ಆರೋಪವನ್ನು ಚೀನಾ ನಿರಾಕರಿಸಿದ್ದು, ಬೇಹುಗಾರಿಕೆ ಆರೋಪಗಳು ಆಧಾರರಹಿತ ಮತ್ತು ಬೀಜಿಂಗ್ ವಿರುದ್ಧದ ಅಪಪ್ರಚಾರ ಎಂದು ಹೇಳಿದೆ. ದಿ ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಬೀಜಿಂಗ್‌ಗಾಗಿ ಮಹಿಳೆಯೊಬ್ಬರು ಮಾಹಿತಿಯನ್ನು ಸಂಗ್ರಹಿಸುತ್ತಿದ್ದುದ್ದನ್ನು ಯುಎಸ್ ಗುಪ್ತಚರ ಇಲಾಖೆ ಪತ್ತೆ ಮಾಡಿದ್ದು, ಆಕೆಯೊಂದಿಗೆ ತಾನು ನಿಕಟವಾಗಿದ್ದೇನೆ ಎಂದು ಹುವಾಂಗ್ ಎನ್ವಿಡಿಯಾ ಮಂಡಳಿಯ ಸಮ್ಮುಖದಲ್ಲಿ ಒಪ್ಪಿಕೊಂಡಿದ್ದಾರೆ.
"ಚೀನೀ ಗೂಢಚಾರ ಆರೋಪ ಎಂದು ಕರೆಯಲ್ಪಡುವ ಆರೋಪ ಆಧಾರರಹಿತವಾಗಿದೆ. ಇದು ಚೀನಾ ವಿರುದ್ಧದ ಅಪಪ್ರಚಾರವಲ್ಲದೆ ಬೇರೇನೂ ಅಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಸೋಮವಾರ ಹೇಳಿದ್ದಾರೆ.
ಈ ಬೆಳವಣಿಗೆಗಳ ಬೆನ್ನಲ್ಲೇ ಎನ್ವಿಡಿಯಾ ಷೇರುಗಳು ಪೂರ್ವ-ಮಾರುಕಟ್ಟೆ ವ್ಯಾಪಾರದಲ್ಲಿ ಸರಿಸುಮಾರು 5% ರಷ್ಟು ಕುಸಿದಿವೆ.
ಸುಧಾರಿತ ತಂತ್ರಜ್ಞಾನಗಳನ್ನು ಪ್ರವೇಶಿಸುವ ಚೀನಾದ ಸಾಮರ್ಥ್ಯವನ್ನು ಸೀಮಿತಗೊಳಿಸುವ ಗುರಿಯನ್ನು ಹೊಂದಿರುವ ಯುಎಸ್ ತಂತ್ರಜ್ಞಾನ ನಿರ್ಬಂಧಗಳ ಹೊರತಾಗಿಯೂ, ಚಿಪ್ಸ್ ಕಂಪನಿಯ ಸಿಇಒ ಅವರು ಚೀನಾಕ್ಕೆ ಸುಧಾರಿತ ಕಂಪ್ಯೂಟರ್ ಚಿಪ್‌ಗಳ ಮಾರಾಟವನ್ನು ನಡೆಸಿದ್ದಾರೆಯೇ ಎಂಬ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಆಪಲ್ ಮತ್ತು ಮೈಕ್ರೋಸಾಫ್ಟ್ ಜೊತೆಗೆ ಎನ್ವಿಡಿಯಾ ವಿಶ್ವದ ಅತ್ಯಂತ ಮೌಲ್ಯಯುತ ಸಾರ್ವಜನಿಕವಾಗಿ ವ್ಯಾಪಾರ ಮಾಡುವ ಕಂಪನಿಗಳಲ್ಲಿ ಒಂದಾಗಿದೆ.
ಈ ಪ್ರಕರಣದ ಬಗ್ಗೆ ತನಿಖೆಯನ್ನು ಪ್ರಾರಂಭಿಸಲಾಗುತ್ತದೆ ಎಂದು ಎನ್ವಿಡಿಯಾ ಹೇಳಿದೆ. ಆದರೆ ವಿವಾಹೇತರ ಸಂಬಂಧದಲ್ಲಿರುವ ವ್ಯಕ್ತಿಯನ್ನು ಸಿಇಒ ಹುವಾಂಗ್ ಹೆಸರಿಸಲಿಲ್ಲ.
ಚೀನಾಕ್ಕೆ ಸುಧಾರಿತ ಚಿಪ್‌ಗಳನ್ನು ಕಳ್ಳಸಾಗಣೆ ಮಾಡಿದ ಆರೋಪಗಳನ್ನು ಎದುರಿಸುತ್ತಿದ್ದ ಕಂಪನಿಯನ್ನು ನಡೆಸುತ್ತಿದ್ದ ಆಲಿಸ್ ಹುವಾಂಗ್ ಎಂಬ ಚೀನೀ ಪ್ರಜೆಯೊಂದಿಗೆ ಹುವಾಂಗ್ ನಿಕಟ ಸಂಬಂಧವನ್ನು ಬೆಳೆಸಿಕೊಂಡಿದ್ದಾರೆ ಮತ್ತು ಅವರು ಬೀಜಿಂಗ್‌ನ ಗೂಢಚಾರರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿಯನ್ನು ಚೀನಾ ಈ ಹಿಂದೆ ನಿರಾಕರಿಸಿತ್ತು.
"ಹುವಾಂಗ್ ಅವರಿಗೆ ಯಾವುದೇ ಬೇಹುಗಾರಿಕೆ ಚಟುವಟಿಕೆಗಳ ಬಗ್ಗೆ ಮೊದಲೆ ತಿಳಿದಿತ್ತೆ ಮತ್ತು ಯಾವುದೇ ಗೌಪ್ಯ ಅಥವಾ ಕಾರ್ಯತಂತ್ರದ ಸೂಕ್ಷ್ಮ ಮಾಹಿತಿಯನ್ನು ರಾಜಿ ಮಾಡಿಕೊಳ್ಳಲಾಗಿದೆಯೇ ಎಂಬುದು ಪ್ರಮುಖ ಪ್ರಶ್ನೆಗಳಾಗಿವೆ" ಎಂದು ವಾಷಿಂಗ್ಟನ್ ಮೂಲದ ಸಲಹಾ ಸಂಸ್ಥೆಯಾದ ದಿ ಏಷ್ಯಾ ಗ್ರೂಪ್‌ನ ಪಾಲುದಾರ ಮತ್ತು ಡಿಜಿಟಲ್ ವಿಭಾಗದ ಅಧ್ಯಕ್ಷ ಜಾರ್ಜ್ ಚೆನ್ ಹೇಳಿದರು.
"ಆ ಪ್ರಶ್ನೆಗಳಿಗೆ ಊಹಾಪೋಹಕ್ಕಿಂತ ಪುರಾವೆಗಳು ಬೇಕಾಗುತ್ತವೆ," ಎಂದು ಅವರು ವರದಿಗಾರರಿಗೆ ಸಂದೇಶದಲ್ಲಿ ಹೇಳಿದ್ದರು. 'ನ್ಯೂಯಾರ್ಕ್ ಟೈಮ್ಸ್' ವರದಿಯು ಅಮೆರಿಕ-ಚೀನಾ ಸಂಬಂಧಗಳನ್ನು ಅಸ್ಥಿರಗೊಳಿಸುವ ಉದ್ದೇಶವನ್ನು ಹೊಂದಿತ್ತು ಎಂದು ಕೆಲವರು ಹೇಳಿದ್ದಾರೆ.
"ಚೀನಾ-ಅಮೆರಿಕ ಸಂಬಂಧಗಳು ಸುಧಾರಿಸಲು ಪ್ರಾರಂಭಿಸಿದಾಗಲೆಲ್ಲಾ, ತೆರೆಮರೆಯಲ್ಲಿ ನಿಂತು ದಾಳಿ ನಡೆಸುವವರು ಆಗಾಗ್ಗೆ ಕಾಣಿಸಿಕೊಳ್ಳುತ್ತಾರೆ" ಎಂದು ಸರ್ಕಾರಿ ಸ್ವಾಮ್ಯದ 'ಗ್ಲೋಬಲ್ ಟೈಮ್ಸ್' ಹೇಳಿದೆ.