ಪ್ರಕೃತಿಯ ಮುನಿಸೋ ಇಲ್ಲ ಮಾನವನ ತಪ್ಪೋ? ನೇಪಾಳದಲ್ಲಿ ಮತ್ತೆ ಮತ್ತೆ ಜಲಪ್ರಳಯ ಸಂಭವಿಸುವುದೇಕೆ? ಇಲ್ಲಿದೆ ಭೂಕುಸಿತದ ಹಿಂದಿನ ರಹಸ್ಯ!

Nepal Flood
ನೇಪಾಳದಲ್ಲಿ ಪ್ರವಾಹ!AI Image
Updated on

ಕಾಠ್ಮಂಡು (ನೇಪಾಳ): ನೇಪಾಳದಲ್ಲಿ ಸಂಭವಿಸಿರುವ ಭೀಕರ ದಿಢೀರ್ ಪ್ರವಾಹದಿಂದಾಗಿ (Nepal Flash Flood) ವ್ಯಾಪಕ ಹಾನಿಯಾಗಿದ್ದು, ಭಾರಿ ಪ್ರಮಾಣದ ಆಸ್ತಿಪಾಸ್ತಿ ಮತ್ತು ಜೀವಹಾನಿ ಸಂಭವಿಸಿದೆ. ಹಿಮಾಲಯ ಪರ್ವತ ಶ್ರೇಣಿಯ ಚೀನಾ-ಟಿಬೆಟ್ ಗಡಿಗೆ ಹೊಂದಿಕೊಂಡಿರುವ ನೇಪಾಳದ ಉತ್ತರ ಭಾಗದಲ್ಲಿ ಸಂಭವಿಸಿದ ಈ ಜಲಪ್ರಳಯಕ್ಕೆ ಇದುವರೆಗೂ, ಸುಮಾರು 332 ಜನರು ಸಾವನ್ನಪ್ಪಿದ್ದಾರೆ ಮತ್ತು 288 ಭಾರತೀಯರು ಸೇರಿದಂತೆ ಸುಮಾರು 1,500 ಜನರು ಕಾಣೆಯಾಗಿದ್ದಾರೆ ಎನ್ನಲಾಗಿದೆ. ಆದರೆ, ನೇಪಾಳದಲ್ಲಿ ಪ್ರವಾಹವೇನು ಇದೇ ಮೊದಲಲ್ಲ! ಹೌದು, ಕಳೆದ 30 ವರ್ಷಗಳಲ್ಲಿ ಸುಮಾರು 1,500ಕ್ಕೂ ಹೆಚ್ಚು ಭಾರಿ ಪ್ರವಾಹದ ಘಟನೆಗಳು ದಾಖಲಾಗಿವೆ. ಇದರಲ್ಲಿ ಒಟ್ಟು 4,200ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹಾಗಾದರೆ, ನೇಪಾಳದಲ್ಲಿ ಪದೇ ಪದೇ ಪ್ರವಾಹ, ಭೂಕುಸಿತ ಸಂಭವಿಸೋದು ಯಾಕೆ? ಅದರ ಹಿಂದಿನ ಕಾರಣಗಳೇನು? ಆ ಕುರಿತ ವರದಿ ಇಲ್ಲಿದೆ:

  • ಕಡಿದಾದ ಭೌಗೋಳಿಕ ರಚನೆ

ನೇಪಾಳವು ವಿಶ್ವದ ಅತ್ಯಂತ ಎತ್ತರದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ನೆಲೆಸಿದೆ. ಈ ಪರ್ವತಗಳು ಭೌಗೋಳಿಕವಾಗಿ ಯುವ ಪರ್ವತಗಳು ಆಗಿರುವುದರಿಂದ ಇಲ್ಲಿನ ಮಣ್ಣು ಮತ್ತು ಬಂಡೆಗಳ ರಚನೆ ಇನ್ನು ತೀರಾ ಸಡಿಲವಾಗಿದೆ. ತೀವ್ರವಾದ ಇಳಿಜಾರು ಇರುವುದರಿಂದ ಸಣ್ಣ ಮಳೆಯಾದರೂ ಮಣ್ಣು ಸುಲಭವಾಗಿ ಜರುಗಿ ಭೂಕುಸಿತ ಸಂಭವಿಸುತ್ತದೆ.

  • ಮಾನ್ಸೂನ್ ಮಳೆ ಮತ್ತು ಮೇಘಸ್ಫೋಟ

ದಕ್ಷಿಣ ಏಷ್ಯಾದ ಮಾನ್ಸೂನ್ ಮಾರುತಗಳು ಹಿಮಾಲಯ ಪರ್ವತಗಳಿಗೆ ಡಿಕ್ಕಿ ಹೊಡೆದಾಗ ನೇಪಾಳದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಮಳೆಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮೇಘಸ್ಫೋಟ ಹೆಚ್ಚಾಗುತ್ತಿದ್ದು, ನದಿಗಳು ದಿಢೀರನೆ ಉಕ್ಕಿ ಹರಿದು ಪ್ರವಾಹ ಸೃಷ್ಟಿಸುತ್ತವೆ.

  • ಹಿಮನದಿಗಳ ಕರಗುವಿಕೆ

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಹಿಮಾಲಯದ ಹಿಮನದಿಗಳು ವೇಗವಾಗಿ ಕರಗುತ್ತಿವೆ. ಇದರಿಂದಾಗಿ ಹಿಮನದಿಗಳ ತಳದಲ್ಲಿ ದೊಡ್ಡ ಪ್ರಮಾಣದ ಸರೋವರಗಳು ಸೃಷ್ಟಿಯಾಗುತ್ತವೆ. ಇವುಗಳ ನೀರು ತಡೆಯಲಾರದೆ ಒಡೆದಾಗ ಹಿಮನದಿ ಸರೋವರ ಪ್ರವಾಹ (GLOF - Glacial Lake Outburst Flood) ಉಂಟಾಗಿ ತಳಭಾಗದ ಗ್ರಾಮಗಳು ಕೊಚ್ಚಿಹೋಗುತ್ತವೆ. ಅದರಲ್ಲೂ, ನೇಪಾಳದ ಪ್ರಮುಖ ಜೀವನದಿಗಳಾದ ಕೋಶಿ, ಗಂಡಕ್, ಕರ್ನಾಲಿ ಸೇರಿದಂತೆ ಹಲವು ನದಿಗಳು ಒಟ್ಟಿಗೆ ಉಕ್ಕಿ ಹರಿಯುವುದು ಮತ್ತು ನದಿಯ ಹಾದಿಗೆ ಭೂಕುಸಿತದ ಮಣ್ಣು ಅಡ್ಡಲಾಗಿ ನಿಲ್ಲುವುದು ಈ ದುರಂತದ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ.

Nepal Flood
Nepal Floods: ನೇಪಾಳ ಭೀಕರ ಪ್ರವಾಹಕ್ಕೆ ಚೀನಾದ ನಿರ್ಮಾಣ ಕಾರ್ಯವೇ ಕಾರಣ?
Flash floods in Nepal
ನೇಪಾಳದಲ್ಲಿ ಹಠಾತ್ ಪ್ರವಾಹReuters
  • ಭೂಕಂಪಗಳ ಪ್ರಭಾವ

ನೇಪಾಳವು ಅತ್ಯಂತ ಸಕ್ರಿಯ ಭೂಕಂಪನ ವಲಯದಲ್ಲಿದೆ. 2015 ರ ಭೀಕರ ಭೂಕಂಪ ಸೇರಿದಂತೆ ಇಲ್ಲಿ ಪದೇ ಪದೇ ಸಂಭವಿಸುವ ಭೂಕಂಪಗಳು ಪರ್ವತಗಳ ಆಂತರಿಕ ರಚನೆಯನ್ನು ದುರ್ಬಲಗೊಳಿಸಿವೆ. ಇದರಿಂದಾಗಿ ಮಳೆಗಾಲದಲ್ಲಿ ಈ ಪ್ರದೇಶಗಳಲ್ಲಿ ಭೂಕುಸಿತದ ತೀವ್ರತೆ ಹೆಚ್ಚಾಗುತ್ತದೆ.

  • ಅವೈಜ್ಞಾನಿಕ ನಗರೀಕರಣ ಮತ್ತು ಅರಣ್ಯ ನಾಶ

ನೇಪಾಳದ ಶೇಕಡಾ 80 ಕ್ಕಿಂತ ಹೆಚ್ಚು ಭಾಗ ಕಡಿದಾದ ಹಿಮಾಲಯ ಪರ್ವತಗಳಿಂದ ಕೂಡಿದೆ. ಅದರಂತೆ, ಈ ಪರ್ವತ ಪ್ರದೇಶಗಳಲ್ಲಿ ರಸ್ತೆ, ಜಲವಿದ್ಯುತ್ ಯೋಜನೆಗಳು ಮತ್ತು ಕಟ್ಟಡಗಳನ್ನು ನಿರ್ಮಿಸಲು ವ್ಯಾಪಕವಾಗಿ ಕಾಡುಗಳನ್ನು ಕಡಿಯಲಾಗುತ್ತಿದೆ. ಮರಗಳ ಬೇರುಗಳು ಮಣ್ಣನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳುತ್ತವೆ. ಆದರೆ ಅರಣ್ಯ ನಾಶದಿಂದಾಗಿ ಮಣ್ಣಿನ ಸವೆತ ಹೆಚ್ಚಾಗಿ, ಮಳೆನೀರು ನೇರವಾಗಿ ನದಿಗಳನ್ನು ಸೇರಿ ಪ್ರವಾಹಕ್ಕೆ ಕಾರಣವಾಗುತ್ತಿದೆ.

Nepal Flood
ಉತ್ತರ ಪ್ರದೇಶ, ಬಿಹಾರದಲ್ಲಿ ನೇಪಾಳ ಪ್ರವಾಹದ ಪರಿಣಾಮ? NDRF ಹೇಳಿದ್ದಿಷ್ಟು...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com