ಅಮೆರಿಕದಲ್ಲಿ ವಾಯು ಸಂಚಾರ ವ್ಯವಸ್ಥೆ ಅಸ್ತವ್ಯಸ್ತ: 10,000ಕ್ಕೂ ಹೆಚ್ಚು ವಿಮಾನಗಳು ರದ್ದು ಹಾಗೂ ವಿಳಂಬ, ಆತಂಕದಲ್ಲಿ ಪ್ರಯಾಣಿಕರು!

ಅಮೆರಿಕದ ಎಫ್‌ಎಎಲ್ಲಿನ ತಾಂತ್ರಿಕ ಹಾಗೂ ಸಂವಹನ ವೈಫಲ್ಯದಿಂದಾಗಿ ದೇಶಾದ್ಯಂತ ವಿಮಾನ ಹಾರಾಟಕ್ಕೆ ತಾತ್ಕಾಲಿಕ ತಡೆ ನೀಡಲಾಗಿದ್ದು, 10,000ಕ್ಕೂ ಹೆಚ್ಚು ವಿಮಾನಗಳ ಹಾರಾಟ ವಿಳಂಬವಾಗಿವೆ ಮತ್ತು 4,700ಕ್ಕೂ ಹೆಚ್ಚು ಫ್ಲೈಟ್‌ಗಳು ರದ್ದಾಗಿವೆ. ಆ ಕುರಿತ ವರದಿ ಇಲ್ಲಿದೆ:
US Air Travel Chaos: Over 10,000 Flights Delayed and Cancelled Due to Major FAA System Failure
ತಾಂತ್ರಿಕ ವೈಫಲ್ಯದಿಂದ ಸ್ಥಗಿತಗೊಂಡ ಅಮೆರಿಕ ವಿಮಾನ ಹಾರಾಟX
Updated on: 

ವಾಷಿಂಗ್ಟನ್ ಡಿ. ಸಿ. (ಅಮೆರಿಕ): ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವ್ಯವಸ್ಥೆಯಲ್ಲಿನ ಗಂಭೀರ ಸಂವಹನ ವೈಫಲ್ಯದಿಂದಾಗಿ ದೇಶಾದ್ಯಂತ ವಿಮಾನಗಳ ಹಾರಾಟಕ್ಕೆ ತಾತ್ಕಾಲಿಕ ತಡೆ ವಿಧಿಸಿದ್ದು, ಸುಮಾರು 10,000 ವಿಮಾನಗಳು ವಿಳಂಬವಾಗಿವೆ ಮತ್ತು 4,700ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ. ಆ ಕುರಿತ ವರದಿ ಇಲ್ಲಿದೆ:

ಏನಾಯಿತು?

ನವೆಂಬರ್ 13ರಂದು (ಸ್ಥಳೀಯ ಕಾಲಮಾನ ಮಧ್ಯಾಹ್ನ 3:54ಕ್ಕೆ) ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್, ದೇಶದ 22 ವಾಯು ಸಂಚಾರ ನಿಯಂತ್ರಣ ಕೇಂದ್ರಗಳಲ್ಲಿ ಉಂಟಾದ ಸಂವಹನ ವೈಫಲ್ಯದಿಂದಾಗಿ ಸುರಕ್ಷತಾ ದೃಷ್ಟಿಯಿಂದ ದೇಶಾದ್ಯಂತ ಎಲ್ಲಾ ನಿರ್ಗಮನ ವಿಮಾನಗಳ ಹಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಿತು.

ಹಾಗಾದ್ರೆ, ಇದಕ್ಕೆ ಕಾರಣವೇನು?

ಹಳೆಯದಾದ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಗೆ ಹೊಸ ತಂತ್ರಜ್ಞಾನವನ್ನು ಅಳವಡಿಸುವ ವೇಳೆ ಡೇಟಾ ಓವರ್‌ಲೋಡ್ ಆಗಿ ರೂಟರ್ ಮತ್ತು ಸ್ವಿಚ್‌ಗಳು ಸ್ಥಗಿತಗೊಂಡಿದ್ದೇ ಈ ಸಮಸ್ಯೆಗೆ ಕಾರಣ ಎಂದು ಅಮೆರಿಕದ ಸಾರಿಗೆ ಸಚಿವ ಸೀನ್ ಡಫಿ ತಿಳಿಸಿದ್ದಾರೆ ಅಲ್ ಜಜೀರಾ. ಇದರಲ್ಲಿ ಯಾವುದೇ ಸೈಬರ್ ದಾಳಿಯ ಕೈವಾಡವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಈ ಹಠಾತ್ ನಿರ್ಬಂಧದಿಂದ ಸುಮಾರು 15 ಲಕ್ಷ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು. ಈಗಾಗಲೇ ಆಕಾಶದಲ್ಲಿದ್ದ ಸುಮಾರು 600ಕ್ಕೂ ಹೆಚ್ಚು ವಿಮಾನಗಳನ್ನು ಬೇರೆ ವಿಮಾನ ನಿಲ್ದಾಣಗಳಿಗೆ ತಿರುಗಿಸಲಾಯಿತು ಅಥವಾ ಹೊರಟ ನಿಲ್ದಾಣಕ್ಕೇ ವಾಪಸ್ ಕಳುಹಿಸಲಾಯಿತು. ಕೆನಡಾ ಮತ್ತು ಯುರೋಪ್‌ನಿಂದ ಅಮೆರಿಕಕ್ಕೆ ಬರುವ ವಿಮಾನಗಳ ಮೇಲೂ ಇದರ ಪರಿಣಾಮ ಬೀರಿದೆ.

US Air Travel Chaos: Over 10,000 Flights Delayed and Cancelled Due to Major FAA System Failure
ವೈಟ್ ಹೌಸ್‌ನಿಂದ 2 ಕಿ.ಮೀ.ಗಿಂತಲೂ ಕಡಿಮೆ ದೂರದಲ್ಲಿ ನಾಲ್ವರ ಮೇಲೆ ಗುಂಡಿನ ದಾಳಿ!

ತಾಂತ್ರಿಕ ವೈಫಲ್ಯವೇ ಕಾರಣ

ಮುಂದುವರೆದು, ಅಮೆರಿಕದ ಸಾರಿಗೆ ಸಚಿವ ಸೀನ್ ಡಫಿ ಅವರ ಪ್ರಕಾರ, ಹಳೆಯದಾದ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯ ರೂಟರ್‌ಗಳು ಮತ್ತು ಸ್ವಿಚ್‌ಗಳ ಮೇಲೆ ಅತಿಯಾದ ದತ್ತಾಂಶದ ಹೊರೆ ಬಿದ್ದ ಪರಿಣಾಮ ತಪ್ಪು ಮಾಹಿತಿ ರವಾನೆಯಾಗತೊಡಗಿತು. ಮುನ್ನೆಚ್ಚರಿಕಾ ಕ್ರಮವಾಗಿ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಹಾಗಾಗಿ, ಇದು ಯಾವುದೇ ಸೈಬರ್ ದಾಳಿ ಅಥವಾ ವಿಧ್ವಂಸಕ ಕೃತ್ಯವಲ್ಲ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್ ಸ್ಪಷ್ಟಪಡಿಸಿದ್ದಾರೆ. ಏತನ್ಮಧ್ಯೆ, 2001ರ ಸೆಪ್ಟೆಂಬರ್ 11ರ ದಾಳಿ ಮತ್ತು ಜನವರಿ 2023ರ ಬಳಿಕ ಅಮೆರಿಕದಲ್ಲಿ ಇಂತಹ ರಾಷ್ಟ್ರವ್ಯಾಪಿ ವಿಮಾನ ಹಾರಾಟ ಸ್ಥಗಿತ ಆದೇಶ ಜಾರಿಯಾಗಿದ್ದು ಇದೇ ಮೂರನೇ ಬಾರಿ!

ಸದ್ಯದ ಪರಿಸ್ಥಿತಿ ಹೇಗಿದೆ?

ರಾತ್ರಿ 8:15ರ ಸುಮಾರಿಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ವಿಮಾನ ಹಾರಾಟದ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದೆ. ಆದರೂ, ವಿಮಾನಗಳ ವೇಳಾಪಟ್ಟಿ ಅಸ್ತವ್ಯಸ್ತಗೊಂಡಿರುವುದರಿಂದ ಮುಂದಿನ ಕೆಲವು ದಿನಗಳವರೆಗೆ ವಿಮಾನಗಳ ವಿಳಂಬ ಮತ್ತು ರದ್ದತಿ ಮುಂದುವರಿಯುವ ಸಾಧ್ಯತೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X