10 ದಿನಗಳ ಬಳಿಕ ಸುರಂಗದಿಂದ ಕಾರ್ಮಿಕರ ಪವಾಡ ಸದೃಶ ರಕ್ಷಣೆ; ‘ಜಗತ್ತು ಈವರೆಗೆ ಕಂಡು ಕೇಳರಿಯದ ರಕ್ಷಣಾ ಕಾರ್ಯಾಚರಣೆ’; ತಜ್ಞ Arnold Dix

ಆಸ್ಟ್ರೇಲಿಯಾದ ಸಿಡ್ನಿಯಿಂದ ನೇಪಾಳದ ರಕ್ಷಣಾ ಕಾರ್ಯಾಚರಣೆಗೆ ದೂರದಿಂದ ಮಾರ್ಗದರ್ಶನ ನೀಡುತ್ತಿದ್ದ ಡಿಕ್ಸ್, ಈ ರಕ್ಷಣಾ ಕಾರ್ಯಾಚರಣೆಯನ್ನು “ಅಸಾಧಾರಣ” ಹಾಗೂ ಜಗತ್ತು ಹಿಂದೆಂದೂ ಕಂಡಿರದಂತಹದ್ದು ಎಂದು ಹೇಳಿದ್ದಾರೆ.
Trishuli 3A tunnel Rescue operation
ನೇಪಾಳ ಪ್ರವಾಹ ಮತ್ತು ಸುರಂಗದಲ್ಲಿ ರಕ್ಷಣಾ ಕಾರ್ಯಾಚರಣೆ
Updated on

ಕಠ್ಮಂಡು: ನೇಪಾಳದ ಭೀಕರ ಪ್ರವಾಹದ ವೇಳೆ ತ್ರಿಶೂಲಿ-3ಎ ಜಲವಿದ್ಯುತ್ ಸ್ಥಾವರದ ಸುರಂಗದಲ್ಲಿ ಸಿಲುಕಿದ್ದ ಇಬ್ಬರು ವಿದ್ಯುತ್ ಸ್ಥಾವರ ಕಾರ್ಮಿಕರನ್ನು 10 ದಿನಗಳ ಬಳಿಕ ಸುರಕ್ಷಿತವಾಗಿ ಹೊರತಂದಿರುವುದು ಪವಾಡಕ್ಕೆ ಕಡಿಮೆಯೇನಲ್ಲ ಎಂದು ಖ್ಯಾತ ಅಂತಾರಾಷ್ಟ್ರೀಯ ಸುರಂಗ ರಕ್ಷಣಾ ತಜ್ಞ ಅರ್ನಾಲ್ಡ್ ಡಿಕ್ಸ್ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿ ಜೊತೆ ಮಾತನಾಡಿರುವ ಅರ್ನಾಲ್ಡ್ ಡಿಕ್ಸ್, ಭಾರತೀಯ ಸೇನೆ ನಡೆಸುತ್ತಿರುವ ಜಂಟಿ ರಕ್ಷಣಾ ಕಾರ್ಯಾಚರಣೆ ಅಸಾಧಾರಣ ಎಂದು ಬಣ್ಣಿಸಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿಯಿಂದ ನೇಪಾಳದ ರಕ್ಷಣಾ ಕಾರ್ಯಾಚರಣೆಗೆ ದೂರದಿಂದ ಮಾರ್ಗದರ್ಶನ ನೀಡುತ್ತಿದ್ದ ಡಿಕ್ಸ್, ಈ ರಕ್ಷಣಾ ಕಾರ್ಯಾಚರಣೆಯನ್ನು “ಅಸಾಧಾರಣ” ಹಾಗೂ ಜಗತ್ತು ಹಿಂದೆಂದೂ ಕಂಡಿರದಂತಹದ್ದು ಎಂದು ಹೇಳಿದ್ದಾರೆ.

2023ರಲ್ಲಿ ಉತ್ತರಾಖಂಡದ ಸುರಂಗ ರಕ್ಷಣಾ ಕಾರ್ಯಾಚರಣೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದ ಡಿಕ್ಸ್, “ಇದು ರಕ್ಷಣಾ ತಂಡದ ಪಾಲಿಗೆ ದೊಡ್ಡ ಗೆಲುವು. ಇಬ್ಬರನ್ನು ಜೀವಂತವಾಗಿ ಹೊರತಂದಿರುವುದು ಅಸಾಧಾರಣ ಸಾಧನೆ” ಎಂದು ಅವರು ಹೇಳಿದ್ದಾರೆ.

Trishuli 3A tunnel Rescue operation
Climate compensation ವಿವಾದ; ಭಾರತದಿಂದ ನೆರವು ಸ್ವೀಕರಿಸಿದ್ದೇವೆ, ಯಾವುದೇ ಪರಿಹಾರಕ್ಕೂ ಬೇಡಿಕೆ ಇಟ್ಟಿಲ್ಲ; ನೇಪಾಳ ಸ್ಪಷ್ಟನೆ..!

ಭೀಕರ ಪ್ರವಾಹ

ಆಗಸ್ಟ್ 26ರಂದು ರಸುವಾ ಜಿಲ್ಲೆಯ ಭೋಟೆ ಕೋಶಿ ನದಿಯಲ್ಲಿ ಉಂಟಾದ ಭೀಕರ ಹಠಾತ್ ಪ್ರವಾಹದಿಂದ ತ್ರಿಶೂಲಿ-3ಎ ಜಲವಿದ್ಯುತ್ ಸ್ಥಾವರದ ಸುರಂಗಕ್ಕೆ ಸಂಪರ್ಕ ಕಡಿತಗೊಂಡಿತ್ತು. ಸುರಂಗದೊಳಗೆ ಕಾರ್ಮಿಕರು ಸಿಲುಕಿಕೊಂಡಿದ್ದರು.

ಅಂದಿನಿಂದ ನೇಪಾಳ ಸೇನೆಯ ನೇತೃತ್ವದಲ್ಲಿ ರಕ್ಷಣಾ ತಂಡಗಳು ಬದುಕುಳಿದವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದು, ಸುರಂಗವನ್ನು ಮುಚ್ಚಿದ್ದ ಬೃಹತ್ ಬಂಡೆಗಳು ಮತ್ತು ಕೆಸರನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದವು. ಶುಕ್ರವಾರಕ್ಕೆ ತ್ರಿಶೂಲಿ ನದಿ ಜಲಾನಯನ ಪ್ರದೇಶದಲ್ಲಿ ಭೀಕರ ಪ್ರವಾಹ ಸಂಭವಿಸಿ 10 ದಿನಗಳು ಕಳೆದಿವೆ. ಪ್ರವಾಹದಿಂದ ಹಲವು ಜಲವಿದ್ಯುತ್ ಸ್ಥಾವರಗಳು ತೀವ್ರವಾಗಿ ಹಾನಿಗೊಳಗಾಗಿವೆ.

ರಕ್ಷಣಾ ಸಿಬ್ಬಂದಿ ಹಲವು ದಿನಗಳಿಂದ ಅಗೆಯುವ ಯಂತ್ರಗಳ ಮೂಲಕ ಅಪಾರ ಪ್ರಮಾಣದ ಅವಶೇಷಗಳನ್ನು ತೆರವುಗೊಳಿಸುತ್ತಿದ್ದಾರೆ. ಇದೇ ವೇಳೆ ಸುರಂಗದೊಳಗೆ ಶುದ್ಧ ಗಾಳಿ ಪೂರೈಸಲು ಪೈಪ್‌ಗಳನ್ನು ಅಳವಡಿಸಲಾಗುತ್ತಿದ್ದು, ಗಾಳಿ ವಿಷಕಾರಿಯಾಗದಂತೆ ಕ್ರಮ ಕೈಗೊಳ್ಳಲಾಗುತ್ತಿದೆ.

‘ಜಗತ್ತು ಹಿಂದೆಂದೂ ಮಾಡಿಲ್ಲ’

ಈ ರಕ್ಷಣಾ ಕಾರ್ಯಾಚರಣೆ ವಿಶ್ವದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವಂತಹದ್ದು ಎಂದು ಅರ್ನಾಲ್ಡ್ ಡಿಕ್ಸ್ ಹೇಳಿದ್ದು, “ಈ ರಕ್ಷಣಾ ಕಾರ್ಯಾಚರಣೆ ಹಿಂದಿನ ಎಲ್ಲಾ ದಾಖಲೆಗಳನ್ನು ಮರುಬರೆಯುವಂತಿದೆ. ಒಂದೇ ವೇಳೆ ಹಲವು ಜಲವಿದ್ಯುತ್ ಸ್ಥಾವರಗಳು ನಾಶವಾಗಿ, ಅನೇಕ ಸುರಂಗಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಬೇಕಾದ ಪರಿಸ್ಥಿತಿಯನ್ನು ಜಗತ್ತು ಹಿಂದೆಂದೂ ಎದುರಿಸಿರಲಿಲ್ಲ. ಜಗತ್ತು ಹಿಂದೆಂದೂ ಇಂಥ ಕಾರ್ಯಾಚರಣೆ ನಡೆಸಿಲ್ಲ” ಎಂದು ಅವರು ಹೇಳಿದ್ದಾರೆ.

ಪ್ರವಾಹದ ನೀರು ಏರತೊಡಗಿದಾಗ ಕಾರ್ಮಿಕರು ಸುರಂಗದೊಳಗೆ ಮೇಲ್ಭಾಗದತ್ತ ಓಡಿರಬಹುದು. ಅವರ ಹಿಂದೆ ವೇಗವಾಗಿ ನುಗ್ಗುತ್ತಿದ್ದ ಪ್ರವಾಹದ ನೀರು, ಬಂಡೆಗಳು, ಕೆಸರು ಹಾಗೂ ಮಣ್ಣಿನಿಂದ ತಪ್ಪಿಸಿಕೊಳ್ಳಲು ಅವರು ಸುರಂಗದ ಎತ್ತರದ ಭಾಗಕ್ಕೆ ತೆರಳಿದ್ದಿರಬಹುದು.

ನಂತರ ಬಂಡೆಗಳು ಮತ್ತು ಅವಶೇಷಗಳು ಸುರಂಗವನ್ನು ಸಂಪೂರ್ಣವಾಗಿ ಮುಚ್ಚಿಕೊಂಡಿವೆ. ಇದರಿಂದ ಕಾರ್ಮಿಕರು ಭೀಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರೂ, ಇದೇ ತಡೆಗೋಡೆ ಅವರನ್ನು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗುವುದರಿಂದ ಅಥವಾ ಮುಳುಗುವುದರಿಂದ ರಕ್ಷಿಸಿರಬಹುದು ಎಂದು ಅವರು ಹೇಳಿದ್ದಾರೆ.

“ಭೂಗತ ವಿದ್ಯುತ್ ಸ್ಥಾವರಗಳು ಪರ್ವತಗಳಲ್ಲಿರುವ ಸುರಂಗಗಳಿಗೆ ಸಂಪರ್ಕ ಹೊಂದಿರುತ್ತವೆ. ಈ ಸುರಂಗಗಳನ್ನು ಸ್ಥಾವರದ ನಿರ್ವಹಣೆ ಹಾಗೂ ಗಾಳಿಯ ಸಂಚಾರಕ್ಕಾಗಿ ಬಳಸಲಾಗುತ್ತದೆ. ಬದುಕುಳಿಯಲು ಕಾರ್ಮಿಕರು ಬೆಟ್ಟದ ಮೇಲ್ಭಾಗದ ಸುರಂಗಗಳತ್ತ ಓಡಿರಬಹುದು” ಎಂದು ಡಿಕ್ಸ್ ಹೇಳಿದ್ದಾರೆ.

ಕಾರಿನ ಗಾತ್ರದ ಬಂಡೆಗಳ ಸ್ಫೋಟಿಸಿ ತೆರವು

ರಕ್ಷಣಾ ಕಾರ್ಯಾಚರಣೆಯ ಸವಾಲಿನ ಪ್ರಮಾಣವನ್ನು ವಿವರಿಸಿದ ಅವರು, “ಕಾರು ಗಾತ್ರದ ಬಂಡೆಗಳನ್ನು ಸ್ಫೋಟಿಸಿ ತೆರವುಗೊಳಿಸಬೇಕಾಯಿತು. ಸುರಂಗ ರಕ್ಷಣಾ ಕಾರ್ಯಾಚರಣೆಯಲ್ಲಿ ನಾವು ಈ ಹಿಂದೆಂದೂ ಇಂಥದ್ದನ್ನು ಮಾಡಿರಲಿಲ್ಲ” ಎಂದಿದ್ದಾರೆ.

ಇಬ್ಬರು ಕಾರ್ಮಿಕರು ಬದುಕುಳಿದಿರುವುದು ಸುರಂಗ ಹಾಗೂ ವಿದ್ಯುತ್ ಸ್ಥಾವರದೊಳಗೆ ಬದುಕುಳಿಯಲು ಸಾಧ್ಯವಿರುವ ‘ಗೋಲ್ಡಿಲಾಕ್ಸ್ ಝೋನ್‌ಗಳು’ ಇವೆ ಎಂಬ ರಕ್ಷಣಾ ತಂಡದ ಅಂದಾಜು ಸರಿಯಾಗಿತ್ತು ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ.

“ಬದುಕುಳಿದವರು ಇರಬಹುದಾದ ಗೋಲ್ಡಿಲಾಕ್ಸ್ ಝೋನ್‌ಗಳನ್ನು ನಾವು ಗುರುತಿಸಿದ್ದೆವು. ಈಗ ಇಬ್ಬರ ರಕ್ಷಣೆ ಬಳಿಕ ನಾವು ಸರಿಯಾದ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ ಎಂಬುದು ಸಾಬೀತಾಗಿದೆ. ಇದರಿಂದ ಇನ್ನಷ್ಟು ಜನರನ್ನು ಪತ್ತೆಹಚ್ಚುವ ಭರವಸೆ ಸಿಕ್ಕಿದೆ” ಎಂದು ಡಿಕ್ಸ್ ಹೇಳಿದ್ದಾರೆ.

Trishuli 3A tunnel Rescue operation
ನೇಪಾಳ ಪ್ರವಾಹ ದುರಂತ: 9 ದಿನಗಳ ಕಾಲ 'ಹರೇ ಕೃಷ್ಣ' ಜಪಿಸುತ್ತಾ ಬದುಕುಳಿದ ಕಾರ್ಮಿಕ; ಕೃಷ್ಣ ಜನ್ಮಾಷ್ಟಮಿಯಂದೇ ಪವಾಡ ಸದೃಶ ರಕ್ಷಣೆ!

ಇನ್ನೂ 35 ಕಾರ್ಮಿಕರಿಗಾಗಿ ಹುಡುಕಾಟ

ರಕ್ಷಿಸಲ್ಪಟ್ಟ ಇಬ್ಬರು ಕಾರ್ಮಿಕರು ಸುರಂಗದೊಳಗೆ 10 ದಿನಗಳ ಕಾಲ ಬೆಳಕಿಲ್ಲದೆ ಬದುಕಿದ್ದರು. ವಿದ್ಯುತ್ ಸಂಪರ್ಕವಿಲ್ಲದ ಸಂಪೂರ್ಣ ಕತ್ತಲಿನಲ್ಲಿ, ಅಲ್ಲಿದ್ದ ಸೀಮಿತ ಆಹಾರ ಮತ್ತು ನೀರಿನ ನೆರವಿನಿಂದ ಅವರು ಬದುಕುಳಿದಿದ್ದಾರೆ. ಸುರಂಗದೊಳಗಿನ ಪರಿಸ್ಥಿತಿ ಹಾಗೂ ಬದುಕುಳಿಯುವ ಸಾಧ್ಯತೆಗಳ ಕುರಿತು ಮಾತನಾಡಿದ ಡಿಕ್ಸ್, ಬದುಕುವ ಇಚ್ಛಾ ಶಕ್ತಿಯೇ ಅತ್ಯಂತ ಮುಖ್ಯ ಎಂದು ಹೇಳಿದ್ದಾರೆ.

“ಬದುಕುಳಿಯುವ ಸಾಧ್ಯತೆ ಅತ್ಯಂತ ಕಡಿಮೆ ಇತ್ತು. ಅದರಲ್ಲಿ ಬದುಕುವ ಛಲ ದೊಡ್ಡ ಪಾತ್ರ ವಹಿಸುತ್ತದೆ. ಅವರ ಬಳಿ ಆಹಾರವಿತ್ತೇ ಎಂಬುದೂ ನಮಗೆ ಗೊತ್ತಿರಲಿಲ್ಲ. ವಿದ್ಯುತ್ ಇಲ್ಲದ ಕಾರಣ ಸುರಂಗದೊಳಗೆ ಸಂಪೂರ್ಣ ಕತ್ತಲಿತ್ತು” ಎಂದು ಅವರು ಹೇಳಿದ್ದಾರೆ.

ಇಬ್ಬರು ಕಾರ್ಮಿಕರು ಬದುಕುಳಿದಿರುವುದು, ಇದೇ ಸುರಂಗದಲ್ಲಿ ಸಿಲುಕಿದ್ದಾರೆ ಎನ್ನಲಾಗಿರುವ ಇನ್ನೂ ಕನಿಷ್ಠ 35 ಕಾರ್ಮಿಕರ ರಕ್ಷಣೆಯ ನಿರೀಕ್ಷೆಯನ್ನು ಹೆಚ್ಚಿಸಿದೆ. ನದಿ ಕಣಿವೆಯ ಪ್ರವಾಹದಿಂದ ಹಾನಿಗೊಳಗಾದ ಹಲವು ಜಲವಿದ್ಯುತ್ ಸ್ಥಾವರಗಳಲ್ಲೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ವಿವಿಧ ಸ್ಥಳಗಳಲ್ಲಿ ಸುಮಾರು 150 ಕಾರ್ಮಿಕರು ಇನ್ನೂ ನಾಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com