

ನ್ಯೂಯಾರ್ಕ್: ಬ್ರೂಕ್ಲಿನ್ನ ಅಪಾರ್ಟ್ಮೆಂಟ್ ಒಂದರಲ್ಲಿ ಇದ್ದಕ್ಕಿದ್ದಂತೆ ಗೋಡೆಯೊಂದು ಕುಸಿದು ಬಿದಿದ್ದು, ಪುಟ್ಟ ಮಗುವೊಂದು ಅವಶೇಷಗಳಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಈ ಭಯಾನಕ ಕ್ಷಣಗಳು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.
'ನ್ಯೂಯಾರ್ಕ್ ಪೋಸ್ಟ್' ವರದಿಯ ಪ್ರಕಾರ, ಆರು ಸೆಕೆಂಡುಗಳ ಈ ವಿಡಿಯೋವನ್ನು ಮೂರನೇ ಮಹಡಿಯಲ್ಲಿ ವಾಸಿಸುತ್ತಿದ್ದ ಆಂಡ್ರಸನ್ ವೆಲೆಜ್ ಅವರ ಅಪಾರ್ಟ್ಮೆಂಟ್ನಲ್ಲಿ ಸೆರೆಹಿಡಿಯಲಾಗಿದೆ. ಅವರು ತಮ್ಮ ಪತ್ನಿ ಮತ್ತು ಇಬ್ಬರು ಪುಟ್ಟ ಗಂಡು ಮಕ್ಕಳೊಂದಿಗೆ ಅಲ್ಲಿ ವಾಸಿಸುತ್ತಿದ್ದರು.
ವಿಡಿಯೋದಲ್ಲಿ ವೆಲೆಜ್ ಅವರ 9 ವರ್ಷದ ಮಗ ರೆಫ್ರಿಜರೇಟರ್ ತೆರೆದು ಒಂದು ಗ್ಯಾಲನ್ ಹಾಲನ್ನು ಹೊರತೆಗೆಯುತ್ತಿರುವುದು ಕಾಣಿಸುತ್ತದೆ. ಅದೇ ಸಮಯದಲ್ಲಿ ಆತನ 2 ವರ್ಷದ ತಮ್ಮ ಹತ್ತಿರದಲ್ಲೇ ನೆಲದ ಮೇಲೆ ಆಟವಾಡುತ್ತಿದ್ದನು.
ಕೆಲವೇ ಕ್ಷಣಗಳಲ್ಲಿ ಅವರ ತಾಯಿ ಲಿವಿಂಗ್ ರೂಮ್ನ ಬಾಗಿಲು ತೆರೆದು ಕಿರುಚಿಕೊಳ್ಳಲು ಪ್ರಾರಂಭಿಸುತ್ತಾರೆ. ಕೂಡಲೇ ಹಿರಿಯ ಮಗ ಗೋಡೆಯಿಂದ ದೂರ ಸರಿದು ತಾಯಿಯತ್ತ ಓಡುತ್ತಾನೆ. ಆದರೆ, ಕುಟುಂಬವು ಸುರಕ್ಷಿತ ಸ್ಥಳಕ್ಕೆ ತಲುಪುವ ಮೊದಲೇ, ಗೋಡೆ ಕುಸಿದು ಬೀಳುತ್ತದೆ. ಈ ವೇಳೆ ಪುಟ್ಟ ಮಗು ಕುಸಿಯುತ್ತಿರುವ ಅವಶೇಷಗಳಡಿ ಸಿಲುಕಿ, ಅವಶೇಷಗಳ ರಾಶಿಯ ಅಡಿಯಲ್ಲಿ ಕಣ್ಮರೆಯಾಗುತ್ತದೆ.
ತಮ್ಮ ಮಕ್ಕಳನ್ನು ಹುಡುಕಿಕೊಡುವಂತೆ ಮತ್ತು ಹೊರತೆಗೆಯುವಂತೆ ಪತ್ನಿ ರಕ್ಷಣಾ ಸಿಬ್ಬಂದಿಯನ್ನು ಅಂಗಲಾಚುತ್ತಾ, ಭಯಭೀತರಾಗಿ ತಮಗೆ ಕರೆ ಮಾಡಿದ್ದರು ಎಂದು ವೆಲೆಜ್ ತಿಳಿಸಿದ್ದಾರೆ.ಅದೃಷ್ಟವಶಾತ್ ಇಬ್ಬರೂ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಆದರೆ ಕುಟುಂಬದ ಸದಸ್ಯರಿಗೆ ಗಂಭೀರ ಗಾಯಗಳಾಗಿವೆ. 2 ವರ್ಷದ ಮಗುವಿನ ಹಣೆಯ ಮೇಲೆ ಮತ್ತು ಕಾಲುಗಳ ಮೇಲೆ ಗಾಯಗಳಾಗಿವೆ.
ಆತನ ಕಿವಿಗಳು, ಮೂಗು, ಬಾಯಿ, ಬೆನ್ನು - ಹೀಗೆ ಇಡೀ ದೇಹವೇ ಮಣ್ಣು ಮತ್ತು ಧೂಳಿನಿಂದ ಆವೃತವಾಗಿತ್ತು ಎಂದು ವೆಲೆಜ್ ತಮ್ಮ ಕಿರಿಯ ಮಗನನ್ನು ಕಂಡ ಸ್ಥಿತಿಯನ್ನು ವಿವರಿಸಿದ್ದಾರೆ. ಅವರ ಪತ್ನಿಯ ಪಕ್ಕೆಲುಬುಗಳು, ಬೆನ್ನುಮೂಳೆ ಮತ್ತು ಭುಜದ ಮೂಳೆಗಳಿಗೆ ಗಂಭೀರ ಗಾಯಗಳಾಗಿವೆ. ಹಿರಿಯ ಮಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ದುರಂತದಲ್ಲಿ 9 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ಎಂಟು ಮಂದಿ ಮೃತಪಟ್ಟಿದ್ದಾರೆ. ಅಲ್ಲದೆ, 18 ಮಂದಿ ಗಾಯಗೊಂಡಿದ್ದಾರೆ. ನ್ಯೂಯಾರ್ಕ್ ಸಿಟಿ ಅಗ್ನಿಶಾಮಕ ಇಲಾಖೆ ಘಟನಾ ಸ್ಥಳದಲ್ಲಿ ನಡೆಸಲಾಗುತ್ತಿದ್ದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ ಎಂದು ಘೋಷಿಸಿದೆ