

ವಾಷಿಂಗ್ಟನ್: ಇರಾನ್ ವಿರುದ್ಧದ ಯುದ್ಧಕ್ಕೆ ಸಂಬಂಧಿಸಿದಂತೆ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ (Pete Hegseth) ಅವರನ್ನು ಪದಚ್ಯುತಗೊಳಿಸಲು ಮಂಡಿಸಲಾಗಿದ್ದ ವಾಗ್ದಂಡನೆ ನಿರ್ಣಯವನ್ನು ಅಮೆರಿಕದ ಜನಪ್ರತಿನಿಧಿಗಳ ಸಭೆ (ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್) ತಿರಸ್ಕರಿಸಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆಂಬಲಿತ ರಿಪಬ್ಲಿಕನ್ ಸದಸ್ಯರ ಒಗ್ಗಟ್ಟಿನ ಮತದಾನದಿಂದಾಗಿ ಹೆಗ್ಸೆತ್ ಅವರಿಗೆ ತಾತ್ಕಾಲಿಕ ನಿರಾಳತೆ ಸಿಕ್ಕಂತಾಗಿದೆ.
ಮಧ್ಯಂತರ ಚುನಾವಣೆಯಲ್ಲಿ ಪಕ್ಷಕ್ಕೆ ಭಾರಿ ಹಿನ್ನಡೆಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇರಾನ್ ಯುದ್ಧ ಮತ್ತು ಅದರಿಂದ ಏರಿಕೆಯಾಗಿರುವ ಇಂಧನ ಬೆಲೆಗಳು ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವೆಂದು ರಿಪಬ್ಲಿಕನ್ ಪಕ್ಷದ ಕೆಲ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೆಗ್ಸೆತ್ಗೆ ಬಲವಾದ ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಿಪಬ್ಲಿಕನ್ ಸಂಸದರು ಸಚಿವರ ಬೆನ್ನಿಗೆ ನಿಂತಿದ್ದಾರೆ. ಬಹುತೇಕ ಪಕ್ಷಗಳ ಆಧಾರದ ಮೇಲೆಯೇ ಮತದಾನ ನಡೆದಿದ್ದು, ವಾಗ್ದಂಡನೆ ಪ್ರಕ್ರಿಯೆಗೆ ತಡೆಯಾಗಿದೆ.
ಕೆಂಟುಕಿಯ ರಿಪಬ್ಲಿಕನ್ ಸಂಸದ ಥಾಮಸ್ ಮಾಸ್ಸಿ ಈ ವಾಗ್ದಂಡನೆ ನಿರ್ಣಯವನ್ನು ಮಂಡಿಸಿದ್ದರು. ಇದಕ್ಕೆ ಡೆಮಾಕ್ರಟಿಕ್ ಪಕ್ಷದ ಸಂಸದರೂ ಬೆಂಬಲ ನೀಡಿದ್ದರು. ಆದರೆ, ಮಂಗಳವಾರದ ಮತದಾನದಿಂದ ವಾಗ್ದಂಡನೆ ಪ್ರಯತ್ನ ತಾತ್ಕಾಲಿಕವಾಗಿ ಮಾತ್ರ ಸ್ಥಗಿತಗೊಂಡಿದೆ.
ಜನವರಿಯಲ್ಲಿ ಜನಪ್ರತಿನಿಧಿಗಳ ಸಭೆ ಮತ್ತು ಸೆನೆಟ್ ಎರಡರಲ್ಲೂ ಡೆಮಾಕ್ರಟಿಕ್ ಪಕ್ಷ ಅಧಿಕಾರ ಹಿಡಿಯುವ ನಿರೀಕ್ಷೆಯಿದ್ದು, ಹೆಗ್ಸೆತ್ ವಿರುದ್ಧದ ವಾಗ್ದಂಡನೆ ಪ್ರಯತ್ನ ಮತ್ತೆ ಮುನ್ನೆಲೆಗೆ ಬರುವ ಸಾಧ್ಯತೆಯಿದೆ.
ಜನವರಿಯಲ್ಲಿ ಡೆಮಾಕ್ರಟಿಕ್ ಪಕ್ಷ ಅಧಿಕಾರ ವಹಿಸಿಕೊಂಡ ಬಳಿಕ ಮುಂದಿನ ಸ್ಪೀಕರ್ ಆಗುವ ನಿರೀಕ್ಷೆಯಿರುವ ಜನಪ್ರತಿನಿಧಿಗಳ ಸಭೆಯ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರೀಸ್, ಹೆಗ್ಸೆತ್ ವಿರುದ್ಧದ ಕ್ರಮಕ್ಕೆ ಬಹಿರಂಗ ಬೆಂಬಲ ನೀಡಿದ್ದಾರೆ.
ಹೆಗ್ಸೆತ್ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತೆಯನ್ನು ದುರ್ಬಲಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಸೆನೆಟ್ನ ಡೆಮಾಕ್ರಟಿಕ್ ನಾಯಕ ಚಕ್ ಶುಮರ್ ಕೂಡ ವಾಗ್ದಂಡನೆ ಪ್ರಕ್ರಿಯೆಯನ್ನು ಬೆಂಬಲಿಸಿದ್ದಾರೆ.
ಮಂಗಳವಾರ ಹಲವು ತಿಂಗಳ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಹೆಗ್ಸೆತ್, ತಮ್ಮ ವಿರುದ್ಧದ ವಾಗ್ದಂಡನೆ ಪ್ರಯತ್ನವನ್ನು ತೀವ್ರವಾಗಿ ಖಂಡಿಸಿದ್ದಾರೆ.
ವಾಗ್ದಂಡನೆಗೆ ಅಗತ್ಯವಿರುವ ಸಂವಿಧಾನದಲ್ಲಿ ಉಲ್ಲೇಖಿಸಲಾದ ಗಂಭೀರ ಅಪರಾಧಗಳಲ್ಲಿ ತಾವು ಯಾವುದನ್ನೂ ಎಸಗಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಇದೇ ವೇಳೆ ಮಾಸ್ಸಿ ಅವರನ್ನು ಬೇಜವಾಬ್ದಾರಿ ಸಂಸದ ಎಂದು ಟೀಕಿಸಿದ ಅವರು, ಈ ನಿರ್ಣಯವು ಅಮೆರಿಕದ ಸೈನಿಕರ ಸಾಧನೆಗಳನ್ನೇ ಪ್ರಶ್ನಿಸಿದಂತಾಗಿದೆ ಎಂದು ಹೇಳಿದ್ದಾರೆ.
“ಇದು ದೇಶಭಕ್ತಿಯಲ್ಲ, ಇದು ವಿಧ್ವಂಸಕ ಕೃತ್ಯ”
ಮಾಸ್ಸಿ ಮಂಡಿಸಿದ್ದ ನಿರ್ಣಯದಲ್ಲಿ ಒಟ್ಟು ಎಂಟು ಆರೋಪಗಳನ್ನು ಉಲ್ಲೇಖಿಸಲಾಗಿತ್ತು. ಇರಾನ್ ವಿರುದ್ಧದ ಯುದ್ಧವೇ ಪ್ರಮುಖ ವಿಷಯವಾಗಿದ್ದರೂ, ಯೆಮನ್ ಮತ್ತು ವೆನೆಜುವೆಲಾದಲ್ಲಿ ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆಗಳಲ್ಲಿ ಹೆಗ್ಸೆತ್ ಅವರ ಪಾತ್ರವನ್ನೂ ಪ್ರಶ್ನಿಸಲಾಗಿತ್ತು.
ಟ್ರಂಪ್ ಬೆಂಬಲಿತ ಅಭ್ಯರ್ಥಿಯ ವಿರುದ್ಧ ಪ್ರಾಥಮಿಕ ಚುನಾವಣೆಯಲ್ಲಿ ಸೋತಿರುವ ಮಾಸ್ಸಿ, ಜನವರಿಯಲ್ಲಿ ಕಾಂಗ್ರೆಸ್ನಿಂದ ನಿರ್ಗಮಿಸಲಿದ್ದಾರೆ. ಹೆಗ್ಸೆತ್ ಕಾನೂನುಬಾಹಿರ ಆದೇಶಗಳನ್ನು ಉದ್ದೇಶಪೂರ್ವಕವಾಗಿ ಜಾರಿಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲ್ಲದೆ, ಅಮೆರಿಕದ ಸೇನಾ ಕಾರ್ಯಾಚರಣೆಗಳ ನಿರ್ವಹಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಯುದ್ಧಭೂಮಿಯ ಕಾರ್ಯತಂತ್ರದ ಬಗ್ಗೆ ಉಭಯ ಪಕ್ಷಗಳಲ್ಲೂ ಹೆಚ್ಚುತ್ತಿರುವ ಅಸಮಾಧಾನಕ್ಕೆ ತಿರುಗೇಟು ನೀಡಿದ ಅವರು, ಇರಾನ್ ವಿರುದ್ಧದ ಸೀಮಿತ ಸೇನಾ ಕಾರ್ಯಾಚರಣೆಗಳು ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪದ ದೋಣಿಗಳ ಮೇಲೆ ನಡೆಸಿದ ಮಾರಣಾಂತಿಕ ದಾಳಿಗಳ ಕುರಿತು ಹೆಚ್ಚಿನ ವಿವರಗಳನ್ನು ನೀಡಲಿಲ್ಲ.
ವಾಗ್ದಂಡನೆ ನಿರ್ಣಯವು ಅಮೆರಿಕದ ಶತ್ರು ರಾಷ್ಟ್ರಗಳಿಗೆ ತಪ್ಪು ಸಂದೇಶ ರವಾನಿಸಲಿದೆ. ಕಾನೂನುಬದ್ಧ ಸೇನಾ ಕಾರ್ಯಾಚರಣೆಗಳನ್ನು ಯಶಸ್ವಿಯಾಗಿ ನಡೆಸಿದ ಸೈನಿಕರು ಮತ್ತು ನಾಗರಿಕ ಅಧಿಕಾರಿಗಳನ್ನೇ ಅಮೆರಿಕ ಶಿಕ್ಷಿಸಲಿದೆ ಎಂಬ ಭಾವನೆ ಮೂಡಿಸಲಿದೆ ಎಂದು ಹೇಳಿದ್ದಾರೆ.
ಈ ನಡುವೆ ಸುದ್ದಿಗೋಷ್ಠಿಯಲ್ಲಿ ಹೆಗ್ಸೆತ್ ನೀಡಿದ ಸಮರ್ಥನೆಯನ್ನು ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಶ್ಲಾಘಿಸಿದ್ದಾರೆ.
ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕೂಡ ವಾಗ್ದಂಡನೆ ಪ್ರಯತ್ನವನ್ನು ನೈಜ ನೀತಿ ನಿರೂಪಣೆಯ ಬದಲಿಗೆ ನಡೆಯುತ್ತಿರುವ ಹಾಸ್ಯಾಸ್ಪದ ಪ್ರದರ್ಶನ ಎಂದು ಟೀಕಿಸಿದ್ದಾರೆ.
ಮಂಗಳವಾರದ ಮತದಾನದ ಬಳಿಕ ಟ್ರಂಪ್ ಸಂತಸ ವ್ಯಕ್ತಪಡಿಸಿದ್ದು, ಈ ಫಲಿತಾಂಶವು ಹೆಗ್ಸೆತ್ ಅವರನ್ನು ದೇಶಭಕ್ತ ಎಂದು ಸಾಬೀತುಪಡಿಸಿದೆ ಎಂದು ಬಣ್ಣಿಸಿದ್ದಾರೆ.
211-204 ಮತಗಳಿಂದ ವಾಗ್ದಂಡನೆ ಯತ್ನಕ್ಕೆ ಹಿನ್ನಡೆ
ಸೋಮವಾರ ಸಂಸತ್ಗೆ ಮರಳಿದ ಬಳಿಕ ಮಾಸ್ಸಿ ವಾಗ್ದಂಡನೆ ನಿರ್ಣಯ ಮಂಡಿಸಿದ್ದರು. ಮಂಗಳವಾರ ನಡೆದ ಮತದಾನವು ನಿರ್ಣಯವನ್ನು ನೇರವಾಗಿ ಸಮಿತಿಗೆ ಹಿಂದಿರುಗಿಸುವ ಮೂಲಕ ಪ್ರಕ್ರಿಯೆಯನ್ನು ತಡೆಯುವ ಉದ್ದೇಶ ಹೊಂದಿತ್ತು. ಈ ಪ್ರಸ್ತಾವನೆ ಪರವಾಗಿ 211 ಮತ್ತು ವಿರುದ್ಧವಾಗಿ 204 ಮತಗಳು ಚಲಾವಣೆಯಾದವು. ಹಲವು ಡೆಮಾಕ್ರಟಿಕ್ ಸಂಸದರು ಮತದಾನಕ್ಕೆ ಗೈರಾಗಿದ್ದರು.
ಮಾಸ್ಸಿ ಮಂಡಿಸಿದ್ದ ಎಂಟು ಆರೋಪಗಳಲ್ಲಿ ಅಮೆರಿಕದ ಸೇನಾ ಕಾರ್ಯಾಚರಣೆಗಳು ಮತ್ತು ಹೆಗ್ಸೆತ್ ಅಧಿಕಾರ ವಹಿಸಿಕೊಂಡ ಬಳಿಕ ಕೈಗೊಂಡ ಬದಲಾವಣೆಗಳು ಪ್ರಮುಖವಾಗಿದ್ದವು. ನಾಗರಿಕರ ಸಾವು-ನೋವು ತಡೆಯುವ ಉದ್ದೇಶದ ಪೆಂಟಗನ್ ವಿಭಾಗದಲ್ಲಿ ಸಿಬ್ಬಂದಿ ಮತ್ತು ಸಂಪನ್ಮೂಲಗಳನ್ನು ಕಡಿತಗೊಳಿಸಿರುವುದನ್ನೂ ಅವರು ಪ್ರಶ್ನಿಸಿದ್ದರು.
ಈ ಬದಲಾವಣೆಯ ಬಳಿಕ ಇರಾನ್ ಯುದ್ಧದ ಸಂದರ್ಭದಲ್ಲಿ ಅಮೆರಿಕದ ಕ್ಷಿಪಣಿಯೊಂದು ಪ್ರಾಥಮಿಕ ಶಾಲೆಗೆ ಅಪ್ಪಳಿಸಿ, 168 ಮಕ್ಕಳವರೆಗೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದ್ದ ಘಟನೆಯನ್ನೂ ನಿರ್ಣಯದಲ್ಲಿ ಉಲ್ಲೇಖಿಸಲಾಗಿತ್ತು.
ಕಾಂಗ್ರೆಸ್ ಸೇನಾ ಕಾರ್ಯಾಚರಣೆಗೆ ಅನುಮತಿ ನೀಡದಿದ್ದರೆ, 60 ದಿನಗಳೊಳಗೆ ನಮ್ಮ ಸೇನೆ ಯುದ್ಧದಿಂದ ಹಿಂದೆ ಸರಿಯಬೇಕೆಂದು ಕಾನೂನು ಹೇಳುತ್ತದೆ. ಇರಾನ್ ಯುದ್ಧ ಆರಂಭವಾಗಿ 256 ದಿನಗಳಾಗಿವೆ. ಕಾಂಗ್ರೆಸ್ ಇದಕ್ಕೆ ಅನುಮತಿ ನೀಡಿಲ್ಲ. ಹೆಗ್ಸೆತ್ ಕಾನೂನು ಉಲ್ಲಂಘಿಸುತ್ತಿದ್ದಾರೆ ಎಂದು ಮಾಸ್ಸಿ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.
ಡೆಮಾಕ್ರಟಿಕ್ ಸೆನೆಟರ್ ಹಾಗೂ ನಿವೃತ್ತ ನೌಕಾಪಡೆಯ ಪೈಲಟ್ ಮಾರ್ಕ್ ಕೆಲ್ಲಿ ವಿರುದ್ಧ ಕ್ರಮ ಕೈಗೊಳ್ಳಲು ಹೆಗ್ಸೆತ್ ಪ್ರಯತ್ನಿಸಿದ್ದನ್ನೂ ವಾಗ್ದಂಡನೆ ನಿರ್ಣಯದಲ್ಲಿ ಪ್ರಶ್ನಿಸಲಾಗಿದೆ. ಕಾನೂನುಬಾಹಿರ ಆದೇಶಗಳನ್ನು ಸೈನಿಕರು ಪಾಲಿಸಬಾರದು ಎಂದು ಕರೆ ನೀಡಿದ್ದ ವಿಡಿಯೊದಲ್ಲಿ ಕೆಲ್ಲಿ ಭಾಗವಹಿಸಿದ್ದರು.
ಇದಲ್ಲದೆ, ಲ್ಯಾಟಿನ್ ಅಮೆರಿಕದಲ್ಲಿ ಮಾದಕವಸ್ತು ಕಳ್ಳಸಾಗಣೆ ಆರೋಪದ ದೋಣಿಗಳ ಮೇಲೆ ಅಮೆರಿಕ ನಡೆಸಿದ ದಾಳಿಗಳು ಮತ್ತು ದಾಳಿಯ ಬಳಿಕ ಬದುಕುಳಿದವರನ್ನು ರಕ್ಷಿಸಲು ವಿಫಲವಾದ ಸಂಗತಿಯನ್ನೂ ಮಾಸ್ಸಿ ಪ್ರಸ್ತಾಪಿಸಿದ್ದಾರೆ. ಇಂತಹ ಕ್ರಮಗಳು ಅಮೆರಿಕದ ಸೈನಿಕರ ವಿರುದ್ಧವೂ ಇದೇ ರೀತಿಯ ವರ್ತನೆ ತೋರಲು ಶತ್ರು ರಾಷ್ಟ್ರಗಳಿಗೆ ಪ್ರೋತ್ಸಾಹ ನೀಡಬಹುದು ಎಂಬುದು ಅವರ ವಾದವಾಗಿದೆ.
ಸಂವಿಧಾನದಲ್ಲಿ 'ಗಂಭೀರ ಅಪರಾಧಗಳು ಮತ್ತು ದುರ್ವರ್ತನೆ' ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನ ನೀಡಲಾಗಿಲ್ಲ. ಹೀಗಾಗಿ ಯಾವ ಕೃತ್ಯಗಳು ವಾಗ್ದಂಡನೆಗೆ ಅರ್ಹ ಎಂಬುದನ್ನು ನಿರ್ಧರಿಸುವ ಅಧಿಕಾರ ಶಾಸಕರಿಗಿದೆ.
ಮಾಸ್ಸಿ ಎತ್ತಿರುವ ಪ್ರಶ್ನೆಗಳು ವಾಗ್ದಂಡನೆಗೆ ಅರ್ಹವಲ್ಲ ಎಂದು ಹೆಗ್ಸೆತ್ ಹೇಳಿದ್ದಾರೆ. ಇವು ನೀತಿ ವಿಚಾರದಲ್ಲಿನ ಭಿನ್ನಾಭಿಪ್ರಾಯಗಳೇ ಹೊರತು ಗಂಭೀರ ಅಪರಾಧಗಳಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
ಜನಪ್ರತಿನಿಧಿಗಳ ಸಭೆಯ ಸ್ಪೀಕರ್ ಮೈಕ್ ಜಾನ್ಸನ್ ಕೂಡ ಈ ಪ್ರಯತ್ನವನ್ನು ರಾಜಕೀಯ ಪ್ರಚಾರಕ್ಕಾಗಿ ನಡೆಸುತ್ತಿರುವ ತಂತ್ರ ಎಂದು ಟೀಕಿಸಿದ್ದು, ರಿಪಬ್ಲಿಕನ್ನರು ಇದನ್ನು ಸೋಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಕೆಲವು ರಿಪಬ್ಲಿಕನ್ ಸಂಸದರು ಹೆಗ್ಸೆತ್ ಅವರ ಕಾರ್ಯವೈಖರಿಯನ್ನು ಟೀಕಿಸಿದ್ದರೂ, ವಾಗ್ದಂಡನೆಗೆ ಅರ್ಹವಾದ ಅಪರಾಧ ಎಸಗಿದ್ದಾರೆ ಎಂದು ತಾವು ಭಾವಿಸುವುದಿಲ್ಲ ಎಂದಿದ್ದಾರೆ.
ಈ ವರ್ಷದ ಅಂತ್ಯಕ್ಕೆ ನಿವೃತ್ತರಾಗಲಿರುವ ನೆಬ್ರಾಸ್ಕಾದ ರಿಪಬ್ಲಿಕನ್ ಸಂಸದ ಡಾನ್ ಬೇಕನ್, ಸಚಿವರ ಕಾರ್ಯವೈಖರಿಯ ಬಗ್ಗೆ ಟೀಕೆಗಳಿದ್ದರೂ ವಾಗ್ದಂಡನೆ ನಿರ್ಣಯದಲ್ಲಿ ಸಾಕಷ್ಟು ಆಧಾರಗಳಿಲ್ಲ ಎಂದಿದ್ದಾರೆ.
ಸಚಿವರ ಹಲವು ನಿರ್ಧಾರಗಳು ವಿಫಲವಾಗಿವೆ ಎಂದು ನಾನು ಭಾವಿಸುತ್ತೇನೆ. ಆದರೆ, ನಮ್ಮ ಕೈಯಲ್ಲೇ ಕಾರ್ಯಸೂಚಿ ಇದೆ. ನಾವು ವಿಚಾರಣೆಗಳನ್ನು ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಹಿಂದೆಯೂ ನಡೆದಿತ್ತು ಸಚಿವರ ವಿರುದ್ಧ ವಾಗ್ದಂಡನೆ
ಅಮೆರಿಕದ 250 ವರ್ಷಗಳ ಇತಿಹಾಸದಲ್ಲಿ ಕಾನೂನುಬದ್ಧ ಸೇನಾ ಕಾರ್ಯಾಚರಣೆ ನಡೆಸಿದ್ದಕ್ಕಾಗಿ ಯಾವುದೇ ರಕ್ಷಣಾ ಸಚಿವರ ವಿರುದ್ಧ ವಾಗ್ದಂಡನೆ ನಡೆದಿಲ್ಲ ಎಂದು ಹೆಗ್ಸೆತ್ ಹೇಳಿದ್ದಾರೆ.
ಆದರೆ, ಮಾಜಿ ಅಧ್ಯಕ್ಷ ಜೋ ಬೈಡನ್ ಆಡಳಿತದಲ್ಲಿ ಗೃಹ ಭದ್ರತಾ ಸಚಿವರಾಗಿದ್ದ ಅಲೆಜಾಂಡ್ರೊ ಮಯೋರ್ಕಾಸ್ ವಿರುದ್ಧ 2024ರಲ್ಲಿ ರಿಪಬ್ಲಿಕನ್ ಪಕ್ಷದವರು ವಾಗ್ದಂಡನೆ ನಿರ್ಣಯ ಮಂಡಿಸಿದ್ದರು. ಅಮೆರಿಕ-ಮೆಕ್ಸಿಕೊ ಗಡಿ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂಬುದು ಅವರ ಮೇಲಿದ್ದ ಆರೋಪವಾಗಿತ್ತು. ಆದರೆ, ಸೆನೆಟ್ ವಿಚಾರಣೆ ಆರಂಭಕ್ಕೂ ಮುನ್ನವೇ ಆರೋಪಗಳನ್ನು ವಜಾಗೊಳಿಸಿತ್ತು.
ವಲಸೆಗೆ ಸಂಬಂಧಿಸಿದ ಕಾನೂನುಗಳನ್ನು ನವೀಕರಿಸಲು ಕಾಂಗ್ರೆಸ್ ವಿಫಲವಾಗಿರುವುದೇ ಗಡಿ ಬಿಕ್ಕಟ್ಟಿಗೆ ಕಾರಣ ಎಂದು ಮಯೋರ್ಕಾಸ್ ಹೇಳಿದ್ದರು. 2024ರ ಏಪ್ರಿಲ್ನಲ್ಲಿ ಸೆನೆಟ್ನ ಬಹುಮತದ ನಾಯಕ ಚಕ್ ಶುಮರ್, ಮಯೋರ್ಕಾಸ್ ವಿರುದ್ಧದ ಆರೋಪಗಳು ವಾಗ್ದಂಡನೆಗೆ ಅಗತ್ಯವಾದ ಗಂಭೀರತೆಯನ್ನು ಹೊಂದಿಲ್ಲ ಎಂದು ಹೇಳಿದ್ದರು.
ಮಯೋರ್ಕಾಸ್ಗಿಂತ ಮೊದಲು ಅಮೆರಿಕದ ಯಾವುದೇ ಹಾಲಿ ಸಂಪುಟ ಸಚಿವರ ವಿರುದ್ಧ ವಾಗ್ದಂಡನೆ ನಡೆದಿರಲಿಲ್ಲ. ಇದಕ್ಕೂ ಸುಮಾರು 150 ವರ್ಷಗಳ ಹಿಂದೆ ಅಧ್ಯಕ್ಷ ಯುಲಿಸಿಸ್ ಎಸ್. ಗ್ರಾಂಟ್ ಆಡಳಿತದಲ್ಲಿ ಯುದ್ಧ ಸಚಿವರಾಗಿದ್ದ ವಿಲಿಯಂ ಬೆಲ್ನ್ಯಾಪ್ ಅವರು ಸರ್ಕಾರಿ ಗುತ್ತಿಗೆಗಳಲ್ಲಿ ಲಂಚ ಪಡೆದ ಆರೋಪ ಎದುರಿಸಿದ್ದರು. ವಾಗ್ದಂಡನೆ ಮತದಾನಕ್ಕೂ ಮುನ್ನವೇ ಅವರು ರಾಜೀನಾಮೆ ನೀಡಿದ್ದರು.
ಹೆಗ್ಸೆತ್ ಬೆನ್ನಿಗೆ ನಿಂತ ಟ್ರಂಪ್
ಮಾಸ್ಸಿ ವಾಗ್ದಂಡನೆ ನಿರ್ಣಯ ಮಂಡಿಸಿದ ಬಳಿಕ ಟ್ರಂಪ್ ಹೆಗ್ಸೆತ್ಗೆ ಬೆಂಬಲ ಸೂಚಿಸಿದ್ದರು. ಜನವರಿಯಲ್ಲಿ ವೆನೆಜುವೆಲಾದ ಆಗಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿಯಲು ಅಮೆರಿಕ ನಡೆಸಿದ ಸೇನಾ ಕಾರ್ಯಾಚರಣೆ ಹಾಗೂ ಇರಾನ್ ವಿರುದ್ಧದ ಕಾರ್ಯಾಚರಣೆಗಳನ್ನು ಉಲ್ಲೇಖಿಸಿ ಹೆಗ್ಸೆತ್ ಅವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದರು.
ಅಸಮಾಧಾನಗೊಂಡ, ಕೋಪಗೊಂಡು ಸೋಲುಂಡಿರುವ ಮಾಜಿ ಸಂಸದ ಥಾಮಸ್ ಮಾಸ್ಸಿ ವಿರುದ್ಧ ಹೆಗ್ಸೆತ್ ಅತ್ಯುತ್ತಮವಾಗಿ ಸಮರ್ಥಿಸಿಕೊಂಡಿದ್ದಾರೆ. ಅವರ ಕಾರ್ಯವೈಖರಿಗೆ ಎ ಪ್ಲಸ್ ಪ್ಲಸ್ ಪ್ಲಸ್ ಅಂಕ ನೀಡುತ್ತೇನೆ. ಅವರು ಸಂಪೂರ್ಣ ಸೋತ ವ್ಯಕ್ತಿ” ಎಂದು ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಖಾತೆಯಲ್ಲಿ ಬರೆದಿದ್ದಾರೆ.
ಆದರೆ, ಎಂಟು ತಿಂಗಳಿಗೂ ಹೆಚ್ಚು ಕಾಲದಿಂದ ನಡೆಯುತ್ತಿರುವ ಇರಾನ್ ಸಂಘರ್ಷದ ನಡುವೆಯೂ ಇರಾನ್ ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಮುಂದುವರಿಸಿದೆ. ಅಲ್ಲದೆ, ಹಾರ್ಮುಜ್ ಜಲಸಂಧಿಯಲ್ಲಿನ ಹಡಗು ಸಂಚಾರಕ್ಕೂ ಅಡ್ಡಿಪಡಿಸಿದೆ. ಇದರಿಂದ ಜಾಗತಿಕ ತೈಲ ಬೆಲೆಗಳು ಏರಿಕೆಯಾಗಿವೆ.