

ಕಾಠ್ಮಂಡು (ನೇಪಾಳ): ನೇಪಾಳದಲ್ಲಿ ಉಂಟಾಗಿರುವ ಪ್ರವಾಹ ಮಹಾ ದುರಂತದಲ್ಲಿ ಸಾವಿನ ಸಂಖ್ಯೆ 1,127ಕ್ಕೆ ಏರಿಕೆಯಾಗಿದ್ದು, ನಾಪತ್ತೆಯಾಗಿರುವ 4,858 ಮಂದಿಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಇದರ ನಡುವೆಯೇ, ಕಳೆದ 2-3 ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ವೈರಲ್ ಆಗುತ್ತಿದೆ. ಅದರಲ್ಲಿ, ವಿನಾಶಕಾರಿ ಹಠಾತ್ ಪ್ರವಾಹದ ಸಂದರ್ಭದಲ್ಲಿ, ವಿಶಿಷ್ಟವಾದ ಹಸಿರು ಮನೆ (ಮಿರಕಲ್ ಗ್ರೀನ್ ಹೌಸ್) ಪ್ರವಾಹದ ತೀವ್ರತೆಗೆ ಸಿಲುಕದೆ ಸುರಕ್ಷಿತವಾಗಿ ಉಳಿದುಕೊಂಡಿತ್ತು. ಈ ಬಗ್ಗೆ ಆ ಹಸಿರು ಬಣ್ಣದ ಮನೆಯ ಒಡತಿ ಲಕ್ಷ್ಮೀ ಪಾಂಡೆ ಮಾತಾನಾಡಿ, "ಆ ವೇಳೆ, ನಿರಂತರವಾಗಿ "ಓಂ ನಮಃ ಶಿವಾಯ" ಮಂತ್ರವನ್ನು ಹಾಗೂ ಹನುಮಾನ್ ಚಾಲೀಸಾವನ್ನು ಜಪಿಸುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದೆ ಎಂದು ತಿಳಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
ಇದು ನಮಗೆ ಸಿಕ್ಕ ಪುನರ್ಜನ್ಮ...
ಪ್ರವಾಹದ ನೀರು ಭೀಕರ ವೇಗದಲ್ಲಿ ಬಂದು ಇಡೀ ಮನೆಯನ್ನು ಆವರಿಸಿದಾಗ, ಲಕ್ಷ್ಮೀ ಮತ್ತು ಅವರ ಕುಟುಂಬಸ್ಥರು ಜೀವ ಉಳಿಸಿಕೊಳ್ಳಲು ಮನೆಯ ಮೇಲಿನ ಮಹಡಿಗೆ ಓಡಿದರು. ಆ ತಲ್ಲಣದ ಕ್ಷಣಗಳಲ್ಲಿ ತಾವು ಬದುಕುಳಿಯುತ್ತೇವೆ ಎಂಬ ಆಸೆಯನ್ನೇ ಅವರು ಬಿಟ್ಟಿದ್ದರು. ಆದರೆ, ಆ ಪ್ರವಾಹದ ವೇಳೆ ಓಂ ನಮಃ ಶಿವಾಯ ಮಂತ್ರ ಹಾಗೂ ಹನುಮಾನ್ ಚಾಲೀಸಾವನ್ನು ಜಪಿಸುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು ಎಂದು ಮನೆಯ ಒಡತಿ ಲಕ್ಷ್ಮೀ ಪಾಂಡೆ ತಿಳಿಸಿದ್ದಾರೆ. ಇದೇ ವೇಳೆ ತಾವು ಪ್ರತಿದಿನ ಹನುಮಾನ್ ಚಾಲೀಸಾ ಪಠಿಸುವುದಾಗಿ ಹೇಳಿದ್ದಾರೆ.
ಮುಂದುವರೆದು, ಸುತ್ತಮುತ್ತಲಿನ ಕಟ್ಟಡಗಳು ಮತ್ತು ಆಸ್ತಿಪಾಸ್ತಿಗಳು ನೀರಿನ ರಭಸಕ್ಕೆ ಕೊಚ್ಚಿಹೋಗುತ್ತಿದ್ದರೂ, ಇವರ ಮನೆ ಮಾತ್ರ ಅಚ್ಚರಿ ಎಂಬಂತೆ ಗಟ್ಟಿಯಾಗಿ ನಿಂತಿತ್ತು. "ನಮ್ಮ ಮನೆ ಈ ರೀತಿ ಸುರಕ್ಷಿತವಾಗಿ ಉಳಿದಿರುವುದು ಮತ್ತು ನಾವು ಜೀವಂತವಾಗಿರುವುದು ಶಿವ ಹಾಗೂ ಹನುಮಂತನ ಅಪಾರ ಕೃಪೆ. ಇದು ನಮಗೆ ಸಿಕ್ಕ ಪುನರ್ಜನ್ಮ" ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.
ಇನ್ನು, ಸಾಮಾಜಿಕ ಜಾಲತಾಣಗಳಲ್ಲಿ ಈ ಮನೆಯ ವಿಡಿಯೋಗಳು ವ್ಯಾಪಕವಾಗಿ ವೈರಲ್ ಆಗಿದ್ದು, ಅನೇಕರು ಇದನ್ನು ತಾಂತ್ರಿಕ ಇಂಜಿನಿಯರಿಂಗ್ ಚಮತ್ಕಾರ ಎಂದರೆ, ಇನ್ನೂ ಕೆಲವರು ಈ ಕುಟುಂಬದ ಅದಮ್ಯ ನಂಬಿಕೆ ಮತ್ತು ದೈವಿಕ ರಕ್ಷಣೆ ಎಂದು ಶ್ಲಾಘಿಸುತ್ತಿದ್ದಾರೆ. ಏತನ್ಮಧ್ಯೆ, ಪ್ರಸ್ತುತ ಲಕ್ಷ್ಮೀ ಪಾಂಡೆ ಅವರ ಕುಟುಂಬವನ್ನು ರಕ್ಷಣಾ ತಂಡಗಳು ಸುರಕ್ಷಿತವಾಗಿ ಸ್ಥಳಾಂತರಿಸಿವೆ.