ದೀಪಾವಳಿ ಗಿಫ್ಟ್: ಉದ್ಯೋಗಿಗಳಿಗೆ 20 ಲಕ್ಷ ರೂ ಮೌಲ್ಯದ EV ಕಾರು ಉಡುಗೊರೆ ನೀಡಿದ ಬೆಳ್ತಂಗಡಿ ಮೂಲದ ಸಂಸ್ಥೆ!

ಬೆಳ್ತಂಗಡಿ ಮೂಲದ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಸಂಸ್ಥೆ ನಿಡ್ಲೆ ಗ್ರಾಮದಲ್ಲಿ ಆಯೋಜಿಸಿದ್ದ ದೀಪಾವಳಿ ಸಂಭ್ರಮ 'ಅಗ್ರಿಲೀಫ್ ಉತ್ಸವ-2026' ಕಾರ್ಯಕ್ರಮದಲ್ಲಿ ಒಟ್ಟು ಸುಮಾರು 1 ಕೋಟಿ ರೂ. ಮೌಲ್ಯದ ಐದು ಎಲೆಕ್ಟ್ರಿಕ್ ಕಾರುಗಳನ್ನು ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ.
An employee of Agrileaf receives the key of an EV gifted to him
ಅಗ್ರಿಲೀಫ್ ಸಂಸ್ಥೆಯ ಉದ್ಯೋಗಿಯೊಬ್ಬರು ತಮಗೆ ಉಡುಗೊರೆಯಾಗಿ ನೀಡಲಾದ ಎಲೆಕ್ಟ್ರಿಕ್ ಕಾರಿನ ಕೀಲಿಯನ್ನು ಸ್ವೀಕರಿಸುತ್ತಿರುವುದು.
Updated on: 

ಮಂಗಳೂರು: ದೂರದ ಫ್ರಾನ್ಸ್, ದುಬೈ ಮತ್ತು ಬೆಂಗಳೂರಿನಲ್ಲಿದ್ದ ಉದ್ಯೋಗಗಳನ್ನು ತೊರೆದು ಗ್ರಾಮೀಣ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಗೆ ಮರಳಿದ ಐವರಿಗೆ ಭರ್ಜರಿ ಅದೃಷ್ಟ ಒಲಿದಿದೆ. ಅಡಿಕೆ ಹಾಳೆಯ ತಟ್ಟೆ ಹಾಗೂ ಇತರ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸುವ ಕಂಪನಿಯ ಐವರು ಉದ್ಯೋಗಿಗಳಿಗೆ ದೀಪಾವಳಿ ಉಡುಗೊರೆಯಾಗಿ ತಲಾ ಸುಮಾರು 20 ಲಕ್ಷ ರೂ. ಮೌಲ್ಯದ ಟಾಟಾ ನೆಕ್ಸಾನ್ ಇವಿ ಕಾರುಗಳನ್ನು ನೀಡಿ ಸುದ್ದಿಯಾಗಿದ್ದಾರೆ.

ಬೆಳ್ತಂಗಡಿ ಮೂಲದ ಅಗ್ರಿಲೀಫ್ ಎಕ್ಸ್‌ಪೋರ್ಟ್ಸ್ ಸಂಸ್ಥೆ ನಿಡ್ಲೆ ಗ್ರಾಮದಲ್ಲಿ ಆಯೋಜಿಸಿದ್ದ ದೀಪಾವಳಿ ಸಂಭ್ರಮ 'ಅಗ್ರಿಲೀಫ್ ಉತ್ಸವ-2026' ಕಾರ್ಯಕ್ರಮದಲ್ಲಿ ಒಟ್ಟು ಸುಮಾರು 1 ಕೋಟಿ ರೂ. ಮೌಲ್ಯದ ಐದು ಎಲೆಕ್ಟ್ರಿಕ್ ಕಾರುಗಳನ್ನು ಉದ್ಯೋಗಿಗಳಿಗೆ ಉಡುಗೊರೆಯಾಗಿ ನೀಡಲಾಗಿದೆ. ಈ ಸಂಸ್ಥೆ ಅಡಿಕೆ ಮರದ ಹಾಳೆಯಿಂದ ತಯಾರಿಸಿದ ಪರಿಸರಸ್ನೇಹಿ ಉತ್ಪನ್ನಗಳನ್ನು 20ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದೆ.

An employee of Agrileaf receives the key of an EV gifted to him
ಮುರಿಯದ ಮನೋಬಲ, ಕುಗ್ಗದ ಸಾಧನೆಯ ಹಂಬಲ: ಗಾಯಗೊಂಡರೂ ಛಲ ಬಿಡದ ಸೈನಿಕರು; Asian Para Games ಸಾಧಕ ಯೋಧರಿಗೆ ಸನ್ಮಾನ..!

ಕಾರ್ಯಕ್ರಮದಲ್ಲಿ ಕಾರುಗಳನ್ನು ಉಡುಗೊರೆಯಾಗಿ ಪಡೆದವರಲ್ಲಿ ಬಿಸಿನೆಸ್ ಅನಾಲಿಸ್ಟ್ ಶ್ಯಾಮನಂದನ ಹಿಲ್ಲೆಮನೆ, ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ವಿಘ್ನೇಶ್ ಪಿ., ಉತ್ಪಾದನಾ ವಿಭಾಗದ ವ್ಯವಸ್ಥಾಪಕ ಚೇತನ್ ಎನ್.ಎಸ್., ಕಾರ್ಯಾಚರಣೆ ವಿಭಾಗದ ವ್ಯವಸ್ಥಾಪಕ ಜಗನ್ನಾಥ್ ಪಿ. ಹಾಗೂ ತಾಂತ್ರಿಕ ವಿಭಾಗದ ಮುಖ್ಯಸ್ಥ ಶ್ರೀನಾಥ್ ಅಭ್ಯಂಕರ್ ಸೇರಿದ್ದಾರೆ.

ಇಬ್ಬರು ಉದ್ಯೋಗಿಗಳಾದ ಮಿಥುನ್ ಮತ್ತು ಸಂತೋಷ್ ಅವರಿಗೆ ತಲಾ ಸುಮಾರು 2 ಲಕ್ಷ ರೂ. ಮೌಲ್ಯದ ಏಥರ್ ರಿಜ್ಟಾ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ನೀಡಲಾಗಿದೆ. ಕಂಪನಿಯ ಬೆಳವಣಿಗೆಗೆ ಕೊಡುಗೆ ನೀಡಿದ ಇತರ ಹಲವು ಉದ್ಯೋಗಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಕಳೆದ ಆಗಸ್ಟ್‌ನಲ್ಲಿಯೂ ಕಂಪನಿಯು ಕೆಲವು ಉದ್ಯೋಗಿಗಳಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಉಡುಗೊರೆಯಾಗಿ ನೀಡಿತ್ತು.

ವಿಘ್ನೇಶ್ ಅವರಿಗೆ ಕಾರು ಉಡುಗೊರೆ ಅನಿರೀಕ್ಷಿತವಾಗಿತ್ತು. ನನಗೆ ಉಡುಗೊರೆಯಾಗಿ ಕಾರು ಸಿಗುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ (The New Indian Express) ಗೆ ತಿಳಿಸಿದ್ದಾರೆ.

An employee of Agrileaf receives the key of an EV gifted to him
250ಕ್ಕೂ ಹೆಚ್ಚು ದೇಶಿ ಬೀಜಗಳ ಸಂರಕ್ಷಣೆ: ಕರ್ನಾಟಕದ ಬಿಬಿ ಫಾತಿಮಾ ಮಹಿಳಾ ಸಂಘಕ್ಕೆ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ..!

ಐಷಾರಾಮಿ ಉದ್ಯೋಗ ತೊರೆದು ತವರಿಗೆ ಮರಳಿದ ಅಗ್ರಿಲೀಫ್ ಉದ್ಯೋಗಿಗಳು

16 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ವಿಘ್ನೇಶ್ ಅವರು ಬೆಂಗಳೂರಿನ ಉದ್ಯೋಗ ತೊರೆದು ಎರಡು ವರ್ಷಗಳ ಹಿಂದೆ ಅಗ್ರಿಲೀಫ್ ಸಂಸ್ಥೆಗೆ ಸೇರ್ಪಡೆಯಾಗಿದ್ದರು. ಕಾರು ಉಡುಗೊರೆ ಪಡೆದ ಐವರೂ ಬೆಳ್ತಂಗಡಿಯವರಾಗಿದ್ದು, ತವರಿಗೆ ಮರಳುವ ನಿರ್ಧಾರ ಕೈಗೊಳ್ಳುವ ಮೊದಲು ಫ್ರಾನ್ಸ್, ದುಬೈ ಮತ್ತು ಬೆಂಗಳೂರಿನಂತಹ ಸ್ಥಳಗಳಲ್ಲಿ ಉದ್ಯೋಗದಲ್ಲಿದ್ದರು ಎಂದು ಅವರು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಲು ಆಯ್ಕೆ ಮಾಡಿಕೊಂಡ ವೃತ್ತಿಪರರಿಗೂ ಸಮಾನ ಮೌಲ್ಯ ಮತ್ತು ಮನ್ನಣೆ ದೊರೆಯಬೇಕು ಎಂಬುದು ಸಂಸ್ಥೆಯ ಆಡಳಿತ ಮಂಡಳಿಯ ಆಶಯವಾಗಿತ್ತು. ಅವರ ಕೊಡುಗೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಈ ಉಡುಗೊರೆ ನೀಡಲಾಗಿದೆ ಎಂದು ವಿಘ್ನೇಶ್ ಹೇಳಿದರು.

ಅಗ್ರಿಲೀಫ್ ಸಂಸ್ಥೆಯು ನೈಸರ್ಗಿಕವಾಗಿ ಉದುರಿದ ಅಡಿಕೆ ಮರದ ಹಾಳೆಗಳಿಂದ ಜೈವಿಕವಾಗಿ ಕೊಳೆಯುವ ತಟ್ಟೆ, ಬಟ್ಟಲು ಸೇರಿದಂತೆ ವಿವಿಧ ಬಳಕೆಯ ವಸ್ತುಗಳನ್ನು ತಯಾರಿಸುತ್ತದೆ. ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳಿಗೆ ಪರ್ಯಾಯವಾಗಿ ಈ ಪರಿಸರಸ್ನೇಹಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸುಮಾರು 10,000 ರೈತ ಕುಟುಂಬಗಳಿಂದ ಕಚ್ಚಾ ವಸ್ತುಗಳನ್ನು ಖರೀದಿಸುವ ಮೂಲಕ ಅಡಿಕೆ ಬೆಳೆಗಾರರಿಗೆ ಹೆಚ್ಚುವರಿ ಆದಾಯದ ಮೂಲವನ್ನು ಒದಗಿಸುತ್ತಿದೆ. ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಗ್ರಾಮೀಣ ಉದ್ಯೋಗ ಸೃಷ್ಟಿಗೂ ಕೊಡುಗೆ ನೀಡುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ 320ಕ್ಕೂ ಹೆಚ್ಚು ಮಂದಿ ಉದ್ಯೋಗಿಗಳಿದ್ದಾರೆ.

ಬೆಳ್ತಂಗಡಿ ಮೂಲದ ಈ ಸಂಸ್ಥೆಯ ಉತ್ಪನ್ನಗಳು 20ಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗುತ್ತಿದ್ದು, ಅಡಿಕೆ ಹಾಳೆಯ ಉತ್ಪನ್ನಗಳ ರಫ್ತು ಕ್ಷೇತ್ರದಲ್ಲಿ ದೇಶದ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X