

ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೆ ರಾಜಕೀಯ ಉದ್ವಿಗ್ನತೆ ಭುಗಿಲೆದ್ದಿದ್ದು, ಮಾಜಿ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರ ಪೂರ್ವಜರ ಮನೆಗೆ ಬೆಂಕಿ ಹಚ್ಚಲಾಗಿದೆ.
ದೇಶಾದ್ಯಂತ ಅವಾಮಿ ಲೀಗ್ ಕರೆ ನೀಡಿರುವ ಪ್ರತಿಭಟನೆ ಹಾಗೂ ಲಾಕ್ಡೌನ್ಗೂ ಮುನ್ನ ನಡೆದ ಘರ್ಷಣೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಢಾಕಾದಲ್ಲಿ ಕಚ್ಚಾ ಬಾಂಬ್ಗಳು ಸ್ಫೋಟಗೊಂಡಿದ್ದು, ಹಲವು ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ.
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪ್ರತಿಭಟನೆಗೂ ಮುನ್ನ ಪೊಲೀಸರು ನಡೆಸಿದ 24 ಗಂಟೆಗಳ ಕಾರ್ಯಾಚರಣೆಯಲ್ಲಿ 565 ಮಂದಿಯನ್ನು ಬಂಧಿಸಿದ್ದಾರೆ.
ಬಂಧಿತರಲ್ಲಿ ಮಾಜಿ ಶಿಕ್ಷಣ ಸಚಿವ ನೂರುಲ್ ಇಸ್ಲಾಂ ನಾಹಿದ್ ಕೂಡ ಸೇರಿದ್ದಾರೆ. ಬುಧವಾರ ಮಧ್ಯರಾತ್ರಿ ಅವರ ನಿವಾಸದಿಂದ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಸ್ಥಳೀಯ ಸುದ್ದಿವಾಹಿನಿ BDnews24 ವರದಿ ಮಾಡಿದೆ.
ದೇಶದ ವಿವಿಧೆಡೆ ನಡೆದ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಸಲಾಹುದ್ದೀನ್ ಅಹ್ಮದ್ ಎಚ್ಚರಿಸಿದ್ದಾರೆ. ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳ ಆಧಾರದ ಮೇಲೆ ಕೃತ್ಯ ಎಸಗಿದವರನ್ನು ಪತ್ತೆಹಚ್ಚುವುದಾಗಿ ತಿಳಿಸಿದ್ದಾರೆ.
ಯೂನಸ್ ಮನೆ, ಗ್ರಾಮೀಣ್ ಬ್ಯಾಂಕ್ ಶಾಖೆಗಳಿಗೆ ಬೆಂಕಿ
ಢಾಕಾದಲ್ಲಿ ಭಾರಿ ಭದ್ರತೆ ನಿಯೋಜಿಸಿದ್ದರೂ ಮುಂಜಾನೆ ಹಲವು ಕಡೆ ಸುಧಾರಿತ ಸ್ಫೋಟಕ ಸಾಧನಗಳ (ಐಇಡಿ) ಸ್ಫೋಟ, ಬೆಂಕಿ ಹಚ್ಚುವಿಕೆ ಮತ್ತು ಧ್ವಂಸ ಕೃತ್ಯಗಳು ನಡೆದಿವೆ. ಸ್ಫೋಟಗಳಲ್ಲಿ ಕನಿಷ್ಠ ನಾಲ್ವರು ಗಾಯಗೊಂಡಿದ್ದಾರೆ.
ಚಿತ್ತಗಾಂಗ್ನ ಪಂಚ್ಲೈಶ್ ಪ್ರದೇಶದಲ್ಲಿರುವ ಮುಹಮ್ಮದ್ ಯೂನಸ್ ಅವರ ತಂದೆಯ ಮನೆಯನ್ನು ಅಪರಿಚಿತರು ಬೆಂಕಿ ಹಚ್ಚಿ ಸುಟ್ಟಿದ್ದಾರೆ. ಇದರ ಬೆನ್ನಲ್ಲೇ ದೇಶದ ಹಲವು ಭಾಗಗಳಲ್ಲಿರುವ ಅವರ ಗ್ರಮೀಣ್ ಬ್ಯಾಂಕ್ ಶಾಖೆಗಳ ಮೇಲೂ ಬೆಂಕಿ ಹಚ್ಚುವ ದಾಳಿ ನಡೆದಿದೆ. ಈ ದಾಳಿಗಳು ಈಶಾನ್ಯ ಭಾಗದ ಸಿಲ್ಹೆಟ್, ವಾಯವ್ಯ ಭಾಗದ ರಾಜ್ಶಾಹಿ ಹಾಗೂ ನೈಋತ್ಯ ಭಾಗದ ಬರಿಶಾಲ್ ಮತ್ತು ಫರೀದ್ಪುರದಲ್ಲಿ ನಡೆದಿವೆ ಎಂದು ವರದಿಯಾಗಿದೆ.
ಯೂನಸ್ ಅವರ ಪೂರ್ವಜರ ಮನೆಯ ನೆಲಮಹಡಿಯ ಒಂದು ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆ ಮಹಡಿಯಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಆದರೆ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಯೂನಸ್ ಅವರ ಸಹೋದರರ ಕುಟುಂಬಗಳು ವಾಸಿಸುತ್ತಿವೆ ಎಂದು ವರದಿಯಾಗಿದೆ.
28 ಜಿಲ್ಲೆಗಳಲ್ಲಿ ಹಿಂಸಾಚಾರ
ಕಳೆದ ಎರಡು ದಿನಗಳಲ್ಲಿ ಬಾಂಗ್ಲಾದೇಶದ 64 ಆಡಳಿತ ಜಿಲ್ಲೆಗಳ ಪೈಕಿ 28 ಜಿಲ್ಲೆಗಳಲ್ಲಿ ಹಲವು ಕಚ್ಚಾ ಬಾಂಬ್ಗಳನ್ನು ಸ್ಫೋಟಿಸಲಾಗಿದೆ. ವಾಹನಗಳಿಗೂ ಬೆಂಕಿ ಹಚ್ಚಲಾಗಿದೆ. ಪಶ್ಚಿಮ ನಾರೈಲ್ ಜಿಲ್ಲೆಯಲ್ಲಿ ನಡೆದ ಮೆರವಣಿಗೆಯೊಂದರ ಮೇಲೆ ಅವಾಮಿ ಲೀಗ್ ಕಾರ್ಯಕರ್ತರು ದಾಳಿ ನಡೆಸಿದ ಪರಿಣಾಮ ಆಡಳಿತಾರೂಢ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ)ಯ ಇಬ್ಬರು ಸ್ಥಳೀಯ ನಾಯಕರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವಾಮಿ ಲೀಗ್ ವಿರುದ್ಧ ಪ್ರಧಾನಿ ವಾಗ್ದಾಳಿ
ಮಂಗಳವಾರ ರಾತ್ರಿ ಸಂಸತ್ತಿನಲ್ಲಿ ಮಾತನಾಡಿದ ಪ್ರಧಾನಿ ರೆಹಮಾನ್, ಅವಾಮಿ ಲೀಗ್ ಅನ್ನು 'ಭಯೋತ್ಪಾದಕ ಸಂಘಟನೆ' ಎಂದು ಕರೆದಿದ್ದಾರೆ. ಅಧಿಕಾರದಿಂದ ಕೆಳಗಿಳಿದ ಪಕ್ಷವನ್ನು ಮತ್ತೆ ರಾಜಕೀಯವಾಗಿ ಬೆಳೆಯಲು ಅವಕಾಶ ನೀಡಬಾರದು ಎಂದು ಹೇಳಿದ್ದಾರೆ.
2024ರಲ್ಲಿ ಸರ್ವಾಧಿಕಾರಿ ಆಡಳಿತವನ್ನು ಅಧಿಕಾರದಿಂದ ಹೊರಹಾಕಲು ಜನರು ಒಗ್ಗಟ್ಟಾಗಿದ್ದ ರೀತಿಯಲ್ಲೇ ಈಗಲೂ ಒಂದಾಗಬೇಕು. ಆ ಶಕ್ತಿಗಳನ್ನು ನಿರ್ಣಾಯಕವಾಗಿ ಸೋಲಿಸಬೇಕು ಎಂದು ಅವರು ಕರೆ ನೀಡಿದ್ದಾರೆ.
ಬುಧವಾರ ರಾತ್ರಿ ಕೂಡ ಮಾತನಾಡಿದ ಪ್ರಧಾನಿ, ಪ್ರಜಾಪ್ರಭುತ್ವ ಪರ ಶಕ್ತಿಗಳು ಒಂದಾಗಿ ಅವಾಮಿ ಲೀಗ್ ಮತ್ತೆ ರಾಜಕೀಯವಾಗಿ ಪುನಶ್ಚೇತನಗೊಳ್ಳುವುದನ್ನು ತಡೆಯಬೇಕು ಎಂದು ಮನವಿ ಮಾಡಿದ್ದಾರೆ. ಸರ್ಕಾರಿ ಆಡಳಿತವನ್ನು ಮಾತ್ರ ಅವಲಂಬಿಸದೆ ತಮ್ಮ ಕ್ಷೇತ್ರಗಳಿಗೆ ತೆರಳಿ ಕಾರ್ಯಕರ್ತರನ್ನು ಸಂಘಟಿಸುವಂತೆ ಬಿಎನ್ಪಿ ಸಂಸದರಿಗೆ ಸೂಚಿಸಿದ್ದಾರೆ ಎಂದು 'ದಿ ಡೈಲಿ ಸ್ಟಾರ್' ವರದಿ ಮಾಡಿದೆ.
ಹಸೀನಾ ಗೈರುಹಾಜರಿಯಲ್ಲಿ ಮರಣದಂಡನೆ ತೀರ್ಪು
ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ 2024ರ ಜುಲೈ ಪ್ರತಿಭಟನೆಯ ಸಂದರ್ಭದಲ್ಲಿ ನಡೆದ ದಮನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಶೇಖ್ ಹಸೀನಾ ವಿರುದ್ಧ ವಿಶೇಷ ನ್ಯಾಯಮಂಡಳಿ ವಿಚಾರಣೆ ನಡೆಸಿತ್ತು. ಹಸೀನಾ ಗೈರುಹಾಜರಿಯಲ್ಲಿ ವಿಚಾರಣೆ ನಡೆಸಿದ ನ್ಯಾಯಮಂಡಳಿ, ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪದಡಿ ಅವರಿಗೆ ಮರಣದಂಡನೆ ವಿಧಿಸಿತ್ತು. ಈ ತೀರ್ಪು ಪ್ರಕಟವಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವಾಮಿ ಲೀಗ್ ಗುರುವಾರ ಪ್ರತಿಭಟನೆಗೆ ಕರೆ ನೀಡಿದೆ.
79 ವರ್ಷದ ಶೇಖ್ ಹಸೀನಾ 2024ರ ಆಗಸ್ಟ್ನಲ್ಲಿ ಬಾಂಗ್ಲಾದೇಶ ತೊರೆದು ಭಾರತಕ್ಕೆ ತೆರಳಿದ್ದರು. ದ್ವಿಪಕ್ಷೀಯ ಒಪ್ಪಂದದ ಅಡಿಯಲ್ಲಿ ಅವರನ್ನು ಹಸ್ತಾಂತರಿಸುವಂತೆ ಢಾಕಾ ಸರ್ಕಾರ ನವದೆಹಲಿಯನ್ನು ಒತ್ತಾಯಿಸುತ್ತಿದೆ. ಈ ನಡುವೆ, ಡಿಸೆಂಬರ್ನಲ್ಲಿ ಯಾವುದೇ ಕಾರಣಕ್ಕೂ ತಾನು ಸ್ವಯಂಪ್ರೇರಿತವಾಗಿ ಬಾಂಗ್ಲಾದೇಶಕ್ಕೆ ಮರಳಿ ಕಾನೂನು ಪ್ರಕ್ರಿಯೆ ಎದುರಿಸುವುದಾಗಿ ಹಸೀನಾ ಹೇಳಿರುವುದಾಗಿ ವರದಿಯಾಗಿದೆ.