

ಫುಜೈರಾ ಎಮಿರೇಟ್ (ಯುಎಇ): ಯುನೈಟೆಡ್ ಅರಬ್ ಎಮಿರೇಟ್‌ನ ಫುಜೈರಾ ಎಮಿರೇಟ್‌ನಲ್ಲಿ ಸಂಭವಿಸಿದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಭಾರತೀಯ ಪ್ರಜೆಗಳೂ ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ 30 ಮಂದಿ ಗಾಯಗೊಂಡಿದ್ದಾರೆ ಎಂದು ಯುಎಇ ಆಂತರಿಕ ಸಚಿವಾಲಯ ದೃಢಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಏನಿದು ಘಟನೆ?
ಫುಜೈರಾ ಎಮಿರೇಟ್ಸ್‌ನ ಪ್ರವೇಶದ್ವಾರದ ಬಳಿಯ ಶೇಖ್ ಖಲೀಫಾ ಬಿನ್ ಜಾಯೆದ್ ರಸ್ತೆಯಲ್ಲಿ ಬುಧವಾರ ತಡರಾತ್ರಿ, ವೇಗವಾಗಿ ಬರುತ್ತಿದ್ದ ಟ್ರಕ್ ಚಾಲಕನ ನಿಯಂತ್ರಣ ತಪ್ಪಿ ಮೊದಲು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಬಳಿಕ ನಿಧಾನಗತಿಯ ಸಂಚಾರದಿಂದಾಗಿ ರಸ್ತೆಯಲ್ಲಿ ನಿಂತಿದ್ದ ಹಲವು ವಾಹನಗಳಿಗೆ ಅಪ್ಪಳಿಸಿದೆ. ಇನ್ನು, ಡಿಕ್ಕಿಯ ರಭಸಕ್ಕೆ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅದು ಅಕ್ಕಪಕ್ಕದ ಇತರ ವಾಹನಗಳಿಗೂ ವ್ಯಾಪಿಸಿದ್ದರಿಂದ ಸಾವು-ನೋವಿನ ಪ್ರಮಾಣ ಹೆಚ್ಚಾಗಿದೆ. ಈ ಸರಣಿ ಅಪಘಾತದಲ್ಲಿ 5 ಟ್ರಕ್‌ಗಳು ಮತ್ತು 18 ಕಾರುಗಳು ಸೇರಿದಂತೆ ಒಟ್ಟು 23 ವಾಹನಗಳು ಜಖಂಗೊಂಡಿವೆ. ಜೊತೆಗೆ, ಡಿಕ್ಕಿಯ ತೀವ್ರತೆಗೆ ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಕ್ಷಣಾರ್ಧದಲ್ಲಿ ಅಕ್ಕಪಕ್ಕದ ಹಲವು ವಾಹನಗಳಿಗೆ ಬೆಂಕಿ ವ್ಯಾಪಿಸಿದೆ. ಇದರಿಂದಾಗಿ ಸಾವು-ನೋವಿನ ಪ್ರಮಾಣ ಹೆಚ್ಚಾಗಿದೆ.
ಮುಂದುವರೆದು, ಯುಎಇ ಪ್ರಜೆಗಳು ಹಾಗೂ ಕೇರಳ ಮೂಲದ 3 ವರ್ಷದ ಮಗು ಸೇರಿದಂತೆ ಮೂವರು ಭಾರತೀಯರು ಮೃತರಾಗಿದ್ದು, ಗಾಯಗೊಂಡ 30 ಜನರ ಪೈಕಿ ಭಾರತ, ಯುಎಇ, ಓಮನ್, ಪಾಕಿಸ್ತಾನ, ಬ್ರೆಜಿಲ್, ಜೋರ್ಡಾನ್ ಮತ್ತು ಈಜಿಪ್ಟ್ ಪ್ರಜೆಗಳಿದ್ದಾರೆ. ಇನ್ನು, ಗಾಯಾಳುಗಳಲ್ಲಿ 15 ಮಂದಿ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಉಳಿದ 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಕಿಯಿಂದಾಗಿ ಮೃತದೇಹಗಳು ಸುಟ್ಟುಹೋಗಿರುವುದರಿಂದ ಮೃತರ ಗುರುತು ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಲಾಗುತ್ತಿದೆ. ಇದರೊಂದಿಗೆ, ದುಬೈನಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಈ ದುರ್ಘಟನೆಯ ಬಗ್ಗೆ ತೀವ್ರ ಸಂತಾಪ ಸೂಚಿಸಿದೆ.