

ಶೆನ್‌ಝೆನ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬುಧವಾರ ತಮ್ಮ ದೀರ್ಘಕಾಲದ ರಾಜತಾಂತ್ರಿಕ ಸಂಪ್ರದಾಯವನ್ನು ಮುರಿದು, ತಾವೇ ಖುದ್ದು ವಿಮಾನ ನಿಲ್ದಾಣಕ್ಕೆ ತೆರಳಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ವೈಯಕ್ತಿಕವಾಗಿ ಸ್ವಾಗತಿಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಬಹುನಿರೀಕ್ಷಿತ ಭೇಟಿಗೆ ಮುಂಚಿತವಾಗಿ ಕ್ಸಿ ಜಿನ್‌ಪಿಂಗ್ ಅವರು ಡೊನಾಲ್ಡ್ ಟ್ರಂಪ್ ಅವರನ್ನು ಶೆನ್‌ಝೆನ್ ವಿಮಾನ ನಿಲ್ದಾಣದಲ್ಲಿ ತಾವೇ ಖುದ್ದಾಗಿ ಬರಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ವಿದೇಶಿ ನಾಯಕರು ಚೀನಾಕ್ಕೆ ಭೇಟಿ ನೀಡಿದಾಗ ಚೀನಾದ ಅಧ್ಯಕ್ಷರು ವಿಮಾನ ನಿಲ್ದಾಣಕ್ಕೆ ತೆರಳಿ ಸ್ವಾಗತಿಸುವ ಪದ್ಧತಿ ಇರುವುದಿಲ್ಲ. ಅದರ ಬದಲಿಗೆ, ಗ್ರೇಟ್ ಹಾಲ್ ಆಫ್ ದಿ ಪೀಪಲ್‌ನಲ್ಲಿ (Great Hall of the People) ಅಧಿಕೃತ ಸ್ವಾಗತ ನೀಡಲಾಗುತ್ತದೆ. ಆದರೆ, ಈ ಸಂಪ್ರದಾಯವನ್ನು ಬದಿಗಿಟ್ಟ ಕ್ಸಿ ಜಿನ್‌ಪಿಂಗ್ ತಾವೇ ಸ್ವತಃ ಶೆನ್‌ಝೆನ್ ವಿಮಾನ ನಿಲ್ದಾಣಕ್ಕೆ ಆಗಮಿಸಿ, ‘ಏರ್ ಫೋರ್ಸ್ ಒನ್’ ವಿಮಾನದ ಬಳಿಯೇ ಟ್ರಂಪ್ ಅವರನ್ನು ಆತ್ಮೀಯವಾಗಿ ಸ್ವಾಗತಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮೊದಲ ಬಾರಿ ಒಟ್ಟಿಗೆ ಕಾಣಿಸಿಕೊಂಡ ಟ್ರಂಪ್, ಪುಟಿನ್, ಕ್ಸಿ ಜಿನ್‌ಪಿಂಗ್
ಚೀನಾದ ಶೆನ್‌ಝೆನ್‌ನಲ್ಲಿ ಇಂದು ನಡೆದ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ(APEC) ಶೃಂಗಸಭೆಯ ಔತಣಕೂಟದ ಗ್ರೂಪ್ ಫೋಟೋಗೂ ಮುನ್ನ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಬಳಿ ಬಂದು ಶೇಕ್ಹ್ಯಾಂಡ್ ಮಾಡಿ ಮಾತನಾಡಿದ್ದಾರೆ.
ಟ್ರಂಪ್ ಮತ್ತು ಪುಟಿನ್ ಪರಸ್ಪರ ಹಸ್ತಲಾಘವ ಮಾಡಿ, ಉಭಯಕುಶಲೋಪರಿ ವಿಚಾರಿಸಿ, ಪರಸ್ಪರ ಭುಜ ತಟ್ಟಿಕೊಂಡು ಆತ್ಮೀಯತೆ ಪ್ರದರ್ಶಿಸಿದ್ದಾರೆ.
2025ರ ಆಗಸ್ಟ್‌ನಲ್ಲಿ ಅಲಾಸ್ಕಾದಲ್ಲಿ ನಡೆದ ಶೃಂಗಸಭೆಯ ನಂತರ ಟ್ರಂಪ್ ಮತ್ತು ಪುಟಿನ್ ನಡುವಿನ ಮೊದಲ ಮುಖಾಮುಖಿ ಭೇಟಿ ಇದಾಗಿದೆ. ಪುಟಿನ್ ಅವರು ಟ್ರಂಪ್‌ಗಿಂತ ಕೆಲವು ಗಂಟೆಗಳ ಮೊದಲೇ ಶೆನ್‌ಝೆನ್ ತಲುಪಿ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಿದ್ದರು. ಮಾಸ್ಕೋ ಮತ್ತು ಬೀಜಿಂಗ್‌ನ ವಿದೇಶಾಂಗ ನೀತಿ ಕಾರ್ಯತಂತ್ರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪುಟಿನ್ ಈ ವೇಳೆ ಹೇಳಿದ್ದಾರೆ.