Nvidia ವಿವಾದ: ಗೂಢಚಾರಿಕೆ ಆರೋಪ,'ಕಟ್ಟುಕಥೆ' ನಿಲ್ಲಿಸುವಂತೆ ಅಮೆರಿಕಕ್ಕೆ ಚೀನಾ ತಾಕೀತು!

ಆರೋಪಗಳ ಬಗ್ಗೆ ಬೀಜಿಂಗ್ ಹಲವಾರು ಬಾರಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಶುಕ್ರವಾರ ಹೇಳಿದ್ದಾರೆ.
Chinese Foreign Ministry spokesperson Guo Jiaqun
ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್
Updated on: 

ಬೀಜಿಂಗ್: ಜಾಗತಿಕ ಟೆಕ್ ಮತ್ತು ಕೃತಕ ಬುದ್ದಿಮತ್ತೆ (AI) ಲೋಕದ ದಿಗ್ಗಜ ಕಂಪನಿ ಎನ್‌ವಿಡಿಯಾ ಸುತ್ತ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಚೀನಾ ಪ್ರತಿಕ್ರಿಯೆ ನೀಡಿದೆ. ತಂತ್ರಜ್ಞಾನ ನಿರ್ಬಂಧಗಳನ್ನು ಸಮರ್ಥಿಸಲು ಚೀನಾದ ಗೂಢಚಾರರ ಬಗ್ಗೆ ಕಟ್ಟುಕಥೆ ಹೇಳುವುದನ್ನು ನಿಲ್ಲಿಸುವಂತೆ ಅಮೆರಿಕವನ್ನು ಚೀನಾದ ವಿದೇಶಾಂಗ ಸಚಿವಾಲಯ ಒತ್ತಾಯಿಸಿದೆ.

ಆರೋಪಗಳ ಬಗ್ಗೆ ಬೀಜಿಂಗ್ ಹಲವಾರು ಬಾರಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್ ಶುಕ್ರವಾರ ಹೇಳಿದ್ದಾರೆ. ತಂತ್ರಜ್ಞಾನ ನಿರ್ಬಂಧಗಳನ್ನು ವಿಧಿಸಲು ಚೀನಾದ ಗೂಢಚರ್ಯೆಯ ಹೇಳಿಕೆಯನ್ನು ನೆಪವಾಗಿ ಬಳಸಲು ವಾಷಿಂಗ್ಟನ್ ಮಾಡಿದ ಪ್ರಯತ್ನಗಳಿಗೆ ಚೀನಾದ ವಿರೋಧವನ್ನು ಅವರು ಪುನರುಚ್ಚರಿಸಿದರು.

ಚೀನಾದ ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯು ನಾವೀನ್ಯತೆ ಮತ್ತು ಮುಕ್ತ ಸಹಕಾರದಿಂದ ನಡೆಸಲ್ಪಟ್ಟಿದೆ. ಉಭಯ ದೇಶಗಳ ನಾಯಕರು ಒಮ್ಮತವನ್ನು ಕಾರ್ಯಗತಗೊಳಿಸಲು ಬೀಜಿಂಗ್ ವಾಷಿಂಗ್ಟನ್‌ನೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಮಾವೋ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ: ಗೂಢಚಾರರ ಆರೋಪಗಳನ್ನು ದೇಶದ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನ ಎಂದು ಚೀನಾ ಕರೆದಿದೆ. ಎನ್ವಿಡಿಯಾ ಮತ್ತು ಅದರ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಚೀನಾದ ಗೂಢಚಾರಿಣಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಆರೋಪದ ನಡುವೆ ಮಾವೋ ಈ ಹೇಳಿಕೆ ನೀಡಿದ್ದಾರೆ.

ತಂತ್ರಜ್ಞಾನದ ಮೇಲಿನ ನಿರ್ಬಂಧಗಳನ್ನು ಸಮರ್ಥಿಸಲು ಚೀನಾದ ಗೂಢಚಾರರ ಬಗ್ಗೆ ಕಟ್ಟುಕಥೆ ಹೇಳುವುದನ್ನು ಯುಎಸ್ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದಕ್ಕೂ ಮುನ್ನ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಕೂಡ ಈ ಆರೋಪಗಳನ್ನು ಆಧಾರರಹಿತವೆಂದು ತಳ್ಳಿಹಾಕಿದ್ದರು. ಇವು ಚೀನಾವನ್ನು ಕೆಣಕುವ ಪ್ರಯತ್ನ ಎಂದು ಬಣ್ಣಿಸಿದ್ದರು.

ಏನಿದು ವಿವಾದ? ಎನ್ವಿಡಿಯಾ ಮಾಜಿ ಸಿಇಒ ಜೆನ್ಸನ್ ಹುವಾಂಗ್ ಅವರು ಬೀಜಿಂಗ್‌ಗಾಗಿ ಕೆಲಸ ಮಾಡುವ ಚೀನಾದ ಗೂಢಚಾರಿಣಿ ಎಂದು ಎಫ್‌ಬಿಐ ಶಂಕಿಸಿರುವ ಆಲಿಸ್ ಹುವಾಂಗ್ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನಲಾಗಿದೆ.

Chinese Foreign Ministry spokesperson Guo Jiaqun
ಚೀನಾ Spy ಮೋಹಕ್ಕೆ ಬಿದ್ದರಾ ಟೆಕ್ ದಿಗ್ಗಜ..? Nvidia CEO ಕುರ್ಚಿಗೆ ಕುತ್ತು; Jensen Huang ತಲೆದಂಡಕ್ಕೆ ಮುಹೂರ್ತ ಫಿಕ್ಸ್..?

ಆರೋಪಗಳ ನಂತರ, ವಿದೇಶಿ ಗುಪ್ತಚರ ಕಾರ್ಯಾಚರಣೆಯ ಭಾಗವಾಗಿ ಹುವಾಂಗ್ ಅವರನ್ನು ಗುರಿಯಾಗಿಸಲಾಗಿದೆಯೇ ಎಂದು ನಿರ್ಧರಿಸಲು ಎನ್ವಿಡಿಯಾ ಮಂಡಳಿಯು ಸ್ವತಂತ್ರ ತನಿಖೆಯನ್ನು ಪ್ರಾರಂಭಿಸಿತು. ಹುವಾಂಗ್ ಮೇಲೆ ಎರಡಕ್ಕೂ ಹೆಚ್ಚಿನ ವಿವಾಹೇತರ ಸಂಬಂಧಗಳ ವರದಿಗಳು ಹೊರಬಂದ ನಂತರ ವಿವಾದ ತೀವ್ರವಾಯಿತು. ಅವರು ತಮ್ಮ ಪತ್ನಿಗೆ ಮೋಸ ಮಾಡಿರುವುದಾಗಿ ಒಪ್ಪಿಕೊಂಡು ಕಂಪನಿಗೆ ಇಮೇಲ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ, ಆದರೂ ಅವರು ಸಂಪರ್ಕದಲ್ಲಿದ್ದಾರೆ ಎನ್ನಲಾದ ಮಹಿಳೆಯನ್ನು ಬಹಿರಂಗಪಡಿಸಿರಲಿಲ್ಲ. ತದನಂತರ ಹುವಾಂಗ್ ಎನ್ವಿಡಿಯಾದ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X