'ಭಯೋತ್ಪಾದಕಿಯ ಹಸ್ತಾಂತರದ ಮೂಲಕವಷ್ಟೇ ಕರೆತರಬಹುದು, ಶೇಖ್ ಹಸೀನಾ ಕೈಕೋಳದಲ್ಲೇ ಬರಬೇಕು'; ಬಾಂಗ್ಲಾದೇಶ ಸರ್ಕಾರ

ಢಾಕಾ: ಬಾಂಗ್ಲಾದೇಶದಿಂದ ಪದಚ್ಯುತಗೊಂಡಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಡಿಸೆಂಬರ್ 16ರಂದು ಸ್ವದೇಶಕ್ಕೆ ಮರಳುವುದಾಗಿ ಘೋಷಿಸಿರುವ ಬೆನ್ನಲ್ಲೇ, ಬಾಂಗ್ಲಾದೇಶ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಹಸೀನಾ ಅವರನ್ನು ಭಯೋತ್ಪಾದಕಿ ಎಂದು ಕರೆದಿರುವ ಸರ್ಕಾರ, ಅವರು ಭಾರತದಿಂದ ಹಸ್ತಾಂತರಗೊಂಡು ಮಾತ್ರ ದೇಶಕ್ಕೆ ಮರಳಲು ಸಾಧ್ಯ. ಅದೂ ಕೈಗೆ ಕೋಳ ಹಾಕಿಕೊಂಡೇ ಬರಬೇಕಾಗುತ್ತದೆ ಎಂದು ಹೇಳಿದೆ.
ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್ ಮಾಧ್ಯಮಗಳೊಂದಿಗೆ ಮಾತನಾಡಿ, ಹಸೀನಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
"ಬಾಂಗ್ಲಾದೇಶದ ಜನರಿಗೆ ಭಯೋತ್ಪಾದನೆ ಎಂದರೆ ಶೇಖ್ ಹಸೀನಾ ಪ್ರೋತ್ಸಾಹಿಸಿದ ಅವಾಮಿ ಲೀಗ್ನ ಭಯೋತ್ಪಾದನೆ ಮಾತ್ರ ನೆನಪಾಗುತ್ತದೆ. ಅವರು ಅಪರಾಧ ಸಾಬೀತಾಗಿರುವ ಅಪರಾಧಿ. ದೇಶದಿಂದ ಪರಾರಿಯಾಗಿರುವ ಭಯೋತ್ಪಾದಕಿ" ಎಂದು ಕಬೀರ್ ಆರೋಪಿಸಿದ್ದಾರೆ.
ಹಸೀನಾ ಹಣ ಖರ್ಚು ಮಾಡಿ, ಜನರನ್ನು ನೇಮಿಸಿಕೊಂಡು ತಮ್ಮ ಸ್ವದೇಶ ವಾಪಸಾತಿ ಬಗ್ಗೆ ಸುದ್ದಿಗಳನ್ನು ಪ್ರಕಟಿಸಬಹುದು. ಆದರೆ ಆಸೆ ಮತ್ತು ವಾಸ್ತವ ಎರಡೂ ಬೇರೆ ಎಂದು ಸಚಿವರು ವ್ಯಂಗ್ಯವಾಡಿದ್ದಾರೆ.
ಭಯೋತ್ಪಾದಕಿಯ ಹಸ್ತಾಂತರದ ಮೂಲಕವಷ್ಟೇ ಕರೆತರಬಹುದು
"ಒಬ್ಬ ಭಯೋತ್ಪಾದಕಿಯನ್ನು ಹಸ್ತಾಂತರ ಪ್ರಕ್ರಿಯೆ ಮೂಲಕ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ದೇಶಕ್ಕೆ ಮರಳಲು ಬಿಡುವುದಿಲ್ಲ. ಆಕೆ ಕೈಗೆ ಕೋಳ ಹಾಕಿಕೊಂಡೇ ಬರಬೇಕು. ಹಸೀನಾ ಅವರಿಗೆ ಬಾಂಗ್ಲಾದೇಶಕ್ಕೆ ವಿಮಾನದಲ್ಲಿ ಮರಳುವ ಕನಸು ಬೀಳುತ್ತಿರಬಹುದು. ಆದರೆ ಕನಸು ಮತ್ತು ವಾಸ್ತವದ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಬೇಕು" ಎಂದು ಹೇಳಿದ್ದಾರೆ.
ಹಸೀನಾ ವಾಪಸಾತಿ ಘೋಷಣೆಯಿಂದ ರಾಜಕೀಯ ಬಿಕ್ಕಟ್ಟು
ತಾರಿಖ್ ರೆಹಮಾನ್ ನೇತೃತ್ವದ ಬಾಂಗ್ಲಾದೇಶ ಸರ್ಕಾರ ಹಸೀನಾ ಅವರ ವಾಪಸಾತಿ ಘೋಷಣೆಗೆ ನೀಡಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ. 79 ವರ್ಷದ ಶೇಖ್ ಹಸೀನಾ ಡಿಸೆಂಬರ್ 16ರಂದು ಬಾಂಗ್ಲಾದೇಶಕ್ಕೆ ಮರಳುವುದಾಗಿ ಘೋಷಿಸಿದ್ದಾರೆ. 2024ರಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಿಂದ ಅಧಿಕಾರ ಕಳೆದುಕೊಂಡ ಬಳಿಕ ಅವರು ಭಾರತಕ್ಕೆ ಬಂದು ನೆಲೆಸಿದ್ದಾರೆ.
ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಮೇಲೆ ಬಾಂಗ್ಲಾದೇಶದಲ್ಲಿ ನಿಷೇಧ ಹೇರಲಾಗಿದೆ. ಇತ್ತೀಚೆಗೆ ಹಸೀನಾ ಹೊಸ ಪಾಸ್ಪೋರ್ಟ್ ಮತ್ತು ಇತರ ಪ್ರಯಾಣ ದಾಖಲೆಗಳನ್ನು ಪಡೆಯಲು ಪ್ರಯತ್ನಿಸಿದ ಬಳಿಕ ದೇಶದಲ್ಲಿ ರಾಜಕೀಯ ಉದ್ವಿಗ್ನತೆ ಹಾಗೂ ಹಿಂಸಾಚಾರ ಹೆಚ್ಚಾಗಿದೆ ಎಂದು ವರದಿಯಾಗಿದೆ.
ಬಾಂಗ್ಲಾದೇಶದ ವಿಮಾನದಲ್ಲೇ ಮರಳಲು ಹಸೀನಾ ಮನವಿ
ತಮ್ಮ ಸ್ವದೇಶ ವಾಪಸಾತಿಗೆ ಅಗತ್ಯವಾದ ದಾಖಲೆಗಳನ್ನು ಒದಗಿಸುವಂತೆ ಹಸೀನಾ ಬಾಂಗ್ಲಾದೇಶ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ಬಾಂಗ್ಲಾದೇಶದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಬಿಮಾನ್ ಬಾಂಗ್ಲಾದೇಶ ಏರ್ಲೈನ್ಸ್ನ ವಿಮಾನದ ಮೂಲಕ ತಮ್ಮನ್ನು ಸ್ವದೇಶಕ್ಕೆ ಕರೆತರಲು ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.
2024ರಲ್ಲಿ ಪ್ರತಿಭಟನೆ ತೀವ್ರಗೊಂಡ ಬಳಿಕ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು. ಆಗ ಅವರ ಪಾಸ್ಪೋರ್ಟ್ ಸೇರಿದಂತೆ ಹಲವು ಪ್ರಯಾಣ ದಾಖಲೆಗಳನ್ನು ರದ್ದುಗೊಳಿಸಲಾಗಿತ್ತು ಎಂದು ವರದಿಯಾಗಿದೆ. ಆದರೆ, ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸಿಕೊಳ್ಳಬೇಕೆಂಬ ನಿಲುವಿಗೆ ಬಾಂಗ್ಲಾದೇಶ ಸರ್ಕಾರ ಬದ್ಧವಾಗಿದೆ. ಹೀಗಾಗಿ ಡಿಸೆಂಬರ್ 16ರಂದು ಅವರು ನಿಜವಾಗಿಯೂ ಸ್ವದೇಶಕ್ಕೆ ಮರಳುತ್ತಾರೆಯೇ ಎಂಬ ಕುತೂಹಲ ಮೂಡಿದೆ.
ಬಾಂಗ್ಲಾ ಪಾಸ್ಪೋರ್ಟ್ ಗೆ ಹಸೀನಾ ಅರ್ಜಿ
ಸ್ವದೇಶಕ್ಕೆ ಮರಳಲು ಶೇಖ್ ಹಸೀನಾ ಪಾಸ್ಪೋರ್ಟ್ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ರಾಷ್ಟ್ರೀಯ ವಿಮಾನಯಾನ ಸಂಸ್ಥೆಯ ವಿಮಾನದ ಮೂಲಕ ತಮ್ಮನ್ನು ವಾಪಸ್ ಕರೆತರಲು ವ್ಯವಸ್ಥೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಆದರೆ, ಭಾರತದಿಂದ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಸರ್ಕಾರ ಪಟ್ಟು ಹಿಡಿದಿದೆ.
"ಭಯೋತ್ಪಾದಕನೊಬ್ಬನನ್ನು ಹಸ್ತಾಂತರ ಪ್ರಕ್ರಿಯೆ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ದೇಶಕ್ಕೆ ಮರಳಲು ಬಿಡುವುದಿಲ್ಲ. ಆಕೆಯನ್ನು ಕೈಕೋಳ ಹಾಕಿಕೊಂಡೇ ಕರೆತರಬಹುದು" ಎಂದು ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಹುಮಾಯೂನ್ ಕಬೀರ್ ಹೇಳಿಕೆ ನೀಡಿದ್ದಾರೆ.
ಹಸೀನಾ ಅವರನ್ನು ಭಾರತದಿಂದ ಹಸ್ತಾಂತರಿಸಿಕೊಳ್ಳಲು ಪಾಸ್ಪೋರ್ಟ್ ಅಥವಾ ಪ್ರಯಾಣದ ದಾಖಲೆ ಅಗತ್ಯವಿದೆ. ಈ ದಾಖಲೆಗಳ ವಿಚಾರದಲ್ಲಿನ ಗೊಂದಲದಿಂದ ಅವರ ವಾಪಸಾತಿಯನ್ನು ತಡಮಾಡಲು ತಾರಿಖ್ ರೆಹಮಾನ್ ಸರ್ಕಾರ ಪ್ರಯತ್ನಿಸುತ್ತಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಕುತೂಹಲ
ಶೇಖ್ ಹಸೀನಾ ಅವರ ಸ್ವದೇಶ ವಾಪಸಾತಿ ಈಗ ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿಪಕ್ಷೀಯ ವಿಚಾರವಾಗಿ ಮಾತ್ರ ಉಳಿದಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲೂ ಈ ಬೆಳವಣಿಗೆಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಒಂದೆಡೆ ಡಿಸೆಂಬರ್ 16ರಂದು ಬಾಂಗ್ಲಾದೇಶಕ್ಕೆ ಮರಳಲು ಹಸೀನಾ ಸಿದ್ಧತೆ ನಡೆಸುತ್ತಿದ್ದರೆ, ಮತ್ತೊಂದೆಡೆ ವಾಪಸಾದರೆ ಬಂಧಿಸುವುದಾಗಿ ಅಲ್ಲಿನ ಸರ್ಕಾರ ಎಚ್ಚರಿಸಿದೆ. ಹೀಗಾಗಿ ಅವರ ಮರಳುವಿಕೆ ಬಾಂಗ್ಲಾದೇಶದ ರಾಜಕೀಯದಲ್ಲಿ ಮತ್ತೊಂದು ದೊಡ್ಡ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಹಸೀನಾ ಡಿಸೆಂಬರ್ 16ರಂದು ಬಾಂಗ್ಲಾದೇಶಕ್ಕೆ ವಾಪಸ್?
ಬಾಂಗ್ಲಾದೇಶದಲ್ಲಿ ಡಿಸೆಂಬರ್ 16ರಂದು ವಿಜಯ ದಿನ ಆಚರಿಸಲಾಗುತ್ತದೆ. ಇದೇ ದಿನ ತಾವು ಸ್ವದೇಶಕ್ಕೆ ಮರಳುವುದಾಗಿ ಶೇಖ್ ಹಸೀನಾ ಈ ವಾರ ಘೋಷಿಸಿದ್ದಾರೆ. ಆದರೆ, ಅವರ ವಾಪಸಾತಿ ವಿಚಾರ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.
ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್ ಮೇಲೆ ನಿಷೇಧ ಹೇರಲಾಗಿದೆ. ಪಕ್ಷದ ಕಾರ್ಯಕರ್ತರು ಬಿಎನ್ಪಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಹಸೀನಾ ಸ್ವದೇಶಕ್ಕೆ ಮರಳುವುದನ್ನು ತಡೆಯಲು ಸರ್ಕಾರ ಅಡ್ಡಿಪಡಿಸುತ್ತಿದೆ ಎಂದು ಅವಾಮಿ ಲೀಗ್ ಆರೋಪಿಸಿದೆ.
ಆದರೆ, ಹಸೀನಾ ಅವರ ಸ್ವದೇಶ ವಾಪಸಾತಿ ಅಷ್ಟು ಸುಲಭವಲ್ಲ. 2024ರ ಪ್ರತಿಭಟನೆಗಳ ಸಂದರ್ಭದಲ್ಲಿ ಮಾನವೀಯತೆಯ ವಿರುದ್ಧದ ಅಪರಾಧ ಎಸಗಿದ ಆರೋಪದಲ್ಲಿ ನ್ಯಾಯಾಲಯವು ಅವರ ಗೈರುಹಾಜರಿಯಲ್ಲೇ ವಿಚಾರಣೆ ನಡೆಸಿ ಮರಣದಂಡನೆ ವಿಧಿಸಿದೆ.
ಆ ಪ್ರತಿಭಟನೆಗಳಲ್ಲಿ 1,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಹಸೀನಾ ಬಾಂಗ್ಲಾದೇಶಕ್ಕೆ ಮರಳಿದರೆ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುವುದು ಎಂದು ಅಲ್ಲಿನ ಸರ್ಕಾರ ಈಗಾಗಲೇ ಹೇಳಿದೆ. ಹೀಗಾಗಿ ಅವರ ವಾಪಸಾತಿ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




