ಆರ್ಥಿಕ ನಿರ್ಬಂಧಗಳು ಪರಿಣಾಮಕಾರಿಯಾಗಿವೆ, ಇರಾನ್ ವಿರುದ್ಧ ಯುದ್ಧ ಕಾರ್ಯಾಚರಣೆಗಳ ಅಗತ್ಯವಿಲ್ಲ- US ವಿದೇಶಾಂಗ ಸಚಿವ ರೂಬಿಯೊ

ಆದರೆ, ಇರಾನ್ ಒಂದು ವೇಳೆ 'ಕೆಂಪು ರೇಖೆಗಳನ್ನು' (ನಿರ್ದಿಷ್ಟ ಮಿತಿಗಳನ್ನು) ದಾಟಿದರೆ, "ಅಮೆರಿಕದ ಸೇನೆಯು ಸಿದ್ಧವಾಗಿದೆ" ಎಂದು ಹೇಳಿದ ರೂಬಿಯೊ, ಇರಾನ್‌ನ ರಾಜಧಾನಿ ಟೆಹ್ರಾನ್ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
US Secretary of State Marco Rubio
ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋonline desk
Updated on: 

ಪ್ಯಾರಿಸ್: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಮಂಗಳವಾರ ಮಾತನಾಡಿ, ಇರಾನ್ ವಿರುದ್ಧ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ಪುನರಾರಂಭಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಇರಾನ್ ವಿರುದ್ಧ ಪ್ರಮುಖ ಯುದ್ಧ ಕಾರ್ಯಾಚರಣೆಗಳನ್ನು ಮತ್ತೆ ಆರಂಭಿಸುವ ಅಗತ್ಯವಿಲ್ಲ ಏಕೆಂದರೆ, ಆರ್ಥಿಕ ನಿರ್ಬಂಧಗಳು ಮತ್ತು ಇತರ ನಿರ್ಬಂಧಗಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿವೆ ಎಂದು ರುಬಿಯೋ ಹೇಳಿದ್ದಾರೆ.

ಪ್ಯಾರಿಸ್‌ನಲ್ಲಿ ನಡೆದ ಜಿ-7 (G7) ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯ ನಂತರ ಮಾತನಾಡಿದ ರೂಬಿಯೊ, "(ಇರಾನ್ ವಿರುದ್ಧದ) ಆರ್ಥಿಕ ಅಭಿಯಾನ ಎಷ್ಟು ತೀವ್ರ ಪರಿಣಾಮ ಬೀರಿದೆಯೆಂದರೆ, ಸದ್ಯಕ್ಕೆ ಯಾವುದೇ ಪ್ರಮುಖ ಯುದ್ಧ ಕಾರ್ಯಾಚರಣೆಗಳ ಅಗತ್ಯವಿಲ್ಲ. ಇದನ್ನೇ ನಾನು ಇಂದು ಇಲ್ಲಿ ನಮ್ಮ ಮಿತ್ರರಾಷ್ಟ್ರಗಳಿಗೆ ತಿಳಿಸಿದ್ದೇನೆ" ಎಂದು ಹೇಳಿದರು.

ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ಸದ್ಯಕ್ಕೆ ಪ್ರಮುಖ ಯುದ್ಧ ಕಾರ್ಯಾಚರಣೆಗಳ ಅಗತ್ಯವಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಏಕೆಂದರೆ, ಆರ್ಥಿಕ ಕ್ರಮಗಳ ಮೂಲಕವೇ ನಾವು ನಮ್ಮ ಗುರಿಯನ್ನು ಸಾಧಿಸುತ್ತಿದ್ದೇವೆ" ಎಂದು ರೂಬಿಯೊ ತಿಳಿಸಿದರು.

ಆದರೆ, ಇರಾನ್ ಒಂದು ವೇಳೆ 'ಕೆಂಪು ರೇಖೆಗಳನ್ನು' (ನಿರ್ದಿಷ್ಟ ಮಿತಿಗಳನ್ನು) ದಾಟಿದರೆ, "ಅಮೆರಿಕದ ಸೇನೆಯು ಸಿದ್ಧವಾಗಿದೆ" ಎಂದು ಹೇಳಿದ ರೂಬಿಯೊ, ಇರಾನ್‌ನ ರಾಜಧಾನಿ ಟೆಹ್ರಾನ್ ತೀವ್ರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ಯಾರಿಸ್‌ನಲ್ಲಿ ನಡೆದ ಜಿ-7 ವಿದೇಶಾಂಗ ಸಚಿವರ ಸಭೆಯಲ್ಲಿ, ಯುರೋಪಿಯನ್ ಸದಸ್ಯ ರಾಷ್ಟ್ರಗಳು ಇರಾನ್ ವಿರುದ್ಧ ಯಾವುದೇ ಹೊಸ ಸಂಘರ್ಷ ಉಲ್ಬಣಗೊಳ್ಳದಂತೆ ನೋಡಿಕೊಳ್ಳುವಂತೆ ರೂಬಿಯೊ ಅವರ ಮೇಲೆ ಒತ್ತಡ ಹೇರಿದವು.

ಒಂದು ಅನಿರೀಕ್ಷಿತ ಬೆಳವಣಿಗೆಯಲ್ಲಿ, ಕತಾರ್ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ಅಬ್ದುಲ್ ರೆಹಮಾನ್ ಅಲ್ ಥಾನಿ ಅವರು, ಟ್ರಂಪ್ ಅವರನ್ನು ಭೇಟಿಯಾದ ಕೆಲವೇ ಗಂಟೆಗಳಲ್ಲಿ ಜಿ-7 ಸಭೆಯ ಪಾರ್ಶ್ವದಲ್ಲಿ ಯುರೋಪಿನ ನಾಲ್ವರು ಹಿರಿಯ ರಾಜತಾಂತ್ರಿಕರು ಮತ್ತು ಸೌದಿ ಅರೇಬಿಯಾದ ವಿದೇಶಾಂಗ ಸಚಿವರೊಂದಿಗೆ ಮಾತುಕತೆಯಲ್ಲಿ ಪಾಲ್ಗೊಂಡರು. ಇರಾನ್ ಜೊತೆಗಿನ ವಾಷಿಂಗ್ಟನ್‌ನ ಯುದ್ಧವನ್ನು ಕೊನೆಗೊಳಿಸುವ ಕುರಿತು ಅವರು ಚರ್ಚಿಸಿದರು ಎಂದು ಪ್ಯಾರಿಸ್ ಮೂಲಗಳು ತಿಳಿಸಿವೆ.

ಕತಾರ್‌ನ ವಿದೇಶಾಂಗ ಸಚಿವರೂ ಆಗಿರುವ ಪ್ರಮುಖ ಮಧ್ಯವರ್ತಿ ಅಲ್ ಥಾನಿ ಅವರನ್ನು ಭೇಟಿಯಾದ ನಂತರ ಮಾತನಾಡಿದ ಟ್ರಂಪ್, ಫೆಬ್ರವರಿ 28 ರಂದು ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಹತ್ಯೆಯೊಂದಿಗೆ ಪ್ರಾರಂಭವಾದ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬರುತ್ತಿವೆ ಎಂದು ಹೇಳಿದರು.

ಅಮೆರಿಕದ ದಿಗ್ಬಂಧನಗಳಿಂದಾಗಿ ಇರಾನ್‌ನ ತೈಲ ಪೂರೈಕೆ ಸ್ಥಗಿತಗೊಳ್ಳುತ್ತಿದೆ ಎಂದು ಹೇಳಿದ ರೂಬಿಯೊ, "ಪ್ರಸ್ತುತ ಇರಾನ್ ಮತ್ತು ಅಲ್ಲಿನ ಆಡಳಿತದ ಮೇಲೆ ಹೇರಲಾಗುತ್ತಿರುವ ಆರ್ಥಿಕ ಸಂಕಷ್ಟವು ಅಸಾಧಾರಣವಾಗಿದೆ ಮತ್ತು ಅದು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ" ಎಂದು ತಿಳಿಸಿದರು.

ಇಸ್ಲಾಮಿಕ್ ಗಣರಾಜ್ಯದ ಧಾರ್ಮಿಕ ನಾಯಕತ್ವವನ್ನು ಉಲ್ಲೇಖಿಸಿದ ಅವರು, "ಈ ಉನ್ಮಾದದ ​​ಕಠೋರ ಆಡಳಿತವು ತನ್ನದೇ ಆದ ಜನರ ಮೇಲೆ ಇಂತಹ ಸಂಕಷ್ಟಗಳನ್ನು ಹೇರುತ್ತಿದೆ" ಎಂದು ಹೇಳಿದರು.

ಆದರೆ, ಟೆಹ್ರಾನ್ ಜೊತೆಗಿನ ಒಪ್ಪಂದದ ಸಾಧ್ಯತೆಗಳ ಬಗ್ಗೆ ರೂಬಿಯೊ ಅಷ್ಟೇನೂ ಆಶಾವಾದಿಯಾಗಿರಲಿಲ್ಲ. ಇರಾನ್ ಪ್ರಸ್ತುತ ಮಾತುಕತೆಗಳ ವಿಷಯದಲ್ಲಿ ವಾಸ್ತವಿಕ ದೃಷ್ಟಿಕೋನವನ್ನು ಹೊಂದಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

"ಇರಾನ್ ಒಂದು ಒಪ್ಪಂದವನ್ನು ಬಯಸುತ್ತದೆ. ಆದರೆ ಸಮಸ್ಯೆಯೇನೆಂದರೆ, ಅವರು ಪದೇ ಪದೇ ವಿಧಿಸುತ್ತಿರುವ ಷರತ್ತುಗಳು ತರ್ಕಹೀನವಾಗಿವೆ. ಅವರು ಗಂಭೀರವಾಗಿಯೇ ಇಲ್ಲ. ಆದಾಗ್ಯೂ, ಪರಿಸ್ಥಿತಿ ಬದಲಾಗಬಹುದು" ಎಂದು ಅವರು ಹೇಳಿದರು. "ಅಂತಿಮವಾಗಿ, ನೀವು ತಿನ್ನಲೇಬೇಕು, ನಿಮ್ಮ ಸ್ವಂತ ಹೋರಾಟಗಾರರಿಗೆ ಮತ್ತು ಭದ್ರತಾ ಪಡೆಗಳಿಗೆ ಹಣ ಪಾವತಿಸಲೇಬೇಕು. ಕಾಲ ಕಳೆದಂತೆ ಇದು ಪರಿಣಾಮ ಬೀರುತ್ತದೆ ಎಂದು ನಾನು ಭಾವಿಸುತ್ತೇನೆ... ಅಂತಿಮವಾಗಿ, ಆರ್ಥಿಕ ವಾಸ್ತವಗಳು ಅತ್ಯಂತ ಉಗ್ರಗಾಮಿ ಹುಚ್ಚರ ತಲೆಗೂ ತಲುಪಿಯೇ ತೀರುತ್ತವೆ". ಎಂದು ರುಬಿಯೋ ಹೇಳಿದ್ದಾರೆ.

ಪ್ಯಾರಿಸ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದ ಫ್ರಾನ್ಸ್‌ನ ವಿದೇಶಾಂಗ ಸಚಿವ ಜೀನ್-ನೋಯೆಲ್ ಬ್ಯಾರೋಟ್, ಅಮೆರಿಕ ಮತ್ತು ಇರಾನ್ ನಡುವೆ ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳುವ ಅಪಾಯವನ್ನು "ಸಂಪೂರ್ಣವಾಗಿ ತಳ್ಳಿಹಾಕಲು ಸಾಧ್ಯವಿಲ್ಲ" ಎಂದು ಎಚ್ಚರಿಸಿದರು.

US Secretary of State Marco Rubio
ಇತಿಹಾಸದಲ್ಲೇ ಮೊದಲು, ದೇಶ ತನ್ನದೇ ಯೋಧರನ್ನು ಶಿಕ್ಷಿಸ್ತಿದೆ: ದೋಷಾರೋಪಣೆ ವಿರುದ್ಧ ಅಮೆರಿಕ ರಕ್ಷಣಾ ಸಚಿವ ಹೆಗ್ಸೆತ್ ಅಸಮಾಧಾನ

"ಹಾಗಲ್ಲದಿದ್ದರೆ, ಕಳೆದ ಎರಡು ದಿನಗಳಲ್ಲಿ ರೂಬಿಯೊ ಮತ್ತು ಕತಾರ್ ಪ್ರಧಾನ ಮಂತ್ರಿಯವರೊಂದಿಗೆ ಈ ವಿಷಯಗಳನ್ನು ಚರ್ಚಿಸಲು ನಾವು ಇಷ್ಟೊಂದು ಸಮಯ ಮತ್ತು ಶಕ್ತಿಯನ್ನು ವ್ಯಯಿಸುತ್ತಿರಲಿಲ್ಲ" ಎಂದು ಹೇಳಿದರು.

ಬ್ರಿಟಿಷ್ ವಿದೇಶಾಂಗ ಸಚಿವ ಎಡ್ ಮಿಲಿಬ್ಯಾಂಡ್ ಮಾತನಾಡಿದ್ದು ಸಂಘರ್ಷವನ್ನು ಕೊನೆಗೊಳಿಸಲು "ಪೂರ್ಣ ಪ್ರಮಾಣದ ರಾಜತಾಂತ್ರಿಕ ಪ್ರಯತ್ನ" ನಡೆಸುವಂತೆ ಕರೆ ನೀಡಿದರು. "ಯುದ್ಧವೂ ಇಲ್ಲ, ಶಾಂತಿಯೂ ಇಲ್ಲ" ಎಂಬಂತಹ ಈ ಸ್ಥಿತಿಯು ಆರ್ಥಿಕ ಹಾನಿಯನ್ನು ಉಂಟುಮಾಡುತ್ತಿದೆ ಎಂದು ಅವರು ಎಚ್ಚರಿಸಿದರು.

"ಈ ಯಥಾಸ್ಥಿತಿಯು ಆರ್ಥಿಕವಾಗಿ ನಮಗೆ ಹಾನಿಕಾರಕವಾಗಿದೆ ಮತ್ತು ಇದೊಂದು ಸ್ಥಿರವಾದ ಸಮತೋಲನವಲ್ಲ" ಎಂದು ಹೇಳಿದ ಮಿಲಿಬ್ಯಾಂಡ್, ಇಂಧನ ಸಾಗಣೆಯ ಪ್ರಮುಖ ಕೇಂದ್ರವಾದ 'ಹೋರ್ಮುಜ್ ಜಲಸಂಧಿ'ಯನ್ನು (Strait of Hormuz) ಸಂಪೂರ್ಣವಾಗಿ ಪುನಃ ತೆರೆಯುವಂತೆ ಒತ್ತಾಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X