'ಸತ್ತರೂ ಇಲ್ಲಿಗೆ ಬರಬೇಡಿ': ಪೊಲೀಸ್ ವಾಹನದಲ್ಲಿ ಹಿಂಬಾಲಿಸಿದ ಮುಖ್ಯ ಪೇದೆ, ವಿಡಿಯೋದಲ್ಲಿ ಮಹಿಳೆ ಹೇಳಿದ್ದೇನು?

ಜೈಪುರ: ಆಟೋರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರಿಗೆ ಪೊಲೀಸ್ ಪೇದೆಯೇ ಕಿರುಕುಳ ನೀಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರಾಜಸ್ಥಾನದ ಜೈಪುರದಲ್ಲಿ ಪೊಲೀಸ್ ವಾಹನದಲ್ಲಿ ತನ್ನನ್ನು ಹಿಂಬಾಲಿಸಿದ ಪೇದೆ ಅಸಭ್ಯ ಸನ್ನೆಗಳನ್ನು ಮಾಡಿ, ಮೊಬೈಲ್ ನಂಬರ್ ಕೇಳಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
'ನೀವು ಮಹಿಳೆಯಾಗಿದ್ದು, ಜೈಪುರಕ್ಕೆ ಬರಲು ಅಥವಾ ಇಲ್ಲಿ ನೆಲೆಸಲು ಯೋಚಿಸುತ್ತಿದ್ದರೆ, ಎಂದಿಗೂ ಇಲ್ಲಿಗೆ ಬರಬೇಡಿ. ಸತ್ತ ಮೇಲೂ ಜೈಪುರಕ್ಕೆ ಬರಬೇಡಿ' ಎಂದು ಮಹಿಳೆ ವಿಡಿಯೋದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದ 20 ವರ್ಷಗಳಿಂದ ಜೈಪುರದಲ್ಲಿ ವಾಸಿಸುತ್ತಿರುವುದಾಗಿ ಹೇಳಿಕೊಂಡಿರುವ ಮಹಿಳೆ, ಭಾನುವಾರ ಮಾನಸರೋವರ ಪ್ರದೇಶದ ಪೆಸಿಫಿಕ್ ಮಾಲ್‌ಗೆ ಆಟೋರಿಕ್ಷಾದಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.
ಪೊಲೀಸ್ ವಾಹನದಲ್ಲೇ ಹಿಂಬಾಲಿಸಿದ ಪೇದೆ
ತಾನು ಪ್ರಯಾಣಿಸುತ್ತಿದ್ದ ಆಟೋರಿಕ್ಷಾವನ್ನು ಪೊಲೀಸ್ ವಾಹನ ಹಿಂಬಾಲಿಸಿತು. ಅದರಲ್ಲಿದ್ದ ಪೇದೆ ತನ್ನತ್ತ ಅಸಭ್ಯ ಸನ್ನೆಗಳನ್ನು ಮಾಡಿ ಮೊಬೈಲ್ ನಂಬರ್ ಕೇಳಿದರು ಎಂದು ಮಹಿಳೆ ಆರೋಪಿಸಿದ್ದಾರೆ. ಮಾಲ್ ತಲುಪಿದ ಬಳಿಕ ಆಟೋ ಚಾಲಕನ ಬಳಿ ತನ್ನ ಸಂಪರ್ಕ ಸಂಖ್ಯೆಯನ್ನು ಕೇಳಿದ್ದಾರೆ ಎಂದೂ ದೂರಿದ್ದಾರೆ.
ಘಟನೆಯ ಕುರಿತು ವಿಡಿಯೋದಲ್ಲಿ ಮಾತನಾಡಿರುವ ಮಹಿಳೆ, ಕಿರುಕುಳದ ದೃಶ್ಯಗಳನ್ನು ತಾನು ರೆಕಾರ್ಡ್ ಮಾಡಿಕೊಂಡಿದ್ದರೂ ಅದರಿಂದ ಪ್ರಯೋಜನವಾಗುತ್ತದೆಯೇ ಎಂಬ ಅನುಮಾನವಿದೆ ಎಂದು ಹೇಳಿದ್ದಾರೆ.
'ನನ್ನ ಬಳಿ ಘಟನೆಯ ರೆಕಾರ್ಡಿಂಗ್ ಕೂಡ ಇದೆ. ಆದರೆ, ದುರದೃಷ್ಟವಶಾತ್ ಈ ವಿಡಿಯೋದಿಂದ ನನಗೆ ನ್ಯಾಯ ಸಿಗುತ್ತದೆಯೇ ಎಂಬುದು ಗೊತ್ತಿಲ್ಲ. ದೂರು ನೀಡಲು ನಾನೀಗ ಎಲ್ಲಿಗೆ ಹೋಗಬೇಕು? ಮಹಿಳೆಯರನ್ನು ರಕ್ಷಿಸಬೇಕಾದವರೇ ಶತ್ರುಗಳಾದರೆ ನಾವು ಏನು ಮಾಡಬೇಕು?' ಎಂದು ಅವರು ಪ್ರಶ್ನಿಸಿದ್ದಾರೆ.
ಸಿಸಿಟಿವಿ ದೃಶ್ಯ ಪರಿಶೀಲನೆಗೆ ಮುಂದಾದ ಪೊಲೀಸರು
ಮಹಿಳೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಜೈಪುರ ದಕ್ಷಿಣ ವಿಭಾಗದ ಡಿಸಿಪಿ ರಾಜರ್ಷಿ ರಾಜ್ ಈ ಕುರಿತು ಮಾಹಿತಿ ನೀಡಿದ್ದು, ಪೆಸಿಫಿಕ್ ಮಾಲ್, ಗೋಪಾಲಪುರ ಬೈಪಾಸ್, ರಿದ್ಧಿ-ಸಿದ್ಧಿ ಜಂಕ್ಷನ್ ಹಾಗೂ ಶಿಪ್ರಾ ಪಥ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅಭಯ್ ಕಮಾಂಡ್ ಸೆಂಟರ್‌ನ ದೃಶ್ಯಾವಳಿಗಳು ಹಾಗೂ ಮಹಿಳೆ ನೀಡಿರುವ ವಿಡಿಯೋವನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಮಹಿಳೆ ಮತ್ತು ಆಟೋರಿಕ್ಷಾ ಚಾಲಕನ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಆರೋಪಿತ ಪೊಲೀಸ್ ಪೇದೆಯ ಗುರುತು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ. ಆರೋಪಗಳು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



