ನೇಪಾಳ ಪ್ರವಾಹ ದುರಂತ: 9 ದಿನಗಳ ಕಾಲ 'ಹರೇ ಕೃಷ್ಣ' ಜಪಿಸುತ್ತಾ ಬದುಕುಳಿದ ಕಾರ್ಮಿಕ; ಕೃಷ್ಣ ಜನ್ಮಾಷ್ಟಮಿಯಂದೇ ಪವಾಡ ಸದೃಶ ರಕ್ಷಣೆ!

ಕತ್ತಲೆ ಕೋಣೆಯಂತಿದ್ದ ಸುರಂಗದಲ್ಲಿ ಆಹಾರ, ನೀರಿಲ್ಲದೆ ಕೇವಲ ಭಗವಂತನ ನಾಮಸ್ಮರಣೆ ಮಾಡುತ್ತಾ ಅವರು ಬದುಕುಳಿದಿದ್ದಾರೆ. ವಿಶೇಷವೆಂದರೆ, ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ದಿನದಂದೇ ಇವರ ರಕ್ಷಣೆ ನಡೆದಿದ್ದು, ಇದನ್ನು 'ಕೃಷ್ಣನ ಪವಾಡ' ಎಂದು ಬಣ್ಣಿಸಲಾಗುತ್ತಿದೆ.
Nepal Army personnel shift Sanjay Sah, a rescued victim from Trisuli 3A Hydropower Project, to a hospital at Chhauni, in Kathmandu.
ರಕ್ಷಿಸಲ್ಪಟ್ಟ ಸಂಜಯ್ ಸಾಹ್ ಅವರನ್ನು ನೇಪಾಳ ಸೇನಾ ಸಿಬ್ಬಂದಿ ಕಠ್ಮಂಡುವಿನ ಚೌನಿಯಲ್ಲಿರುವ ಆಸ್ಪತ್ರೆಗೆ ಸ್ಥಳಾಂತರಿಸುತ್ತಿರುವುದು.
Updated on

ಕಠ್ಮಂಡು: ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಬಳಿಕ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸಿಲುಕಿಕೊಂಡಿದ್ದ ಭಾರತೀಯ ಮೂಲದ ಕಾರ್ಮಿಕರೊಬ್ಬರು ಬರೋಬ್ಬರಿ ಒಂಬತ್ತು ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾರೆ.

ಕತ್ತಲೆ ಕೋಣೆಯಂತಿದ್ದ ಸುರಂಗದಲ್ಲಿ ಆಹಾರ, ನೀರಿಲ್ಲದೆ ಕೇವಲ ಭಗವಂತನ ನಾಮಸ್ಮರಣೆ ಮಾಡುತ್ತಾ ಅವರು ಬದುಕುಳಿದಿದ್ದಾರೆ. ವಿಶೇಷವೆಂದರೆ, ಶ್ರೀಕೃಷ್ಣ ಜನ್ಮಾಷ್ಟಮಿಯ ಪವಿತ್ರ ದಿನದಂದೇ ಇವರ ರಕ್ಷಣೆ ನಡೆದಿದ್ದು, ಇದನ್ನು 'ಕೃಷ್ಣನ ಪವಾಡ' ಎಂದು ಬಣ್ಣಿಸಲಾಗುತ್ತಿದೆ.

ನೇಪಾಳದ ರಸುವಾ ಜಿಲ್ಲೆಯಲ್ಲಿರುವ ತ್ರಿಶೂಲಿ 3A ಜಲವಿದ್ಯುತ್ ಯೋಜನೆಯ 4.5 ಕಿಲೋಮೀಟರ್ ಉದ್ದದ ಸುರಂಗದಲ್ಲಿ ಆಗಸ್ಟ್ 26 ರಂದು ಭೀಕರ ಭೂಕುಸಿತ ಹಾಗೂ ಪ್ರವಾಹದ ನೀರು ನುಗ್ಗಿತ್ತು.

ಈ ವೇಳೆ ಮೆಕ್ಯಾನಿಕಲ್ ಫೋರ್‌ಮನ್ ಆಗಿ ಕೆಲಸ ಮಾಡುತ್ತಿದ್ದ 30 ವರ್ಷದ ಸಂಜಯ್ ಸಾಹ್, ನಿಯಂತ್ರಣ ಕೊಠಡಿಯಲ್ಲಿದ್ದರು. ಸುರಂಗದೊಳಗೆ ನೀರು ನುಗ್ಗುತ್ತಿದ್ದಂತೆ ತಕ್ಷಣವೇ ಎಚ್ಚೆತ್ತ ಸಾಹ್, ತಮ್ಮ ಸಹೋದ್ಯೋಗಿಗಳಿಗೆ ತಕ್ಷಣವೇ ಹೊರಗೆ ಓಡಿಹೋಗುವಂತೆ ಕೂಗಿ ಹೇಳಿದರು. ಆದರೆ, ಎಲ್ಲರೂ ಸುರಕ್ಷಿತವಾಗಿ ಹೊರಬರುವಷ್ಟರಲ್ಲಿ ಸುರಂಗದ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡವು. ಪರಿಣಾಮ ಸಾಹ್ ಹಾಗೂ ಮೆಕ್ಯಾನಿಕಲ್ ಸೂಪರ್‌ವೈಸರ್ ಕಬೀರ್ ಮಹರ್ಜನ್ (45) ಇಬ್ಬರೂ ಒಳಗೇ ಸಿಲುಕಿಕೊಂಡರು.

ಸುರಂಗದ ಅತ್ಯಂತ ಆಳವಾದ ಭಾಗದಲ್ಲಿ ಸಿಲುಕಿದ್ದ ಇವರಿಬ್ಬರಿಗೆ ಹೊರಗಿನ ಪ್ರಪಂಚದ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು. ಆದರೆ, ಅಲ್ಲಿ ಮೂಡಿದ್ದ ಸಣ್ಣದೊಂದು ಗಾಳಿಯ ಪಾಕೆಟ್ (Oxygen Pocket) ಇವರಿಗೆ ಉಸಿರಾಡಲು ನೆರವಾಯಿತು. ತಮ್ಮ ಬದುಕಿನ ಭರವಸೆಯನ್ನೇ ಕಳೆದುಕೊಳ್ಳುವಂತಹ ಪರಿಸ್ಥಿತಿಯಲ್ಲಿದ್ದಾಗ ಸಂಜಯ್ ಸಾಹ್ ಅವರಿಗೆ ಶ್ರೀಕೃಷ್ಣನ ಮೇಲಿದ್ದ ಅಚಲ ನಂಬಿಕೆಯೇ ಶ್ರೀರಕ್ಷೆಯಾಯಿತು.

Nepal Army personnel shift Sanjay Sah, a rescued victim from Trisuli 3A Hydropower Project, to a hospital at Chhauni, in Kathmandu.
ನೇಪಾಳ ಜಲಪ್ರಳಯ ನಡುವೆ ಮಹಾ ಪವಾಡ; ಮೃತ್ಯುಕೂಪದಿಂದ ಹೊರಬಂದ ಕಾರ್ಮಿಕರು, ತ್ರಿಶೂಲಿ-3A ಸುರಂಗದಿಂದ ಇಬ್ಬರು ಜೀವಂತ ರಕ್ಷಣೆ..!

ಸುರಂಗದಿಂದ ರಕ್ಷಿಸಲ್ಪಟ್ಟ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ಸಾಹ್, "ನಾವು ಆ ಕಗ್ಗತ್ತಲಲ್ಲಿ ಧೈರ್ಯ ಕಳೆದುಕೊಳ್ಳಲಿಲ್ಲ. ನಿರಂತರವಾಗಿ 'ಹರೇ ಕೃಷ್ಣ' ಮಹಾಮಂತ್ರವನ್ನು ಜಪಿಸುತ್ತಾ, ನಮ್ಮನ್ನು ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು. ಆಹಾರ ಮತ್ತು ನೀರಿಲ್ಲದೆ ಒಂಬತ್ತು ದಿನ ಕಳೆಯುವುದು ನರಕಸದೃಶವಾಗಿತ್ತು. ಆದರೆ ಕೊನೆಗೂ ಕೃಷ್ಣ ಜನ್ಮಾಷ್ಟಮಿಯ ದಿನವೇ ನಾನು ಹೊರಬಂದಾಗ ನನಗೆ ಮರುಜನ್ಮ ಸಿಕ್ಕಂತಾಯಿತು" ಎಂದು ಭಾವುಕರಾಗಿ ನುಡಿದಿದ್ದಾರೆ.

ನೇಪಾಳ ಸೇನೆ ಮತ್ತು ಭಾರತ, ಚೀನಾ ಸೇರಿದಂತೆ ಬಹುರಾಷ್ಟ್ರೀಯ ರಕ್ಷಣಾ ತಂಡಗಳು ಅತ್ಯಾಧುನಿಕ ಥರ್ಮಲ್ ಡ್ರೋನ್‌ಗಳು ಮತ್ತು ಯಂತ್ರಗಳನ್ನು ಬಳಸಿ ಸುರಂಗದ ಅವಶೇಷಗಳನ್ನು ತೆರವುಗೊಳಿಸಿ ಇವರಿಬ್ಬರನ್ನು ಸುರಕ್ಷಿತವಾಗಿ ಹೊರತಂದಿದ್ದಾರೆ.

ಸುರಂಗದ ಪವರ್‌ಹೌಸ್ ಬಳಿ ಗೋಡೆ ತಟ್ಟುವ ಸದ್ದು ಕೇಳಿಸುತ್ತಿದ್ದು, ಇನ್ನೂ 3 ರಿಂದ 4 ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇದೆ ಎಂದು ಸಾಹ್ ಮಾಹಿತಿ ನೀಡಿದ್ದಾರೆ. ಸದ್ಯ ಇಡೀ ಸುರಂಗ ಪ್ರದೇಶದಲ್ಲಿ ಭಾರತೀಯ ಮತ್ತು ನೇಪಾಳಿ ರಕ್ಷಣಾ ಪಡೆಗಳು ಜಂಟಿಯಾಗಿ ಯುದ್ಧೋಪಾದಿಯಲ್ಲಿ ಕಾರ್ಯಾಚರಣೆ ಮುಂದುವರಿಸಿವೆ.

ಭದ್ರತಾ ಅಧಿಕಾರಿಗಳ ಪ್ರಕಾರ, ಸಾಹ್ ಅವರ ಆರೋಗ್ಯ ಸ್ಥಿರವಾಗಿದ್ದು, ತಕ್ಷಣಕ್ಕೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ವೈದ್ಯಕೀಯ ತಪಾಸಣೆಗಾಗಿ ಅವರನ್ನು ತ್ರಿಶೂಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ

ರಕ್ಷಿಸಲ್ಪಟ್ಟ ಮತ್ತೊಬ್ಬ ಕಾರ್ಮಿಕ 45 ವರ್ಷದ ಕಬೀರ್ ಮಹರ್ಜನ್ ಅವರನ್ನು ಆರೋಗ್ಯ ಸಮಸ್ಯೆಗಳ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಕಠ್ಮಂಡುವಿನ ಛೌನಿ ಪ್ರದೇಶದಲ್ಲಿರುವ ನೇಪಾಳ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com