

ನ್ಯೂಯಾರ್ಕ್: ಮಹಿಳೆಯೊಬ್ಬರ ಅಪಹರಣ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಅಪರಾಧದ ಮಾಹಿತಿ ಮುಚ್ಚಿಟ್ಟು ಪೌರತ್ವ ಪಡೆದಿದ್ದ ಭಾರತೀಯ ಮೂಲದ ವ್ಯಕ್ತಿಯ ಅಮೆರಿಕಾ ಪೌರತ್ವವನ್ನು (US Citizenship) ಫೆಡರಲ್ ಕೋರ್ಟ್ ರದ್ದುಗೊಳಿಸಿದೆ.
55 ವರ್ಷದ ಗುರ್ಮೀತ್ ಸಿಂಗ್ 2014ರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿದ್ದು, 2011ರಲ್ಲಿ ನ್ಯೂಯಾರ್ಕ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರನ್ನು ಚಾಕು ತೋರಿಸಿ ಅಪಹರಿಸಿ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ.
ಅಮೆರಿಕ ನ್ಯಾಯಾಂಗ ಇಲಾಖೆ 2026ರ ಆಗಸ್ಟ್ 31ರಂದು ಹೊರಡಿಸಿದ ಹೇಳಿಕೆಯಲ್ಲಿ ಅಟಾರ್ನಿ ಜನರಲ್ ಟಾಡ್ ಬ್ಲಾಂಶ್, “ಅಮೆರಿಕದ ಪೌರತ್ವ ಅಪರಾಧಿಗಳಿಗೆ ರಕ್ಷಣಾ ಕವಚವಲ್ಲ” ಎಂದು ಹೇಳಿದ್ದಾರೆ.
ಅತ್ಯಾಚಾರ ಮತ್ತು ಅಪಹರಣ ಪ್ರಕರಣವನ್ನು ಮರೆಮಾಚಿದ್ದ ಸಿಂಗ್, ವಂಚನೆಯ ಮೂಲಕ ಅಮೆರಿಕ ಪೌರತ್ವ ಪಡೆದಿದ್ದರು ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ. ಇದೀಗ ಫೆಡರಲ್ ನ್ಯಾಯಾಲಯ ಅವರ ಪೌರತ್ವವನ್ನು ರದ್ದುಗೊಳಿಸಿದೆ.
ನ್ಯಾಯಾಂಗ ಇಲಾಖೆಯ ನಾಗರಿಕ ವಿಭಾಗದ ಸಹಾಯಕ ಅಟಾರ್ನಿ ಜನರಲ್ ಬ್ರೆಟ್ ಎ. ಶುಮೇಟ್ ಅವರು, ಸಿಂಗ್ ತನ್ನ ಭೀಕರ ಅಪರಾಧಗಳನ್ನು ಮರೆಮಾಚುವ ಮೂಲಕ ಅಮೆರಿಕ ಪೌರತ್ವದ ಸೌಲಭ್ಯಗಳನ್ನು ಕಾನೂನುಬಾಹಿರವಾಗಿ ಪಡೆದಿದ್ದರು ಎಂದು ಹೇಳಿದ್ದಾರೆ.
ಪೌರತ್ವ ಪಡೆಯುವ ಪ್ರಕ್ರಿಯೆಯ ಸಮಗ್ರತೆಯನ್ನು ಕಾಪಾಡಲು ಹಾಗೂ ವಲಸೆ ವ್ಯವಸ್ಥೆಗೆ ವಂಚನೆ ಮಾಡುವವರ ವಿರುದ್ಧ ಕ್ರಮ ಮುಂದುವರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಭಾರತ ಮೂಲದ ಸಿಂಗ್ 1992ರ ಫೆಬ್ರವರಿಯಲ್ಲಿ ಆರು ತಿಂಗಳಿಗಿಂತ ಹೆಚ್ಚು ಕಾಲ ಉಳಿಯದ ಷರತ್ತಿನೊಂದಿಗೆ ತಾತ್ಕಾಲಿಕ ಭೇಟಿಗಾಗಿ ಅಮೆರಿಕ ಪ್ರವೇಶಿಸಿದ್ದರು.
ಬಳಿಕ ಅನುಮತಿಯಿಲ್ಲದೆ ಹಲವು ವರ್ಷಗಳ ಕಾಲ ಅಲ್ಲಿಯೇ ಉಳಿದಿದ್ದರು. ನಂತರ ಕುಟುಂಬ ಆಧಾರಿತ ವಲಸೆ ವೀಸಾ ಅರ್ಜಿಯ ಮೂಲಕ 2000ರ ಜೂನ್‌ನಲ್ಲಿ ಅವರಿಗೆ ಶಾಶ್ವತ ನಿವಾಸದ ಸ್ಥಾನಮಾನ ದೊರೆತಿತ್ತು ಎಂದು ನ್ಯಾಯಾಂಗ ಇಲಾಖೆ ತಿಳಿಸಿದೆ.